Kannada NewsKarnataka NewsLatest

ಮಂದಗತಿಯಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿ: ಸಚಿವರಿಂದ ಹಿಗ್ಗಾಮುಗ್ಗಾ ತರಾಟೆ


ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ಸ್ಮಾರ್ಟ್‌ಸಿಟಿಗೆ ಸಂಬಂಧಿಸಿದ ಎಲ್ಲ ಕಾರ್ಯಗಳನ್ನು ಆದಷ್ಟು ಬೇಗ ಜಾರಿಗೆ ತರುವ ಕೆಲಸವನ್ನು ಸಂಬಂಧಪಟ್ಟ ಅಧಿಕಾರಿಗಳು ಮಾಡಬೇಕು. ಇಲ್ಲವಾದಲ್ಲಿ ಅಂತವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ನಗರಾಭಿವೃದ್ಧಿ ಸಚಿವ  ಯು.ಟಿ ಖಾದರ್  ಖಡಕ್ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ  ನಡೆದ ಸಭೆಯಲ್ಲಿ ಸ್ಮಾರ್ಟ್ ಸಿಟಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಿ ಅವರು ಮಾತನಾಡಿದರು.
 ಎಷ್ಟು ಸ್ಮಾರ್ಟ್‌ಸಿಟಿ ಇಂಜಿನಿಯರ್‌ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸ್ಮಾರ್ಟ್‌ಸಿಟಿ ಎಮ್.ಡಿ ಅವರನ್ನು ಪ್ರಶ್ನಿಸಿ, ಇಂಜಿನಿಯರ್‌ಗಳು ಕಾಮಗಾರಿಗಳನ್ನು ಮಂದಗತಿಯಲ್ಲಿ ನಡೆಸುತ್ತಿದ್ದಾರೆ ಎಂದು ಗುಡುಗಿದರು.

ರಸ್ತೆ ಪಕ್ಕದಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಿದ್ದು, ಅದು ಸರಿಯಾದ ರೀತಿಯಲ್ಲಿ ಬಳಕೆಯಾಗುತ್ತದೆಯಾ ಎಂದು ಪ್ರಶ್ನಿಸಿದರು. ಎರಡು ಉದ್ಯಾನವನ ಅಷ್ಟೇ ಅಲ್ಲದೇ ನಗರದಲ್ಲಿರುವ ಎಲ್ಲ ಉದ್ಯಾನವನಗಳನ್ನು ತಮ್ಮ ಅಧೀನದಲ್ಲಿ ತೆಗೆದುಕೊಂಡು ಅವುಗಳನ್ನು ಸುಧಾರಣೆ ಮಾಡಿ ಸಾರ್ವಜನಿಕರಿಗೆ ಅನುವು ಮಾಡಿ ಕೊಡಿ ಎಂದರು.
ಪ್ರಯಾಣಿಕರು ಮಳೆಗಾಲದಲ್ಲಿ ಮಳೆಗೆ ನಿಂತಹಾಗೆ ಹಾಗೂ ಬೇಸಿಗೆಯಲ್ಲಿ ಬಿಸಲಿಗೆ ನಿಂತಹಾಗೆ ಆಗಬಾರದು ಮತ್ತು ಪ್ರತಿಯೊಂದು ಬಸ್ ನಿಲ್ದಾಣದಲ್ಲಿ ನೇರವಾಗಿ ಬಸ್‌ಗಳು ಬಂದು ನಿಲ್ಲುವ ರೀತಿಯಲ್ಲಿ ಪೊಲೀಸ್‌ರ ಸಹಾಯ ತೆಗೆದುಕೊಂಡು ವ್ಯವಸ್ಥೆ ಮಾಡಬೇಕು ಎಂದರು.

ಸ್ಮಾರ್ಟ್‌ಸಿಟಿಯಲ್ಲಿ ಭೂಪಾಲ್‌ನಲ್ಲಿ ಅಳವಡಿಸಿರುವಂತ ಸೈಕಲ್‌ ಟ್ಯ್ರಾಕ್‌ನ್ನು ಆದಷ್ಟು ಬೇಗ ಮಾಡಬೇಕು ಎಂದರು.  

ಬೆಳಗಾವಿಗೆ 40ನೇ ಸ್ಥಾನ: ಅಸಮಾಧಾನ

ಸ್ಮಾರ್ಟ್ ಮತ್ತು ಸೇಫ್ಟಿ ಸಿಟಿ ನಿರ್ಮಿಸಲು ಪೊಲೀಸ್ ಇಲಾಖೆಯೊಂದಿಗೆ ಚರ್ಚಿಸಿ ರಸ್ತೆಗಳ ಪಕ್ಕದಲ್ಲಿ ಶಾಶ್ವತ ವಿಜಿಲನ್ಸ್ ಕ್ಯಾಮೆರಾಗಳು ಹಾಗೂ ಅನೋನ್ಸಮೆಂಟ್ ಸ್ಪೀಕರ‍್ಸ್ ಅಳವಡಿಕೆ ಮಾಡಬೇಕು ಎಂದರು.
ಸ್ಮಾರ್ಟ್‌ಸಿಟಿ ಯೋಜನೆಯಡಿ ಬೆಳಗಾವಿಯು ದೇಶದಲ್ಲಿ ೪೦ನೇ ಸ್ಥಾನ ಹಾಗೂ ರಾಜ್ಯದಲ್ಲಿ ೫ ನೇ ಸ್ಥಾನದಲ್ಲಿದೆ ಬೆಳಗಾವಿಯ ಅಭಿವೃದ್ಧಿಗಾಗಿ ರೂ.೧೨೫ ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡುವ ಬಗ್ಗೆ ಜನಪ್ರತಿನಿಧಿಗಳೊಂದಿಗೆ ಚರ್ಚಿಸಲಾಗಿದೆ ಎಂದು ಸಚಿವರು ಹೇಳಿ ಮೊದಲನೇ ಹಂತದಲ್ಲಿ ಆಯ್ಕೆಯಾದ ಬೆಳಗಾವಿ ೪೦ನೇ ಸ್ಥಾನಕ್ಕೆ ಕುಸಿದ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು.

ಬೆಳಗಾವಿ ನಗರವನ್ನು ನಿರ್ಭಯವಾದ ನಗರವನ್ನಾಗಿ ಮಾಡಬೇಕು. ಬೆಳಗಾವಿಯಲ್ಲಿರುವ ಪ್ರತಿಯೊಂದು ರಸ್ತೆಗಳು ಕಳಪೆ ಮಟ್ಟದಲ್ಲಿವೆ ಆದಷ್ಟು ಬೇಗ ಅವುಗಳನ್ನು ಸರಿ ಪಡಿಸಬೇಕು. ಯಾರು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸುವದಿಲ್ಲವೋ, ಅಷ್ಟೇ ಅಲ್ಲದೆ ಯಾರಾದರೂ ಕಾಂಟ್ರಾಕ್ಟ್‌ರ ತಮಗೆ ಕೊಟ್ಟಿರುವ ಕಾಂಟ್ರಾಕ್ಟ್‌ನ್ನು ಬೇರೆಯವರಿಗೆ ನೀಡಿದರೆ ಅಂತವರ ಕಾಂಟ್ರಾಕ್ಟ್‌ನ್ನು ರದ್ದುಗೊಳಿಸಿ ಎಂದರು.
ನಗರದಲ್ಲಿ ೭೦ ಲಕ್ಷ ವೆಚ್ಚದಲ್ಲಿ ನಾಲ್ಕು ಎಲ್.ಇ.ಡಿ ಸ್ಕ್ರೀನ್ ಅಳವಡಿಸಿ ಸ್ಮಾರ್ಟ್‌ಸಿಟಿ ಕಾಮಗಾರಿಯನ್ನು ಜನರು ನೋಡಲು ಸಹಾಯಕವಾಗುತ್ತದೆ ಎಂದರು.

ಆಸ್ಪತ್ರೆಗಳ ಮಾಹಿತಿ:
ಆಸ್ಪತ್ರೆ ಆರಂಭ ಮಾಡಲು ೧೦-೧೫ ಕೋಟಿ ಆಗಬಹುದು ಹಾಗಾಗಿ ಅದಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಆದಷ್ಟು ಬೇಗ ಮಾಡಿಕೊಳ್ಳಬೇಕು. ರಾಜ್ಯಕ್ಕೆ ಬೆಳಗಾವಿಯಲ್ಲಿರುವ ವೆಟರ್ನೆಟಿ ಆಸ್ಪತ್ರೆಗಳು ಮಾದರಿಯಾಗಬೇಕು. ಖಾಸಗಿ ವೆಟರ್ನೆಟಿ ಆಸ್ಪತ್ರೆಗಳನ್ನು ಪರಿಶೀಲನೆ ಮಾಡಿ ಅದಕ್ಕೆ ಬೇಕಾಗುವ ಎಲ್ಲ ಸೌಲಭ್ಯಗಳನ್ನು ನೀಡಬೇಕು ಎಂದು ಹೇಳಿದರು.

 ಪರಿವೀಕ್ಷಣೆ: 
ಶ್ರೀನಗರದ ಸಾಯಿ ಉದ್ಯಾನವನವನ್ನು ಪರಿವೀಕ್ಷಣೆ ಮಾಡಿ ಆದಷ್ಟು ಬೇಗ ಉದ್ಯಾನವನವನ್ನು ಸಿದ್ಧಗೊಳಿಸಿ ಎಂದರು. ಸಾರ್ವಜನಿಕರಿಗೆ ಅಶೋಕ ನಗರದಲ್ಲಿ ಮಹಾನಗರ ಪಾಲಿಕೆ ವತಿಯಿಂದ ೪೦ ಏಕರೆ ಜಾಗದಲ್ಲಿ ನಿರ್ಮಾಣ ಮಾಡಿರುವ ಮೈದಾನದಲ್ಲಿ ಸ್ಥಾಪಿತವಾದ ವ್ಯಾಯಾಮ ಶಾಲೆ, ಬ್ಯಾಡ್ಮಿಂಟನ್ ಕೋರ್ಟ್, ಈಜುಕೊಳವನ್ನು ಪರಿವೀಕ್ಷಣೆ ಮಾಡಿ ಎ.ಪಿ.ಎಲ್.ಬಿ.ಪಿ.ಎಲ್ ಕಾರ್ಡ್ ಹೊಂದಿರುವ ವ್ಯಕ್ತಿಗಳಿಗೆ ಕಡಿಮೆ ವೆಚ್ಚದಲ್ಲಿ ಆಟವಾಡಲು ಅವಕಾಶ ಮಾಡಿ ಕೊಡಬೇಕು.
ಪ್ರತಿಯೊಬ್ಬ ಕ್ರೀಡಾಪಟು ಅವಕಾಶದಿಂದ ವಂಚಿತರಾಗಬಾರದು ಹಾಗೂ ಇದೇ ಮೈದಾನದಲ್ಲಿ ಪುಟ್ಬಾಲ್ ಮೈದಾನವನ್ನು ಸಹ ಮಾಡಬಹುದು ಎಂದು ಹೇಳಿದರು.
ಶಿವಬಸವ ನಗರದಲ್ಲಿ ಸ್ಮಾರ್ಟಸಿಟಿ ಯೋಜನೆಯಡಿ ನಿರ್ಮಾಣವಾಗುತ್ತಿರುವ ಸಿಸಿ ರೋಡನ್ನು ಪರಿಶೀಲಿಸಿ ಸ್ಟ್ರೀಟ್‌ಲೈಟ್ ಹಾಗೂ ಸ್ಪೀಕರ್‌ಗಳನ್ನು ಬಳಕೆ ಮಾಡಿ ಸಾರ್ವಜನಿಕರಿಗೆ ಓಡಾಡಲು ಅನುವು ಮಾಡಿಕೊಡಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್, ಅಭಯ ಪಾಟೀಲ, ಅನಿಲ ಬೆನಕೆ, ಮಹಾನಗರ ಪಾಲಿಕೆ ಆಯುಕ್ತ ಶಶಿಧರ ಕುರೇರ, ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ  ಪ್ರಿತಮ್ ನಸ್ಲಾಪುರೆ, ಸ್ಮಾರ್ಟ್‌ಸಿಟಿ ಜಂಟಿ ವ್ಯವಸ್ಥಾಪಕ ನಿರ್ದೇಶಕ  ರಘುನಂದನ ಮೂರ್ತಿ ಸೇರಿದಂತೆ ಸ್ಮಾರ್ಟ್‌ಸಿಟಿ ಹಾಗೂ ಮಾಹಾನಗರ ಪಾಲಿಕೆಗೆ ಸಂಬಂಧಿಸಿದ ಅಧಿಕಾರಿಗಳು ಪಾಲ್ಗೊಂಡಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button