ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಸಿದ್ದರಾಮಯ್ಯ ಹಿಂದುಳಿದ ವರ್ಗಗಳ ನಕಲಿ ನಾಯಕ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿ ವರಿಷ್ಠರು ಬುದ್ದಿವಂತರ ಜಿಲ್ಲೆ ಎಂಬ ದಕ್ಷಿಣ ಕನ್ನಡದ ಖ್ಯಾತಿಗೆ ಅಸೂಯೆಪಟ್ಟು ಅಥವಾ ಬೌದ್ದಿಕ ದಾರಿದ್ಯ್ರದಿಂದಾಗಿ ನಳಿನ್ ಕುಮಾರ್ ಕಟೀಲ್ ಎಂಬ ನಕಲಿ ಶ್ಯಾಮನನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಹಿಂದೂ ಧರ್ಮಕ್ಕೆ ಸೇರಿರುವ ಮಂಗಳೂರಿನ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಅವರ ಹತ್ಯೆಯ ಪ್ರಮುಖ ಆರೋಪಿಯಾದ ನಿಮ್ಮ ಖಾಸಾ ದೋಸ್ತ್ ನರೇಶ್ ಶೆಣೈಯನ್ನು ರಕ್ಷಿಸುತ್ತಿರುವವರು ಯಾರೆಂದು ತಿಳಿಸುವಿರಾ? ಬಾಳಿಗರ ಕೊಲೆಗಡುಕರನ್ನು ಶಿಕ್ಷಿಸಲು ಹೋರಾಡುತ್ತಿರುವ ಅವರ ಸೋದರಿಯರಿಗೆ ಯಾವಾಗ ನ್ಯಾಯಕೊಡಿಸುತ್ತೀರಿ? ಹಿಂದುಗಳ ಹತ್ಯೆ ಬಗ್ಗೆ ಕಣ್ಣೀರು ಸುರಿಸುತ್ತಿರುವ ನಳಿನ್ ಕುಮಾರ್ ಕಟೀಲ್ ಅವರೇ, ದಕ್ಷಿಣ ಕನ್ನಡದ ಪ್ರಕಾಶ್ ಕುಳಾಯಿ, ಕೇಶವ ಶೆಟ್ಟಿ, ಹರೀಶ್ ಪೂಜಾರಿ, ಬ್ರಹ್ಮಾವರದ ಪ್ರವೀಣ್ ಪೂಜಾರಿ, ಚಿಕ್ಕಮಗಳೂರಿನ ಕಲ್ಲಪ್ಪ ಹಂಡಿಬಾಗ್, ಮತ್ತು ಧನ್ಯಶ್ರೀ ಹಾಗೂ ವಿಜಯಪುರದ ದಾನಮ್ಮ ಹತ್ಯೆಯ ಆರೋಪಿಗಳು ಯಾರೆಂದು ತಿಳಿಸುವಿರಾ? ಎಂದು ಪ್ರಶ್ನಿಸಿದ್ದಾರೆ.
ನಾನು ಮುಖ್ಯಮಂತ್ರಿಯಾಗಿದ್ದಾಗ ಹತ್ಯೆಗೀಡಾಗಿದ್ದಾರೆಂದು ಆರೋಪಿಸಿ ನಿಮ್ಮ ಪಕ್ಷ ಕೇಂದ್ರ ಸರ್ಕಾರಕ್ಕೆ ಕಳಿಸಿದ್ದ ಪಟ್ಟಿಯಲ್ಲಿ ಜೀವಂತವಾಗಿ ಇರುವ ಅಶೋಕ್ ಪೂಜಾರಿ ಅವರ ಹೆಸರನ್ನು ಸೇರಿಸಿರುವ ನಿಮ್ಮ ಪಕ್ಷ ತನ್ನ ಬಣ್ಣ ತಾನೇ ಬಯಲು ಮಾಡಿಕೊಂಡು ನಗೆಪಾಟಲಿಗೀಡಾಗಿದ್ದು ನೆನಪಿದೆಯೇ? 2013-18ರ ಅವಧಿಯಲ್ಲಿ 24 ಹಿಂದುಗಳ ಹತ್ಯೆಯಾಗಿದೆ ಎಂದು ಹೇಳಿದ್ದೀರಿ. ಕೋಮುಸಂಘರ್ಷದಲ್ಲಿ ಹತ್ಯೆಗೀಡಾದವರು 24 ಅಲ್ಲ, ಹಿಂದು-ಮುಸ್ಲಿಮ್ ಸೇರಿ ಒಟ್ಟು 45. ಈ ಪ್ರಕರಣಗಳನ್ನು ದಾಖಲೆ ಸಮೇತ ವಿವರಿಸಿ ನಮ್ಮ ಪಕ್ಷ ಪ್ರಕಟಿಸಿದ ಪುಸ್ತಕವನ್ನು ಓದಿ ನಿಮ್ಮ ಮನಸಾಕ್ಷಿಯನ್ನು ಪ್ರಶ್ನಿಸಿಕೊಳ್ಳಿ ಎಂದು ಕೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ