ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -: ಇಂಪಾಗಿ ಕೇಳಿಬರುತ್ತಿದ್ದ ಜೋಗುಳ ಪದಗಳು… ಸೋಬಾನೆ ಪದಗಳ ನಡುವೆ ನಡೆದ ಮಕ್ಕಳ ಅನ್ನಪ್ರಾಶನ ಮತ್ತು ಗರ್ಭಿಣಿಯರ ಸೀಮಂತ ಕಾರ್ಯಕ್ರಮವು ಸ್ತ್ರೀಶಕ್ತಿಯನ್ನು ಅನಾವರಣಗೊಳಿಸುವ ಮೂಲಕ ಹೆಣ್ಣುಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣಗೊಳಿಸಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಅಭಿವೃದ್ಧಿ ನಿಗಮ ಹಾಗೂ ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಆಶ್ರಯದಲ್ಲಿ ನಗರದ ಗಾಂಧೀ ಭವನದಲ್ಲಿ ಮಂಗಳವಾರ (ಜ.೨೮) ಏರ್ಪಡಿಸಲಾಗಿದ್ದ ಸ್ತ್ರೀಶಕ್ತಿ ಸಮಾವೇಶ ಹಾಗೂ ರಾಷ್ಟ್ರೀಯ ಹೆಣ್ಣುಮಕ್ಕಳ ದಿನಾಚರಣೆ ಕಾರ್ಯಕ್ರಮ ಉದ್ಘಾಟನಾ ಸಮಾರಂಭದಲ್ಲಿ ಈ ದೃಶ್ಯಕಂಡುಬಂದಿತು.
ಸಚಿವೆ ಶಶಿಕಲಾ ಜೊಲ್ಲೆ ಅವರು ತೊಡೆಯ ಮೇಲೆ ಮಗುವನ್ನು ಕುಳ್ಳಿರಿಸಿಕೊಂಡು ಅನ್ನಪ್ರಾಶನ ಮೂಲಕ ಪೋಷಣಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿದಾಗ ಲಾಲಿ ಹಾಡಿನ ಹಿನ್ನೆಲೆಯಲ್ಲಿ ಇಡೀ ಸಭಾಂಗಣದಲ್ಲಿ ಚಪ್ಪಾಳೆಗಳ ನಿನಾದ.
ಗರ್ಭಿಣಿಯರಿಗೆ ಸೀಮಂತ:
ರಾಷ್ಟ್ರೀಯ ಪೋಷಣ ಅಭಿಯಾನದ ಅಡಿಯಲ್ಲಿ ಗರ್ಭಿಣಿಯರಿಗೆ ಸೀಮಂತ ಕಾರ್ಯಕ್ರಮ ನಡೆಯಿತು.
ಸಚಿವರಾದಿಯಾಗಿ ಎಲ್ಲರೂ ಗರ್ಭಿಣಿ ಸಹೋದರಿಯರಿಗೆ ಉಡಿ ತುಂಬಿ ಆರತಿ ಮಾಡುವ ಮೂಲಕ ಸೀಮಂತ ಕಾರ್ಯಕ್ರಮ ನಡೆಸಿಕೊಟ್ಟರು.
ಸೋಬಾನೆ ಪದಗಳು ಸೀಮಂತ ಕಾರ್ಯಕ್ರಮದ ಮೆರಗು ಹೆಚ್ಚಿಸಿದವು.
ಸಚಿವರಾದ ಶಶಿಕಲಾ ಜೊಲ್ಲೆ ಅವರು ವೇದಿಕೆಯ ಮೇಲೆ ಸುಶ್ರಾವ್ಯವಾಗಿ ಬೀಸುಕಲ್ಲಿನ ಪದಗಳು ಸೇರಿದಂತೆ ವಿವಿಧ ಬಗೆಯ ಜನಪದ ಗೀತೆಗಳನ್ನು ಹಾಡುತ್ತ ಮೂಲಕ ಭಾರತೀಯ ಸಂಸ್ಕೃತಿ ಮತ್ತು ಮಹಿಳೆಯರಿಗೆ ನೀಡಿದ ಗೌರವದ ಸ್ಥಾನವನ್ನು ನೆನಪಿಸಿಕೊಟ್ಟರು.
ಇದಕ್ಕೂ ಮುಂಚೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ ಅವರು, ಅತ್ಯಾಚಾರ ಪ್ರಕರಣಗಳು ವರದಿಯಾದಾಗ ಬರೀ ಹೆಣ್ಣುಮಕ್ಕಳಿಗೆ ದೂರುವ ಪ್ರವೃತ್ತಿ ಕಂಡುಬರುತ್ತಿರುವುದು ವಿಷಾದಕರ. ಹೆಣ್ಣುಮಕ್ಕಳನ್ನು ಗೌರವಿಸುವುದು ಭಾರತೀಯ ಸಂಸ್ಕೃತಿ. ಇದನ್ನು ನಮ್ಮ ಗಂಡುಮಕ್ಕಳಿಗೆ ತಿಳಿಸಬೇಕು ಎಂದು ಕರೆ ನೀಡಿದರು.
ಪ್ರಸ್ತುತ ಸನ್ನಿವೇಶದಲ್ಲಿ ಮಹಿಳೆಯರು ಪುರುಷರಿಗೆ ಸರಿಸಮಾನವಾಗಿ ಗುರುತಿಸಿಕೊಂಡಿದ್ದಾರೆ. ಲಿಂಗಾನುಪಾತ ಗಮನಿಸಿದರೆ ಹೆಣ್ಣು ಭ್ರೂಣ ಹತ್ಯೆ ಮತ್ತಿತರ ಸಮಸ್ಯೆಗಳನ್ನು ಗುರುತಿಸಬಹುದು.
ಮಹಿಳೆಯರ ಜಾಗೃತಿ ಮೂಡಿಸುವ ಸಲುವಾಗಿ ಸ್ತ್ರೀಶಕ್ತಿ ಸಮಾವೇಶ ಆಯೋಜಿಸಲಾಗಿದೆ. ಹುಟ್ಟಿದ ಹೆಣ್ಣುಮಗು ಪಾಲಕರಿಗೆ ಭಾರ ಎನಿಸದಿರಲಿ ಎಂದು ಭಾಗ್ಯಲಕ್ಷ್ಮೀ ಜಾರಿಗೆ ತರಲಾಯಿತು.
ಸಮಾಜದಲ್ಲಿ ಇತ್ತೀಚೆಗೆ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳಿಂದ ಹೆಣ್ಣು ಹುಟ್ಟಿದಾಗ ಸಹಜವಾಗಿಯೇ ತಂದೆ-ತಾಯಿಗಳಿಗೆ ಆತಂಕ ಉಂಟಾಗುವಂತಾಗಿದೆ.
ಮುಂಬರುವ ದಿನಗಳಲ್ಲಿ ಸ್ತ್ರೀಶಕ್ತಿ ಸಂಘಗಳನ್ನು ಇನ್ನಷ್ಟು ಬಲಪಡಿಸಲು ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಸಚಿವೆ ಶಶಿಕಲಾ ಜೊಲ್ಲೆ ಭರವಸೆ ನೀಡಿದರು.
ತನ್ನ ಗಂಡ-ಮಕ್ಕಳ ಸಲುವಾಗಿ ಉಳಿತಾಯ ಮಾಡುವ ಕಲೆಯನ್ನು ಮಹಿಳೆಯರು ರೂಢಿಸಿಕೊಂಡಿರುತ್ತಾರೆ. ಆದ್ದರಿಂದ ಸ್ತ್ರೀಶಕ್ತಿ ಮೂಲಕ ಮಹಿಳೆಯರನ್ನು ಸಬಲಗೊಳಿಸಲು ಇನ್ನಷ್ಟು ಯೋಜನೆ ಜಾರಿಗೆ ತರಲಾಗುವುದು ಎಂದರು.
ಪ್ರಧಾನಮಂತ್ರಿಗಳ ಮಾತೃವಂದನಾ ಹಾಗೂ ಮುಖ್ಯಮಂತ್ರಿಗಳ ಮಾತೃಶ್ರೀ ಯೋಜನೆಯನ್ನು ಸಮರ್ಪಕವಾಗಿ ಜಾರಿಗೆ ತರುವ ಮೂಲಕ ಬಡ ಕುಟುಂಬದ ಗರ್ಭಿಣಿಯರಿಗೆ ಅನುಕೂಲ ಕಲ್ಪಿಸಬೇಕು ಎಂದು ಮನವಿ ಮಾಡಿಕೊಂಡರು.
ಕೆಲ ತಾಂತ್ರಿಕ ಕಾರಣಗಳಿಂದ ಭಾಗ್ಯಲಕ್ಷ್ಮೀ ಯೋಜನೆಯಿಂದ ಕೆಲವರು ವಂಚಿತರಾಗಿದ್ದು, ಅಂತಹವರಿಗಾಗಿ ಒಂದು ಬಾರಿಗೆ(ಒನ್ ಟೈಮ್ ಸೆಟ್ಲಮೆಂಟ್) ಪರಿಹರಿಸಲು ಕ್ರಮವನ್ನು ಸರ್ಕಾರ ಕೈಗೊಳ್ಳಲಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಪ್ರತಿಯೊಂದು ಕುಟುಂಬಕ್ಕೆ ಸಂಬಂಧಿಸಿದ ಇಲಾಖೆಯಾಗಿದೆ.
ಅಂಗನವಾಡಿ ಕಾರ್ಯಕರ್ತೆಯರಿಗೆ ಸ್ಮಾರ್ಟ್ ಫೊನ್:
ಅಂಗನವಾಡಿ ಕಾರ್ಯಕರ್ತೆಯರಿಗೆ ಫೆಬ್ರುವರಿಯಲ್ಲಿ ಸ್ಮಾರ್ಟ್ ಫೋನ್ ನೀಡಲು ತೀರ್ಮಾನಿಸಲಾಗಿದೆ. ಮಕ್ಕಳ ಹಾಜರಾತಿ, ಅವರ ಆರೋಗ್ಯದ ಸಮಗ್ರ ಮಾಹಿತಿಯನ್ನು ಸ್ಮಾರ್ಟ್ ಫೋನ್ ಮೂಲಕ ವ್ಯವಸ್ಥಿತವಾಗಿ ಸಂಗ್ರಹಿಸಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಇದೇ ವೇಳೆ ಮಾತನಾಡಿದ ಶಾಸಕ ಅಭಯ್ ಪಾಟೀಲ, ಭಾರತದಲ್ಲಿ ಮೊದಲಬಾರಿ ಶಾಸಕರ ಅನುದಾನದಲ್ಲಿ ಮಹಿಳಾ ಬಝಾರ್ ಆರಂಭಿಸಲಾಗುವುದು ಎಂದು ಪ್ರಕಟಿಸಿದರು.
ಸ್ತ್ರೀಶಕ್ತಿ ಸಂಘಗಳು ಈ ಬಝಾರ್ ನಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುವ ಮೂಲಕ ಮಹಿಳೆಯರ ಆರ್ಥಿಕ ಸಬಲೀಕರಣಕ್ಕೆ ಸಹಕಾರಿಯಾಗಲಿದೆ ಎಂದು ಹೇಳಿದರು.
ಸ್ತ್ರೀಶಕ್ತಿ ಸಂಘಗಳು ರಾಜಕೀಯದಿಂದ ದೂರ ಉಳಿದಾಗ ಮಾತ್ರ ಸಂಘದ ಉದ್ಧೇಶ ಈಡೇರಿಕೆ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಶಾಸಕ ಅನಿಲ್ ಬೆನಕೆ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯತ ಅಧ್ಯಕ್ಷೆ ಆಶಾ ಐಹೊಳೆ, ಶಾಸಕ ಅಭಯ್ ಪಾಟೀಲ, ಶಾಸಕಿ ಲಕ್ಷ್ಮೀ ಹೆಬ್ಬಾಳಕರ, ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗೂಳಪ್ಪ ಹೊಸಮನಿ, ಜಿಲ್ಲಾಧಿಕಾರಿ ಡಾ.ಎಸ್. ಬಿ.ಬೊಮ್ಮನಹಳ್ಳಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ., ತಾಲ್ಲೂಕು ಪಂಚಾಯತ ಅಧ್ಯಕ್ಷ ಶಂಕರಗೌಡ ಪಾಟೀಲ, ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಪ್ರಭಾ ಪತ್ತಾರ ಮತ್ತಿತರರು ಉಪಸ್ಥಿತರಿದ್ದರು.
ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಬಸವರಾಜ ವರವಟ್ಟಿ, ಸರ್ಕಾರಿ ಯೋಜನೆಗಳ ಬಗ್ಗೆ ಅರಿವು ಮೂಡಿಸಿ ಮಹಿಳೆಯರನ್ನು ಆರ್ಥಿಕ, ಸಾಮಾಜಿಕವಾಗಿ ಸೇರಿದಂತೆ ಸರ್ವ ಕ್ಷೇತ್ರದಲ್ಲಿ ಸಬಲರನ್ನಾಗಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರೀಯ ಪೋಷ ಅಭಿಯಾನ ಯೋಜನೆಯ ಭಿತ್ತಿಪತ್ರಗಳನ್ನು ಸಚಿವೆ ಶಶಿಕಲಾ ಜೊಲ್ಲೆ ಅವರು ಬಿಡುಗಡೆಗೊಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ