ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಯಮಕನಮರಡಿ ಮತಕ್ಷೇತದಲ್ಲಿ ಬರುವ ಹತ್ತರಗಿ ಗ್ರಾಮದ ಸರ್ವೇ ನಂ. 444 ಹಾಗೂ 445ರಲ್ಲಿ ಅನಧಿಕೃತವಾಗಿ ನಿರ್ಮಿಸಿದ ಕಟ್ಟಡವನ್ನು ತೆರವುಗೊಳಿಸಬೇಕೆಂದು ಸಮಾಜ ಸೇವಕ ಶಿವಶಂಕರ ಝಟ್ಟಿ ಆಗ್ರಹಿಸಿದರು.
ನಗರದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಅವರು, ಹತ್ತರಗಿ ಗ್ರಾಮದ ಸರ್ವೇ ನಂ 444, 445ರಲ್ಲಿ ಸರ್ಕಾರಿ ರಸ್ತೆ ಹಾಗೂ ಸರ್ಕಾರಿ ಖಾಲಿ ಜಾಗೆಯನ್ನು ಬಿಜೆಪಿ ಮುಖಂಡ ರವೀಂದ್ರ ಹಂಜಿ ಎಂಬುವರು ಅತಿಕ್ರಮಣ ಮಾಡಿ ರಾಜೀವ್ ಗಾಂಧಿ ಆಸ್ಪತ್ರೆ ಕಟ್ಟಿದ್ದಾರೆ. ಈ ಅತಿಕ್ರಮಣ ಕುರಿತು ಸಬಂಧಪಟ್ಟ ಇಲಾಖೆಗೆ ಹಾಗೂ ಅಧಿಕಾರಿಗಳಿಗೆ ಲಿಖತವಾಗಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನ ಇಲ್ಲದಂತಾಗಿದೆ ಎಂದು ಆರೋಪಿಸಿದರು.
ಬಿಜೆಪಿ ಮುಖಂಡ ರವೀಂದ್ರ ಹಂಜಿಯವರ ಅಧ್ಯಕ್ಷತೆಯಲ್ಲಿ ನಡೆಸುತ್ತಿರುವ ಯಮಕನಮರಡಿ ಅರ್ಬನ್ ಬ್ಯಾಂಕ್, ಅರ್ಬನ್ ಸೊಸೈಟಿ, ರಾಜೀವ್ ಗಾಂಧಿ ಆಸ್ಪತ್ರೆ ಹೆಸರಿನಲ್ಲಿ 1996ರಲ್ಲಿ 8 ಗುಂಟೆ ಜಾಗವನ್ನು ಖರೀದಿಸಲಾಗಿದೆ. ಆದರೆ ಅದರ ಪಕ್ಕದಲ್ಲೇ ಸರ್ವೇ ನಂಬರ್ 445ರಲ್ಲಿ ಸುಮಾರು 26 ಗುಂಟೆ ಜಾಗವನ್ನು ಒತ್ತುವರಿ ಮಾಡಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
2020-2021ನೇ ಸಾಲಿನಲ್ಲಿ ಹುಕ್ಕೇರಿ ತಹಶೀಲ್ದಾರ್, ಲೋಕೋಪಯೋಗಿ ಇಲಾಖೆ, ಜಿಲ್ಲಾಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಸರ್ಕಾರದ ಆದೇಶದಂತೆ ಈಗಾಗಲೇ ಸರ್ವೇ ಮಾಡಿಸಲಾಗಿದ್ದು, ಸರ್ಕಾರಿ ಜಾಗ ಅತಿಕ್ರಮಣವಾಗಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ. ಶಾಸಕ ಸತೀಶ್ ಜಾರಕಿಹೊಳಿಯವರು ಹುಕ್ಕೇರಿ ತಾಲೂಕಿನ ಹತ್ತರಗಿ ಗ್ರಾಮದ ಸರ್ವೇ ನಂ. 444 ಹಾಗೂ 445ರಲ್ಲಿನ ರಸ್ತೆಯೂ ಯಾವ ಇಲಾಖೆಗೆ ಸೇರಿರುತ್ತದೆ ಹಾಗೂ ಈ ರಸ್ತೆಯನ್ನು ಯಾವ ಇಲಾಖೆಯಿಂದ ತೆರವುಗೊಳಿಸಬೇಕಾಗಿರುತ್ತದೆ ಎಂದು ವಿಧಾನ ಸಭೆ ಕಲಾಪದಲ್ಲಿ ಪ್ರಶ್ನೆ ಕೇಳಿದ್ದಾರೆ. ಈ ಕುರಿತು ಬೆಳಗಾವಿ ಜಿಲ್ಲಾಧಿಕಾರಿಗಳು ಈ ಸರ್ವೇ ನಂ. ವಿವಿರ ಸಂಗ್ರಹಿಸಿ ಸಂಭಂದಪಟ್ಟ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಆದರೆ ಹತ್ತರಗಿ ಗ್ರಾಮದ ಸರ್ವೇ ನಂ 444 ಹಾಗೂ 445ರಲ್ಲಿಅನಧಿಕೃತ ಒತ್ತುವರಿಯಾಗಿ ಕಟ್ಟಿರುವ ಕಟ್ಟಡವನ್ನು ತೆರವುಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳು ಮಿನಾಮೇಷ ಎನಿಸುತ್ತಾ ಇದು ನಮ್ಮ ವ್ಯಾಪ್ತಿಗೆ ಬರುವದಿಲ್ಲ ಎಂದು ಒಬ್ಬರ ಮೇಲೆ ಇನ್ನೊಬ್ಬರು ಹಾರಿಕೆ ಉತ್ತರ ನೀಡುತ್ತಿದ್ದಾರೆ. ಶೀಘ್ರವೇ ಬಿಜೆಪಿ ಮುಖಂಡ, ಯಮಕನಮರಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ರವೀಂದ್ರ ಹಂಜಿ ಕಟ್ಟಿರುವ ಕಟ್ಟಡವನ್ನು ತೆರವುಗೊಳಿಸದಿದ್ದಲ್ಲಿ ಉಗ್ರ ಹೋರಾಟ ಮಾಡುವುದಾಗಿ ಸಮಾಜ ಸೇವಕ ಶಿವಶಂಕರ ಝಟ್ಟಿ ಎಚ್ಚರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ