ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಇಲ್ಲಿಯ ಎರಡೂ ಬಸ್ ನಿಲ್ದಾಣಗಳು ನಿರ್ಮಾಣ ಹಂತದಲ್ಲಿವೆ. ಕೇದ್ರ ಬಸ್ ನಿಲ್ದಾಣವನ್ನು ರಾಜ್ಯ ಸರಕಾರ ನೇರವಾಗಿ ನಿರ್ಮಾಣ ಮಾಡುತ್ತಿದ್ದರೆ, ನಗರ ಬಸ್ ನಿಲ್ದಾಣವನ್ನು ಸ್ಮಾರ್ಟ್ ಸಿಟಿ ಯೋಜನೆಯ ಅಡಿ ನಿರ್ಮಾಣ ಮಾಡಲಾಗುತ್ತಿದೆ.
ಎರಡೂ ಹೈಟೆಕ್ ಬಸ್ ನಿಲ್ದಾಣ ಪೂರ್ಣಗೊಂಡು ಜನ ನೆಮ್ಮದಿಯ ನಿಟ್ಟುಸಿರು ಬಿಡಲು ಸುಮಾರು 2 ವರ್ಷ ಬೇಕಾಗಬಹುದು. ಕೇಂದ್ರ ಬಸ್ ನಿಲ್ದಾಣ ಕಾಮಗಾರಿ ಆರಂಭಗೊಂಡು ಸುಮಾರು 3 ವರ್ಷಗಳೇ ಆದವು. ನಗರ ಬಸ್ ನಿಲ್ದಾಣ ನಿರ್ಮಾಣ ಕಾಮಗಾರಿ ಈಚೆಗಷ್ಟೆ ಆರಂಭವಾಗಿದೆ.
ಈ ಮಧ್ಯೆ, ಕೇಂದ್ರ ಬಸ್ ನಿಲ್ದಾಣ ಮತ್ತು ನಗರ ಬಸ್ ನಿಲ್ದಾಣಗಳ ಮಧ್ಯೆ ಅಂಡರ್ ಪಾಸ್ ನಿರ್ಮಾಣ ಮಾಡಬೇಕೆನ್ನುವುದು ಸ್ಮಾರ್ಟ್ ಸಿಟಿ ಯೋಜನೆ. ಇದರಿಂದಾಗಿ ಜನರು ಸುಲಭವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸಬಹುದು. ರಸ್ತೆ ದಾಟುವ, ವಾಹನಗಳನ್ನು ಎದುರಿಸುವ ಭಯ ಇರುವುದಿಲ್ಲ.
ಬಸ್ ನಿಲ್ದಾಣಗಳ ಮಧ್ಯೆ ಅಂಡರ್ ಪಾಸ್ ನಿರ್ಮಾಣ ಮಾಡುವ ಸಂಬಂಧ ಇಂದು ಸ್ಮಾರ್ಟ್ ಸಿಟಿ ಎಂಡಿ ಶಶಿಧರ ಕುರೇರ್ ಅಂತರ್ ಇಲಾಖೆಗಳ ಸಭೆ ನಡೆಸಿದರು. ಬಸ್ ನಿಲ್ದಾಣಗಳ ನಿರ್ಮಾಣವೇ ಜನರನ್ನು ಸಾಕಷ್ಟು ಹೈರಾಣಾಗಿಸಿದೆ. ಇನ್ನು ಅಂಡರ್ ಪಾಸ್ ನಿರ್ಮಾಣ ಕೈಗೆತ್ತಿಕೊಂಡರೆ ಮತ್ತಷ್ಟು ಸಮಸ್ಯೆಯಾಗುತ್ತದೆ. ಆದರೆ ಮುಂದೆ ನಿರ್ಮಾಣವಾಗಲಿರುವ ಸುಂದರ, ಸುಸಜ್ಜಿತ ಬಸ್ ನಿಲ್ದಾಣಗಳಿಗಾಗಿ ಜನರು ಇದನ್ನೆಲ್ಲ ಸಹಿಸಿಕೊಳ್ಳುವುದು ಅನಿವಾರ್ಯವಾಗಿದೆ.
ಈ ಹಿನ್ನೆಲೆಯಲ್ಲಿ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳ ಜೊತೆಗೆ ಕುರೇರ್ ಸಮಾಲೋಚನೆ ನಡೆಸಿದರು. ವಿವಿಧ ಇಲಾಖೆಗಳು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಮತ್ತು ಅಂಡರ್ ಪಾಸ್ ನಿರ್ಮಾಣದ ಸಂದರ್ಭದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು. ನಂತರ ಅಂಡರ್ ಪಾಸ್ ನಿರ್ಮಾಣ ಸ್ಥಳಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಲಾಯಿತು.
ಸಾರ್ವಜನಿಕರಿಗೆ ಹೆಚ್ಚಿನ ತೊಂದರೆಯಾಗದ ರೀತಿಯಲ್ಲಿ ಕಾಮಗಾರಿ ಕೈಗೊಳ್ಳಬೇಕಾಗಿದೆ. ಮತ್ತು ಸಮಯ ಮಿತಿಯಲ್ಲಿ ಪೂರ್ಣಗೊಳಿಸಬೇಕಾಗಿದೆ. ಎಲ್ಲ ಇಲಾಖೆಗಳು ಸಕಾಲದಲ್ಲಿ ತಮ್ಮ ತಮ್ಮ ಕರ್ತವ್ಯಗಳನ್ನು ಪೂರೈಸಿದರೆ ಸಮಸ್ಯೆಯಾಗುವುದಿಲ್ಲ. ಈ ದಿಸೆಯಲ್ಲಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಶಶಿಧರ ಕುರೇರ ವಿನಂತಿಸಿದರು.
ಇನ್ನು 15-20 ದಿನದಲ್ಲಿ ಸಂಚಾರಕ್ಕೆ ಮುಕ್ತ
ಬಸ್ ನಿಲ್ದಾಣದ ಅಕ್ಕಪಕ್ಕದ ರಸ್ತೆಗಳು ಈಗ ಸ್ಮಾರ್ಟ್ ಸಿಟಿ ಯೋಜನೆಯಿಂದಾಗಿ ವೈಟ್ ಟಾಪ್ ಆಗಿದೆ. ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ಕ್ಯೂರಿಂಗ್ ಮತ್ತು ರಸ್ತೆ ಹಾಗೂ ಚರಂಡಿ ಮಧ್ಯೆ ಗ್ಯಾಪ್ ತುಂಬುವ ಕೆಲಸ ನಡೆಯಬೇಕಿದೆ. ಇವೆಲ್ಲ ಇನ್ನು 15-20 ದಿನದಲ್ಲಿ ಪೂರ್ಣಗೊಳ್ಳಲಿದೆ. ಅಲ್ಲಿಯವರೆಗೂ ಜನರು ಸಹಕರಿಸಬೇಕು. ಇದಕ್ಕಾಗಿ ವಿವಿಧ ಇಲಾಖೆಗಳೂ ಸಹಕರಿಸಬೇಕು ಎಂದು ಕುರೇರ ವಿನಂತಿಸಿದರು.
ಬಸ್ ನಿಲ್ದಾಣದ ಬಳಿ ಆಟೋ ನಿಲ್ದಾಣಗಳು ಅವ್ಯವಸ್ಥಿತವಾಗಿದ್ದು, ರಸ್ತೆಯನ್ನೆಲ್ಲ ಆಟೋಗಳೇ ಅತಿಕ್ರಮಿಸುತ್ತಿವೆ. ಇದರಿಂದ ಜನರಿಗೆ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಹಾಗಾಗಿ ಬಸ್ ನಿಲ್ದಾಣ ಕಾಮಗಾರಿ ಪೂರ್ಣಗೊಳ್ಳುವರೆಗೂ ಆಟೋಗಳನ್ನು ಬಸ್ ನಿಲ್ದಾಣದ ಒಳಗೇ ಒಂದು ಬದಿಯಲ್ಲಿ ನಿಲ್ಲಿಸಬೇಕು. ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಯಿತು.
ರಸ್ತೆ ಪಕ್ಕದಲ್ಲಿ ಅನಧಿಕೃತ ಅಂಗಡಿಗಳನ್ನೂ ತೆರವು ಮಾಡಿ, ಸುಗಮ ಕಾರ್ಯನಿರ್ವಹಣೆಗೆ ಅವಕಾಶ ಮಾಡಿಕೊಡಬೇಕು ಎಂದೂ ಸೂಚಿಸಲಾಯಿತು.
ಮಹಾನಗರ ಪಾಲಿಕೆ, ಕ್ಯಾಂಟೋನ್ಮೆಂಟ್ ಬೋರ್ಡ್, ಲೋಕೋಪಯೋಗಿ ಇಲಾಖೆ, ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಪೊಲೀಸ್, ಸಂಚಾರಿ ಪೊಲೀಸ್, ಬಿಎಸ್ಎನ್ಎಲ್, ಹೆಸ್ಕಾಂ, ಕೆಎಸ್ಆರ್ ಟಿಸಿ ಹಿರಿಯ ಅಧಿಕಾರಿಗಳು ಮತ್ತು ಬಸ್ ನಿಲ್ದಾಣ ಕಾಮಗಾರಿ ಗುತ್ತಿಗೆದಾರರು ಸಭೆಯಲ್ಲಿ ಪಾಲ್ಗೊಂಡಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ