
ಬೆಂಗಳೂರು: ಅನ್ನದಾತನ ಹೋರಾಟಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಬೆಂಬಲ ನೀಡಿದ್ದು, ರೈತರ ಹೋರಾಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ನಟ ಶಿವರಾಜ್ ಕುಮಾರ್, ಕೃಷಿ ಕಾಯ್ದೆ ವಿರೋಧಿಸಿ ರೈತರು ಹಲವು ದಿನಗಳಿಂದ ಹೋರಾಟ ನಡೆಸಿದ್ದಾರೆ. ಬಿದಿಯಲ್ಲಿ ಕುಳಿತು ಅವರು ಊಟ ಮಾಡುತ್ತಾ ಧರಣಿ ನಡೆಸುತ್ತಿರುವುದನ್ನು ನೋಡಿದರೆ ಸಂಕಟವಾಗುತ್ತಿದೆ. ರೈತರ ಹೋರಾಟಕ್ಕೆ ನಮ್ಮ ಬೆಂಬಲ ಖಂಡಿತ ಇದೆ. ಯಾರೂ ಹೋರಾಟದ ಬಗ್ಗೆ ಮಾತನಾಡುತ್ತಿಲ್ಲ ಎನ್ನುತ್ತಾರೆ. ಆದರೆ ರೈತರ ಸಮಸ್ಯೆ ಬಗೆಹರಿಸಲು ನಮ್ಮಿಂದ ಸಾಧ್ಯವಿಲ್ಲ. ಇದು ಸರ್ಕಾರ ಮಾಡಲು ಮಾತ್ರ ಸಾಧ್ಯ. ನನ್ನ ಕೈಲಿ ಅಧಿಕಾರವಿದ್ದಿದ್ದರೆ ನಾನು ಎಲ್ಲವನ್ನೂ ಬರೆದುಕೊಟ್ಟುಬಿಡುತ್ತಿದ್ದೆ ಆದರೆ ನನ್ನ ಕೈಲಿ ಅಧಿಕಾರ ಇಲ್ಲ ಎಂದಿದ್ದಾರೆ.
ನಮ್ಮ ಚಿತ್ರರಂಗದ ಸಮಸ್ಯೆಯನ್ನೇ ಬಗೆಹರಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಂತಹ ಸಂದರ್ಭದಲ್ಲಿ ನಾವು ಬೇರೆಯವರ ಸಮಸ್ಯೆ ಹೇಗೆ ಪರಿಹರಿಸೋದು? ರೈತರ ಸಮಸ್ಯೆ ಬಗೆಹರಿಸಲು ಇಂಡಸ್ಟ್ರಿಯವರು ಅಥವಾ ಭಾರತೀಯ ಚಿತ್ರರಂಗ ಬೀದಿಗೆ ಇಳಿಯುವುದರಿಂದ ಏನೂ ಸಾಧ್ಯವಾಗಲ್ಲ. ಹಾಗೆ ಸಾಧ್ಯವಾಗುವುದಾದರೆ ನಾವು ಬೀದಿಗಿಳಿದು ಹೋರಾಡಲೂ ಸಿದ್ಧ ಸರ್ಕಾರ ರೈತರ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಬಗೆಹರಿಸಬೇಕು ಎಂದು ಆಗ್ರಹಿಸಿದರು.