ಪ್ರಗತಿವಾಹಿನಿ ಸುದ್ದಿ, ಅಥಣಿ – ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಬೆಳಗಾವಿ ಜಿಲ್ಲೆಯ ಅಥಣಿ ಮತ್ತು ಗೋಕಾಕ ಕ್ಷೇತ್ರ ಈ ಬಾರಿ ಪ್ರಚಾರದ ಅಬ್ಬರದಲ್ಲಿ ಮುಂದಿದೆ.
ಗೋಕಾಕದಲ್ಲಿ ಜಾರಕಿಹೊಳಿ ಸಹೋದರರು ಸ್ಪರ್ಧಿಸಿದ್ದರೆ, ಅಥಣಿ ಕಣದಲ್ಲಿ ಲಕ್ಷ್ಮಿ ಹೆಬ್ಬಾಳಕರ್ ಪ್ರಚಾರದಲ್ಲಿದ್ದಾರೆ.
ಕಾಂಗ್ರೆಸ್ ಪಕ್ಷ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಸ್ಟಾರ್ ಪ್ರಚಾರಕಿ ಎಂದು ಘೋಷಿಸಿಲ್ಲ. ಆದರೆ ಅವರು ಹೋದಲ್ಲೆಲ್ಲ ಸ್ಟಾರ್ ಪ್ರಚಾರಕರಿಗಿಂತ ಹೆಚ್ಚು ಜನರನ್ನು ಸೆಳೆಯುತ್ತಿದ್ದಾರೆ.
ಜನರು ಲಕ್ಷ್ಮಿ ಹೆಬ್ಬಾಳಕರ್ ಜೊತೆಗೆ ಸೆಲ್ಫಿಗಾಗಿ ಮುಗಿಬೀಳುತ್ತಿದ್ದಾರೆ.
ಅಥಣಿ ವಿಧಾನಸಭೆ ಕ್ಷೇತ್ರದ ತೇಲಸಂಗ ಗ್ರಾಮದಲ್ಲಿ ಶನಿವಾರ ಆಯೋಜಿಸಲಾಗಿದ್ದ ಚುನಾವಣೆಯ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ಮಾಜಿ ಸಚಿವರಾದ ಎಂ.ಬಿ.ಪಾಟೀಲ, ಎಸ್.ಆರ್.ಪಾಟೀಲ, ವಿನಯ ಪಾಟೀಲ, ಸುನೀಲ ಪಾಟೀಲ, ಆನಂದ ನ್ಯಾಮಗೌಡ ಮೊದಲಾದವರು ಭಾಗವಹಿಸಿದ್ದರು.
ಸಿದ್ದರಾಮಯ್ಯ ಅನರ್ಹ ಶಾಸಕರ ವಿರುದ್ಧ ತೀವ್ರವಾಗಿ ಹರಿಹಾಯ್ದರು. ಇವರೆಲ್ಲ ತಮ್ಮನ್ನು ತಾವು ಸಂತೆಯಲ್ಲಿನ ದನಗಳಂತೆ ಮಾರಾಟ ಮಾಡಿಕೊಂಡಿದ್ದಾರೆ. ನಿಮ್ಮ ಊರಿಗೆ ಅಗೌರವ ತಂದಿದ್ದಾರೆ. ಇಂತವರಿಗೆ ಮತ್ತೆ ಮತ ನೀಡಬೇಡಿ ಎಂದು ವಾಗ್ದಾಳಿ ನಡೆಸಿದರು.
ಕ್ಷೇತ್ರದ ಅಭಿವೃದ್ಧಿಗಾಗಿ ಯಾರೂ ಪಕ್ಷ ಬಿಟ್ಟಿಲ್ಲ. ಸ್ವಂತ ಅಭಿವೃದ್ಧಿಗಾಗಿ ಹೋಗಿದ್ದಾರೆ. ಇಂತವರಿಂದ ಮತದಾರರಿಗೆ ಅವಮಾನವಾಗಿದೆ. ಮತನೀಡಿದ ಮತದಾರರಿಗೂ ಹೇಳದೆ ಓಡಿ ಹೋಗಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಿ ಎಂದು ಹರಿಹಾಯ್ದರು.
ಲಕ್ಷ್ಮಿ ಹೆಬ್ಬಾಳಕರ್ ಮಾತನಾಡಿ, ಪ್ರವಾಹ ಬಂದು ನೀವೆಲ್ಲ ಗಂಜಿಗೂ ಗತಿ ಇಲ್ಲದೆ ಕಣ್ಣೀರು ಹಾಕುತ್ತಿದ್ದರೆ ನೀವು ಆರಿಸಿ ಕಳಿಸಿದ ಮಹೇಶ ಕುಮಟಳ್ಳಿ ಮುಂಬೈನಲ್ಲಿ ಎಸಿ ರೂಂ ನಲ್ಲಿ ಕುಳಿತಿದ್ದರು. ಇಂತವರಿಗೆ ತಕ್ಕ ಪಾಠ ಕಲಿಸಲೇಬೇಕು ಎಂದು ಕರೆ ನೀಡಿದರು.
ಸಾವಿರಾರು ಕಾರ್ಯಕರ್ತರು, ಜನರು ಕುಮಟಳ್ಳಿ ಆರಿಸಿ ಕಳುಹಿಸಲು ಹಗಲು ರಾತ್ರಿ ಶ್ರಮಪಟ್ಟಿದ್ದಾರೆ. ಆದರೆ ಪಕ್ಷ ಬಿಟ್ಟು ಹೋಗುವಾಗ ಇವರ್ಯಾರೂ ಅವರಿಗೆ ನೆನಪಿಗೆ ಬರಲಿಲ್ಲ. ಕೇವಲ ಸ್ವಾರ್ಥಕ್ಕಾಗಿ ಹೋದರು. ಇಂತವರಿಗೆ ಮತ ನೀಡುವುದು ನಮಗೆ ನಾವೇ ಮಾಡಿಕೊಳ್ಳುವ ಅವಮಾನ. ಹಾಗಾಗಿ ಕಾಂಗ್ರೆಸ್ ಅಧಿಕೃತ ಅಭ್ಯರ್ಥಿಯಾದ ಗಜಾನನ ಮಂಗಸೂಳಿಯವರಿಗೆ ಮತನೀಡಿ ಎಂದು ಹೆಬ್ಬಾಳಕರ್ ವಿನಂತಿಸಿದರು.
ಕುಮಟಳ್ಳಿಗೆ ಸ್ವಗ್ರಾಮದಲ್ಲಿಯೇ ಗೇಟ್ ಪಾಸ್
ಶಿವಯೋಗಿ ಪುಣ್ಯಕ್ಷೇತ್ರವಿದು , ಅನರ್ಹರಿಗೆ ಪ್ರವೇಶವಿಲ್ಲ ಪ್ಲೆಕ್ಸ್ ಹಾಕಿದ ತೆಲಸಂಗ ಗ್ರಾಮಸ್ಥರು
ಶಿವಯೋಗಿಗಳ ಪುಣ್ಯಕ್ಷೇತ್ರ. ಇಲ್ಲಿ ಹಣಕ್ಕಾಗಿ ತಮ್ಮ ಶಾಸಕ ಸ್ಥಾನವನ್ನು ಮಾರಾಟ ಮಾರಿಕೊಂಡ ಅನರ್ಹರಿಗೆ ನಮ್ಮ ಗ್ರಾಮದಲ್ಲಿ ಪ್ರವೇಶವಿಲ್ಲ ಎನ್ನುವ ಫ್ಲೆಕ್ಸ್ ಅಳವಡಿಸುವ ಮೂಲಕ ತೆಲಸಂಗ್ ಗ್ರಾಮಸ್ಥರು ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿ ಗೆ ಶಾಕ್ ನೀಡಿದ್ದಾರೆ.
ಇಂತಹ ಬ್ಯಾನರ್ ಗಳು ಕಂಡು ಬಂದಿದ್ದು , ಬೇರೆಲ್ಲೂ ಅಲ್ಲ . ಅನರ್ಹ ಶಾಸಕ ಮಹೇಶ ಕುಮಟಳ್ಳಿ ಸ್ವಗ್ರಾಮ ತೆಲಸಂಗದಲ್ಲಿ. ಅನರ್ಹ ಶಾಸಕ ಮಹೇಶ ಕುಮಟಳ್ಳಿಯವರಿಗೆ ಸ್ವಗ್ರಾಮ ತೆಲಸಂಗದಲ್ಲಿಯೇ ಗ್ರಾಮಸ್ಥರಿಂದ ಭಾರೀ ವಿರೋಧ ವ್ಯಕ್ತವಾಗಿದೆ .
ಅನರ್ಹ ಶಾಸಕರು ನಮ್ಮ ಗ್ರಾಮಕ್ಕೆ ಪ್ರವೇಶಿಸುವುದು ಬೇಡ ಎಂದು ಗ್ರಾಮಸ್ಥರು ಊರ ತುಂಬೆಲ್ಲಾ ಪ್ಲೇಕ್ಸ್ ಗಳನ್ನು ಅಳವಡಿಸಿದ್ದಾರೆ.
ಒಂದು ಪಕ್ಷಕ್ಕೆ ಸೀಮಿತವಾಗದೆ ಒಗ್ಗಟ್ಟಾಗಿರುವ ಗ್ರಾಮಸ್ಥರು, ಶಿವಯೋಗಿಗಳ ಪುಣ್ಯಕ್ಷೇತ್ರವಾದ ಅಥಣಿ ಕ್ಷೇತ್ರದ ಹಾಗೂ ಜನತೆಯ ಮಾನವನ್ನು ರಾಷ್ಟ್ರಮಟ್ಟದಲ್ಲಿ ಹರಾಜು ಮಾಡಿದ್ದೀರಿ. ಹಣಕ್ಕಾಗಿ ತಮ್ಮ ಸ್ಥಾನ ಮಾರಾಟ ಮಾಡಿಕೊಂಡಿದ್ದೀರಿ ಎಂದು ಆರೋಪಿಸಿದ್ದಾರೆ.
ಯಾವುದೇ ಕಾರಣಕ್ಕೂ ನೀವು ಗ್ರಾಮಕ್ಕೆ ಪ್ರವೇಶಿಸಬೇಡಿ ಎಂದು ಬ್ಯಾನರ್ ಗಳನ್ನು ಅಳವಡಿಸಿ ಅನರ್ಹ ಶಾಸಕರ ವಿರುದ್ಧ ಕಿಡಿಕಾರಿದ್ದಾರೆ.
ಡಾ . ಬಾಬಾಸಾಹೇಬ್ ಅಂಬೇಡ್ಕರ್ , ನಿವೃತ್ತ ನ್ಯಾ , ಸಂತೋಷ ಹೆಗ್ಡೆ ಸೇರಿದಂತೆ ಹಲವು ಮಹನೀಯರ ಬರಹಗಳಿರುವ ಬ್ಯಾನರ್ ಗಳು ತೆಲಸಂಗ ಗ್ರಾಮದಲ್ಲಿ ರಾರಾಜಿಸುತ್ತಿವೆ .
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ