*5 ವರ್ಷವೂ ನಾನೇ ಸಿಎಂ: ವಿರೋಧಿಗಳಿಗೆ ಬೆಳಗಾವಿ ಅಧಿವೇಶನದಿಂದಲೇ ಸ್ಪಷ್ಟ ಸಂದೇಶ ರವಾನಿಸಿದ ಸಿದ್ದರಾಮಯ್ಯ*

ಪ್ರಗತಿವಾಹಿನಿ ಸುದ್ದಿ: ಮುಖ್ಯಮತ್ರಿ ಕುರ್ಚಿ ವಿಚಾರ ಇಂದು ವಿಧಾನಸಭೆಯಲ್ಲಿ ಪ್ರತಿಧ್ವನಿಸಿದೆ. ಈ ಬಗ್ಗೆ ಸದನದಲ್ಲಿಯೇ ಸ್ಪಷ್ಟ ಉತ್ತರ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿ. ಮುಂದೆಯೂ ನಾನೇ ಇರುತ್ತೇನೆ ಎಂದು ತಿಳಿಸಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ವಿಧಾನಮಂಡಲ ಚಳಿಗಾಲದ ಅಧಿವೇಶನದ ಕೊನೇ ದಿನವಾದ ಇಂದು ವಿಧಾನಸಭೆಯಲ್ಲಿ ಸಿಎಂ ಕುರ್ಚಿ ವಿಚಾರ ಭಾರಿ ಚರ್ಚೆಯಾಯಿತು. ಈ ವೇಳೆ ಬಿಜೆಪಿ ಸದಸ್ಯ ಸುನೀಲ್ ಕುಮಾರ್, ಸಿಎಂ ಬದಲಾವಣೆ ವಿಚಾರ ರಾಜ್ಯದಲ್ಲಿ ತೀವ್ರ ಚರ್ಚೆಯಾಗುತ್ತಿದೆ. ಹಾಗಾಗಿ ಗೊಂದಲಗಳಿವೆ ಎಂದು ವಿಷಯ ಪ್ರಸ್ತಾಪಿಸಿದರು. ಎರಡೂವರೆ ವರ್ಷಕ್ಕೆ ಸಿಎಂ ಬದಲಾಗುತ್ತಾರೆ ಎಂಬ ಮಾತು ಕೇಳಿಬರುತ್ತಿರುವುದರಿಂದ ಈ ಬಗ್ಗೆ ಸ್ಪಷ್ಟನೆ ನೀಡಬೇಕು ಎಂದರು.
ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾನು ೫ ವರ್ಷ ಸಿಎಂ ಆಗಿ ಆಯ್ಕೆಯಾಗಿದ್ದೇನೆ. ಹೈಕಮಾಂಡ್ ತೀರ್ಮಾನದ ಮೇಲೆ ಇದ್ದೇನೆ. ಈಗ ಎರಡೂವರೆ ವರ್ಷ ಆಗಿದೆ. ಐದು ವರ್ಷವೂ ನಾನೇ ಇರುತ್ತೇನೆ ಎಂದರು.
ಇದಕ್ಕೆ ಮತ್ತೆ ಮಧ್ಯಪ್ರವೇಶಿಸಿದ ಸುನೀಲ್ ಕುಮಾರ್, ಇಂದು ಉತ್ತರ ಕರ್ನಾಟಕ ಭಾಗಗಳಿಗೆ ಹಲವು ಯೋಜನೆಗಳನ್ನು ಘೋಷಿಸುತ್ತೀರಿ. ಅವುಗಳನ್ನು ಅನುಷ್ಠಾನಕ್ಕೆ ತರಲು ಕೂಡ ನೀವೇ ಇರಬೇಕು ಎಂಬುದು ಆಶಯ ಹಾಗಾಗಿ ಸ್ಪಷ್ಟಪಡಿಸಬೇಕು ಮುಂದೆಯೂ ನೀವೇ ಇರುತ್ತೀರಾ? ಎಂಬುದಕ್ಕೆ ಉತ್ತರಿಸಿ ಎಂದರು.
ಸುನೀಲ್ ಕುಮಾರ್ ಪ್ರಶ್ನೆಗೆ ಖಡಕ್ ಆಗಿ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಹೌದು ಮುಂದೆಯೂ ನಾನೇ ಇರುತ್ತೇನೆ. ಈಗಲೂ ನಾನೇ ಮುಖ್ಯಮಂತ್ರಿಯಾಗಿದ್ದೇನೆ. ಮುಂದೆಯೂ ನಾನೇ ಮುಖ್ಯಮಂತ್ರಿಯಾಗಿರುತ್ತೇನೆ. ಐದು ವರ್ಷಗಳ ಕಾಲ ನಾನೇ ಸಿಎಂ ಎಂದು ಹೇಳಿದರು. ಈ ಮೂಲಕ ಬೆಳಗಾವಿ ಅಧಿವೇಶನದಲ್ಲಿಯೇ ವಿರೋಧಿಗಳಿಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.


