
ಪ್ರಗತಿವಾಹಿನಿ ಸುದ್ದಿ; ಶಿರಸಿ: ಬೆಳಕಿನ ಹಬ್ಬ ದೀಪಾವಳಿ ಹಬ್ಬದಂದೇ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲುಕಿನ ತಾರಗೋಡು ಬೆಳಲೆ ಗ್ರಾಮದಲ್ಲಿ ನಡೆದಿದೆ.
ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ 22 ವರ್ಷದ ಯುವಕ ಇಂದು ಬೆಳಿಗ್ಗೆ ಮೃತಪಟ್ಟಿದ್ದ. ಮಗನ ಸಾವನ್ನು ಕಂಡು ತಾಯಿ ಹಾಗೂ ಸಹೋದರಿ ಇಬ್ಬರೂ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಉದಯ ಹೆಗಡೆ (22) ತಾಯಿ ನರ್ಮದಾ ಬಾಲಚಂದ್ರ ಹೆಗಡೆ (50) ಹಾಗೂ ಸಹೋದರಿ ದಿವ್ಯಾ(25) ಮೃತರು. ಕೊರೊನಾ ಸಂದರ್ಭದಲ್ಲಿ ಅನಾರೋಗ್ಯಕ್ಕೀಡಾಗಿದ್ದ ಉದಯ್ ಊರಿಗೆ ವಾಪಾಸ್ ಆಗಿದ್ದ. ಚಿಕಿತ್ಸೆಗಾಗಿ ಆಸ್ಪತ್ರೆಗೆ ಅಲೆದಾಡುತ್ತಿದ್ದ. ಕೆಲ ದಿನಗಳಿಂದ ಮನೆಯಲ್ಲಿದ್ದುಕೊಂಡೇ ಚಿಕಿತ್ಸೆ ಪಡೆಯುತ್ತಿದ್ದ.
ಆದರೂ ಅನಾರೋಗ್ಯ ಕಡಿಮೆಯಾಗಿರಲಿಲ್ಲ. ಇಂದು ತೀವ್ರ ಅನಾರೋಗ್ಯದಿಂದ ಉದಯ್ ಕೊನೆಯುಸಿರೆಳೆದಿದ್ದಾನೆ. ಮಗನ ಶವದ ಮುಂದೆಯೇ ಕುಳಿತು ಕಣ್ಣಿರಿಡುತ್ತಿದ್ದ ತಾಯಿ ಹಾಗೂ ಸಹೋದರಿ ಕೆಲ ಸಮಯದ ಬಳಿಕ ಮನೆಯ ಒಳಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಶಿರಸಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ