ಪ್ರಗತಿವಾಹಿನಿ ಸುದ್ದಿ: ವಾಲ್ಮೀಕಿ ಅಭಿವೃದ್ಧಿ ನಿಗಮದ 187 ಕೋಟಿ ರೂ. ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಭಾಗಿಯಾಗಿದ್ದು, ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ವಿರುದ್ಧ ಬಿಜೆಪಿಯಿಂದ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಸಚಿವ ಬಿ.ನಾಗೇಂದ್ರ 20% ತಿಂದಿದ್ದಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ 80% ತಿಂದಿದ್ದಾರೆ. ಆದ್ದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಈ ಕುರಿತು ಸದನದಲ್ಲೂ ಆಗ್ರಹಿಸುತ್ತೇವೆ. ಸಿಎಂ ರಾಜೀನಾಮೆ ನೀಡುವವರೆಗೂ ಹೋರಾಡುತ್ತೇವೆ ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಉಚಿತಗಳ ಹೆಸರಲ್ಲಿ ಬೆಲೆ ಏರಿಕೆ ಮಾಡಿದೆ. ಹಾಲಿನ ಬೆಲೆ ಏರಿಕೆ ಮಾಡಿದ್ದು ಏಕೆ ಎಂದು ಪ್ರಶ್ನೆ ಮಾಡಿದರೆ ಹೆಚ್ಚು ಹಾಲು ನೀಡಿದ್ದೇವೆ ಎನ್ನುತ್ತಾರೆ. ಆದರೆ ಹೆಚ್ಚಾದ ಹಣವನ್ನು ರೈತರಿಗೆ ಕೊಡುವುದಿಲ್ಲ. ಬಡವರು ಕೂಲಿ ಮಾಡಿ ದುಡಿದು ಮದ್ಯ ಸೇವಿಸಲು ಹೋದರೆ ಅದಕ್ಕೂ ದರ ಏರಿಕೆ ಮಾಡಿದ್ದಾರೆ. ಶ್ರೀಮಂತರು ಕುಡಿಯುವ ಮದ್ಯದ ದರವನ್ನು ಇಳಿಕೆ ಮಾಡಿದ್ದಾರೆ. ರಾಜ್ಯದಲ್ಲಿ ಅಭಿವೃದ್ಧಿ ನಡೆಯುತ್ತಿಲ್ಲ. ಆದರೆ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಮಾತ್ರ ಅಭಿವೃದ್ಧಿಯಾಗುತ್ತಿದ್ದಾರೆ ಎಂದರು.
ರೈತರಿಗೆ 800 ಕೋಟಿ ರೂ. ಹಾಲಿನ ಪ್ರೋತ್ಸಾಹಧನ ನೀಡಬೇಕಿದೆ. ರೈತರು ಬರ ಪರಿಹಾರ, ಪ್ರೋತ್ಸಾಹಧನ ಇಲ್ಲದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸರ್ಕಾರಕ್ಕೆ ಕುಡಿಯುವ ನೀರು ಕೊಡಲು ಕೂಡ ಯೋಗ್ಯತೆ ಇಲ್ಲದೆ ಕಲುಷಿತ ನೀರು ಕುಡಿದು ಜನರು ಸತ್ತಿದ್ದಾರೆ. ಡೆಂಘೀ ರೋಗ ಹರಡುತ್ತಿದ್ದು, ಅದಕ್ಕೆ ಚಿಕಿತ್ಸೆ ನೀಡಲು ಸರ್ಕಾರದ ಬಳಿ ಹಣವಿಲ್ಲ. ಮುಂದಿನ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜನರು ಕಾಂಗ್ರೆಸ್‌ಗೆ ಬುದ್ಧಿ ಕಲಿಸಬೇಕು ಎಂದರು.
ತೈಲ ದರ ಏರಿಕೆಯಾಗಿ ಎಲ್ಲ ದರಗಳು ಏರಿದೆ. ಹಾಲು ಉತ್ಪಾದನೆ ಹೆಚ್ಚಳವಾದರೆ ಅದನ್ನು ಬೇರೆ ರೀತಿ ಬಳಸಿಕೊಳ್ಳಬಹುದು. ಅದನ್ನು ಬಿಟ್ಟು ಹಾಲಿನ ದರ ಏರಿಸಿದ್ದಾರೆ. ಇನ್ನು ಲಿಕ್ಕರ್ ದರ ಕೂಡ ಏರಿಸುತ್ತಾರೆ. ಅವೈಜ್ಞಾನಿಕ ಗ್ಯಾರಂಟಿಗಳನ್ನು ಜಾರಿ ಮಾಡಿ, ಅದಕ್ಕೆ ಹಣ ಹೊಂದಿಸಲು ಸಾಧ್ಯವಾಗದೆ ತೆರಿಗೆ ವಿಧಿಸಿ ಜನರ ರಕ್ತ ಹೀರುತ್ತಿದ್ದಾರೆ ಎಂದು ದೂರಿದರು.
ಮರ್ಯಾದೆ ಇದ್ದಿದ್ದರೆ ರಾಜೀನಾಮೆ ಕೊಡಬೇಕಿತ್ತು
ಒಕ್ಕಲಿಗ ಸ್ವಾಮೀಜಿಯವರು ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಮಾಡಲು ಹೇಳಿದ್ದಾರೆ. ಸಿದ್ದರಾಮಯ್ಯ ಧರ್ಮಾತ್ಮ ಅಲ್ಲ ಎಂದೇ ಸ್ವಾಮೀಜಿ ಪರೋಕ್ಷವಾಗಿ ಹೇಳಿದ್ದರೂ, ಡಿ.ಕೆ.ಶಿವಕುಮಾರ್ ಮೌನವಾಗಿದ್ದರು. ಸಿದ್ದರಾಮಯ್ಯ ಚಾಕು ಹಾಕಿದರೆ, ಡಿ.ಕೆ.ಶಿವಕುಮಾರ್ ಚೂರಿ ಹಾಕುತ್ತಾರೆ. ಮಾನ ಮರ್ಯದೆ ಇದ್ದಿದ್ದರೆ ಸಿದ್ದರಾಮಯ್ಯ ವೇದಿಕೆಯಲ್ಲೇ ರಾಜೀನಾಮೆ ನೀಡಿ ಹೋಗಬೇಕಿತ್ತು ಎಂದರು.
ಸಿಎಂ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಕಾಟದಿಂದ ತಪ್ಪಿಸಿಕೊಳ್ಳಲು ಡಿ.ಕೆ.ಸುರೇಶ್ ಅವರನ್ನು ಸೋಲಿಸಿದ್ದಾರೆ. ಅದಕ್ಕೆ ಪ್ರತಿಯಾಗಿ ಡಿ.ಕೆ.ಶಿವಕುಮಾರ್ ಸ್ವಾಮೀಜಿ ಕೈಯಲ್ಲಿ ಹೇಳಿಕೆ ಕೊಡಿಸಿದ್ದಾರೆ. ಇದರ ನಡುವೆ ಮೂರು ಡಿಸಿಎಂ ಬೇಕೆಂದು ಸಚಿವರು ಹೇಳುತ್ತಿದ್ದಾರೆ. ಕಾಂಗ್ರೆಸ್ ಶಾಸಕರ ಶಾಪದಿಂದಲೇ ಸರ್ಕಾರ ಬೀಳಲಿದೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ