Latest

ಪ್ರಧಾನಿ ನರೇಂದ್ರ ಮೋದಿಯವರ ದೇವಾಲಯಗಳ ಸಮಗ್ರ ಅಭಿವೃದ್ಧಿ ಕನಸು ನನಸು ಮಾಡುವುದು ನನ್ನ ಗುರಿ: ಸಚಿವೆ ಶಶಿಕಲಾ ಜೊಲ್ಲೆ

ಪ್ರಗತಿವಾಹಿನಿ ಸುದ್ದಿ; ಸಿಂಧನೂರು: ಪ್ರಧಾನಿ ನರೇಂದ್ರ ಮೋದಿಯವರ ದೇವಾಲಯಗಳ ಸಮಗ್ರ ಅಭಿವೃದ್ಧಿಯ ಕನಸನ್ನು ರಾಜ್ಯದಲ್ಲಿ ನನಸು ಮಾಡುವುದು ನನ್ನ ಗುರಿಯಾಗಿದೆ. ಈ ನಿಟ್ಟಿನಲ್ಲಿ ರಾಜ್ಯದ ದೇವಸ್ಥಾನಗಳ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆಯನ್ನು ತಯಾರಿಸಿದ್ದು ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಅನುಷ್ಠಾನಗೊಳಿಸಲಾಗುವುದು ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

ಇಂದು ಸಿಂಧನೂರು ತಾಲ್ಲೂಕಿನ ಸೋಮಲಾಪುರ ಗ್ರಾಮದ ಶ್ರೀ ಅಂಬಾದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ ಮುಜರಾಯಿ ಇಲಾಖೆಯಿಂದ ನೀಡಲಾಗಿರುವ 7 ಕೋಟಿ 93 ಲಕ್ಷಗಳ ಅನುದಾನದ ನಿರ್ಮಾಣ ಕಾಮಗಾರಿಯ ಶಂಕುಸ್ಥಾಪನೆಯಲ್ಲಿ ಪಾಲ್ಗೊಂಡು ಮಾತನಾಡಿದರು. ರಾಜ್ಯದ ದೇವಸ್ಥಾನಗಳ ಸಮಗ್ರ ಅಭಿವೃದ್ಧಿ ಮಾಡುವ ನಿಟ್ಟಿನಲ್ಲಿ ದೈವ ಸಂಕಲ್ಪ ಹಾಗೂ ಕಾಯಕಲ್ಪದಂತಹ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ದೈವಸಂಕಲ್ಪ ಯೋಜನೆಯ ಅಡಿಯಲ್ಲಿ ಮೊದಲ ಹಂತವಾಗಿ ರಾಜ್ಯದ 25 ದೇವಸ್ಥಾನಗಳನ್ನು ಅಯ್ಕೆಮಾಡಿಕೊಳ್ಳಲಾಗಿದೆ. ಈ ದೇವಸ್ಥಾನಗಳಲ್ಲಿ ಸ್ನಾನಘಟ್ಟ, ಮೂಲಭೂತ ಸೌಕರ್ಯಗಳು, ಭೋಜನ ಶಾಲೆ, ಒಣ ಮತ್ತು ಹಸಿ ತ್ಯಾಜ್ಯ ನಿರ್ವಹಣೆ ಸೇರಿದಂತೆ ಸರ್ವತೋಮುಖ ಅಭಿವೃದ್ಧಿಗೆ ಕ್ರಮಗಳನ್ನು ಕೈಗೊಳ್ಳಲಾಗುವುದು. ಈ ಯೋಜನೆಯ ಮೊದಲ ಹಂತದ 1,143 ಕೋಟಿ ರೂಪಾಯಿ ಗಳಾಗಿವೆ. ದೇವಾಲಯದಲ್ಲಿ ಸ್ವಚ್ಛತೆ ಗೆ ಆದ್ಯತೆ, ಉತ್ತಮ ಪರಿಸರ ನಿರ್ಮಾಣ, ಒಳಚರಂಡಿ ಸೇರಿದಂತೆ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಕಾಯಕಲ್ಪ ಯೋಜನೆಯ ಅಡಿಯಲ್ಲಿ ಪ್ರತಿ ವರ್ಷ 1,500 ಸಿ ದರ್ಜೆಯ ದೇವಸ್ಥಾನಗಳನ್ನು ಅಭಿವೃದ್ಧಿಗೊಳಿಸಲಾಗುವುದು ಎಂದು ಹೇಳಿದರು.

ಇಂದು ಸಿಂಧನೂರು ತಾಲ್ಲೂಕಿನ ಶಕ್ತಿ ಪೀಠ ಎಂದೇ ಹೆಸರುವಾಸಿಯಾಗಿರುವ ಸೋಮಲಾಪುರ ಗ್ರಾಮದ ಶ್ರೀ ಅಂಬಾದೇವಿ ದೇವಸ್ಥಾನದ ಜೀರ್ಣೋದ್ಧಾರಕ್ಕಾಗಿ 7 ಕೋಟಿ 93.50 ಲಕ್ಷ ರೂಪಾಯಿ ಗಳ ಅನುದಾನ ನೀಡಲಾಗಿದೆ. ಈ ಅನುದಾನದ ಅಡಿಯಲ್ಲಿ ಭಕ್ತರಿಗೆ ಸರ್ವ ಸೌಲಭ್ಯಗಳನ್ನು ನಿರ್ಮಿಸಲಾಗುವುದು. ಮುಂದಿನ ದಿನಗಳಲ್ಲಿ ರಾಜ್ಯದ ಜಿಲ್ಲೆಯ ಇತರೆ ದೇವಸ್ಥಾನಗಳನ್ನು ಅಭಿವೃದ್ಧಿ ಗೊಳಿಸಲಾಗುವುದು. ನಮ್ಮ ಸರಕಾರ ದೇವಸ್ಥಾನಗಳ ಅಭಿವೃದ್ಧಿ ಗೆ ವಿಶೇಷ ಆದ್ಯತೆ ನೀಡುತ್ತಿದೆ. ಮುಂದಿನ ಬಜೆಟ್ ನಲ್ಲಿ ಮುಜರಾಯಿ ಖಾತೆಗೆ ಇನ್ನೂ ಹೆಚ್ಚಿನ ಅನುದಾನ ದೊರೆಯುವ ನಿರೀಕ್ಷೆಯಿದೆ ಎಂದು ಭರವಸೆ ವ್ಯಕ್ತಪಡಿಸಿದರು.

ನನ್ನ ಕಾಲಾವಧಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅಭಿಲಾಷೆ ಯಂತೆ ದೇವಸ್ಥಾನ ಗಳ ಸಮಗ್ರ ಅಭಿವೃದ್ಧಿಯನ್ನು ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಇದಕ್ಕೂ ಮುನ್ನ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳಲಾಯಿತು. ಈ ಸಂದರ್ಭದಲ್ಲಿ ಕೊಪ್ಪಳ ಸಂಸದರಾದ ಸಂಗಣ್ಣ ಕರಡಿ, ಸಿಂಧನೂರು ಶಾಸಕರಾದ ವೆಂಕಟರಾವ್ ನಾಡಗೌಡ, ಅಂಬಾದೇವಿ ದೇವಸ್ಥಾನ ಸಮಿತಿಯ ಅಧ್ಯಕ್ಷರಾದ ರಾಜಶೇಖರಯ್ಯ ಹಿರೇಮಠ, ಸೋಮಲಾಪುರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಎಂ. ಸೀತಾರಾಮಯ್ಯ ಸೇರಿದಂತೆ ಸ್ಥಳೀಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.

ಹುಕ್ಕೇರಿ ಶ್ರೀಗಳ ಸಂಸ್ಕೃತ ಪ್ರೇಮ ಮೆಚ್ಚುವಂಥದ್ದು: ಮಾಜಿ ಸಿಎಂ ಸದಾನಂದಗೌಡ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button