ಹುಕ್ಕೇರಿ ಹಿರೇಮಠದಲ್ಲಿ ಸರಳ ದಸರಾ
ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ – ಭಾವೈಕ್ಯತೆಗೆ ಹೆಸರಾಗಿರುವ ಹುಕ್ಕೇರಿ ಹಿರೇಮಠದ ದಸರಾ ವೈಶಿಷ್ಟ್ಯಪೂರ್ಣವಾಗಿ ಜರುಗುತ್ತದೆ. ಆದರೆ ಕಳೆದ ವರ್ಷ ಮಡಿಕೇರಿ ಹಾಗೂ ಕೇರಳದಲ್ಲಿ ಜರುಗಿದ ಅತಿವೃಷ್ಟಿಯಿಂದ ಸರಳ ದಸರಾ ಮಾಡಲಾಗಿತ್ತು.
ಈ ವರ್ಷವೂ ಕೂಡ ಸರಳ ದಸರಾ ಆಚರಿಸಲಾಗುವುದು. ರೇಣುಕ ಶ್ರೀ ಪ್ರಶಸ್ತಿ ಮತ್ತು ಇನ್ನಿತರ ಪ್ರಶಸ್ತಿಗಳನ್ನು ಕೂಡ ಈ ಸಲ ನೀಡಲಾಗುವುದಿಲ್ಲ. ನೆರೆ ಸಂತ್ರಸ್ತರಿಗಾಗಿ ಶ್ರೀಮಠ ನಿರಂತರವಾಗಿ ಶ್ರಮಿಸುತ್ತಬಂದಿದೆ. ಈ ವರ್ಷ ಸೆಪ್ಟಂಬರ್ 29ರಿಂದ ಅ.8ರವರೆಗೆ ಹುಕ್ಕೇರಿ ಹಿರೇಮಠದ ದಸರಾ ಉತ್ಸವ ಜರುಗಲಿದ್ದು, ಈ ಸಂದರ್ಭದಲ್ಲಿ ಧಾರ್ಮಿಕ ವಿಧಿವಿಧಾನಗಳು ಯಥಾಪ್ರಕಾರವಾಗಿ ನಡೆಯುತ್ತವೆ. ಪುರಾಣ ಪ್ರವಚನಗಳು ನಡೆಯುತ್ತವೆ. ಕೆಲವು ಸ್ವಾಮಿಗಳು ಮಾತ್ರ ಪಾಲ್ಗೊಳ್ಳಲಿದ್ದಾರೆ ಎಂದು ಹುಕ್ಕೇರಿ ಹಿರೇಮಠದ ದಸರಾ ಉತ್ಸವ ಸಮಿತಿಯ ಅಧ್ಯಕ್ಷ ಶಾಸಕ ಉಮೇಶ್ ಕತ್ತಿ ಅವರು ತಿಳಿಸಿದ್ದಾರೆ.
ಜತೆಗೆ ನೆರೆಸಂತ್ರಸ್ತರಿಗೆ ನೆರವಾಗುವುದುವಂಥ ದಸರೆಯನ್ನು ಮಾಡಲು ತೀರ್ಮಾನಿಸಿದ್ದೇವೆ. ಕಾರ್ಯಕ್ರಮದಲ್ಲಿ ಜಿಲ್ಲೆಯ ಸಚಿವರು, ಸಂಸದರು, ಶಾಸಕರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಸರಳ ದಸರಾ ಎಲ್ಲರಿಗೂ ಕೂಡ ಮಾದರಿಯಾಗಿ ನಿಲ್ಲಲಿದೆ ಎಂದು ಅವರು ತಿಳಿಸಿದ್ದಾರೆ.
ಇದೇ ಸಂದರ್ಭದಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಮಾತನಾಡುತ್ತಾ, ಹುಕ್ಕೇರಿಯ ದಸರೆಯನ್ನು ನಾವು ಮಾನವೀಯತೆಯ ದಸರೆಯಾಗಿ ಮಾರ್ಪಡಿಸುತ್ತಿದ್ದೇವೆ. ಜನ ಕಷ್ಟದಲ್ಲಿದ್ದಾಗ ಅದ್ದೂರಿಗೆ ಅವಕಾಶವನ್ನು ಕೊಡದೇ ಅದರಲ್ಲಿಯೇ ಹಣವನ್ನು ಉಳಿಸಿ ಜನರಿಗೆ ನೆರೆ ಸಂತ್ರಸ್ತರಿಗೆ ಕೊಡುವಂತ ಕಾರ್ಯವನ್ನು ಮಾಡಲಿದ್ದೇವೆ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ