*ನಾನು ಮತ್ತು ಕಾಮ್ರೇಡ್ ಸೂರ್ಯನಾರಾಯಣರಾವ್ ಒಟ್ಟಿಗೇ ವಿಧಾನಸಭೆ ಪ್ರವೇಶಿಸಿದ್ದೆವು: ಸಿಎಂ.ಸಿದ್ದರಾಮಯ್ಯ*
ದುಡಿಯುವ ವರ್ಗದ ಹೋರಾಟದ ಮ್ಯೂಸಿಯಂ ರಚನೆಗೆ ಕ್ರಮ
ಪ್ರಗತಿವಾಹಿನಿ ಸುದ್ದಿ: ಕಾಮ್ರೇಡ್ ಸೂರ್ಯನಾರಾಯಣ್ ಸದನದ ಒಳಗೆ ಮತ್ತು ಹೊರಗೂ ಹೋರಾಟಗಾರರಾಗಿದ್ದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೆಚ್ಚುಗೆ ಸೂಚಿಸಿದರು.
ಕಾಮ್ರೇಡ್ ಸೂರ್ಯನಾರಾಣರಾವ್ ಅವರ ಜನ್ಮ ಶತಮಾನೋತ್ಸವ ಪ್ರಯುಕ್ತ ಟೌನ್ ಹಾಲ್ ನಲ್ಲಿ “ಕರ್ನಾಟಕದ ಅಭಿವೃದ್ಧಿಯಲ್ಲಿ ಕಾರ್ಮಿಕ ಚಳವಳಿಯ ಪಾತ್ರ” ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.
ಶ್ರಮಿಕರ ಧ್ವನಿಯಾಗಿ ಸೂರ್ಯನಾರಾಯಣ್ ರಾವ್ ಅವರು ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸುತ್ತಿದ್ದರು.
ಯಾವುದೇ ವಿಚಾರವಾದರೂ ಸರಿ ಸಂಪೂರ್ಣ ಸಿದ್ಧತೆ ಮಾಡಿಕೊಂಡು ಬರುತ್ತಿದ್ದರು. ಹೀಗಾಗಿ ಇವರ ಮಾತು ಮತ್ತು ಭಾಷಣ ಕೇಳಲು ನಾವು ಕಾತರರಾಗಿರುತ್ತಿದ್ದೆವು ಎಂದರು.
ಸೂರ್ಯನಾರಾಯಣ್ ರಾವ್ ಅವರಿಗೆ ಬದ್ಧತೆ ಮತ್ತು ಕಾಳಜಿ ಇತ್ತು. ಕಮ್ಯುನಿಸ್ಟ್ ಕಾರ್ಯಕರ್ತರು ಸಾಮಾನ್ಯವಾಗಿ ಅಧಿಕಾರಕ್ಕಾಗಿ ಹೆಚ್ಚುಆಸೆ ಪಡುವವರಲ್ಲ. ಹೋರಾಟಕ್ಕೆ ಹೆಚ್ಚು ಆಧ್ಯತೆ ಕೊಡುತ್ತಿದ್ದರು. ಜನರ ಸಮಸ್ಯೆಗಳಿಗೆ ಪರಿಹಾರ ಸಿಗುವವರೆಗೂ ಸದನದ ಒಳಗೆ ಪಟ್ಟು ಬಿಡದೆ ಹೋರಾಟ ನಡೆಸುತ್ತಿದ್ದರು ಎಂದು ಮೆಚ್ಚುಗೆ ಸೂಚಿಸಿದರು.
ನಾನು ಕಾರ್ಮಿಕ ಸಚಿವನಾಗಿದ್ದಾಗ ಕಾರ್ಮಿಕರ ಸಮಸ್ಯೆಗಳನ್ನು ಬಗೆಹರಿಸುವವರೆಗೂ ಕುಳಿತಲ್ಲಿಂದ ಮೇಲೇಳುತ್ತಿರಲಿಲ್ಲ ಎಂದರು.
ಈಗ ಸುಳ್ಳುಗಳನ್ನೇ ಸತ್ಯ ಮಾಡುವ ಹಿಟ್ಲರ್ ಮನಸ್ಥಿತಿಯ ರಾಜಕಾರಣಿಗಳು ಹೆಚ್ಚಾಗಿದ್ದಾರೆ. ದಣಿವರಿಯದ ಹೋರಾಟಗಾರರಾಗಿದ್ದ ಕಾಮ್ರೇಡ್ ಸೂರಿ ಸದಾ ಸತ್ಯದ ಮೂಲಕ ಸರ್ಕಾರಕ್ಕೆ ಎಚ್ಚರಿಸುತ್ತಿದ್ದರು. ಸದನದ ಒಳಗಾಗಲಿ, ಹೊರಗಾಗಲಿ ಶಾಂತಿ ಕದಡುವ ರೀತಿಯಲ್ಲಿ ಪ್ರತಿಭಟನೆ ಮಾಡುತ್ತಿರಲಿಲ್ಲ ಎಂದರು.
ನಮ್ಮ ಸರ್ಕಾರ ದುಡಿಯುವ ವರ್ಗದ ಏಳಿಗೆಗಾಗಿ ಕಾರ್ಯಕ್ರಮಗಳನ್ನು ರೂಪಿಸಿದೆ. ನಮ್ಮ ಸರ್ಕಾರ ಸದಾ ನಿಮ್ಮ ಪರವಾಗಿ, ಕಾರ್ಮಿಕರ ಪರವಾಗಿ ಇರುತ್ತದೆ. ನಾವು ಕಾರ್ಮಿಕರ ಪರವಾಗಿ ಕಾರ್ಯಕ್ರಮ ರೂಪಿಸಿದ್ದನ್ನು, ಗ್ಯಾರಂಟಿಗಳನ್ನು ನೀಡಿದ್ದನ್ನು ಬಿಜೆಪಿ-ಆರ್ ಎಸ್ ಎಸ್ ನಂತಹ ಬಲಪಂಥೀಯ ಸಂಘಟನೆಗಳು ವಿರೋಧಿಸುತ್ತಿವೆ ಎಂದರು.
ದುಡಿಯುವ ವರ್ಗದ ಹೋರಾಟದ ಮ್ಯೂಸಿಯಂ ರಚನೆಗೆ ಕ್ರಮ
ದುಡಿಯುವ ವರ್ಗದ ಹೋರಾಟದ ಮ್ಯೂಸಿಯಂ ರಚನೆಗೆ ಕ್ರಮ ಕೈಗೊಳ್ಳುವ ಬಗ್ಗೆ ಸಕಾರಾತ್ಮಕವಾಗಿ ಸ್ಪಂದಿಸಲಾಗುವುದು ಎಂದು ಇದೇ ಸಂದರ್ಭದಲ್ಲಿ ಸಿಎಂ ಭರವಸೆ ನೀಡಿದರು.
ಕಾಮ್ರೇಡ್ ಬಿಜೆಕೆ ನಾಯರ್ ಅವರು ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ CITU ಪ್ರಧಾನ ಕಾರ್ಯದರ್ಶಿ ತಪನ್ ಸೇನ್, ಕಾಮ್ರೇಡ್ ಸೂರ್ಯನಾರಾಯಣ್ ಅವರ ಪುತ್ರಿ ಶ್ರೀಮತಿ ರೇಖಾ ಸೇರಿ ಹಲವು ಹೋರಾಟಗಾರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ