ಶಿರಸಿ: ತೀವ್ರವಾಗಿ ಹರಡುತ್ತಿರುವ ಮಂಗನ ಕಾಯಿಲೆ; ಎಚ್ಚೆತ್ತುಕೊಳ್ಳಬೇಕಾದ ತಾಲೂಕು ಆಡಳಿತ
ಪ್ರಗತಿವಾಹಿನಿ ಸುದ್ದಿ, ಶಿರಸಿ: ಶಿರಸಿ ತಾಲೂಕಿನಲ್ಲಿ ಮಂಗನ ಕಾಯಿಲೆ (KFD) ತೀವ್ರವಾಗಿ ಹರಡುತ್ತಿರುವ ಶಂಕೆ ವ್ಯಕ್ತವಾಗಿದ್ದು, ತಾಲೂಕು ಆಡಳಿತ ತುರ್ತು ಕ್ರಮಕ್ಕೆ ಮುಂದಾಗಬೇಕಿದೆ.
ಶಿರಸಿ ತಾಲೂಕಿನ ಹತ್ತರಗಿ ಸುತ್ತಮುತ್ತ ಹಲವರಿಗೆ ಮಂಗನ ಕಾಯಿಲೆ ಬಂದಿದ್ದು, ಅನೇಕರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಗೊತ್ತಾಗಿದೆ. ನವಿಲಗಾರ ಗ್ರಾಮದ ರಾಧಾ ಹೆಗಡೆ ಎನ್ನುವವರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರಿಗೆ ಸೋಮವಾರ ಮಂಗನ ಕಾಯಿಲೆ ದೃಢಪಟ್ಟಿದೆ. ಹತ್ತರಗಿಯ ಗಣಪತಿ ಗೌಡ ಎನ್ನುವವರು ವಾರದ ಹಿಂದೆ ಮೃತಪಟ್ಟಿದ್ದಾರೆ.
ಸುತ್ತಮುತ್ತ ಅನೇಕರಿಗೆ ಆರೋಗ್ಯ ಸಮಸ್ಯೆ ಉಂಟಾಗಿದ್ದು, ಮಂಗನ ಕಾಯಿಲೆ ತೀವ್ರವಾಗಿ ಹರಡಿರುವ ಶಂಕೆ ವ್ಯಕ್ತವಾಗಿದೆ. ಕೆಲವರಿಗೆ ಮಂಗನ ಕಾಯಿಲೆ ಎನ್ನುವುದು ದೃಢಪಡದ ಹಿನ್ನೆಲೆಯಲ್ಲಿ ಸ್ಥಳೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇಷ್ಟಾದರೂ ಸ್ಥಳೀಯ ಗ್ರಾಮ ಪಂಚಾಯಿತಿ ಗಂಭೀರವಾದ ಕ್ರಮಕ್ಕೆ ಮುಂದಾಗಿಲ್ಲ, ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು. ಜೊತೆಗೆ, ಜನರಲ್ಲಿ ಜಾಗೃತಿ ಮೂಡಿಸಬೇಕು ಎನ್ನುವ ಆಗ್ರಹ ಕೇಳಿ ಬಂದಿದೆ. ಶಿರಸಿ ತಾಲೂಕು ಆಡಳಿತ ತುರ್ತು ಕಾರ್ಯಾಚರಣೆ ಆರಂಭಿಸದಿದ್ದಲ್ಲಿ ಪರಿಸ್ಥಿತಿ ಕೈ ಮೀರುವ ಸಾಧ್ಯತೆ ಇದೆ.
ಮಂಗಳವಾರ ಶಿರಸಿ ಶ್ರೀ ಮಾರಿಕಾಂಬಾ ಜಾತ್ರೆ ಆರಂಭವಾಗುತ್ತಿರುವುದರಿಂದ ಆತಂಕ ಇನ್ನಷ್ಟು ಹೆಚ್ಚಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ