Latest

ಮಹಾಪತನ ಹಿನ್ನೆಲೆ: ಕರ್ನಾಟಕ ಬಿಜೆಪಿಯಿಂದ ಹಠಾತ್ ಸುತ್ತೋಲೆ ರವಾನೆ

ಎಂ.ಕೆ.ಹೆಗಡೆ, ಬೆಳಗಾವಿ – ಮಹಾರಾಷ್ಟ್ರದಲ್ಲಿ 4 ದಿನದ ಬಿಜೆಪಿ -ಎನ್ ಸಿಪಿ ಸರಕಾರ ಪತನವಾಗಿದೆ. ಎನ್ಸಿಪಿಯ ಅಜಿತ್ ಪವಾರ್ ಮಾತು ನಂಬಿ ಬಿಜೆಪಿ ಮಖಾಡೆ ಮಲಗಿದೆ. ಮಧ್ಯರಾತ್ರಿ ಕ್ರಾಂತಿ ಮಾಡಲು ಹೋಗಿ ತೀವ್ರ ಮುಖಭಂಗಕ್ಕೊಳಗಾಗಿದೆ.

70 ಸಾವಿರ ಕೋಟಿ ರೂ ಹಗರಣಗಳನ್ನು ಮುಚ್ಚಿ ಹಾಕಿಸಿಕೊಂಡು ಅಜಿತ್ ಪವಾರ್ ವಾಪಸ್ಸಾಗಿದ್ದಾರೆ. ರಾಷ್ಟ್ರೀಯ ಪಕ್ಷವೊಂದು ಆತುರದಲ್ಲಿ ಇಂತದ್ದೊಂದು ನಿರ್ಧಾರ ತೆಗೆದುಕೊಂಡಿದ್ದು ದೇಶವೇ ನಿಬ್ಬೆರಗಾಗುವಂತೆ ಮಾಡಿದೆ.

ಇಷ್ಟೆಲ್ಲ ಆದ ನಂತರ ಕರ್ನಾಟಕ ಬಿಜೆಪಿ ಗಂಭೀರವಾಗಿದೆ. ಕರ್ನಾಟಕದಲ್ಲಿ ಸಧ್ಯದ ಬಿಜೆಪಿ ಸರಕಾರದ ಭವಿಷ್ಯ ನಿರ್ಧರಿಸುವ ವಿಧಾನಸಭೆ ಉಪಚುನಾವಣೆ ಗೇಮ್ ಪ್ಲ್ಯಾನ್ ಬದಲಾಯಿಸಲು ಮುಂದಾಗಿದೆ. ಉಪಚುನಾವಣೆ ಫಲಿತಾಂಶದಿಂದ ಇಲ್ಲೂ ಮುಖಭಂಗಕ್ಕೊಳಗಾಗುವುದನ್ನು ತಪ್ಪಿಸಿಕೊಳ್ಳಲು ತನ್ನ ಕಾರ್ಯಕರ್ತರಿಗೆ ಗಂಭೀರ ಸೂಚನೆ ರವಾನಿಸಿದೆ.

ಏನಿದು ಸೂಚನೆ?

ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಪ್ರತಿಕೂಲಕರ ಬೆಳವಣಿಗೆ ನಡೆಯುತ್ತಿದ್ದಂತೆ ಕರ್ನಾಟಕ ಬಿಜೆಪಿ ಉಪಚುನಾವಣೆ ನಡೆಯುತ್ತಿರುವ ಕ್ಷೇತ್ರಗಳ ಕಾರ್ಯಕರ್ತರಿಗೆ ಮತ್ತು ತನ್ನೆಲ್ಲ ಮುಖಂಡರಿಗೆ ಕಟ್ಟುನಿಟ್ಟಿನ ಸೂಚನೆ ಕಳಿಸಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಆದ ಹಿನ್ನಡೆ ಕರ್ನಾಟಕ ರಾಜ್ಯದ ಉಪಚುನಾವಣೆಯಲ್ಲೂ ಪರಿಣಾಮ ಬೀರುವುದು ಖಂಡಿತ ಎಂದು ಎಚ್ಚರಿಸಿದೆ.

Home add -Advt

ಮಹಾರಾಷ್ಟ್ರದ ಮುಖಭಂಗ ಕರ್ನಾಟಕದಲ್ಲಿ ಮರುಕಳಿಸದಂತಾಗಲು ರಾಜ್ಯ ಬಿಜೆಪಿಯ ಎಲ್ಲಾ ನಾಯಕರು, ಕಾರ್ಯಕರ್ತರು ಮತ್ತು ಬಂಡಾಯಗಾರರು ತಮ್ಮ ಮುನಿಸು ವೈಮನಸುಗಳನ್ನು ಬದಿಗಿಟ್ಟು ಒಗ್ಗಟ್ಟಿನಿಂದ ಕೆಲಸಮಾಡಿ ಕರ್ನಾಟಕ ರಾಜ್ಯದ ಅಧಿಕಾರವನ್ನು ಉಳಿಸಿಕೊಳ್ಳಬೇಕಾಗಿದೆ  ಎಂದು ಖಡಕ್ಕಾಗಿ ಎಚ್ಚರಿಸಿದೆ.

ಇದರ ಜೊತೆಗೆ, ಪ್ರಚಾರದ ವೇಳೆಯಲ್ಲಿ ಅನುಸರಿಸಬೇಕಾದ ಕ್ರಮ ಮತ್ತು ಪ್ರಸ್ತಾಪಿಸಬೇಕಾದ ವಿಷಯಗಳ ಕುರಿತಂತೆ ಕೆಲವು ಸಲಹೆಗಳನ್ನೂ ತನ್ನ ಕಾರ್ಯಕರ್ತರಿಗೆ ರವಾನಿಸಿದೆ. ಪ್ರಾದೇಶಿಕ ಮತ್ತು ಸ್ಥಳೀಯ ಸಮಸ್ಯೆಗಳ ಬಗ್ಗೆ ಹೆಚ್ಚು ಗಮನಕೊಡುವಂತೆ ತಿಳಿಸಿದೆ.

ಜೊತೆಗೆ, ಕನಿಷ್ಟ ಶೇಕಡಾ 70 ರಷ್ಟು ಮತದಾನ ಆಗುವ ಹಾಗೆ ಕೆಲಸ ಮಾಡಿ. ಹೆಚ್ಚು ಕಾರ್ಯಕರ್ತರನ್ನು ಕೆಲಸಕ್ಕೆ ನೇಮಿಸಿ. ಪ್ರವಾಹ ಪರಿಸ್ಥಿತಿ ನಿಭಾವಣೆಯ ಪ್ರತಿಕೂಲ ಜನಾಭಿಪ್ರಾಯದ ಬಗ್ಗೆ ಅಧ್ಯಯನ ಮಾಡಿ ಎಂದು ಸೂಚನೆ ನೀಡಿದೆ.

ಇದೆಲ್ಲಕ್ಕಿಂತ ಮುಖ್ಯವಾಗಿ, ಮೋದಿ – ಅಮಿತ್ ಷಾ ಮ್ಯಾಜಿಕ್ ಎಲ್ಲ ಸಮಯದಲ್ಲೂ ನಡೆಯುತ್ತದೆ ಎಂಬ ಭ್ರಮೆ ಬಿಡಿ. ವ್ಯವಸ್ಥಿತವಾಗಿ ಉತ್ಸಾಹ ದಿಂದ ಕೆಲಸ ಮಾಡಿ. ಇದು ಗೆಲ್ಲಲೇ ಬೇಕಾದ ಉಪಚುನಾವಣೆ ಎಂಬುದನ್ನು ಅರ್ಥಮಾಡಿಕೊಳ್ಳಿ  ಎಂದು ಸ್ಪಷ್ಟವಾಗಿ ಎಚ್ಚರಿಕೆ ರೂಪದ ಪತ್ರವನ್ನು ಸಾಮಾಜಿಕ ಜಾಲತಾಣಗಳ ಮೂಲಕ ತನ್ನ ಕಾರ್ಯಕರ್ತರಿಗೆ ಬಿಜೆಪಿ ರವಾನಿಸುತ್ತಿದೆ.

ಒಟ್ಟಾರೆ, ಮಹಾರಾಷ್ಟ್ರದಲ್ಲಾಗಿರುವ ಬೆಳವಣಿಗೆ ಬಿಜೆಪಿಗೆ ತೀವ್ರ ಹಿನ್ನಡೆ ಮತ್ತು ಆಂತಕವನ್ನುಂಟು ಮಾಡಿದ್ದಂತೂ ನಿಜ. ಈವರೆಗೂ ಚಾಣಕ್ಯ ತಂತ್ರ ಎಂದೇ ಹೆಸರಾಗಿದ್ದ ಅಮಿತ್ ಷಾ ಎಡವಿದ್ದು ತೀವ್ರ ಚರ್ಚೆಗೆ ಒಳಗಾಗಿದೆ. ಜೊತೆಗೆ ಬಿಜೆಪಿ ಪಾಲಿಗೆ ಗಂಭೀರ ಎಚ್ಚರಿಕೆ ಕೂಡ ಆಗಿದೆ.

Related Articles

Back to top button