Kannada NewsKarnataka NewsLatest

*ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ -ಕೇರಳ ಸರಕಾರ ತೀರ್ಪು ಒಂದು ಮಹತ್ವ ಪೂರ್ಣ ತೀರ್ಪು: ನ್ಯಾಯಮೂರ್ತಿ ಎನ್ ಸಂತೋಷ್ ಹೆಗ್ಡೆ*

ಪ್ರಗತಿವಾಹಿನಿ ಸುದ್ದಿ: ದೇಶದ ಸ್ವಾತಂತ್ರೋತ್ತರ ಇತಿಹಾಸದಲ್ಲಿ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ -ಕೇರಳ ಸರಕಾರ ತೀರ್ಪು ಒಂದು ಮಹತ್ವ ಪೂರ್ಣ ತೀರ್ಪಾಗಿದೆ. ಇದು ದೇಶವಾಸಿಗಳ ಹಕ್ಕಿನ ಬದಲಾವಣೆ ಮಾಡಲು ಶಾಸಕಾಂಗಕ್ಕೆ ಹಕ್ಕಿಲ್ಲ ಎಂದು ಸ್ಪಷ್ಟಪಡಿಸಿದೆ ಎಂದು
ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳೂ, ಮಾಜಿ ಭಾರತೀಯ ಸಾಲಿಸಿಟರ್ ಜನರಲ್ ಹಾಗೂ ಕರ್ನಾಟಕ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.

ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟಿನ ಐತಿಹಾಸಿಕ ತೀರ್ಪಿನ 50 ನೇ ವರ್ಷಾಚರಣೆ ಅಂಗವಾಗಿ ಯುನಿವರ್ಸಲ್ ಸ್ಕೂಲ್ ಆಫ್ ಲಾ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಕೇರಳ ಸರಕಾರ ಹಾಗೂ ಧಾರ್ಮಿಕ ಸಂಸ್ಥೆ ನಡುವಣ ಈ ಕಾನೂನು ಸಮರದ ತೀರ್ಪು, ಕಾನೂನು ವಿದ್ಯಾರ್ಥಿಗಳಿಗೆ ಹಾಗು ವಿದ್ವಾಂಸರಿಗೆ ದೊಡ್ಡ ಮಟ್ಟದ ಅಧ್ಯಯನ ವಸ್ತುವಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಎಡನೀರು ಮಠದ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿ ಈ ದೇಶದ ಪ್ರಜಾಪ್ರಭುತ್ವ, ಸಂವಿಧಾನ ರಕ್ಷಣೆಯಲ್ಲಿ ಈ ತೀರ್ಪಿನ ಪಾತ್ರ ದೊಡ್ಡದು ಎಂದು ತಿಳಿಸಿದರು.

“ನಮ್ಮ ಮಠದ ಜಮೀನಿನ ಪ್ರಶ್ನೆಯಲ್ಲ. ಈ ಕಾನೂನು ಹೋರಾಟದ ಮೂಲಕ ಸಂವಿಧಾನ-ಪ್ರಜಾಪ್ರಭುತ್ವ ರಕ್ಷಿಸಲು ಸಾಧ್ಯವಾಗಿದ್ದು ನಮಗೆ ಅತ್ಯಂತ ಖುಷಿಕೊಟ್ಟ ಸಂಗತಿ,” ಎಂದು ಅವರು ಬಣ್ಣಿಸಿದರು.

“ನಾವು ಸಂಸತ್ ಬಗ್ಗೆ ಭರವಸೆ ಕಳೆದುಕೊಂಡಾಗ, ನಮಗಿರುವ ಆಶಾಭಾವನೆ ನ್ಯಾಯಾಂಗ ಮತ್ತು ಸಂವಿಧಾನ ಮಾತ್ರ,” ಎಂದು ಅವರು ತಿಳಿಸಿದರು.

“ಚುನಾವಣೆಗೆ ಮೊದಲು ಮತದಾರರು ಭ್ರಷ್ಟ್ರಾಗುತ್ತಾರೆ. ಚುನಾವಣಾ ಬಳಿಕ ನಾಯಕರು ಭ್ರಷ್ಟರಾಗುತ್ತಾರೆ,” ಎಂದು ಅವರು ಬಣ್ಣಿಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಹಿರಿಯ ವಕೀಲ, ಮಾಜಿ ಅಡ್ವಕೇಟ್ ಜನರಲ್ ಶ್ರೀ ರವಿ ವರ್ಮ ಕುಮಾರ್ ಈ ತೀರ್ಪಿನಿಂದಾಗಿ ಸಮಾಜದಲ್ಲಿ ಅಸಮಾನತೆ ಮುಂದುವರಿಯುವಂತಾಯಿತು ಎಂದು ಬಣ್ಣಿಸಿದರು.

“ಬಿಜೆಪಿ ನಾಯಕ ಎಲ್ ಕೆ ಅಡ್ವಾಣಿ, ಮಾಜಿ ಪ್ರಧಾನಿ ಪಿ ವಿ ನರಸಿಂಹ ರಾವ್ ಅವರಿಗೆ ಭಾರತ ರತ್ನ ನೀಡಿದ ಬಳಿಕ ಈ ದೇಶದ ಸಂವಿಧಾನದಲ್ಲಿರುವ ಜಾತ್ಯತೀತರೇ ಶಬ್ದಕ್ಕೆ ಅರ್ಥವಿದೆಯೇ? ಈ ಸಂಬಂಧಿತ ಬೆಳವಣಿಗೆಗಳಿಂದ ಸಂವಿಧಾನದ ಮೂಲ ಸ್ವರೂಪಕ್ಕೆ ಧಕ್ಕೆಯಾಗಿಲ್ಲವೇ,” ಎಂದು ಅವರು ಪ್ರಶ್ನಿಸಿದರು.

ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಹಿಂಸಾಚಾರ, ದ್ವೇಷ ಭಾಷಣ, ಸಂವಿಧಾನದ ಮೂಲತತ್ವಗಳು ಮರೆಯಾಗುತ್ತಿರುವುದಕ್ಕೆ ಸಾಕ್ಷಿ ಎಂದು ಅವರು ಟೀಕಿಸಿದರು.

ಕರ್ನಾಟಕ ಹೈಕೋರ್ಟ್ ಮಾಜಿ ನ್ಯಾಯಾಧೀಶ ನ್ಯಾಯಮೂರ್ತಿ ನಾಗಮೋಹನ್ ದಾಸ್ ಇತ್ತೀಚಿನ ದಿನಗಳಲ್ಲಿ ಸಂಸತ್ ನಲ್ಲಿ ಕಾಯ್ದೆಗಳು ಯಾವುದೇ ಚರ್ಚೆ ಇಲ್ಲದೆ ಅಂಗೀಕಾರ ಪಡೆಯುತ್ತಿವೆ. ಸಂವಿಧಾನ ತಿದ್ದುಪಡಿಯ ಮಾತು ಕೇಳಿ ಬರುತ್ತಿದೆ. ಇದೆಲ್ಲ ಸರಿಯೇ ಎಂದು ಪ್ರಶ್ನಿಸಿದರು.

ಯುನಿವರ್ಸಲ್ ಸಂಸ್ಥೆ, ಬೆಂಗಳೂರು ಅಧ್ಯಕ್ಷ ಆರ್ ಉಪೇಂದ್ರ ಶೆಟ್ಟಿ, ಕಾಲೇಜು ಪ್ರಾಂಶುಪಾಲ ವಿಶ್ವಾಸ್ ಪುಟ್ಟಸ್ವಾಮಿ, ಕಾಲೇಜು ಆಡಳಿತಾಧಿಕಾರಿ ಸಂತೋಷ್ ಶೆಟ್ಟಿ, ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related Articles

Back to top button