*ಸ್ಟಿಂಗ್ ಆಪರೇಷನ್*: *ಸಿಸಿಬಿ ಪೊಲೀಸರಿಗೆ ಮೊಬೈಲ್ ನೀಡಲು ನಿರಾಕರಿಸಿದ ಕೃಪಾ ಆಳ್ವ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ರಾಜಕೀಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಸ್ಟಿಂಗ್ ಆಪರೇಷನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಕೃಪಾ ಆಳ್ವ ಸಿಸಿಬಿ ಪೊಲೀಸರಿಗೆ ವಿಚಾರಣೆಗೆ ಮೊಬೈಲ್ ನೀಡಲು ನಿರಾಕರಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃಪಾ ಆಳ್ವ ಸೋಮವಾರ ಸಿಸಿಬಿ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದರು. ಪೊಲೀಸರು ಸ್ಟಿಂಗ್ ಕಾರ್ಯಾಚರಣೆಗೆ ಬಳಸಿದ ಮೊಬೈಲ್ ಫೋನ್ ಅನ್ನು ನೀಡುವಂತೆ ಕೇಳಿದಾಗ, ಕೃಪಾ ಆಳ್ವ ತಮ್ಮ ಬಳಿ ಅಂತಹ ಯಾವುದೇ ಮೊಬೈಲ್ ಇಲ್ಲ ಎಂದು ಉತ್ತರಿಸಿರುವುದಾಗಿ ತಿಳಿದುಬಂದಿದೆ.
2022ರಲ್ಲಿ ಈ ವಿಡಿಯೋ ರೆಕಾರ್ಡ್ ಆಗಿದೆ ಎಂಬುದು ತನಿಖೆ ವೇಳೆ ಪೊಲೀಸರಿಗೆ ತಿಳಿದುಬಂದಿದೆ. ಆದರೆ, ರೆಕಾರ್ಡಿಂಗ್‌ಗೆ ಬಳಸಿದ ಮೊಬೈಲ್ ಅಥವಾ ಸ್ಟಿಂಗ್ ಕ್ಯಾಮೆರಾ, ಹಾಗೆಯೇ ಅದರ ಅನ್‌ಎಡಿಟೆಡ್ ವೀಡಿಯೋ ತುಣುಕು ಪೊಲೀಸರಿಗೆ ಇನ್ನೂ ಸಿಕ್ಕಿಲ್ಲ. ಈ ಕುರಿತು ಪದೇ ಪದೇ ವಿಚಾರಣೆಗೆ ಹಾಜರಾಗುವ ಕೃಪಾ ಆಳ್ವ, ಸ್ಟಿಂಗ್ ಬಗ್ಗೆ ನನಗೆ ತಿಳಿದಿರಲಿಲ್ಲ ಮತ್ತು ಆ ಸಮಯದಲ್ಲಿ ಬಳಸಿದ ಮೊಬೈಲ್ ಈಗ ತಮ್ಮ ಬಳಿ ಇಲ್ಲ ಎಂದು ಹೇಳುತ್ತಿದ್ದಾರೆ.
ಕೃಪಾ ಆಳ್ವ ಪ್ರಸ್ತುತ ಬಳಸುತ್ತಿರುವ ಮೊಬೈಲ್ ಅನ್ನು ತನಿಖಾಧಿಕಾರಿಗಳಿಗೆ ನೀಡುವ ಭರವಸೆ ನೀಡಿದ್ದಾರೆ. ತನಿಖೆಯ ಪ್ರಗತಿಗಾಗಿ, ಪೊಲೀಸರು ಹಳೆಯ ಮೊಬೈಲ್ ಫೋನ್ ಅನ್ನು ಹುಡುಕಿ ನೀಡುವಂತೆ ಕೃಪಾ ಆಳ್ವಗೆ ಸೂಚಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿರುವ ಪ್ರಶಾಂತ್ ಮತ್ತು ರಾಕೇಶ್ ಶೆಟ್ಟಿ ಅವರಿಗೂ ಪೊಲೀಸರು ಮೊಬೈಲ್ ಹಾಗೂ ಅನ್‌ಎಡಿಟೆಡ್ ಫೂಟೇಜ್ ನೀಡುವಂತೆ ಕೇಳಿದ್ದಾರೆ ಎಂದು ತಿಳಿದುಬಂದಿದೆ.


