
ಅಥಣಿ : ತಾಲೂಕಿನ ಸಪ್ತಸಾಗರ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡ “ ಶ್ರೀ ಶಿವಬಸವ ಗುರುಮಂದಿರ ” ಲೋಕಾರ್ಪಣೆ ಕಾರ್ಯಕ್ರಮ ಬರುವ ಮೇ.5 ರಂದು ಅದ್ಧೂರಿಯಾಗಿ ಜರುಗಲಿದೆ ಎಂದು ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭು ಸ್ವಾಮೀಜಿ ಹೇಳಿದರು.
ಭಾನುವಾರ ಸಪ್ತಸಾಗರ ಗ್ರಾಮದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಹಾವೇರಿಯ ಹುಕ್ಕೇರಿಮಠದ ಶ್ರೀ ಶಿವಬಸವ ಶಿವಯೋಗಿಗಳ ಜನ್ಮಸ್ಥಳ ಸಪ್ತಸಾಗರ ಗ್ರಾಮದಲ್ಲಿ ಮೇ. 1 ರಿಂದ 5 ರ ವರೆಗೆ ಐದು ದಿನಗಳವರೆಗೆ ಶ್ರೀ ಶಿವಬಸವ ಗುರುಮಂದಿರ ಲೋಕಾರ್ಪಣೆ ಹಿನ್ನಲೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಹಿನ್ನಲೆಯಲ್ಲಿ ಪ್ರವಚನ, ಜ್ಯೋತಿ ರತಯಾತ್ರೆ, ಸಾವಯವ ಕೃಷಿ ಚಿಂತನ, ಬೈಕ್ ರ್ಯಾಲಿ, ಮಹಿಳಾ ಸಮಾವೇಶ ಸೇರಿದಂತೆ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಮೇ. 5 ರಂದು ನೂತನವಾಗಿ ನಿರ್ಮಾಣಗೊಂಡ ಶ್ರೀ ಶಿವಬಸವ ಗುರುಮಂದಿರದಲ್ಲಿ ಕಳಸಾರೋಹಣ, ಮೂರ್ತಿ ಪ್ರತಿಷ್ಠಾಪನೆ ಹಾಗೂ ಶ್ರೀಗಳ ಭಾವಚಿತ್ರ ಮೆರವಣಿಗೆ ಕಾರ್ಯಕ್ರಮ ಜರುಗಲಿವೆ ಎಂದು ಡಾ. ಮಹಾಂತಪ್ರಭು ಸ್ವಾಮೀಜಿ ತಿಳಿಸಿದರು.
ಹಾವೇರಿಯ ಹುಕ್ಕೇರಿಮಠದ ಸದಾಶಿವ ಮಹಾಸ್ವಾಮೀಜಿ ಮಾತನಾಡಿ, ಶ್ರೀ ಶಿವಬಸವ ಶಿವಯೋಗಿಗಳು ಸಪ್ತಸಾಗರ ಗ್ರಾಮದಲ್ಲಿ ಜನಿಸಿ ಲೋಕ ಕಲ್ಯಾಣಕ್ಕೆ ತಮ್ಮನ್ನು ಸಮರ್ಪಿಸಿಕೊಂಡ ಮಹಾನ್ ಸಂತ. ಇಂದು ಅವರ ಸ್ಮರಣಾರ್ಥವಾಗಿ ಹುಟ್ಟೂರಿನಲ್ಲಿ ಮಠದ ಲೋಕಾರ್ಪಣೆ ಕಾರ್ಯಕ್ರಮವನ್ನು ಭಕ್ತರು ಯಶಸ್ವಿಗೊಳಿಸಬೇಕು ಎಂದರು.
ಈ ಸಂದರ್ಭದಲ್ಲಿ ಹಲ್ಯಾಳ ವಿರಕ್ತಮಠದ ಗುರುಸಿದ್ದ ಮಹಾಸ್ವಾಮೀಜಿ, ಸಪ್ತಸಾಗರ ಗ್ರಾಮದ ಹಿರಿಯರು ಹಾಗೂ ಶ್ರೀಮಠದ ಭಕ್ತರು ಉಪಸ್ಥಿತರಿದ್ದರು.