*ರೈತ-ಕಾರ್ಮಿಕ ವರ್ಗದ ಜೊತೆಗೆ ಶೋಷಿತ ಸಮುದಾಯಗಳನ್ನು ಒಟ್ಟಿಗೇ ಕರೆದೊಯ್ಯುವ ಏಕೈಕ ಪಕ್ಷ ಕಾಂಗ್ರೆಸ್: ಸಿಎಂ ಸಿದ್ದರಾಮಯ್ಯ*

ಪ್ರಗತಿವಾಹಿನಿ ಸುದ್ದಿ: ರೈತ-ಕಾರ್ಮಿಕ ವರ್ಗದ ಜೊತೆಗೆ ಶೋಷಿತ ಸಮುದಾಯಗಳನ್ನು ಒಟ್ಟಿಗೇ ಕರೆದೊಯ್ಯುವ ಏಕೈಕ ಪಕ್ಷ ಕಾಂಗ್ರೆಸ್ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.
ಉಪ ಚುನಾವಣೆ ಪ್ರಯುಕ್ತ, “ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ” ಆಯೋಜಿಸಿದ್ದ “ಶೋಷಿತರ ಜಾಗೃತ ಸಭೆ” ಯಲ್ಲಿ ಮಾತನಾಡಿದರು.
ರೈತ-ಕಾರ್ಮಿಕ ವರ್ಗದ ಜೊತೆಗೆ ಶೋಷಿತ ಸಮುದಾಯಗಳನ್ನು ಒಟ್ಟಿಗೇಜನ ಕರೆದೊಯ್ಯುವ ಪಕ್ಷ ಕಾಂಗ್ರೆಸ್. ಪ್ರತಿಯೊಬ್ಬರಿಗೂ ಆರ್ಥಿಕ ಸ್ವಾತಂತ್ರ್ಯ ಮತ್ತು ಸಾಮಾಜಿಕ ಸ್ವಾತಂತ್ರ್ಯ ಅಗತ್ಯ ಎನ್ನುವ ಅಂಬೇಡ್ಕರ್ ಆಶಯದಂತೆ ಕಾಂಗ್ರೆಸ್ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಅಕ್ಷರ ಸಂಸ್ಕೃತಿಯಿಂದ ವಂಚಿತರಾದವರು ಸಾಮಾಜಿಕವಾಗಿ ಹಿಂದುಳಿಯುತ್ತಾರೆ. ಇದರಿಂದ ಹಿಂದುಳಿದವರು ಅವಕಾಶಗಳಿಂದ ವಂಚಿತರಾಗುತ್ತಾರೆ ಎಂದರು.
ಅದಕ್ಕೇ ಬಸವಣ್ಣನವರು ಕರ್ಮ ಸಿದ್ಧಾಂತವನ್ನು ವಿರೋಧಿಸಿದ್ದರು. ನಮ್ಮ ಬಡತನಕ್ಕೆ ಹಿಂದಿನ ಜನ್ಮದ ಕರ್ಮಫಲ ಕಾರಣ ಎನ್ನುವ ಮೌಡ್ಯವನ್ನು ಗಟ್ಟಿಯಾಗಿ ಬಿತ್ತಿದ್ದಾರೆ ಎಂದರು.
ನಾನು ಮೊದಲ ಬಾರಿ ಮುಖ್ಯಮಂತ್ರಿಯಾದಾಗ ದೇವರಾಜ ಅರಸು ನಿಗಮ, ವಾಲ್ಮೀಕಿ ಅಭಿವೃದ್ಧಿ ನಿಗಮ, ಅಂಬೇಡ್ಕರ್ ನಿಗಮ ಮತ್ತು ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಸಾಲ ಮತ್ತು ಬಡ್ಡಿಯನ್ನು ಮನ್ನಾ ಮಾಡಿದೆ. ಈ ಸಮುದಾಯಗಳು ಸಾಲದಿಂದ ಮುಕ್ತರಾಗಬೇಕು ಎನ್ನುವ ಉದ್ದೇಶದಿಂದ ಮಾಡಿದ್ದಾಗಿತ್ತು ಎಂದರು.
ಜನರಲ್ಲಿ ಕೊಳ್ಳುವ ಶಕ್ತಿ ಇಲ್ಲದೇ ಹೋದರೆ ಉತ್ಪಾದನೆ ಕುಸಿಯುತ್ತದೆ. ಆದ್ದರಿಂದ ಜನರ ಕೊಳ್ಳುವ ಶಕ್ತಿ ಹೆಚ್ಚಿಸುವ ಕಾರ್ಯಕ್ರಮಗಳನ್ನು ನಾವು ರೂಪಿಸುತ್ತೇವೆ. ಕಾಂಗ್ರೆಸ್ ಸದಾ ಬಡವರ ಶೋಷಿತರ ಪರವಾಗಿ ಇರುವ ಪಕ್ಷ. ಬಿಜೆಪಿ ಕಾರ್ಪೋರೇಟ್ ಮತ್ತು ಶ್ರೀಮಂತರ ಪರವಾಗಿ ಇರುವ ಪಕ್ಷ. ಈ ವ್ಯತ್ಯಾಸವನ್ನು ನೀವು ಅರಿತುಕೊಳ್ಳಬೇಕು ಎಂದರು.
ನಾನು ಅಸಮಾನತೆ ವಿರುದ್ಧ ಇದ್ದೇನೆ, ಶೋಷಿತರ ಪರವಾಗಿ ಇದ್ದೇನೆ ಎನ್ನುವ ಕಾರಣಕ್ಕೆ RSS ಮತ್ತು ಮನುವಾದಿಗಳು ನನ್ನ ಮೇಲೆ ಅಟಾಕ್ ಮಾಡ್ತಾರೆ. ಪ್ರತಾಪ ಸಿಂಹನ ಮೂಲಕ ನನ್ನನ್ನು ಗುರಿಯಾಗಿಸಿ, ಟಾರ್ಗೆಟ್ ಮಾಡಿಸಿ ಹೇಳಿಕೆ ನೀಡುತ್ತಾರೆ ಎಂದರು.
ಹೀಗಾಗಿ BJP-RSS ಮತ್ತು ಮನುವಾದಿಗಳ ಷಡ್ಯಂತ್ರವನ್ನು ಅರಿತು ಅದಕ್ಕೆ ತಕ್ಕ ಉತ್ತರ ನೀಡುವ ಶಕ್ತಿ ನಿಮಗೆ ಮಾತ್ರ ಇದೆ ಎಂದರು.
ಈ ಕಾರಣಕ್ಕೆ ಉಪ ಚುನಾವಣೆಯಲ್ಲಿ ಬಿಜೆಪಿ ಗೆಲ್ಲಬಾರದು. ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಗೆಲ್ಲಬೇಕು. ಈ ದಿಕ್ಕಿನಲ್ಲಿ ಶ್ರಮ ಹಾಕಿ ಎಂದು ಮನವಿ ಮಾಡಿದರು.
ಸಚಿವರಾದ ಶಿವರಾಜ್ ತಂಗಡಗಿ, ಆರ್.ಬಿ.ತಿಮ್ಮಾಪುರ್, ಒಕ್ಕೂಟದ ಅಧ್ಯಕ್ಷರಾದ ರಾಮಚಂದ್ರಣ್ಣ ಸೇರಿ ಒಕ್ಕೂಟದ ಪದಾಧಿಕಾರಿಗಳು, ಶಾಸಕರುಗಳು ಉಪಸ್ಥಿತರಿದ್ದರು.

