ಹುಕ್ಕೇರಿ ಹಿರೇಮಠದಲ್ಲಿ ಶ್ರಾವಣ ಮಾಸ ಆರಂಭಕ್ಕೆ ಚಾಲನೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಬೆಳಗಾವಿ ನಗರದ ಲಕ್ಷ್ಮಿ ಟೆಕ್ ದಲ್ಲಿರುವ ಹುಕ್ಕೇರಿ ಹಿರೇಮಠದ ಶಾಖೆಯಲ್ಲಿ ಆಗಸ್ಟ್ ಒಂದರಿಂದ ಸೆಪ್ಟಂಬರ್ ಒಂದರವರೆಗೆ ಜರುಗುವ ಶ್ರಾವಣ ಮಾಸದ ಕಾರ್ಯಕ್ರಮಕ್ಕೆ ಬೆಳಗಾವಿ ಜಿಲ್ಲಾ ವೀರಶೈವ ಮಹಾಸಭೆಯ ಅಧ್ಯಕ್ಷರಾದ ರತ್ನಪ್ರಭಾ ವಿಶ್ವನಾಥ್ ಬೆಲ್ಲದ ಚಾಲನೆಯನ್ನು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹುಕ್ಕೇರಿ ಹಿರೇಮಠದ ವತಿಯಿಂದ ಸಾಕಷ್ಟು ಸಾಮಾಜಿಕ-ಧಾರ್ಮಿಕ ಕಾರ್ಯಕ್ರಮಗಳು ಜರಗುತ್ತಿರುವುದು ಅಭಿಮಾನದ ಸಂಗತಿ ಎಂದರು. ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮಾಡುತ್ತ, ಆಗಸ್ಟ್ ಒಂದರಿಂದ ಸೆಪ್ಟಂಬರ್ 1ರವರೆಗೆ ಶ್ರೀ ಮಠದಲ್ಲಿ ಮುಂಜಾನೆ 7 ಗಂಟೆಯಿಂದ 9 ಗಂಟೆಯವರೆಗೆ ರುದ್ರಾಭಿಷೇಕ ಹಾಗೂ ಸಹಸ್ರ ಬಿಲ್ವಾರ್ಚನೆ ಕಾರ್ಯಕ್ರಮ,
ಶ್ರೀ ಮೃತ್ಯುಂಜಯ ಸ್ವಾಮಿಗಳು ಕನಕಿಕೊಪ್ಪ ಹಾಗೂ ಹುಕ್ಕೇರಿ ಹಿರೇಮಠದ ಗುರುಕುಲ ಸಾಧಕರಾದ ವೇದಮೂರ್ತಿ ವೀರಭದ್ರಯ್ಯ ಹಿರೇಮಠ್ ಇವರ ವೈದಿಕತ್ವದಲ್ಲಿ ಜರುಗುವುದು.
ಸಂಜೆ 4 ಗಂಟೆಯಿಂದ 6 ಗಂಟೆಯವರೆಗೆ ಬೆಳಗಾವಿ ಹುಕ್ಕೇರಿ ಹಿರೇಮಠದ ಮಹಿಳಾ ರುದ್ರ ಬಳಗದವರಿಂದ ಧರ್ಮಚಿಂತನೆ ಹಾಗೂ ರುದ್ರಪಟ್ಟಣ ಜರುಗುತ್ತದೆ.
ಅಗಸ್ಟ್ 4 ರಂದು ಸಂಜೆ 6 ಗಂಟೆಗೆ ಶ್ರಾವಣಮಾಸದ ಕುರಿತಾಗಿ ಗೋಕಾಕ್ ಜ್ಞಾನ ಮಂದಿರದ ಧರ್ಮದರ್ಶಿ ಸುವರ್ಣ ದೇವಿ ಹೊಸಮಠ ಅವರು ಪ್ರವಚನ ನೀಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಬೆಳಗಾವಿ ಜಿಲ್ಲಾ ಸುಪರಿಟೆಂಡೆಂಟ್ ಆಫ್ ಪೊಲೀಸ್ ಲಕ್ಷ್ಮಣ್ ನಿಂಬರಗಿ ಅವರು ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಸೌದತ್ತಿ ವಯಲಯ ಅರಣ್ಯಾಧಿಕಾರಿ ಸುನೀತಾ ನಾಗಲೋಟಿಮಠ ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಪ್ಟಂಬರ್ ಒಂದರಂದು ಮುಂಜಾನೆ ಉಚಿತ ಶಿವದೀಕ್ಷಾ ಹಾಗೂ ಅಯ್ಯಾಚಾರ ಕಾರ್ಯಕ್ರಮಗಳು ಜರುಗಲಿವೆ 6 ಗಂಟೆಗೆ ಕುಂದರಗಿಯ ಅಡವಿಸಿದ್ದೇಶ್ವರ ಮಠದ ಶ್ರೀ ಅಮರ ಸಿದ್ದೇಶ್ವರ ಮಹಾಸ್ವಾಮಿಗಳು ಪ್ರವಚನ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಶ್ರಾವಣ ಮಾಸದಲ್ಲಿ ಶ್ರಮಿಸಿದ ಸದ್ಭಕ್ತರಿಗೆ ಸನ್ಮಾನಿಸಲಾಗುವುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ