
ಪ್ರಗತಿವಾಹಿನಿ ಸುದ್ದಿ: ಪೆಟ್ರೋಲ್ ದರ ಹೆಚ್ಚಳ ಮಾಡಿರುವುದು ಯಾರು? ಡೀಸೆಲ್ ದರ, ಸಿಲಿಂಡರ್ ದರ ಹೆಚ್ಚಳ ಮಾಡಿರುವುದು ಯಾರು? ಕೇಂದ್ರದ ಪ್ರಧಾನಿ ನರೇಂದ್ರ ಮೋದಿ ಸರ್ಕಾರವಲ್ಲವಾ? ಹೀಗಿರುವಾಗ ಬಿಜೆಪಿಯವರ ಪ್ರತಿಭಟನೆ ಯಾರ ವಿರುದ್ಧ? ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಜ್ಯಾದ್ಯಂತ ಬಿಜೆಪಿ ಜನಾಕ್ರೋಶ ಪ್ರತಿಭಟನೆ ವಿಚಾರವಾಗಿ ಪ್ರತಿಕ್ರಿಯಿಸಿ, ಬಿಜೆಪಿಗೆ ಮಾನ ಮರ್ಯಾದೆ ಏನೂ ಇಲ್ಲ. ಪೆಟ್ರೋಲ್, ಡೀಸೆಲ್, ಗ್ಯಾಸ್ ಬೆಲೆ ಏರಿಸಿದ್ದು ಯಾರು? ಇದಕ್ಕೆ ಏನು ಉತ್ತರ ಕೊಡ್ತಾರೆ? ಇಂದು ಅಗತ್ಯವಸ್ತುಗಳ ಬೆಲೆ ಏರಿಕೆಗೆ ಬಿಜೆಪಿಯೇ ಕಾರಣ. ನರೇಂದ್ರ ಮೋದಿ ಅವರ ಕೇಂದ್ರ ಸರ್ಕಾರವೇ ಇದಕ್ಕೆಲ್ಲ ಕಾರಣ ಎಂದು ಕಿಡಿಕಾರಿದರು.
ನಾವು ಹಾಲಿನ ದರ ಹೆಚ್ಚಳ ಮಾಡಿದ್ದೇವೆ. ಅದು ನಮ್ಮ ಸರ್ಕಾರಕ್ಕೆ ಬರಲ್ಲ. ರೈತರಿಗೆ ವರ್ಗಾವಣೆ ಮಾಡಿದ್ದೇವೆ. ರೈತರಿಗೆ ಆ ಹಣ ಹೋಗುತ್ತದೆ. ಅದನ್ನು ರೈತರಿಗೆ ಕೊಡಬೇಡಿ ಎಂದು ಬಿಜೆಪಿಯವರು ಪ್ರತಿಭಟನೆ ಮಾಡಿದರೆ ಅವರು ರೈತ ವಿರೋಧಿಗಳು ಎಂದರ್ಥ ಎಂದರು.
ಸಿಲಿಂಡರ್ ದರ ಹೆಚ್ಚಳ ಮಾಡಿದರೆ ಅದರಿಂದ ತೊಂದರೆ ಆಗುವುದು ಜನಸಾಮನ್ಯರಿಗೆ. ಸಿಲಿಂಡರ್ ದರ 50 ರೂ. ಹೆಚ್ಚುಸಿದ್ದಾರೆ. ಹೆಚ್ಚಿಸಿದ್ದು ಯಾರು? ನಾವಾ? ಕಚ್ಚಾ ತೈಲ ಬೆಲೆ ಈಗ ಕಡಿಮೆ ಇದ್ದರೂ ಇವರು ಹೆಚ್ಚಳ ಮಾಡಿದ್ದಾರೆ. ಮನಮೋಹನ್ ಸಿಂಗ್ ಕಾಲದಲ್ಲಿ ಒಂದು ಬ್ಯಾರಲ್ ಗೆ 120 ಡಾಲರ್ ಇತ್ತು. ಈಗ ಒಂದು ಬ್ಯಾರಲ್ ಗೆ 65 ಡಾಲರ್ ಗೆ ಇಳಿದಿದೆ. ಆದರೂ ಕಚ್ಚಾ ತೈಲ ಬೆಲೆ ಹೆಚ್ಚಳ ಮಾಡಿದ್ದಾರೆ. ಯಾಕೆ ಹೆಚ್ಚಳ ಮಾಡಿದರು? ಅದರ ವಿರುದ್ಧ ಬಿಜೆಪಿಯವರು ಯಾಕೆ ಮಾತನಾಡುತ್ತಿಲ್ಲ? ಈ ಬಗ್ಗೆ ಅವರು ಮಾತನಾಡಲಿ ಎಂದು ಗುಡುಗಿದರು.
ಕೇಂದ್ರ ಸರ್ಕಾರದ ತಪ್ಪು ನೀತಿಯಿಂದಾಗಿ ಇಂದು ದೇಶಾದ್ಯಂತ ಬೆಲೆ ಏರಿಕೆಯಾಗಿದೆ. ಇದನ್ನು ಯಾಕೆ ಪ್ರಶ್ನೆ ಮಾಡುತ್ತಿಲ್ಲ? ಎಂದರು. ರಾಜ್ಯ ಕಾಂಗ್ರೆಸ್ ಸರ್ಕಾರ ಆರ್ಥಿಕ ದಿವಾಳಿಯಾಗಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯಿಸಿದ ಸಿಎಂ, ಯಾರಿಗಾದರೂ ಸಂಬಳ ನಿಂತಿದೆಯೇ? ಪೆನ್ಶನ್ ಸ್ಥಗಿತವಾಗಿದೆಯಾ? ಸೋಶಿಯಲ್ ಸರ್ವಿಸ್ ನಿಂತಿದೆಯೇ? ಆರ್ಥಿಕ ದಿವಾಳಿ ಎಂಬುದು ಬಿಜೆಪಿ ಸುಳ್ಳಿನ ಆರೋಪ ಎಂದು ಕಿಡಿಕರಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಲ್ಲಾ ಟೇಂಡರ್ ಕರೆದು ದುಡ್ಡು ಹೊಡೆದುಕೊಂದು ಹೊರಟು ಹೋದರು. ಈಗ ನಮಗೆ ಪಾಠ ಹೇಳಲು ಬರುತ್ತಿದ್ದಾರೆ. ಇಂದು ರಾಜ್ಯ ಸರ್ಕಾರ ದಿವಾಳಿಯಾಗಿದೆ ಎನ್ನುವುದಾದರೆ ಅದಕ್ಕೆ ಬಿಜೆಪಿಯವರೇ ಕಾರಣ ಎಂದರು.
ಗ್ಯಾರಂಟಿಗಳಿಂದಲೇ ಆರ್ಥಿಕತೆ ಹಾಳಾಗಿದೆ ಎಂದು ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಹೇಳಿರುವ ಬಗ್ಗೆ ಉತ್ತರ ನೀಡುತ್ತಾ, ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ, ಯಡಿಯೂರಪ್ಪ ಅವರಿಂದಲೇ ಎಲ್ಲಾ ಹಾಳಾಗಿದೆ ಎಂದು ಗುಡುಗಿದರು.
ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್ ಅವರ ಸರ್ಕಾರದ ಅವಧಿಯಲ್ಲಿಯೇ ರಾಜ್ಯದ ಆರ್ಥಿಕತೆ ಕುಸಿದಿತ್ತು. ನಾವು ಹಿಂದಿನ ವರ್ಷಕ್ಕಿಂತ ಈ ಸಾಲಿನ ಬಜೆಟ್ ನ ಪ್ರಮಾಣ ಸುಮಾರು 38 ಸಾವಿರ ಕೋಟಿಯಷ್ಟು ಹೆಚ್ಚಿಸಲಾಗಿದೆ. ಇದು ನಮ್ಮ ಸರ್ಕಾರದ ಆರ್ಥಿಕ ದಿವಾಳಿತನವೇ ಎಂದು ಪ್ರಶ್ನಿಸಿದರು.
ದೇಶದ ಸಾಲ ನಾಲ್ಕು ಪಟ್ಟು ಹೆಚ್ಚಲು ಮೋದಿಯವರೇ ಕಾರಣ
ನರೇಂದ್ರ ಮೋದಿಯವರು ಅಧಿಕಾರಕ್ಕೆ ಬರುವ ಮುಂಚೆ ದೇಶದ ಮೇಲೆ 5311000 ಕೋಟಿ ಸಾಲವಿತ್ತು. ಆದರೆ ಈಗ 200 ಲಕ್ಷ ಕೋಟಿಗೆ ಸಾಲ ಹೆಚ್ಚಿದೆ. ದೇಶದ ಸಾಲ ಮೊತ್ತ ನಾಲ್ಕು ಪಟ್ಟು ಹೆಚ್ಚಲು ನರೇಂದ್ರ ಮೋದಿಯವರೇ ಕಾರಣ ಎಂದರು.
ಜನರ ಆರ್ಥಿಕ ಸಾಮಾಜಿಕ ಸ್ಥಿತಿಗತಿ ಅರಿಯಲು ಜಾತಿಗಣತಿ ಅಗತ್ಯ
ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳುವ ಸಲುವಾಗಿ ಜಾತಿಗಣತಿಯನ್ನು ಮುನ್ನಲೆಗೆ ತಂದಿರುವುದಾಗಿ ಜಗದೀಶ್ ಶೆಟ್ಟರ್ ತಿಳಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡುತ್ತಾ, ಅವರು ಮುಖ್ಯಮಂತ್ರಿಯಾಗಿ, ವಿರೋಧಪಕ್ಷದ ನಾಯಕರಾಗಿಯೂ ಅಸಮರ್ಥರಾಗಿದ್ದರು. ಕಾಂಗ್ರೆಸ್ ಪಕ್ಷಕ್ಕೆ ವಲಸೆ ಬಂದಾಗ ಬಿಜೆಪಿಯವರ ವಿರೋಧವೇ ಹಲವು ಹೇಳಿಕೆಗಳನ್ನು ನೀಡಿದ್ದರು. ಜಾತಿಗಣತಿ ಜಾರಿಗೆ ತರಬೇಕೆಂಬುದು ಕಾಂಗ್ರೆಸ್ ನ ಭರವಸೆಯಾಗಿದೆ. ಒಂದು ಕುಟುಂಬದಲ್ಲಿ ಆರ್ಥಿಕವಾಗಿ, ಸಾಮಾಜಿಕವಾದ ಪರಿಸ್ಥಿತಿಯ ಬಗ್ಗೆ ಮಾಹಿತಿ ತಿಳಿಯುವುದು ಅವಶ್ಯಕ. ಸ್ವಾತಂತ್ರ್ಯ ನಂತರ ಜಾತಿಗಣತಿ ನಡೆಯದೇ, ಅನೇಕ ನ್ಯಾಯಾಲಯಗಳಲ್ಲಿ ಈ ಬಗ್ಗೆ ಮಾಹಿತಿ ಕೇಳಲಾಗಿತ್ತು. ಆದ್ದರಿಂದ ಜಾತಿಗಣತಿ ಮಾಡಬೇಕಾದ್ದು ಅಗತ್ಯ ಎಂದರು.
ಸಮೀಕ್ಷೆಯನ್ನು ವೈಜ್ಞಾನಿಕವಾಗಿ ನಡೆಸಲಾಗಿದೆ.
ಬಿಜೆಪಿಯವರು ಜಾತಿಗಣತಿಯನ್ನು ಸಮರ್ಪಕವಾಗಿ ನಡೆಸಲಾಗಿಲ್ಲ ಎಂದು ಹೇಳಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಸಮೀಕ್ಷೆಯನ್ನು ಶೇ. 95 ರಷ್ಟು ನಿಖರವಾಗಿ ನಡೆಸಲಾಗಿದೆ. ಶೇ. 98 ರಷ್ಟು ನಿಖರವಾಗಿ ಗ್ರಾಮಾಂತರ ಹಾಗೂ ಶೇ.96 ರಷ್ಟು ನಿಖರವಾಗಿ ನಗರ ಪ್ರದೇಶಗಳಲ್ಲಿ ನಡೆಸಲಾಗಿದೆ. 1,01,60,000 ಜನರು ಈ ಸಮೀಕ್ಷೆಯಲ್ಲಿ ಭಾಗಿಯಾಗಿದ್ದು, ಸುಮಾರು 1,36,000 ಜನ ಶಿಕ್ಷಕರಿದ್ದರು. ಶಿಕ್ಷಕರಲ್ಲಿ ಹೆಚ್ಚಿನವರು ಸಾಮಾನ್ಯ ವರ್ಗದವರೇ ಆಗಿದ್ದು, ಸಮೀಕ್ಷೆಯನ್ನು ವೈಜ್ಞಾನಿಕವಾಗಿ ನಡೆಸಲಾಗಿದೆ. ಜಾತಿಗಣತಿಯ ವರದಿಯನ್ನು ಸಚಿವ ಸಂಪುಟದಲ್ಲಿ ಚರ್ಚಿಸಿದ ನಂತರವಷ್ಟೇ ವಿಧಾನಸಭೆಯಲ್ಲಿ ಮಂಡಿಸಲು ಸಾಧ್ಯ ಎಂದರು.
ಬೆಳಗಾವಿಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ
ಮಹಾರಾಷ್ಟ್ರ ಸರ್ಕಾರದವರು ಬೆಳಗಾವಿಯಲ್ಲಿ ಭವನವನ್ನು ನಿರ್ಮಿಸುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿ, ಸರ್ಕಾರ ನವದೆಹಲಿಯಲ್ಲಿ ಕರ್ನಾಟಕ ಭವನವನ್ನು ನಿರ್ಮಿಸಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಇದಕ್ಕೆ ಅವಕಾಶವಿದೆ. ಆದರೂ ಮಹಾರಾಷ್ಟ್ರದವರು ನಮ್ಮ ಭೂಮಿಯನ್ನು ಆಕ್ರಮಿಸಿಕೊಳ್ಳಲು ಸಾಧ್ಯವಿಲ್ಲ. ಬೆಳಗಾವಿಯನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡುವುದಿಲ್ಲ ಎಂದರು.
ಒಳಮೀಸಲಾತಿ ಜಾರಿಗೆ ತರಲು ನಾಗಮೋಹನ್ದಾಸ್ ಆಯೋಗ ರಚಿಸಿ, ಎರಡು ತಿಂಗಳಲ್ಲಿ ವರದಿ ನೀಡಲು ಸೂಚನೆ ನೀಡಲಾಗಿದೆ. ರಾಜ್ಯದಲ್ಲಿ ಆದಿ ದ್ರಾವಿಡ, ಆದಿ ಆಂದ್ರ, ಆದಿ ಕರ್ನಾಟಕ, ಎಸ್.ಸಿಗಳು ಸೇರಿದಂತೆ 102 ಜಾತಿಗಳಿವೆ. ಇವರಲ್ಲಿ ಯಾರು ಯಾವ ಜಾತಿಗೆ ಸೇರಿದ್ದಾರೆಂಬ ಬಗ್ಗೆ ಸ್ಪಷ್ಟತೆ ಸಿಗಬೇಕೆಂಬ ಕಾರಣಕ್ಕೆ ಸಮೀಕ್ಷೆ ನಡೆಸಲಾಗುತ್ತಿದೆ ಎಂದರು.