ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಪ್ರಸಕ್ತ ಸಾಲಿನ ರಾಜ್ಯ ಬಜೆಟ್ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನಮ್ಮದು ರೈತ ಪರ ಸರ್ಕಾರ ಎಂದು ಹೇಳುತ್ತಾರೆ. ಮಾತೆತ್ತಿದರೆ ರೈತರ ಅಭಿವೃದ್ಧಿಯೇ ನಮ್ಮ ಗುರಿ ಎನ್ನುತ್ತಾರೆ. ಆದರೆ, ರೈತರ ಪರ ಬಜೆಟ್ ಎಂದರೆ ಇದೇನಾ? ಎಂದು ಕಿಡಿಕಾರಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಹಸಿರು ಶಾಲು ಹಾಕಿಕೊಂಡಾಕ್ಷಣ ರೈತರ ಅಭಿವೃದ್ಧಿಯಾಗಲ್ಲ. ಬದಲಾಗಿ ಒಳ್ಳೆಯ ಯೋಜನೆಗಳನ್ನು ಜಾರಿಗೆ ತರಬೇಕು. ಆದರೆ, ಇಂದು ಯಡಿಯೂರಪ್ಪ ಮಂಡಿಸಿರುವ ಬಜೆಟ್ನಲ್ಲಿ ಕೃಷಿ ಸಂಬಂಧಿಸಿದ ಯಾವುದೇ ಹೊಸ ಯೋಜನೆ ಇಲ್ಲ. ರೈತರ ಅಭಿವೃದ್ಧಿಯ ಮಾನದಂಡವೇ ಇಲ್ಲ ಅಂದ ಮೇಲೆ ಅಭಿವೃದ್ಧಿ ಸಾಧ್ಯವೇ ಎಂದು ಪ್ರಶ್ನಿಸಿದ್ದಾರೆ.
ಯಡಿಯೂರಪ್ಪನವರಿಗೆ ಕೃಷಿ ಮಾಡಿ ಅನುಭವವಿದೆಯೇ? ಯಡಿಯೂರಪ್ಪ ಹೇಳುವಂತೆ ಮೊದಲು ಮಂಡ್ಯದಲ್ಲಿ ಬಂದು ಓದಿಕೊಂಡಿದ್ದರು, ನಂತರ ನಿಂಬೆಹಣ್ಣು ವ್ಯಾಪಾರ ಮಾಡಿ ಆನಂತ ಶಿಕಾರಿಪುರಕ್ಕೆ ಹೋದರು. ಅಂದಮೇಲೆ ಇವರಿಗೆ ಕೃಷಿ ಬಗ್ಗೆ ಹೇಗೆ ಅನುಭವ ಇರಲು ಸಾಧ್ಯ?
ಇನ್ನು ಮಹದಾಯಿ ಯೋಜನೆ ರೈತರಿಗೆ ಅನುಕೂಲವಾಗುವ ಮಹತ್ವಾಕಾಂಕ್ಷೆಯ ಯೋಜನೆ. ಇದಕ್ಕೆ ರಾಜ್ಯ ಸರ್ಕಾರ ಕೇವಲ 500 ಕೋಟಿ ರೂ ಹಣ ಬಿಡುಗಡೆ ಮಾಡಿದೆ. ಅಸಲಿಗೆ ಇಷ್ಟು ಹಣ ಸಾಲುವುದಿಲ್ಲ. ಹೀಗಾಗಿ ಸರಿಯಾದ ಯೋಜನೆ ರೂಪಿಸಿ ಕಾಲ ಕಾಲಕ್ಕೆ ಹಣ ಬಿಡುಗಡೆ ಮಾಡಿ ಮುಂದಿನ 2 ವರ್ಷದಲ್ಲಿ ಸಂಪೂರ್ಣ ಯೋಜನೆಯನ್ನು ಮುಗಿಸಿ ಉತ್ತರ ಕರ್ನಾಟಕ ಭಾಗದ ರೈತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ