Latest

ಮಹಿಳಾ ತಹಶೀಲ್ದಾರ್, ಗ್ರಾಮ ಲೆಕ್ಕಿಗ ಎಸಿಬಿ ಬಲೆಗೆ

ಪ್ರಗತಿವಾಹಿನಿ ಸುದ್ದಿ; ಚಿಕ್ಕಮಗಳೂರು: ಮನೆ ಹಕ್ಕುಪತ್ರ ನೀಡಲು ಲಂಚ ಪಡೆಯುತ್ತಿದ್ದ ವೇಳೆ ಶೃಂಗೇರಿ ತಹಶೀಲ್ದಾರ್ ಹಾಗೂ ಗ್ರಾಮ ಲೆಕ್ಕಿಗ ರೆಡ್ ಹ್ಯಾಂಡ್ ಆಗಿ ಎಸಿಬಿ ಬಲೆಗೆ ಬಿದ್ದ ಘಟನೆ ನಡೆದಿದೆ.

ಶೃಂಗೇರಿ ಪ್ರವಾಸಿ ಮಂದಿರದಲ್ಲಿ ಕಾವಡಿ ಗ್ರಾಮದ ಸಂಜಯ್ ಕುಮಾರ್ ಎಂಬುವವರಿಂದ ಲಂಚ ಪಡೆಯುತ್ತಿದ್ದ ವೇಳೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ತಹಶೀಲ್ದಾರ್ ಅಂಬುಜಾ, ವಿಎ ಸಿದ್ದಪ್ಪರನ್ನು ಬಂಧಿಸಿದ್ದಾರೆ.

ಕಳೆದ ಕೆಲ ತಿಂಗಳಿಂದ ತಹಶೀಲ್ದಾರ್ ಅಂಬುಜಾ ಭಾರಿ ಅಕ್ರಮ ನಡೆಸುತ್ತಿದ್ದ ಬಗ್ಗೆ ಆರೋಪ ಕೇಳಿಬಂದಿತ್ತು. ಹಣ ನೀಡದೇ ಯಾವುದೇ ಕೆಲಸವನ್ನೂ ಮಾಡಿಕೊಡುತ್ತಿರಲಿಲ್ಲ. ಇದೀಗ ಸಂಜಯ್ ಕುಮಾರ್ ಎಂಬುವವರಿಗೆ ಮನೆ ಹಕ್ಕುಪತ್ರಕ್ಕಾಗಿ 60 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಮೊದಲ ಕಂತಿನ ಹಣ 25 ಸಾವಿರ ರೂಪಾಯಿ ಪಡೆಯುತ್ತಿದ್ದಾಗ ತಹಶೀಲ್ದಾರ್ ಹಾಗೂ ಗ್ರಾಮ ಲೆಕ್ಕಿಗ ಇಬ್ಬರೂ ಸಿಕ್ಕಿಬಿದ್ದಿದ್ದಾರೆ.

ಈ ವೇಳೆ ತಹಶೀಲ್ದಾರ್ ಅಂಬುಜಾರನ್ನು ಬಂಧಿಸದಂತೆ ಜನರು ಅಧಿಕಾರಿಗಳ ಮೇಲೆ ಒತ್ತಡ ಹೇರಿದ ಘಟನೆಯೂ ನಡೆದಿದೆ. ಗ್ರಾಮಲೆಕ್ಕಿಗನನ್ನು ಬಂಧಿಸಿ ಆದರೆ ತಹಶೀಲ್ದಾರ್ ಅವರನ್ನು ಬಂಧಿಸಬಾರದು ಎಂದು ಜನರು ಒತ್ತಾಯಿಸಿದ್ದಾರೆ. ಆದರೆ ತಹಶೀಲ್ದಾರ್ ಲಂಚಾವತಾರದ ಬಗ್ಗೆ ಜನರಿಗೆ ಮನವರಿಕೆ ಮಾಡಿ, ಬಳಿಕ ಇಬ್ಬರು ಅಧಿಕಾರಿಗಳನ್ನು ವಶಕ್ಕೆ ಪಡೆಯಲಾಯಿತು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button