
ಪ್ರಗತಿವಾಹಿನಿ ಸುದ್ದಿ, ಅಥಣಿ –
‘ಸ್ಟಾರ್ ಸುಪರ್ ಸ್ಟಾರ್, ಸಂಘಟನಾ ಚತುರೆ ಈ ನಮ್ಮ ಚನ್ನಮ್ಮ’
–ಇದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್ ನಾಯಕಿ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಬಹಿರಂಗ ಸಭೆಯ ವೇದಿಕೆಯಲ್ಲೇ ಹಾಡಿ ಹೊಗಳಿದ ರೀತಿ.
ಅಥಣಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ದರೂರಿನಲ್ಲಿ ಶುಕ್ರವಾರ ಸಂಜೆ ಬಹಿರಂಗ ಸಭೆ ಆಯೋಜಿಸಲಾಗಿತ್ತು. ಸಭೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ತಮ್ಮ ಮಾತಿನ ಮೂಲಕ ಸೇರಿದ್ದವರನ್ನು ಮೋಡಿ ಮಾಡಿದರು.

ತಮ್ಮ ಮತ್ತು ಗೋಕಾಕ್ ಸಾಹುಕಾರರ ಮಧ್ಯೆ ಜಗಳ ಆರಂಭವಾದ ಗುಟ್ಟನ್ನು ಬಿಚ್ಚಿಟ್ಟರು. ಲಕ್ಷ್ಮಿ ಹೆಬ್ಬಾಳಕರ್ ಕಳೆದ ಒಂದು ವಾರದಿಂದ ಅಥಣಿ ವಿಧಾನಸಭಾ ಕ್ಷೇತ್ರದಲ್ಲಿ ಮಾಡುತ್ತಿರುವ ಕಮಾಲ್ ಗಮನಿಸಿದ ಸಿದ್ದರಾಮಯ್ಯ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಸ್ಟಾರ್, ಸೂಪರ್ ಸ್ಟಾರ್ ಎಂದು ಹಾಡಿ ಹೊಗಳಿದರು.
ಕಾಂಗ್ರೆಸ್ ಪಕ್ಷದಿಂದ ಉಪಚುನಾವಣೆ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಲಾಗಿದೆ. ಆದರೆ ಅದರಲ್ಲಿ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಸ್ಥಾನ ನೀಡಲಾಗಿಲ್ಲ. (ಈ ಕುರಿತು ಪ್ರಗತಿವಾಹಿನಿ ವರದಿ ಪ್ರಕಟಿಸಿತ್ತು ಚುನಾವಣೆ ಹೊಸ್ತಿಲಲ್ಲಿ ಕಾಂಗ್ರೆಸ್ ನಲ್ಲಿ ಸ್ಟಾರ್ ಗದ್ದಲ ).
ತಮ್ಮ ತಪ್ಪಿನ ಅರಿವಾಗಿಯೋ ಏನೋ ಎನ್ನುವಂತೆ ಸಿದ್ದರಾಮಯ್ಯ ಲಕ್ಷ್ಮಿ ಹೆಬ್ಬಾಳಕರ್ ಅವರನ್ನು ಪ್ರಶಂಸಿಸಿದರು.
ಗುಟ್ಟು ಬಿಚ್ಚಿಟ್ಟ ಶಾಸಕಿ

ಹೈದರಾಬಾದ್ ನಲ್ಲಿ ಸಭೆ ನಡೆಸಿದ್ದ ಕೆಲವು ಅಂದಿನ ಕಾಂಗ್ರೆಸ್ ಮುಖಂಡರು ತಮ್ಮನ್ನೂ ಬಿಜೆಪಿಗೆ ಆಹ್ವಾನಿಸಿದ್ದನ್ನು ಲಕ್ಷ್ಮಿ ಹೆಬ್ಬಾಳಕರ್ 2 ದಿನಗಳ ಹಿಂದೆ ಬಹಿರಂಗಪಡಿಸಿದ್ದರು. ಇಂದು ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಜಾರಕಿಹೊಳಿ ತಮ್ಮ ಮೇಲೆ ಜಗಳ ಸಾರಿದ ಹಿನ್ನೆಲೆಯನ್ನು ವಿವರಿಸಿದರು.
ಹೈದರಾಬಾದ್ ನಲ್ಲಿ ನಡೆಯುತ್ತಿರುವ ಪಕ್ಷ ದ್ರೋಹಿ ಚಟುವಟಿಕೆಗಳನ್ನು ನಾನು ಕಾಂಗ್ರೆಸ್ ಮುಖಂಡರಿಗೆ ತಿಳಿಸಿದ್ದೇ ಅವರು ನನ್ನ ಮೇಲೆ ಮುನಿಸಿಕೊಳ್ಳಲು ಕಾರಣ ಎಂದು ಹೆಬ್ಬಾಳಕರ್ ತಿಳಿಸಿದರು.

ಸಂಬಂಧಿಸಿದ ಸುದ್ದಿಗಳು –
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ