Kannada NewsLatest

ಮಹಾಲಕ್ಷ್ಮಿ ಸಭಾಭವನವನ್ನು ಲೋಕಾರ್ಪಣೆಗೊಳಿಸಿದ ಶಾಸಕ ರಮೇಶ ಜಾರಕಿಹೊಳಿ; ಸ್ವಾಮೀಜಿ, ಸತೀಶ್, ಬಾಲಚಂದ್ರ, ಲಖನ್ ಭಾಗಿ

ಪ್ರಗತಿವಾಹಿನಿ ಸುದ್ದಿ; ಗೋಕಾಕ : ಜನಸಾಮಾನ್ಯರ ಅನುಕೂಲಕ್ಕಾಗಿ ಅತ್ಯಾಧುನಿಕವಾಗಿ ಗೋಕಾಕ ನಗರದಲ್ಲಿ ಮಹಾಲಕ್ಷ್ಮಿ ಸಭಾ ಭವನ ನಿರ್ಮಿಸಲಾಗಿದ್ದು, ಇದನ್ನು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳುವಂತೆ ಶಾಸಕ ಹಾಗೂ ಮಾಜಿ ಸಚಿವ ರಮೇಶ ಜಾರಕಿಹೊಳಿ ತಿಳಿಸಿದರು.

ಇಲ್ಲಿಯ ಮಹಾಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಗುರುವಾರದಂದು 4.50 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಿಸಿದ ಮಹಾಲಕ್ಷ್ಮಿ ಸಭಾ ಭವನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಈ ಸಭಾ ಭವನ ನಿರ್ಮಾಣದಿಂದ ಜನ ಸಾಮಾನ್ಯರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿದರು.

ಗೋಕಾಕ ನಗರದ ಜನತೆಯ ಬಹು ದಿನಗಳ ಬೇಡಿಕೆಯಂತೆ ಇಂದು ಸಭಾ ಭವನವನ್ನು ಲೋಕಾರ್ಪಣೆ ಮಾಡಲಾಗಿದೆ. ಈ ಸಭಾ ಭವನವು ಮದುವೆ ಸೇರಿದಂತೆ ಇತರೇ ಎಲ್ಲ ಕಾರ್ಯಕ್ರಮಗಳಿಗೆ ಬಳಕೆಯಾಗಲಿದೆ. ಅತ್ಯಾಧುನಿಕವಾಗಿ ನಿರ್ಮಿಸಿದ್ದು ನಾಗರೀಕರಿಗೆ ಸಕಲ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. ಇದು ಗೋಕಾಕ ಜನತೆಯ ಕನಸೂ ಕೂಡಾ ಆಗಿತ್ತು. ಸಾರ್ವಜನಿಕರ ಸಹಕಾರದೊಂದಿಗೆ ಈ ಸಭಾ ಭವನ ನಿರ್ಮಾಣವಾಗಿದ್ದು, ತಮ್ಮ ಸಹೋದರರು ಸಹ ಆರ್ಥಿಕವಾಗಿ ನೆರವು ಕಲ್ಪಿಸಿಕೊಟ್ಟಿದ್ದಾರೆಂದು ಅವರು ಹೇಳಿದರು.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸ್ಥಳೀಯ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು. ಜ್ಯೋತಿ ಪ್ರಜ್ವಲಿಸುವ ಮೂಲಕ ಧಾರ್ಮಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಶಾಸಕ ಸತೀಶ ಜಾರಕಿಹೊಳಿ ಅವರು ಮಹಾಲಕ್ಷ್ಮಿ ಸಭಾ ಭವನದ ವಸತಿ ಕೊಠಡಿಗಳನ್ನು ಉದ್ಘಾಟಿಸಿದರು.

ಕೆಎಂಎಫ್ ಅಧ್ಯಕ್ಷ ಹಾಗೂ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹಾಗೂ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅವರು ಜಂಟಿಯಾಗಿ ಭೋಜನಾಲಯವನ್ನು ಉದ್ಘಾಟಿಸಿದರು.

ಶಾಸಕ ಬಾಲಚಂದ್ರ ಜಾರಕಿಹೊಳಿ ಈ ಸಂದರ್ಭದಲ್ಲಿ ಮಾತನಾಡಿ, ಕೋವಿಡ್ ಹಿನ್ನೆಲೆಯಲ್ಲಿ ಪ್ರತಿ 5 ವರ್ಷಕ್ಕೊಮ್ಮೆ 2020 ರಲ್ಲಿ ನಡೆಯಬೇಕಾಗಿದ್ದ ಗ್ರಾಮದೇವತೆ ಜಾತ್ರೆಯನ್ನು ಮುಂದೂಡಲಾಗಿತ್ತು. ಈ ವರ್ಷವೂ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಯುಗಾದಿಗೆ ಜಾತ್ರಾ ಕಮೀಟಿಯವರು ಸಭೆ ಸೇರಿ ಜಾತ್ರೆಯ ಬಗ್ಗೆ ನಿರ್ಣಯ ಕೈಗೊಳ್ಳಲಿದ್ದಾರೆ. ಅಚ್ಚುಕಟ್ಟಾಗಿ ಸುಂದರವಾಗಿ ನಿರ್ಮಾಣವಾಗಿರುವ ಮಹಾಲಕ್ಷ್ಮಿ ಸಭಾ ಭವನದ ಕಾಮಗಾರಿಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಇದಕ್ಕಾಗಿ ಶ್ರಮಿಸಿದ ಜಾತ್ರಾ ಕಮೀಟಿ ಸದಸ್ಯರಿಗೆ ಅಭಿನಂದನೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಹಾಲಕ್ಷ್ಮಿ ದೇವಸ್ಥಾನ ಜಾತ್ರಾ ಕಮೀಟಿ ಉಪಾಧ್ಯಕ್ಷ ಅಶೋಕ ಬಿ.ಪಾಟೀಲ, ಕಾರ್ಯದರ್ಶಿ ಪ್ರಭಾಕರ ಚವ್ಹಾಣ, ಸದಸ್ಯರಾದ ಶಿದ್ಲಿಂಗಪ್ಪ ದಳವಾಯಿ, ಬಸವಣ್ಣೆಪ್ಪ ಬನ್ನಿಶೆಟ್ಟಿ, ನಾಗರಾಜ ದೇಶಪಾಂಡೆ, ಅಶೋಕ ತುಕ್ಕಾರ, ಅಶೋಕ ಹೆಗ್ಗಣ್ಣವರ, ರಾಯಪ್ಪ ಭಂಡಾರಿ, ರಾಜು ಪವಾರ, ಅರ್ಜುನ ಪವಾರ, ಸುಬ್ಬಣ್ಣ ಸಂಕಪಾಳ, ಮಹ್ಮದಸುಲ್ತಾನ ಕೋತವಾಲ, ಚಂದ್ರು ಜೋಗೋಜಿ, ಅಡಿವೆಪ್ಪ ಕಿತ್ತೂರ, ಆನಂದ ಉಳ್ಳಾಗಡ್ಡಿ, ಬಾಗಪ್ಪ ಉಳ್ಳಾಗಡ್ಡಿ, ಬೀರಪ್ಪ ಉಳ್ಳಾಗಡ್ಡಿ, ಸಿದ್ದಪ್ಪ ಮುತ್ತೆಪ್ಪಗೋಳ, ಪರಸಪ್ಪ ಮಲ್ಲಾಡದವರ, ನಾಗಪ್ಪ ಉಳ್ಳಾಗಡ್ಡಿ, ಮಾರುತಿ ಬಾಗೋಜಿ, ರವಿ ಮಾಲದಿನ್ನಿ, ಲಕ್ಕಪ್ಪ ಪೂಜೇರಿ, ಶಿವಾನಂದ ಬನ್ನಿಶೆಟ್ಟಿ, ಮಲ್ಲು ವಾಲಿಕಾರ, ಲಕ್ಕಪ್ಪ ಕೊಡತಿ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಬೆಳಗಾವಿ ಬಿಜೆಪಿ ಬಿಕ್ಕಟ್ಟು: ಮಧ್ಯಸ್ಥಿಕೆ ವಹಿಸುವ ಸುಳಿವು ನೀಡಿದ ಬಾಲಚಂದ್ರ ಜಾರಕಿಹೊಳಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button