*ಎಸ್.ಎಮ್. ಕೃಷ್ಣ ಮನೆ ಬಾಗಿಲು ಒದ್ದು ಮಂತ್ರಿ ಸ್ಥಾನಪಡೆದಿದ್ದೆ- ಡಿ.ಕೆ.ಶಿವಕುಮಾರ*
*ಸಾಧನೆ ಮತ್ತು ಆದರ್ಶಕ್ಕೆ ಮತ್ತೊಂದು ಹೆಸರು ಎಸ್.ಎಂ ಕೃಷ್ಣ!*
ಪ್ರಗತಿವಾಹಿನಿ ಸುದ್ದಿ , *ಬೆಳಗಾವಿ :*
“ಸಾಧನೆ ಮತ್ತು ಆದರ್ಶಕ್ಕೆ ಮತ್ತೊಂದು ಹೆಸರು ಎಸ್.ಎಂ ಕೃಷ್ಣ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.
ಬೆಳಗಾವಿಯ ಸುವರ್ಣಸೌಧದಲ್ಲಿ ವಿಧಾನಸಭೆಯಲ್ಲಿ ಗುರುವಾರ ನಡೆದ ಸಂತಾಪ ಸೂಚಕ ಚರ್ಚೆಯಲ್ಲಿ ಶಿವಕುಮಾರ್ ಅವರು ಮಾತನಾಡಿ, ದಿವಂಗತರಾದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ, ಮಾಜಿ ಶಾಸಕರಾದ ಆರ್.ನಾರಾಯಣ ಹಾಗೂ ಜಯಣ್ಣ ಅವರಿಗೆ ನುಡಿ ನಮನ ಸಲ್ಲಿಸಿದರು.
“ನನಗೆ ಹಾಗೂ ಎಸ್.ಎಂ. ಕೃಷ್ಣ ಅವರಿಗೆ ಬಹಳ ವರ್ಷಗಳ ರಾಜಕೀಯ ನಂಟಿದೆ. ಜೊತೆಗೆ ಅವರ ಜತೆ ಕೌಟುಂಬಿಕ ಸಂಬಂಧವೂ ಇದೆ.
ಕೃಷ್ಣ ಅವರ ಸಾವು ದುಃಖಕ್ಕಿಂತ ಸಂತೋಷ ತಂದಿದೆ. ಏಕೆಂದರೆ ಮರಣ ಎಂಬುದು ದುಃಖವಲ್ಲ. ಅವರು 92 ವರ್ಷಗಳ ಕಾಲ ಸಾರ್ಥಕ ಬದುಕು ನಡೆಸಿದ್ದಾರೆ. ಅವರ ಬದುಕಿನ ಸಾರ್ಥಕತೆ ನೋಡಿ ಸಂತೋಷವಾಗಿದೆ. ದೇವರು ನಮಗೆ ಅಷ್ಟು ಶಕ್ತಿ ನೀಡುತ್ತಾನೋ ಇಲ್ಲವೋ ಗೊತ್ತಿಲ್ಲ. ಆದರೆ, ಸಾಧನೆಗೆ ಸಾವಿಲ್ಲ. ಮನುಷ್ಯನ ಹುಟ್ಟು ಆಕಸ್ಮಿಕ, ಸಾವು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಹುಟ್ಟು ಸಾವಿನ ಮಧ್ಯದಲ್ಲಿ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ಪ್ರತಿಯೊಬ್ಬ ಮನುಷ್ಯ ಹುಟ್ಟಿದ ಮೇಲೆ ಸಾಯಬೇಕು. ಯಾರ ಸಾವನ್ನು ನಾವು ತಡೆಯಲು ಸಾಧ್ಯವಿಲ್ಲ. ಕೊನೆಯ ನಾಲ್ಕೈದು ತಿಂಗಳು ಆರೋಗ್ಯ ಹದಗೆಟ್ಟಿದ್ದು ಬಿಟ್ಟರೆ, ಪ್ರತಿನಿತ್ಯ ಕೃಷ್ಣ ಅವರು ಲವಲವಿಕೆಯಿಂದ ಬದುಕಿದ್ದರು. ಅವರ ಉಡುಪು, ಜೀವನ ಶೈಲಿ, ರಾಜಕಾರಣ ಎಲ್ಲವನ್ನು ನಾನು ಬಹಳ ಹತ್ತಿರದಿಂದ ನೋಡಿದ್ದೇನೆ. ಅವರದ್ದು ಆಕರ್ಷಣೀಯ ವ್ಯಕ್ತಿತ್ವ.
ನಾನು ಮೊದಲ ಬಾರಿಗೆ ವಿಧಾನಸಭೆಗೆ ಬಂದಾಗ ಅವರು ಸ್ಪೀಕರ್ ಸ್ಥಾನದಲ್ಲಿ ಕೂತಿದ್ದರು. ವಿರೋಧ ಪಕ್ಷದ ನಾಯಕರಾದ ಅಶೋಕ್ ಅವರೇ, ನಾನು ಬಂಗಾರಪ್ಪನವರ ಜತೆಯಿಂದ ವಿದ್ಯಾರ್ಥಿ ನಾಯಕನಾಗಿ ರಾಜಕಾರಣ ಆರಂಭಿಸಿದೆ. ಪಕ್ಷದಲ್ಲಿ ಕೆಲವು ಭಿನ್ನಾಭಿಪ್ರಾಯದಿಂದ ಬಂಗಾರಪ್ಪನವರು ರಾಜೀನಾಮೆ ನೀಡಬೇಕಾಗಿ ಬಂದಾಗ ಪಕ್ಷ ತ್ಯಜಿಸಿದರು. ನಾನು ಹಾಗೂ ಬೆಳ್ಳಿಯಪ್ಪ ಅವರು ಅವರ ಬಳಿ ಹೋಗಿ ನಾವು ಮುಂದೆ ಏನು ಮಾಡಬೇಕು ಎಂದು ಕೇಳಿದೆವು. ಆಗ ಅವರು ಎಸ್.ಎಂ ಕೃಷ್ಣ ಅವರ ಜತೆ ಹೋಗುವಂತೆ ತಿಳಿಸಿದರು. ಬಂಗಾರಪ್ಪನವರು ಪ್ರತ್ಯೇಕ ಪಕ್ಷ ರಚನೆ ಮಾಡಿದಾಗಲೂ ಅವರು ನಮ್ಮನ್ನು ಬನ್ನಿ ಎಂದು ಕರೆಯಲಿಲ್ಲ.
ನಂತರ ಕೃಷ್ಣ ಅವರ ಜತೆಗೂಡಿ, ಅವರ ಕೊನೆ ಗಳಿಗೆವರೆಗೂ ಅವರ ಜತೆಗಿದ್ದೇನೆ. ಎಸ್.ಎಂ ಕೃಷ್ಣ ಅವರ ಜೊತೆಗೆ ನಾನು ಸೇರಿದ ನಂತರ ಅವರು ರಾಜಕೀಯವಾಗಿ ನನ್ನನ್ನು ಮಗನಂತೆ ಪೋಷಿಸಿದ್ದಾರೆ. ಎರಡು ಮೂರು ವಿಚಾರದಲ್ಲಿ ನನ್ನ ಅವರ ಮಧ್ಯೆ ಭಿನ್ನಾಭಿಪ್ರಾಯವಿದೆ. ಅವರ ಕೆಲವು ತೀರ್ಮಾನ ಅಂದು ಸರಿಯಿಲ್ಲ ಎಂದಿದ್ದೆ. ಇಂದು ಅದನ್ನೇ ಹೇಳುತ್ತೇನೆ. ನಾಳೆಯೂ ಅದನ್ನೇ ಹೇಳುತ್ತೇನೆ.
ಸಾಧನೆ ಇಲ್ಲದೆ ಸತ್ತರೆ ಸಾವಿಗೆ ಅವಮಾನ, ಆದರ್ಶ ಇಲ್ಲದೆ ಬದುಕಿದರೆ ಬದುಕಿಗೆ ಅವಮಾನ ಎಂದು ವಿವೇಕಾನಂದರು ಹೇಳಿದ್ದಾರೆ. ಅವರ ಕಾಲದಲ್ಲಿ ಆಗಿರುವ ಸಾಧನೆಯನ್ನು ನಮ್ಮ ಸಹೋದ್ಯೋಗಿಗಳು ಸದನದಲ್ಲಿ ಚರ್ಚೆ ಮಾಡಿದ್ದಾರೆ. ಆಗಿನ ಕಾಲದಲ್ಲಿ ಮದ್ದೂರಿನಲ್ಲಿ ಕೈಗಾರಿಕಾ ಪ್ರದೇಶ ಮಾಡಿದರು. ಅವರು ಮದ್ದೂರಿನಲ್ಲಿ ಸೋತ ನಂತರ ನನ್ನ ಹಾಗೂ ಅವರ ರಾಜಕೀಯ ಬದುಕು ಮತ್ತಷ್ಟು ಗಟ್ಟಿಯಾಯಿತು.
ಕೃಷ್ಣ ಅವರನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡಲು ಹಾಲಿ ಸದಸ್ಯರಾಗಿದ್ದ ಜಿ.ವೈ ಕೃಷ್ಣ ಅವರನ್ನು ತಪ್ಪಿಸಿದವು. ನಾನು ಹಾಗೂ ಜಯಚಂದ್ರ ಅವರು ನರಸಿಂಹರಾವ್ ಅವರನ್ನು ಭೇಟಿ ಮಾಡಿದೆವು. ಆಗ ನಾನು ಪಕ್ಷದ ಟಿಕೆಟ್ ವಂಚಿತನಾಗಿ ಪಕ್ಷೇತರ ಶಾಸಕನಾಗಿದ್ದೆ. ಆಗ ನಾಲ್ಕೈದು ಪಕ್ಷೇತರ ಶಾಸಕರ ಗುಂಪನ್ನು ನಾವು ಮಾಡಿಕೊಂಡಿದ್ದೆವು. ಆಗ ಕಾಂಗ್ರೆಸ್ ಪಕ್ಷಕ್ಕೆ 36 ಸೀಟುಗಳು ಮಾತ್ರ ಇತ್ತು. ನರಸಿಂಹರಾಯರು ನನಗೆ ಕಾಂಗ್ರೆಸ್ ಅಭ್ಯರ್ಥಿಗೆ ಮತಹಾಕಿ ಎಂದು ಕೇಳಿದರು. ಆಗ ನಾನು ಸಾಧ್ಯವಿಲ್ಲ ಎಂದು ಹೇಳಿದೆ. ಕೃಷ್ಣ ಅವರನ್ನು ರಾಜ್ಯಸಭೆಗೆ ಟಿಕೆಟ್ ನೀಡಿದರೆ ಮಾತ್ರ ನಾನು ಮತ ಹಾಕುತ್ತೇನೆ ಎಂದು ನರಸಿಂಹರಾಯರ ಬಳಿ ಹೇಳಿದ್ದೆ. ಜಿ.ವೈ ಕೃಷ್ಣ ಅವರು ಹಾಲಿ ಸಚಿವರಾಗಿದ್ದು ಅವರಿಗೆ ಹೇಗೆ ಟಿಕೆಟ್ ತಪ್ಪಿಸಲು ಸಾಧ್ಯ ಎಂದು ಕೇಳಿದರು. ಆದರೂ ನಾನು ಒಪ್ಪಲಿಲ್ಲ. ಹೀಗಾಗಿ ಹಾಲಿ ಸಚಿವರಿಗೆ ಟಿಕೆಟ್ ತಪ್ಪಿಸಿ ಕೃಷ್ಣ ಅವರನ್ನು ರಾಜ್ಯಸಭೆಗೆ ಕಳುಹಿಸಲಾಯಿತು.
ಧರಂಸಿಂಗ್ ಅವರು ಪಕ್ಷದ ಅಧ್ಯಕ್ಷರಾಗಿದ್ದಾಗ ನಾನು ಪ್ರಧಾನ ಕಾರ್ಯದರ್ಶಿಯಾಗಿದ್ದೆ. ಕೃಷ್ಣ ಅವರು ಪಕ್ಷದ ಅಧ್ಯಕ್ಷರಾಗಬೇಕು ಎಂದು ನಾನು, ಟಿ.ಬಿ. ಜಯಚಂದ್ರ, ಸಿ.ಎಂ. ಲಿಂಗಪ್ಪ, ಶಿವಮೂರ್ತಿ, ನಫೀಜ್ ಅವರು ಮೂರು ತಿಂಗಳು ದೆಹಲಿಯಲ್ಲಿ ಬೀಡುಬಿಟ್ಟು ಸೋನಿಯಾ ಗಾಂಧಿ ಅವರ ಮನವೊಲಿಸಿ ಕೃಷ್ಣ ಅವರನ್ನು ಅಧ್ಯಕ್ಷರನ್ನಾಗಿ ಮಾಡಿದೆವು. ಕೃಷ್ಣ ಅವರು ಅಧ್ಯಕ್ಷರಾದ ಬಳಿಕ ನಾವು ಪಾಂಚಜನ್ಯ ಯಾತ್ರೆ ಮಾಡಿದೆವು. ನಂತರ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಿತು.
ನಮ್ಮ ಸರ್ಕಾರ ಬಂದ ನಂತರ ಮಂತ್ರಿ ಮಂಡಲದಲ್ಲಿ ಯಾರೆಲ್ಲಾ ಇರಬೇಕು ಎಂದು ಕೃಷ್ಣ ಅವರ ಸಮ್ಮುಖದಲ್ಲಿ ನಾನೇ ಪಟ್ಟಿ ಬರೆದೆ. ನಂತರ ಹೈಕಮಾಂಡ್ ಗೆ ಅದನ್ನು ಸಲ್ಲಿಸಿದೆವು. ಕೊನೆಗೆ ಆ ಪಟ್ಟಿ ರಾಜ್ಯಪಾಲರ ಬಳಿ ಹೋದಾಗ, ನನ್ನ ಹಾಗೂ ಜಯಚಂದ್ರ ಅವರ ಹೆಸರು ಇರಲಿಲ್ಲ. ಮಾಧ್ಯಮಗಳಲ್ಲಿ ಶಿವಕುಮಾರ್ ರಾಜಕೀಯ ಕಾರ್ಯದರ್ಶಿ ಎಂದು ವರದಿ ಮಾಡಿದ್ದರು. ಆಗ ನನಗೆ ಕರೆ ಬಂತು, ಆಗ ನಾನು ಜ್ಯಾತಿಷಿ ದ್ವಾರಕನಾಥ್ ಅವರಿಗೆ ಕರೆ ಮಾಡಿದೆ. ಆಗ ಅವರು ನಿನಗೆ ಅಧಿಕಾರ ಬೇಕಾದರೆ ಅದನ್ನು ಕಿತ್ತುಕೊಳ್ಳಬೇಕು ಎಂದರು. ಕೃಷ್ಣ ಅವರ ಮನೆಗೆ ಹೋಗಿ ಬಾಗಿಲು ಒದ್ದಿದ್ದೆ. ಜಯಚಂದ್ರ ಗಢಗಡ ನಡುಗಿದರು. ಕೃಷ್ಣ ಅವರು ಮಲಗಿದ್ದವರು ಎದ್ದು ಬಂದರು. ಆಗ ಅವರಿಗೆ ಹೇಳಿದೆ. ಸಾಹೇಬರೇ, ನಿಮ್ಮ ಜತೆ ಯಾರೂ ಇಲ್ಲದಾಗ ನಾವು ನಿಂತಿದ್ದೇವೆ. ನಿಮ್ಮನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡಿದ್ದೇವೆ. ನಿಮ್ಮನ್ನು ಅಧ್ಯಕ್ಷರನ್ನಾಗಿ ಮಾಡಿ, ಮುಖ್ಯಮಂತ್ರಿ ಮಾಡಿದ್ದೇವೆ. ನಾನಿಲ್ಲದೆ ಸರ್ಕಾರ ಇಲ್ಲ ಎಂದು ಹೇಳಿದ್ದೆ. ನಾನು ಇಲ್ಲದೆ ನೀವು ಪ್ರಮಾಣವಚನ ಸ್ವೀಕರಿಸುವಂತಿಲ್ಲ ಎಂದು ಹೇಳಿದೆ. ಪಟ್ಟಿ ಈಗಾಗಲೇ ರಾಜ್ಯಪಾಲರ ಬಳಿ ಹೋಗಿದೆ, ಪ್ರಮಾಣವಚನಕ್ಕೆ ತಯಾರಿಯಾಗುತ್ತಿದೆ ಎಂದರು. ಅದೆಲ್ಲ ನನಗೆ ಗೊತ್ತಿಲ್ಲ. ನಾನು ಇರಲೇಬೇಕು ಎಂದೆ. ಏನಿದು ನೀನು ರುದ್ರಾವಾತಾರ ತೋರುತ್ತಿದ್ದೀಯಾ ಎಂದು ಕೇಳಿದರು. ರುದ್ರಾವತಾರವಲ್ಲ ಸ್ವಾಮಿ, ಜನ ನನ್ನ ಬಗ್ಗೆ ಏನು ಮಾತನಾಡುತ್ತಿದ್ದಾರೆ ಎಂಬುದು ನನಗೆ ಗೊತ್ತಿದೆ. ಅದೆಲ್ಲ ಸಾಧ್ಯವಿಲ್ಲ ಎಂದೆ. ಈ ಘಟನೆಗೆ ಜಯಚಂದ್ರ ಅವರೇ ಸಾಕ್ಷಿ.
ನಂತರ ಕೃಷ್ಣಾ ಅವರ ಪತ್ನಿ ಅವರು ಕರೆ ಮಾಡಿ ನಾವು ಜೋತಿಷ್ಯರ ಬಳಿ ವಿಚಾರಿಸಿದೆ ನಿನಗೆ ಸಮಯ ಸರಿಯಿಲ್ಲ ಸ್ವಲ್ಪ ತಾಳ್ಮೆಯಿಂದ ಇರುವಂತೆ ತಿಳಿಸಿದರು. ಅವರ ಪುತ್ರಿ ಕೂಡ ನನ್ನ ಜತೆ ಮಾತನಾಡಿದರು. ಆಗ ನಾನು ಅಮ್ಮಾ ಇಲ್ಲಮ್ಮ, ನಾನು ನನ್ನ ಜೋತಿಷ್ಯರ ಬಳಿ ಕೇಳಿದ್ದೇನೆ, ನಾನು ಮಂತ್ರಿಯಾಗದಿದ್ದರೆ ಈ ಸರ್ಕಾರವಿಲ್ಲ ಎಂದು ಹೇಳಿದೆ. ನಂತರ ಬೆಳಗ್ಗೆ 6 ಗಂಟೆಗೆ ರಾಜ್ಯಪಾಲರಿಗೆ ಕರೆ ಮಾಡಿ ಪ್ರಮಾಣವಚನ ಕಾರ್ಯಕ್ರಮ ನಿಲ್ಲಿಸಿ, ಮತ್ತೆ ಹೈಕಮಾಂಡ್ ಬಳಿ ಮಾತುಕತೆ ನಡೆಸಿ ನಾವೆಲ್ಲರೂ ಮಂತ್ರಿಯಾದೆವು.
ಎಸ್.ಎಂ ಕೃಷ್ಣ ಅವರು ಐಟಿ ಕ್ಷೇತ್ರಕ್ಕೆ ನೀಡಿದ ಕೊಡುಗೆ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ನಾನು ಅದನ್ನು ಬಿಟ್ಟು ಬೇರೆ ವಿಚಾರ ಮಾತನಾಡುತ್ತೇನೆ. ಜೆ.ಹೆಚ್ ಪಟೇಲ್ ಅವರ ಕಾಲದಲ್ಲಿ ಪಂಚಾಯ್ತಿಗಳಿಗೆ 1 ಲಕ್ಷ ಅನುದಾನ ನೀಡಲಾಗುತ್ತಿತ್ತು. ಕೃಷ್ಣ ಅವರ ಕಾಲದಲ್ಲಿ ಅದನ್ನು 5 ಲಕ್ಷಕ್ಕೆ ಏರಿಸಲಾಯಿತು. ಕೃಷ್ಣ ಅವರು ಕೊನೆಯದಾಗಿ ಮಂಡಿಸಿದ ಕೊನೆ ಬಜೆಟ್ ಗಾತ್ರ ಕೇವಲ 26 ಸಾವಿರ ಕೋಟಿ. ಈಗ ಅದು 3.75 ಲಕ್ಷ ಕೋಟಿಗೂ ಹೆಚ್ಚಾಗಿದೆ. 20 ವರ್ಷಗಳಲ್ಲಿ ನಮ್ಮ ರಾಜ್ಯ ಎಷ್ಟು ಅಭಿವೃದ್ಧಿಯಾಗಿದೆ. ಅಶ್ವತ್ಥ್ ನಾರಾಯಣ ಅವರ ಕ್ಷೇತ್ರದಲ್ಲಿ ನಿವೇಶನ ಖರೀದಿ ಮಾಡಿದಾಗ ಚದರಡಿಗೆ ಕೇವಲ ಎರಡೂವರೆ ಸಾವಿರ ಮಾತ್ರ ಇತ್ತು. ಈಗ ಅದು 30 ಸಾವಿರಕ್ಕೆ ಏರಿಕೆಯಾಗಿದೆ. ಅಷ್ಟರ ಮಟ್ಟಿಗೆ ಅಭಿವೃದ್ಧಿಯಾಗಿದೆ. 26 ಸಾವಿರ ಕೋಟಿ ಇದ್ದಾಗ ಅವರು ಅತ್ಯುತ್ತಮ ಕಾರ್ಯಕ್ರಮಗಳನ್ನು ಕೊಟ್ಟರು. ನಂತರ ಅವರು ಬೇಲೂರು ಘೋಷಣೆ ಎಂದು ಮಾಡಿ 26 ಇಲಾಖೆ ಸೇರಿಸಿ ಎಲ್ಲಾ ಪಂಚಾಯ್ತಿಗಳಿಗೂ ಶಕ್ತಿ ತುಂಬಿದರು.
ರಾಜಕುಮಾರ್ ಅವರ ಅಪಹರಣವಾದಾಗ ರಾತ್ರಿ 11.30ರ ಸುಮಾರಿಗೆ ಕೃಷ್ಣ ಆವರು ಕರೆ ಮಾಡಿ ಈ ವಿಚಾರ ತಿಳಿಸಿದರು. ಅವರು ಬಹಳ ಚಿಂತಾಕ್ರಾಂತರಾಗಿದ್ದರು. ಪೊಲೀಸರು ಅನೇಕ ಕಾರ್ಯಯೋಜನೆಗಳ ಬಗ್ಗೆ ಚರ್ಚೆ ಮಾಡುತ್ತಿದ್ದರು. ಆಗ ಅವರು ತಾಳ್ಮೆಯಿಂದ ಇರಬೇಕು, ರಾಜತಾಂತ್ರಿಕವಾಗಿ ಇದನ್ನು ಬಗೆಹರಿಸಬೇಕು. ಸ್ವಲ್ಪ ಹೆಚ್ಚುಕಮ್ಮಿಯಾದರು ದೊಡ್ಡ ಸಮಸ್ಯೆಯಾಗುತ್ತದೆ ಎಂದು ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಲಿಲ್ಲ. ವೀರಪ್ಪನ್ ಅಷ್ಟು ದೊಡ್ಡ ಮಟ್ಟಕ್ಕೆ ಬೆಳೆಯಲು ಕಾರಣವೇನು ಎಂದು ಚರ್ಚೆಯಾದಾಗ ಗಂಧದ ಮರ ಕಳ್ಳಸಾಗಾಣಿಕೆ ವಿಚಾರ ಬಂದಿತು. ಆಗ ಕೃಷ್ಣ ಅವರು ಶ್ರೀಗಂಧವನ್ನು ಬೆಳೆಯಲು ರೈತರಿಗೂ ಅವಕಾಶ ನೀಡಬೇಕು ಎಂದು ಕಾನೂನು ತಂದರು. ಅದರ ಪರಿಣಾಮವಾಗಿ ರೈತರು ಇಂದು ಶ್ರೀಗಂಧ ಬೆಳೆಯುತ್ತಿದ್ದಾರೆ. ನಾನು ಕೂಡ ಶ್ರೀಗಂಧ ಬೆಳೆಯುತ್ತಿದ್ದೇನೆ.
ಇನ್ನು ಅವರು ಅಧಿಕಾರಕ್ಕೆ ಬಂದಾಗ ರಾಜ್ಯದ ಆರ್ಥಿಕ ಪರಿಸ್ಥಿತಿ ಕಠಿಣವಾಗಿತ್ತು. ಅವರಿಗೆ ನಾನು ಎಷ್ಟೇ ಆತ್ಮೀಯನಾಗಿದ್ದರೂ ನಮ್ಮ ಕ್ಷೇತ್ರಕ್ಕೆ ಹೆಚ್ಚು ಅನುದಾನ ತರಲು ಸಾಧ್ಯವಾಗುತ್ತಿರಲಿಲ್ಲ. ಎಸ್.ಎಂ ಕೃಷ್ಣ ಅವರಿಗೆ ಮದ್ಯದ ಉದ್ಯಮಿಗಳ ಜತೆ ಉತ್ತಮ ಸಂಬಂಧವಿತ್ತು. ಕೃಷ್ಣ ಅವರ ಕುಟುಂಬ ಮಲ್ಯ ಅವರ ಕುಟುಂಬದ ಜತೆ ಸಂಬಂಧವನ್ನು ಬೆಳೆಸಿತ್ತು. ಜತೆಗೆ ಮದ್ಯದ ಉದ್ಯಮಿಗಳಾದ ಜೆ.ಪಿ ನಾರಾಯಣಸ್ವಾಮಿ, ಆದಿಕೇಶವಲು, ತಿಮ್ಮೆಗೌಡ ಅವರು ಕೂಡ ಆತ್ಮೀಯರು. ಕೃಷ್ಣ ಅವರ ಕಷ್ಟ ಕಾಲದಲ್ಲಿ ಸಾಕಷ್ಟು ಸಹಾಯ ಮಾಡಿದ್ದರು. ಆಗ ವಿರೋಧ ಪಕ್ಷದಲ್ಲಿದ್ದ ನಾಣಯ್ಯ ಅವರು ರೋಷಾವೇಶದ ಭಾಷಣ ಮಾಡಿ ಮುಖ್ಯಮಂತ್ರಿಗಳನ್ನು ಇಕ್ಕಟ್ಟಿಗೆ ಸಿಲುಕಿಸಿದರು.
ಆಗ ಕೃಷ್ಣ ಅವರು ಪಾನೀಯ ನಿಗಮ ಸ್ಥಾಪನೆ ಮಾಡುವುದಾಗಿ ಘೋಷಣೆ ಮಾಡಿದರು. ಈಗ ಆ ನಿಗಮದಿಂದ ರಾಜ್ಯದ ಬೊಕ್ಕಸಕ್ಕೆ 35 ಸಾವಿರ ಕೋಟಿ ಆದಾಯ ಬರುತ್ತಿದೆ. ಈ ಸಮಯದಲ್ಲಿ ಆದಿಕೇಶವಲು ಅವರು ಬಂದು ಕನಿಷ್ಠ ಮೂರು ತಿಂಗಳಾದರೂ ಕಾಲಾವಕಾಶ ನೀಡಿ ಎಂದು ಮನವಿ ಮಾಡಿದರು. ಆದರೂ ಕೃಷ್ಣ ಅವರು ರಾಜಿ ಆಗಲಿಲ್ಲ. ಅವರು ರಾಜ್ಯದ ಹಿತ ದೃಷ್ಟಿ ವಿಚಾರವಾಗಿ ಸ್ನೇಹ, ಸಂಬಂಧದಲ್ಲಿ ರಾಜಿಯಾದವರಲ್ಲ.
ಜೆ.ಹೆಚ್ ಪಟೇಲ್ ಅವರ ಸರ್ಕಾರ ಬೆಂಗಳೂರಿನಲ್ಲಿ ಮೋನೋ ರೈಲು ತರಲು ಅನುಮತಿ ನೀಡಿತ್ತು. ಈ ವಿಚಾರವನ್ನು ಕೃಷ್ಣ ಅವರ ಸಂಪುಟದಲ್ಲಿ ಚರ್ಚೆಗೆ ಬಂದಾಗ, ನಾನು ಮೋನೋ ರೈಲು ನಮ್ಮ ರಾಜ್ಯಕ್ಕೆ ಸೂಕ್ತವಾಗಿಲ್ಲ. ಇದನ್ನು ಮಾಡಬಾರದು ಎಂದು ಹೇಳಿದೆ. ಆಗ ಅವರು ನನ್ನ ಮೇಲೆ ಕೋಪಗೊಂಡು ಆ ವಿಚಾರವನ್ನು ಮುಂದೂಡಿದರು. ಅಂದು ಸಂಜೆ ಅವರ ಮನೆಗೆ ಹೋದಾಗ, ನನ್ನ ಜತೆ ಜಗಳವಾಡಿದರು. ಆಗ ನಾನು ಅವರಿಗೆ ವಾಸ್ತವ ತಿಳಿಸಿದೆ. ಆಗ ಅವರು ನನ್ನ ನೇತೃತ್ವದಲ್ಲೇ ಸಮಿತಿ ಮಾಡಿ ಮೆಟ್ರೋ ರೈಲಿನ ಅಧ್ಯಯನ ಮಾಡಲು ತಿಳಿಸಿದರು. ಆಗ ಕೇಂದ್ರದಲ್ಲಿ ವಾಜಪೇಯಿ ಅವರ ಸರ್ಕಾರದಲ್ಲಿ ಅನಂತ ಕುಮಾರ್ ಅವರು ಸಚಿವರಾಗಿದ್ದರು. ನಮ್ಮ ಸಮಿತಿಯನ್ನು ಹುಡ್ಕೋ ಮೂಲಕ ವಿದೇಶಿ ಪ್ರವಾಸ ಮಾಡಿದೆವು. ನಂತರ ಅಂತಿಮವಾಗಿ ದೆಹಲಿ ಮೆಟ್ರೋ ನೋಡಿದೆವು. ಅಲ್ಲಿ ಶ್ರೀಧರನ್ ಎಂಬುವವರು ನಮಗೆ ವಿವರಣೆ ನೀಡಿದರು. ಎಲ್ಲವನ್ನು ನೋಡಿದ ನಂತರ ನಾನು ವರದಿ ಸಿದ್ಧಪಡಿಸಿದೆ.
ನಂತರ ಅನಂತ ಕುಮಾರ್ ಅವರ ಜತೆ ಮಾತನಾಡಿ ಪ್ರಧಾನಿ ಅವರ ಭೇಟಿಗೆ ಸಮಯ ನಿಗದಿಪಡಿಸಲಾಯಿತು. ಅನಂತ ಕುಮಾರ್ ಅವರ ಮೂಲಕ ವಾಜಪೇಯಿ ಅವರನ್ನು ಭೇಟಿ ಮಾಡಿ ದೆಹಲಿ ಮಾದರಿ ಮೆಟ್ರೋ ಯೋಜನೆ ಪ್ರಸ್ತಾಪವನ್ನು ಮುಂದಿಟ್ಟೆವು. ವಾಜಪೇಯಿ ಅವರು ಸಂತೋಷದಿಂದ ಯೋಜನೆಗೆ ಅನುಮತಿ ನೀಡಿದರು. ಆಮೂಲಕ ಬೆಂಗಳೂರಿಗೆ ಮೆಟ್ರೋ ರೈಲು ಬಂದಿತು. ಈ ವಿಚಾರದಲ್ಲಿ ಅನಂತ ಕುಮಾರ್ ಅವರ ಪಾತ್ರ ಕೂಡ ಮುಖ್ಯವಾಗಿತ್ತು.
ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡುವಾಗಲೂ ನಾನು ಯೋಜನಾ ಸಮಿತಿ ಅಧ್ಯಕ್ಷನಾಗಿದ್ದೆ. ಇದಕ್ಕಾಗಿ 4200 ಎಕರೆ ಜಮೀನು ಅಗತ್ಯವಿತ್ತು. 2 ಸಾವಿರ ಎಕರೆ ಸರ್ಕಾರಿ ಜಮೀನು, ಉಳಿದ 2 ಸಾವಿರ ಎಕರೆ ಖಾಸಗಿ ಜಮೀನು ಬೇಕಾಗಿತ್ತು. ಆಗ ರೈತರಿಂದ ಎಕರೆಗೆ 6 ಲಕ್ಷದಂತೆ ಭೂಮಿ ಖರೀದಿ ಮಾಡಿದೆವು. ನಾನು ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ, ಸ್ಥಳೀಯ ನಾಯಕರ ಜತೆ ಚರ್ಚೆ ಮಾಡಿ ಭೂಸ್ವಾಧೀನ ಪ್ರಕ್ರಿಯೆ ಮಾಡಲಾಯಿತು. ಆಮೂಲಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಾಡಲಾಯಿತು.
ಪಂಚಾಯ್ತಿ ವಿಚಾರದಿಂದ, ಶಾಲಾ ಮಕ್ಕಳ ಬಿಸಿಯೂಟ, ಐಟಿ ನೀತಿಗಳವರೆಗೂ ಅವರ ಕೊಡುಗೆ ಅಪಾರವಾಗಿದೆ. ಅವರು ರೂಪಿಸಿದ ನೀತಿಗಳು ರಾಜ್ಯದ ಬೆಳವಣಿಗೆಗೆ ನೆರವಾದರು. ಇನ್ನು ಆಡಳಿತಕ್ಕೆ ಅವರು ಮಾದರಿಯಾಗಿದ್ದರು. ವಿರೋಧ ಪಕ್ಷದ ನಾಯಕರಾಗಿ ಜಗದೀಶ್ ಶೆಟ್ಟರ್ ಅವರಿದ್ದರು. ಅವರಿಗೆ ಏನಾದರೂ ತಿರುಗೇಟು ನೀಡುವಾಗಲೂ ಶಾಲಿನಲ್ಲಿ ಹೊಡೆಯುವಂತೆ ಮೃದುವಾದ ಮಾತಿನಲ್ಲಿ ಉತ್ತರ ನೀಡುತ್ತಿದ್ದರು.
ಕೃಷ್ಣ ಅವರ ಕಾಲದಲ್ಲೇ ಬಂಡವಾಳ ಹೂಡಿಕೆದಾರರ ಸಮಾವೇಶ ಆರಂಭವಾಯಿತು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಶಂಕುಸ್ಥಾಪನೆಗಾಗಿ ವಾಜಪೇಯಿ ಅವರು ವಿಧಾನಸೌಧಕ್ಕೆ ಬಂದಾಗ ಒಂದು ಮಾತು ಹೇಳಿದರು. ಇಷ್ಟು ದಿನ ವಿದೇಶದ ನಾಯಕರು ಮೊದಲು ದೆಹಲಿಗೆ ಬಂದು ನಂತರ ದೇಶದ ಬೇರೆ ನಗರಗಳಿಗ ಭೇಟಿ ನೀಡುತ್ತಿದ್ದರು. ಆದರೆ ಇನ್ನುಮುಂದೆ ಬೆಂಗಳೂರಿಗೆ ಮೊದಲು ಬಂದು ನಂತರ ದೆಹಲಿ ಹಾಗೂ ಇತರ ನಗರಗಳಿಗೆ ತೆರಳುತ್ತಾರೆ ಎಂದು ಹೇಳಿದ್ದರು.
ನನ್ನ ಹಾಗೂ ಅವರ ವೈಯಕ್ತಿಕ ವಿಚಾರವಾಗಿ ಮಾತನಾಡುವುದಾದರೆ, ಮರಕ್ಕೆ ಬೇರು ಎಷ್ಟು ಮುಖ್ಯವೋ ಅದೇ ರೀತಿ ಮನುಷ್ಯನಿಗೆ ನಂಬಿಕೆ ಮುಖ್ಯ. ಅವರಿಗೆ ನನ್ನ ಮೇಲೆ ಬಹಳ ನಂಬಿಕೆ ಇತ್ತು. ಅವರು ರಾಜ್ಯಸಭೆಗೆ ಆಯ್ಕೆಯಾಗುವ ಸಂದರ್ಭದಿಂದ ಅವರು ಕೊನೆಯ ಸಚಿವ ಸಂಪುಟ ಸಭೆವರೆಗೂ ಅವರು ನನ್ನ ರಾಜಕೀಯ ನಿರ್ಧಾರಗಳನ್ನು ಸ್ವೀಕರಿಸಿದ್ದಾರೆ. ನಾನು ಅವರ ಆಡಳಿತ ವಿಚಾರದಲ್ಲಿ ಹಸ್ತಕ್ಷೇಪ ಮಾಡಿರಲಿಲ್ಲ. ಆಗ ಅನೇಕರು ನನ್ನ ಬಗ್ಗೆ ತಕರಾರು ಹೇಳುತ್ತಿದ್ದರು.
ಆದಿಚುಂಚನಗಿರ ಮಠದ ಬಾಲಗಂಗಾಧರನಾಥ ಸ್ವಾಮೀಜಿಗಳು 5 ಕೋಟಿ ಮರ ನೆಡುವ ತೀರ್ಮಾನ ಮಾಡಿದರು. ಅದಕ್ಕೆ ಸರ್ಕಾರದಿಂದ ಕೃಷ್ಣ ಅವರು ಎಲ್ಲಾ ರೀತಿಯ ಸಹಕಾರ ನೀಡಿದರು. ಹೊಸ ಕರ್ನಾಟಕ ನಿರ್ಮಾಣದ ಹರಿಕಾರ, ನವ ಕರ್ನಾಟಕದ ಶಿಲ್ಪಿ ಕೃಷ್ಣ. ಎಸ್.ಎಂ ಕೃಷ್ಣ ಅವರು ಸದನದಲ್ಲಿ ಹೊಸ ಸದಸ್ಯರಿಗೆ ಮಾತನಾಡುವಂತೆ ಉತ್ತೇಜನ ನೀಡುತ್ತಿದ್ದರು.
ಶಿಕ್ಷಣ ಹಾಗೂ ಸಂಸ್ಕಾರ ಬದುಕಿನ ಮೂಲಮಂತ್ರ. ಶಿಕ್ಷಣ ಬದುಕಿನಲ್ಲಿ ನಾವು ಎಡವಲು ಬಿಡುವುದಿಲ್ಲ ಎಂದು ಮಕ್ಕಳು ಮತ್ತೆ ಶಾಲೆಗಳತ್ತ ಮುಖಮಾಡುವಂತೆ ಮಾಡಲು ಮಧ್ಯಾಹ್ನದ ಬಿಸಿಯೂಟ ಯೋಜನೆ ಜಾರಿಗೆ ತಂದರು. ರಾಜಕೀಯದಲ್ಲಿ ಸಂಸ್ಕೃತಿ ಮತ್ತು ಸಂಸ್ಕಾರ ಪ್ರಮುಖವಾದುದು. ನಾನು ಒಂದು ಕಾಲದಲ್ಲಿ ದೊಗಳೆ ಬಟ್ಟೆ ಹಾಕಿಕೊಳ್ಳುತ್ತಿದ್ದೆ. ಆಗ ಕೃಷ್ಣ ಅವರು ಅವರ ಸ್ನೇಹಿತ ಆರ್.ಟಿ ನಾರಾಯಣ್ ಅವರನ್ನು ಕರೆದು ಇವನಿಗೆ ಬಟ್ಟೆ ಹೊಲಿಸಿ ಕೊಡಿ ಎಂದು ಹೇಳಿದರು. ನಾನು ಉತ್ತಮ ಉಡುಗೆ ತೊಡುವ ಅಭ್ಯಾಸ ಆರಂಭವಾಗಿದ್ದು ಕೃಷ್ಣ ಅವರಿಂದ.
ಅವರಲ್ಲಿ ನಾನು ಕಂಡ ಕೆಟ್ಟ ಅಭ್ಯಾಸ ಎಂದರೆ, ಅವರು ಯಾರ ಮೇಲಾದರೂ ಕೋಪ ಮಾಡಿಕೊಂಡರೆ ಬೈಯ್ಯುತ್ತಿರಲಿಲ್ಲ. ಮುಖ ತಿರುಗಿಸಿಕೊಳ್ಳುತ್ತಿದ್ದರು. ಅವರು ನನಗೆ ಕೊನೆಯದಾಗಿ ಬೈದಿದ್ದು ನಾಲ್ಕು ವರ್ಷಗಳ ಹಿಂದೆ. ನಾನು ಜೈಲಿಂದ ವಾಪಸ್ಸಾದ ಬಳಿಕ ಮಾಧ್ಯಮಗಳಲ್ಲಿ ವಿರೋಧ ಪಕ್ಷದ ನಾಯಕ ಸ್ಥಾನದ ಬಗ್ಗೆ ಚರ್ಚೆಯಾಗುತ್ತಿತ್ತು. ಸಿದ್ದರಾಮಯ್ಯ ಅವರು ಆ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಸ್ಥಾನ ನೀವು ಪಡೆಯುತ್ತೀರಾ ಎಂದು ಮಾಧ್ಯಮದವರು ಕೇಳಿದಾಗ, ನನಗೆ ಕಾರು ಮನೆ ಬೇಡ ಎಂದು ಹೇಳಿದ್ದೆ. ಅದನ್ನು ಮಾಧ್ಯಮಗಳಲ್ಲಿ ನೋಡಿದ ಕೃಷ್ಣ ಅವರು ನನಗೆ ಕರೆ ಮಾಡಿ ಬೈದರು. ವಿರೋಧ ಪಕ್ಷದ ನಾಯಕ ಸ್ಥಾನ ಸಂವಿಧಾನಿಕ ಹುದ್ದೆ. ಎಂತಹ ಮಹಾನ ನಾಯಕರು ಅಲಂಕರಿಸಿದ ಸ್ಥಾನ ಅದು. ಆ ಸ್ಥಾನದ ಬಗ್ಗೆ ಹಾಗೆಲ್ಲಾ ಮಾತನಾಡಬಾರದು ಎಂದು ಹೇಳಿ ಫೋನ್ ಕಟ್ ಮಾಡಿದರು.
ಹೀಗೆ ಪ್ರತಿಯೊಬ್ಬರನ್ನು ಅವರು ತಿದ್ದುತ್ತಿದ್ದರು. ಲಿಫ್ಟ್ ಆಪರೇಟರ್ ನಿಂದ ಪ್ರಧಾನಮಂತ್ರಿವರೆಗೂ ಅವರು ಯಾರನ್ನೂ ಏಕವಚನದಲ್ಲಿ ಮಾತನಾಡಿಸಿದವರಲ್ಲ. ಎಲ್ಲರಿಗೂ ಗೌರವ ನೀಡುತ್ತಿದ್ದರು. ಕೆಂಗಲ್ ಹನುಮಂತಯ್ಯ ಅವರು ವಿಧಾನಸೌಧ ಕಟ್ಟಿದರು ಎಂಬ ಕಾರಣಕ್ಕೆ ನಾವು ಅವರನ್ನು ನೆನೆಯುತ್ತೇವೆ. ಎಸ್.ಎಂ ಕೃಷ್ಣ ಅವರು ಒಂದೇ ವರ್ಷದಲ್ಲಿ ವಿಕಾಸ ಸೌಧ ನಿರ್ಮಾಣ ಮಾಡಿದರು. ಅದೇ ರೀತಿ ಉದ್ಯೋಗ ಸೌಧವನ್ನು ಕಟ್ಟಿದರು. ಈ ರಾಜ್ಯಕ್ಕೆ ಪ್ರತಿ ಹಂತದಲ್ಲಿ ಸಾಕ್ಷಿ ಗುಡ್ಡೆ ಬಿಟ್ಟು ಹೋಗಿದ್ದಾರೆ. ಅವರು 92 ವರ್ಷಗಳ ಸಾರ್ಥಕ ಬದುಕು ಬದುಕಿದ್ದಾರೆ.
ಆಡು ಮುಟ್ಟದ ಸೊಪ್ಪಿಲ್ಲ, ಕೃಷ್ಣ ಅವರು ನೆರವಾಗದ ವರ್ಗವಿಲ್ಲ. ಅವರ ಕಾಲದಲ್ಲಿ ಬರಗಾಲ, ರಾಜಕುಮಾರ್ ಅಪಹರಣ ಸೇರಿದಂತೆ ಅನೇಕ ಸವಾಲುಗಳು ಬಂದವು. ಎಲ್ಲವನ್ನು ಸಮರ್ಥವಾಗಿ ಮೆಟ್ಟಿ ನಿಂತರು. ನಾನು ಒಂದು ದಿನ ಊರಿನಲ್ಲಿ ಇದ್ದಾಗ ಅವರು ನನಗೆ ಕರೆ ಮಾಡಿ ನಾಳೆಯೇ ರಾಜಿನಾಮೆ ನೀಡುತ್ತಿದ್ದೇನೆ ಎಂದರು. ಯಾಕೆ ಎಂದು ಕೇಳಿದಾಗ, ಕಾವೇರಿ ವಿಚಾರವಾಗಿ ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ಬೇಸರ ವ್ಯಕ್ತಪಡಿಸಿದರು. ಆಗ ನಾನು ಪ್ರಣಬ್ ಮುಖರ್ಜಿ, ಅಂಬಿಕಾ ಸೋನಿ ಅವರಿಗೆ ಕರೆ ಮಾಡಿ ಚರ್ಚೆ ಮಾಡಿದೆ. ನಮ್ಮ ಶಾಸಕರು, ಮಂತ್ರಿಗಳನ್ನು ಸೇರಿಸಿ ಚರ್ಚೆ ಮಾಡಿ ಅವರನ್ನು ಅಧಿಕಾರದಲ್ಲಿ ಮುಂದುವರಿಸಿದರು. ಕೊನೆಗೆ ಅವರು ಕಾವೇರಿ ವಿಚಾರವಾಗಿ ಪಾದಯಾತ್ರೆ ಮಾಡಿದರು.
ಅವರ ಬದುಕಿನ ಮಾರ್ಗದರ್ಶ, ಆದರ್ಶವನ್ನು ನಾವು ಪಾಲನೆ ಮಾಡಿದರೆ ಸಾಕು. ಅದೇ ನಾವು ಅವರಿಗೆ ನೀಡುವ ಗೌರವ. ಅವರ ಕುಟುಂಬದವರು ಹಾಗೂ ಅನುಯಾಯಿಗಳಿಗೆ ದೇವರು ಒಳ್ಳೆಯದನ್ನು ಮಾಡಲಿ ಎಂದು ಪ್ರಾರ್ಥಿಸುತ್ತೇನೆ.
*ಜೋತಿಷ್ಯಿ ಸಲಹೆ ಗುಟ್ಟಿನ ಮೇಲೆ ಸ್ವಾರಸ್ಯ ಚರ್ಚೆ:*
ಡಿಸಿಎಂ ಅವತ ಮಾತಿನ ಮ ಮಾತನಾಡಿದ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರು, “ಈಗಲೂ ಅದೇ ಕೆಲಸ ಮಾಡುತ್ತೀರಾ? ಅಧಿಕಾರ ಸಿಗದಿದ್ದರೆ ಒದ್ದು ಕಿತ್ತುಕೊಳ್ಳಬೇಕು ಎಂದಿದ್ದೀರಿ. ಇಲ್ಲಿರುವವರಿಗೆಲ್ಲಾ ಅದೇ ಪಾಠವೇ? ಈಗ ಮುಖ್ಯಮಂತ್ರಿ ಪದವಿಯನ್ನು ನೀವು ಯಾವಾಗ ಒದ್ದು ಕಿತ್ತುಕೊಳ್ಳುತ್ತೀರಿ? ನಿಮಗೆ ಜೋತಿಷ್ಯ ಹೇಳುವವರು ನನಗೂ ಪರಿಚಯ. ಜನವರಿಯೊಳಗೆ ಸಿಎಂ ಆದರೆ ನೀವು ಸಿಎಂ ಆಗುತ್ತೀರಾ ಇಲ್ಲದಿದ್ದರೆ ಇಲ್ಲ ಎಂದು ಹೇಳಿರುವುದಾಗಿ ಅವರೇ ನನಗೆ ಹೇಳಿದ್ದಾರೆ. ಜನವರಿಯೊಳಗೆ ನಂತರ ನಿಮ್ಮ ಗ್ರಹಗತಿ ಇಲ್ಲ. ಹೀಗಾಗಿ ಆದಷ್ಟು ಬೇಗ ನಿಮ್ಮ ರೋಷ ತೋರಿಸಿ ಅಧಿಕಾರ ಕಿತ್ತುಕೊಳ್ಳಿ” ಎಂದು ತಿಳಿದರು.
ಅದಕ್ಕೆ ಉತ್ತರಿಸಿದ ಶಿವಕುಮಾರ್ ಅವರು, “ಅದೇ ಜೋತಿಷ್ಯಿ ಸಲಹೆ ಕೇಳಿ ನಾವು ಕೃಷ್ಣ ಅವರನ್ನು ರಾಜ್ಯಸಭೆ ಸದಸ್ಯರನ್ನಾಗಿ ಮಾಡಿದ್ದೆವು. ನಾನು ಮಂತ್ರಿ ಶಾಸಕ ಆಗದಿದ್ದಾಗಲೇ ಆ ಜೋತಿಷ್ಯಿ ಅವರು ನಿನಗೆ ಟಿಕೆಟ್ ನಿರಾಕರಣೆಯಾಗುತ್ತದೆ, ನೀನು ಇಷ್ಟ ಬಾರಿ ಶಾಸಕನಾಗುತ್ತೀಯಾ, ಮಂತ್ರಿಯಾಗುತ್ತೀಯಾ ಎಂದು ಹೇಳಿದ್ದಾರೆ. ನನಗೆ ಯಾವಾಗ ಯಾವ ಸ್ಥಾನ ಸಿಗಲಿದೆ” ಎಂದು ಹೇಳಿದ್ದರು.
“ಅಶೋಕ್ ಅವರೇ, ನಮ್ಮ ಜೋತಿಷ್ಯಿ ನನಗೆ ಹೇಳಿರುವ ವಿಚಾರವನ್ನು ಇಲ್ಲಿ ಹೇಳಿದರೆ, ನಿಮ್ಮ ಕಡೆ ಕೂತಿರುವ 25 ಮಂದಿ, ನಮ್ಮ ಕಡೆಗೆ ಶಿಫ್ಪ್ ಆಗುತ್ತಾರೆ. ಹೀಗಾಗಿ ನಾನು ಆ ವಿಷಯವನ್ನು ಈಗ ಮಾತನಾಡುವುದಿಲ್ಲ” ಎಂದಾಗ ಸದನ ನಗೆಗಡಲಲ್ಲಿ ತೇಲಿತು.
*ಮಾಜಿ ಶಾಸಕರಾದ ಆರ್.ನಾರಾಯಣ ಹಾಗೂ ಜಯಣ್ಣ ಅವರಿಗೆ ಸಂತಾಪ:*
ದಿವಂಗತರಾದ ಮಾಜಿ ಶಾಸಕರಾದ ಆರ್.ನಾರಾಯಣ ಹಾಗೂ ಜಯಣ್ಣ ಅವರ ಜತೆ ಕೆಲಸ ಮಾಡುವ ಅವಕಾಶ ನನಗೆ ದೊರೆತಿತ್ತು.
ಆರ್.ನಾರಾಯಣ ಅವರು ಅವಿವಾಹಿತರು. ಪಕ್ಷದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದಾರೆ. ಅವರ ಜತೆ ಜಯಚಂದ್ರ, ಮುದ್ದಹನುಮೇಗೌಡರು, ನಾನು ಬಹಳ ಆತ್ಮೀಯವಾಗಿದ್ದೆವು. ಒಟ್ಟಿಗೆ ವಿದೇಶಿ ಪ್ರವಾಸ ಕೂಡ ಮಾಡಿದ್ದೇವೆ. ಪಕ್ಷ ನಿಷ್ಠೆಗೆ ಹೆಸರಾಗಿದ್ದಾರೆ.
ಕ್ಷೇತ್ರ ಮರುವಿಂಗಡಣೆ ನಂತರ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗಲಿಲ್ಲ. ನಂತರ ಅವರ ಆರೋಗ್ಯ ಕೂಡ ಹದಗೆಟ್ಟಿತು. ಲೋಕಸಭೆ ಚುನಾವಣೆಯಲ್ಲಿ ಅವಕಾಶ ನೀಡುವಂತೆ ಮನವಿ ಮಾಡಿದ್ದರು. ಆದರೆ ಅವರ ಆರೋಗ್ಯ ಹಿನ್ನೆಲೆಯಲ್ಲಿ ಅವಕಾಶ ನೀಡಲು ಸಾಧ್ಯವಾಗಲಿಲ್ಲ. ಇಂದು ಬೆಳಗ್ಗೆ ಅವರ ಅಗಲಿಕೆಯ ಸುದ್ದಿಯನ್ನು ಜಯಚಂದ್ರ ಅವರು ತಿಳಿಸಿದರು. ಅವರ ಕುಟುಂಬಕ್ಕೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸುತ್ತೇನೆ.
ಜಯಣ್ಣ ಅವರು ಕೂಡ ಬಹಳ ಸಜ್ಜನ ರಾಜಕಾರಣಿ, ಎರಡು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್ ಕೇಳಿದರು. ಪಕ್ಷದ ತೀರ್ಮಾನಕ್ಕೆ ಬದ್ಧ ಎಂದು ಹೇಳಿದ್ದರು. ಸಿದ್ದರಾಮಯ್ಯ ಅವರು ಕೃಷ್ಣಮೂರ್ತಿ ಅವರಿಗೆ ಟಿಕೆಟ್ ನೀಡಲು ತೀರ್ಮಾನ ಮಾಡಿದರು. ಹೀಗಾಗಿ ಅವರನ್ನು ಉಗ್ರಾಣ ನಿಗಮ ಅಧ್ಯಕ್ಷರನ್ನಾಗಿ ಮಾಡಿದೆವು. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ