Karnataka News

*ಬಿಜೆಪಿಗೆ ಬಾಗಿಲು ಒಂದಲ್ಲ, ಆರು; ಸಚಿವ ಶಿವರಾಜ್ ತಂಗಡಗಿ ಲೇವಡಿ*

ಪ್ರಗತಿವಾಹಿನಿ ಸುದ್ದಿ: ಬಿಜೆಪಿ ಪಕ್ಷದ್ದು, ಮನೆಯೊಂದು ಮೂರು‌ ಬಾಗಿಲಲ್ಲ, ಬದಲಿಗೆ ಆರು ಬಾಗಿಲು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ‌ ಶಿವರಾಜ್ ಎಸ್.ತಂಗಡಗಿ ಅವರು ವ್ಯಂಗ್ಯವಾಡಿದ್ದಾರೆ.

ಶುಕ್ರವಾರ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಮಾಜಿ ಸಚಿವ ಶ್ರೀರಾಮುಲು ಅವರು ನಮ್ಮ ಪಕ್ಷಕ್ಕೆ ಬಂದರೆ, ಅವರನ್ನು ಪಕ್ಷಕ್ಕೆ ಸ್ವಾಗತಿಸುವುದು ಪಕ್ಷದ ಅಧ್ಯಕ್ಷರು ಹಾಗೂ ಹೈಕಮಾಂಡ್ ಗೆ ಬಿಟ್ಟ ವಿಚಾರ, ವೈಯಕ್ತಿಕವಾಗಿ ರಾಮುಲು ಕಾಂಗ್ರೆಸ್ ಗೆ ಸೇರ್ಪಡೆಗೊಂಡರೆ ಸ್ವಾಗತ ಎಂದರು.

ಜನಾರ್ದನ್ ರೆಡ್ಡಿ ಅವರು ಸುಳ್ಳಿನ‌ ಮನೆಯನ್ನು ಕಟ್ಟುತ್ತಿದ್ದಾರೆ ಎಂದು ಈ ಹಿಂದೆ ಹಲವು ಬಾರಿ ನಾನು ಹೇಳಿದ್ದೆ. ಇದೀಗ ಶ್ರೀರಾಮುಲು ಅವರು ಅವರ ಸುಳ್ಳಿತನ ಕಂತೆ ಬಗ್ಗೆ ಎಳೆ- ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಶ್ರೀರಾಮುಲು ಹಾಗೂ ಜನಾರ್ದನ್ ರೆಡ್ಡಿ ಅವರು ಹಲವು ವರ್ಷಗಳ ಸ್ನೇಹಿತರು. ಇದೀಗ ಅವರವರ ಬಗ್ಗೆ ಅವರು ಮಾತನಾಡುತ್ತಿದ್ದಾರೆ. ಬಿಜೆಪಿಯಲ್ಲಿನ ವಾಸ್ತವ ಸತ್ಯ ಎಲ್ಲರಿಗೂ ಇದೀಗ ತಿಳಿಯುತ್ತಿದೆ ಎಂದು ತೀಕ್ಷ್ಣ ವಾಗಿ ಹೇಳಿದರು.

ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕ ವರದಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸರ್ಕಾರಕ್ಕೆ ಯಾವುದೇ ಭಯ ಇಲ್ಲ. ಈ‌ ಹಿಂದೆ ವರದಿಯನ್ನು ಸ್ವೀಕಾರ ಮಾಡಿಲ್ಲ ಎಂದು ಹೇಳುತ್ತಿದ್ದರು. ಇದೀಗ ಸರ್ಕಾರ ವರದಿಯನ್ನು ಸ್ವೀಕಾರ ಮಾಡಿದ್ದು, ಶೀಘ್ರವೇ ಸಚಿವ‌ ಸಂಪುಟ ಸಭೆಯಲ್ಲಿ ವರದಿಯನ್ನು ತರಲಾಗುವುದು. ಇಲ್ಲಿ ತನಕ‌ ನಾವು ಯಾರು ವರದಿಯನ್ನು ನೋಡಿಲ್ಲ. ಈ ಬಗ್ಗೆ ಅನಗತ್ಯವಾಗಿ ಸುಳ್ಳು ಅಂಕಿ ಅಂಶವನ್ನು ಹೇಳಲಾಗುತ್ತಿದೆ ಎಂದು ಸಚಿವರು ಮಾಹಿತಿ ನೀಡಿದರು.

ವದರಿ ಬಗ್ಗೆ ಪರ- ವಿರೋಧ ಇರುವುದು ಸಹಜ. ವರದಿಯನ್ನು ಯಾರು ನೋಡಿಯೇ ಇಲ್ಲ, ಮೊದಲೇ ವಿರೋಧ ಏಕೆ? ಎಂದು ಸಚಿವರು ಮಾರ್ಮಿಕವಾಗಿ ಪ್ರಶ್ನಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button