ಪ್ರಗತಿವಾಹಿನಿ ಸುದ್ದಿ; ಹೊನ್ನಾವರ: ತಮ್ಮ ವಿಶಿಷ್ಟವಾದ ಸಹಿಯಿಂದಲೇ ಖ್ಯಾತರಾಗಿದ್ದ ಆಪ್ತ ವಲಯದಲ್ಲಿ ಸಿಗ್ನೇಚರ್ ಶಾಂತಯ್ಯ ಎಂದೇ ಕರೆಸಿಕೊಳ್ಳುತ್ತಿದ್ದ ಹೊನ್ನಾವರದ ನಿವೃತ್ತ ಉಪ ನೋಂದಣಿ ಅಧಿಕಾರಿ ಸಿಗ್ನೇಚರ್ ಶಾಂತಯ್ಯ ( 61 ) ತುಮಕೂರಿನ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಶಾಂತಯ್ಯ ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಶಿವಗಂಗೆಯವರು. ನೋಂದಣಿ ಇಲಾಖೆಯ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡಿ ಬಳಿಕ ಹೊನ್ನಾವರ ಉಪ ನೋಂದಣಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ 2 ವರ್ಷದ ಹಿಂದೆ ನಿವೃತ್ತರಾಗಿದ್ದರು.
ಶಾಂತಯ್ಯ ಅವರ ಸಹಿ ಹತ್ತಾರು ಸುಳಿಗಳಿಂದ ತುಂಬಿದ್ದು ಅತ್ಯಂತ ವಿಶಿಷ್ಟವಾಗಿತ್ತು. ಯಾರೂ ನಕಲು ಮಾಡದ ರೀತಿಯಲ್ಲಿ ಇತ್ತಲ್ಲದೇ ನೋಡಲೂ ಅತ್ಯಂತ ಸುಂದರ ಚಿತ್ರದಂತೆ ಕಾಣುತ್ತಿತ್ತು.
ಅಳತೆಗೋಲಿನಲ್ಲಿ ಇವರ ಸಹಿಯ ರೇಖೆಗಳನ್ನು ಉದ್ದಕ್ಕಿಟ್ಟು ಅಳೆದರೆ ಅದು ಸುಮಾರು 2. 6 ಅಡಿಯಷ್ಟು ಉದ್ದವಾಗುತ್ತಿತ್ತು.
ಶಾಂತಯ್ಯ ಅವರ ಸಹಿ ಗಿನ್ನಿಸ್ ದಾಖಲೆ ಮಾಡಿದೆ ಎಂಬ ಸುದ್ದಿ ಸಹ ಕೆಲ ವರ್ಷಗಳ ಹಿಂದೆ ಸೋಷಿಯಲ್ ಮೀಡಿಯಾಗಳಲ್ಲಿ ಹರಿದಾಡಿತ್ತು. ಅದು ಕೇವಲ ವದಂತಿಯಾಗಿತ್ತಾದರೂ ಶಾಂತಯ್ಯ ಅವರ ಸಹಿ ಯಾವುದೇ ದಾಖಲೆ ಬರೆಯುವಲ್ಲಿ ಕಡಿಮೆ ಇರಲಿಲ್ಲ ಎಂದು ಅವರ ಅಭಿಮಾನಿಗಳು ಹೇಳುತ್ತಾರೆ. ಹೆಸರಿಗೆ ತಕ್ಕಂತೆ ಅತ್ಯಂತ ಶಾಂತ ಸ್ವಭಾವದವರಾಗಿದ್ದ ಶಾಂತಯ್ಯ ಅವರ ನಿಧನಕ್ಕೆ ನೂರಾರು ಜನ ಕಂಬನಿ ಮಿಡಿದಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ