Latest

ಹಾವುಗಳು ನಮ್ಮ ವೈರಿಗಳಲ್ಲ, ಸಹ ಜೀವಿ

ಲೇಖನ – ರವಿ ಕರಣಂ.

ಹಾವುಗಳೆಂದ ತಕ್ಷಣ ಹೆದರಿಕೊಳ್ಳುವವರೇ ಹೆಚ್ಚು ಅದರಲ್ಲೂ ಕಾಳಿಂಗ ಸರ್ಪ, ನಾಗರ, ಕೊಳಕು ಮಂಡಲ, ಗಿಲಗಿಂಚಿ, ಕೆರೆ ಹಾವುಗಳಂತೂ ದೈನಂದಿನ ಬದುಕಿನಲ್ಲಿ, ಒಂದಲ್ಲ ಒಂದು ರೀತಿಯಲ್ಲಿ ಸುದ್ದಿಯಲ್ಲಿರುತ್ತವೆ. ಕಾರಣ ಪತ್ರಿಕೆಗಳು, ದೃಶ್ಯ ಮಾಧ್ಯಮಗಳು ಹಾವು ಕಡಿತದಿಂದ ಸಾವು ಎಂಬ ಸುದ್ದಿಯನ್ನು ಹರಡಿಸಿ, ಸದಾ ಎಚ್ಚರಿಕೆಯಿಂದಿರಲು ಸೂಚಿಸುತ್ತವೆ. ಅವುಗಳು ಪ್ರಾಣಕ್ಕೆ ಸಂಚಕಾರ ತರುತ್ತವೆ ಎಂಬುದು ಒಂದು. ಮತ್ತೊಂದು ಅದು ಬುಸ್ ಗುಡುತ್ತ ಹೆಡೆ ಬಿಚ್ಚುವ ರೀತಿಗೆ. ಎಂತಹ ಗಂಡೆದೆಯ ಗುಂಡಿಗೆಯು ಒಂದು ಕ್ಷಣ ತಲ್ಲಣಿಸುತ್ತದೆ. ಜೀವದ ಮೇಲೆ ಯಾರಿಗೆ ಆಸೆಯಿಲ್ಲ ಹೇಳಿ ?

 

 

ಕೆಲವರಂತೂ ಉರಗ ರಕ್ಷಕ ಪಟ್ಟವನ್ನು ಅಲಂಕರಿಸಿರುತ್ತಾರೆ. ಅವರ ಉರಗಗಳ ಮೇಲಿನ ಮೇಲಿನ ಪ್ರೀತಿ, ಭಕ್ತಿ, ಕಾಳಜಿಗೆ ನಿಜಕ್ಕೂ ಪ್ರಶಂಸೆ ವ್ಯಕ್ತಪಡಿಸಲೇ ಬೇಕು. ಮತ್ತು ಅಂತಹ ಉರಗ ರಕ್ಷಿಸಲು ಮುಂದಾಗುವ ವ್ಯಕ್ತಿಗಳಿಗೆ ಸರಕಾರಗಳು ಜೀವ ಮತ್ತು ಜೀವನ ಭದ್ರತೆಗೆ ಕ್ರಮ ಕೈಗೊಳ್ಳಲೇ ಬೇಕು. ಈ ಕುರಿತ ಲೇಖನವೇ ಮನವಿಯೆಂದು ಪರಿಗಣಿಸಲು ಕೋರೋಣ.

ಅರಣ್ಯ ಇಲಾಖೆಯಲ್ಲೂ ಸಿಬ್ಬಂದಿಗಳಿರುತ್ತಾರೆ. ಎಲ್ಲ ಬಗೆಯ ಜೀವಿಗಳ ಸಂರಕ್ಷಣೆಯ ಜವಾಬ್ದಾರಿ ಹೊತ್ತು ದುಡಿವ ಅವರು ಕೇವಲ ಕೆಲಸ ನಿರ್ವಹಣೆ ನೆರವೇರಿಸುವುದಷ್ಟೇ ಅಲ್ಲ. ಪರಿಸರದ ಸಮತೋಲನಕ್ಕೆ ಅವಶ್ಯಕವಾದ ಜೀವಿಗಳನ್ನು, ತಮ್ಮ ಜೀವವನ್ನು ಪಣಕ್ಕಿಟ್ಟು ಯಾವುದೇ ಸಂದರ್ಭದಲ್ಲಿಯೂ ಮುಂದಾಗುತ್ತಾರೆ. ಅವರ ಈ ಅಮೂಲ್ಯ ಕಾರ್ಯವು ಯಾವತ್ತೂ ಅಭಿನಂದನೀಯ. ಅದರಲ್ಲೂ ಹುಲಿ, ಚಿರತೆಗಳಂತಹ ಅಪಾಯಕಾರಿ, ಶಕ್ತಿ ಶಾಲಿ ಜೀವಿಗಳನ್ನು ಸೆರೆ ಹಿಡಿಯುವ ಕೆಲಸ ಹಗುರವೆಂದು ಭಾವಿಸಲೇಬಾರದು. ಅದಕ್ಕೆ ಎಂಟೆದೆ ಭಂಟರೇ ಆಗಿರಬೇಕು.

ಕೆಲವರು ಭಂಡ ಧೈರ್ಯ ಪ್ರದರ್ಶನಕ್ಕಿಳಿದು ಕಚ್ಚಿಸಿಕೊಂಡು ಮರಣ ಹೊಂದಿದ್ದಾರೆ. ಇನ್ನೂ ಕೆಲವರು ಫೇಸ್‌ಬುಕ್‌, ಯೂಟ್ಯೂಬ್ ಗಳಲ್ಲಿನ ಹಾವುಗಳೊಂದಿಗಿನ ಸಾಹಸಮಯ ತುಣುಕು ದೃಶ್ಯಗಳನ್ನು ನೋಡಿ, ತಾವು ಪ್ರಯೋಗಕ್ಕಿಳಿದು ಬಿಡುವುದಿದೆ. ಹಾವಿನ ಹೆಡೆಯನ್ನು ನಿಧಾನವಾಗಿ ನೆಲಕ್ಕೆ ಒತ್ತುವುದು, ಅದರ ನಡು ಭಾಗ ಮತ್ತು ಎದೆ ಭಾಗ ಹಿಡಿದು, ಆಕಾಶದತ್ತ ಎತ್ತಿ ಹಿಡಿಯುವದೆಲ್ಲ ಇದೆ. ಜೊತೆಗೆ ಹಾವಿನ ಹೆಡೆಗೆ ಮುತ್ತು ಕೊಡಲು ಹೋಗುವುದಿದೆ. ಅದಕ್ಕೆ ಇವರು ಮುತ್ತಿಡುತ್ತಾರೋ ಅಥವಾ ಆ ಹಾವೇ ಇವರಿಗೆ ಮುತ್ತು ಕೊಟ್ಟು, ಆಸ್ಪತ್ರೆಗೆ ಕಳಿಸುತ್ತದೆಯೋ ನೀವೆಲ್ಲ ಕೇಳಿ, ನೋಡಿದ್ದೀರಿ.

ಹಾವುಗಳನ್ನು ಹೊಡೆದು ಸಾಯಿಸುವುದೆಲ್ಲ ಹಳ್ಳಿ ಮತ್ತು ನಗರ ಪ್ರದೇಶಗಳಲ್ಲು ಸರ್ವೇ ಸಾಮಾನ್ಯ. ಕಾರಣ ತಮ್ಮ ಚಲನ ವಲನ ಪ್ರದೇಶದಲ್ಲಿ ಕಂಡರೆ, ತಮಗೆಲ್ಲಿ ಕಂಟಕವೋ ಎಂಬ ಭಯ ! ಆದರೆ ಹಾವುಗಳ ಮಹತ್ವವರಿತ ಹಿರಿಯರು ಹೊಡೆಯಬಾರದೆಂದು, ಅವುಗಳು ನಮ್ಮ ಸಹಚರರೆಂದು ತಿಳಿಸಲು, ನಾಗಪಂಚಮಿ ಹಬ್ಬ ಆಚರಣೆಗೆ ತಂದರು. ಶಿವನ ಕಂಠದ ಆಭರಣ ಮಾಡಿದರು. ಗಣೇಶನಂತೂ ಹೊಟ್ಟೆಗೆ ಕಟ್ಟಿ ಬಿಟ್ಟನು. ಅವನೇ ಸುಬ್ರಹ್ಮಣ್ಯ, ಶಿವನ ಸುತ ಹೀಗೆಲ್ಲ ಸ್ವಾರಸ್ಯಕರವಾಗಿ ಹೇಳಿ ಜನ ಮನದಲ್ಲಿ, ಭಕ್ತಿಭಾವ ಮೂಡಿಸಿದರು.

ಉರಗಗಳು  ಸರೀಸೃಪ ಜಾತಿಗೆ ಸೇರಿದವುಗಳು .ಈ ಪ್ರಾಣಿಗೆ ಕಾಲುಗಳಿಲ್ಲ, ಕಿವಿಗಳೂ ಇಲ್ಲ. ಅವು ತೆವಳುತ್ತಾ ಸಾಗುವ ಜೀವಿಗಳು ಮತ್ತು ಮಾಂಸಾಹಾರಿಗಳು. ಇವು ಆಹಾರ ಸರಪಳಿಯಲ್ಲಿ ಹಾಗೂ ಭೂಮಿಯ ಮೇಲಿನ ಇವುಗಳ ಪಾತ್ರ ಹಿರಿದು. ಅದರ ಮಹತ್ವ ಅರಿತ ಭಾರತೀಯರು ಅದಕ್ಕೆ ದೇವರ ಸ್ಥಾನ ಕಲ್ಪಿಸಿದ್ದಾರೆ. ನೀವು ಪುರಾಣ ಪುಣ್ಯ ಕಥೆಗಳಲ್ಲಿ ಕೇಳಿರುವ ಆದಿಶೇಷ, ನಾಗರಾಜ, ನಾಗ ಕನ್ನಿಕೆ, ಕಾಳಿಂಗ ಇತ್ಯಾದಿಗಳೆಲ್ಲ, ಇವುಗಳೊಂದಿಗಿನ ಒಡನಾಟವನ್ನು ತೋರಿಸುತ್ತವೆ.

ಭೂಮಿಯ ಮೇಲೆ ಹಾವುಗಳ ಪಳೆಯುಳಿಕೆಗಳು ದೊರೆಯುವುದು ಕಷ್ಟವೇ. ಅವುಗಳು ಉತ್ಪತ್ತಿಯಾದ ಬಗೆ, ಸ್ವರೂಪ, ಗುಣ ಲಕ್ಷಣಗಳ ಬಗೆಗೆ ವಿಷಯ ಸಂಗ್ರಹ ಸಾಧ್ಯವಿಲ್ಲ. ಕಾರಣ ಅವು ಮಣ್ಣಲ್ಲಿ ಬೆರೆತು ಹೋಗಿ ಬಿಡುವುವು. ಮನುಷ್ಯ, ದನ ಕರು, ಆನೆ ಹುಲಿ ಸಿಂಹ ಮುಂತಾದ ಮೂಳೆ ಹೊಂದಿರುವ ಪ್ರಾಣಿಗಳ ಅವಶೇಷಗಳು ದೊರೆತಂತೆ ಇವುಗಳದ್ದು ದೊರೆಯುವುದಿಲ್ಲ. ಮೃದುವಾದ ಬೆನ್ನು ಹುರಿ ಮಾತ್ರ ಸಾಕ್ಷಿಯಾಗಬಹುದು. ಅದನ್ನು ಹೆಕ್ಕಿ ತೆಗೆಯುವುದು ತುಂಬಾ ಕಷ್ಟ. ಅಪರೂಪ. ದೊರೆತ ಪಳೆಯುಳಿಕೆಗಳಲ್ಲಿ ಅತ್ಯಂತ ಹಳೆಯದು ಎಂದರೆ ಸುಮಾರು 112 ರಿಂದ 94 ಮಿಲಿಯ ವರ್ಷಗಳಷ್ಟು ಪ್ರಾಚೀನವಾದುದು. ಶರೀರಶಾಸ್ತ್ರದ ಅಧ್ಯಯನದಿಂದ ಹಾವುಗಳು ಹಲ್ಲಿಗಳ ಜಾತಿಯಿಂದ ಉಗಮವಾಗಿರುತ್ತವೆ ಎಂಬ ವಿವರಣೆಯಿದೆ.

 

 

ಸುಮಾರು 20 ಕ್ಕೂ ಹೆಚ್ಚು ಕುಟುಂಬಕ್ಕೆ ಸೇರಿದ 3000 ಕ್ಕೂ ಹೆಚ್ಚು ಜಾತಿಯ ಹಾವುಗಳು ಪ್ರಪಂಚದಾದ್ಯಂತ ಕಾಣಸಿಗುತ್ತವೆ. ಆರು ಖಂಡಗಳಲ್ಲಿ (ಭೂ ಭಾಗ) ಇವು ಜೀವಿಸುತ್ತವಷ್ಟೇ ಅಲ್ಲ ಕೆಲ ಹಾವುಗಳು ನೀರಲ್ಲೂ ಜೀವಿಸುತ್ತವೆ. ಅಂದರೆ ಭೂ ಭಾಗದ ಮೇಲೂ ಜೀವಿಸುವ, ಜಲದಲ್ಲಿ ಜೀವಿಸುವ, ಉಭಯಚರಗಳು ಸಹ ಇವೆ. ಹಾಗೂ ಸುಮಾರು 16000 ಅಡಿ ಎತ್ತರದಲ್ಲಿ ಹಿಮಾಲಯ ಪರ್ವತಶ್ರೇಣಿಯಲ್ಲಿ ಕೂಡಾ ಹಾವುಗಳು ಕಾಣಸಿಗುತ್ತವೆ ಎಂದು ಹೇಳಲಾಗುತ್ತದೆ. ಸುಮಾರು 20 ಕುಟುಂಬಕ್ಕೆ ಸೇರಿದ 3000 ಕ್ಕೂ ಹೆಚ್ಚು ಜಾತಿಯ ಹಾವುಗಳು ಪ್ರಪಂಚದಾದ್ಯಂತ ಇವೆಯೆಂದು ತಜ್ಞರ ವಿವರಣೆ.

ಹಾವುಗಳು ಎಂದೂ ಉಪದ್ರವಿ ಜೀವಿಗಳಲ್ಲ. ಅವುಗಳು ತಮ್ಮಷ್ಟಕ್ಕೆ ತಾವು ಜೀವಿಸುವುದರೊಂದಿಗೆ, ಇಲಿ, ಕಪ್ಪೆ, ಕೀಟಗಳು ಮತ್ತು ದೈತ್ಯ ಹಾವುಗಳು ಚಿಕ್ಕ ಹಾವುಗಳನ್ನು ನುಂಗುತ್ತವೆ. ಅನಕೊಂಡ ಮತ್ತು ಎಲ್ಲೆಡೆ ಕಾಣ ಬರುವ ಹೆಬ್ಬಾವುಗಳಂತೂ ಪ್ರಾಣಿಗಳನ್ನೇ ನುಂಗಿ ಬಿಡುತ್ತವೆ. ಅವುಗಳ ದೇಹ ರಬ್ಬರ್ ಚೀಲದಂತಿವೆ. ಹಿಗ್ಗುವ ಕುಗ್ಗುವ ಗುಣ ಲಕ್ಷಣ ಕಾಣಿಸುತ್ತವೆ.

ಹಾವುಗಳು ನೆಲ ಕಂಪನದಿಂದ ತಮ್ಮತ್ತ ಸುಳಿಯುವ ಇತರೆ ಜೀವಿಗಳನ್ನು, ಶತೃಗಳ ಜಾಡನ್ನು ತಿಳಿಯುತ್ತವೆ. ಹಾಗೆಂದೇ ಅವು ಕಂಪನದ ದಿಕ್ಕಿಗೆ ವಿರುದ್ದವಾಗಿ ಹರಿದು ಹೋಗಿ, ತಮ್ಮನ್ನು ರಕ್ಷಿಸಿಕೊಳ್ಳುತ್ತವೆ. ಕೆಲವು ಸಲ ತೀರಾ ಮೈಮೇಲೆ ಬಂದಾಗ, ತಮ್ಮಮೇಲಿನ ಆಕ್ರಮಣವೆಂದು, ಪ್ರಾಣ ರಕ್ಷಿಸಿಕೊಳ್ಳಲು ಕಚ್ಚೇ ಬಿಡುತ್ತವೆ. ಅವುಗಳ ವಿಷ ದ್ರವ ಕೇವಲ ಹತ್ತರಿಂದ ಹದಿನೈದು ಮಿಲಿ ಲೀಟರ್ ನಷ್ಟು ಪ್ರಾಣಿಯೊಂದರ ಜೀವನಪಥವನ್ನು ಮುಗಿಸಿ ಬಿಡುತ್ತವೆ ಎಂದರೆ ಅದರ ಸಾಮರ್ಥ್ಯ ಎಂತಹುದು ? ಎಂದು ಊಹಿಸಬಹುದಲ್ಲವೇ ? ಅವುಗಳ ಗಾತ್ರವೂ ಹಿರಿದು. ಕಾಳಿಂಗ ಸರ್ಪ ಕೆಲವು ವರ್ಷಗಳ ಹಿಂದೆ ದಾಂಡೇಲಿ ಅಭಯ ಅರಣ್ಯದಲ್ಲಿ 14 ಅಡಿ ಉದ್ದದ ಹಾವನ್ನು ಹಿಡಿದದ್ದು ದಾಖಲೆಯಲ್ಲಿದೆ. ಅನಕೊಂಡ ಜಗತ್ತಿನ 32 ಅಡಿ ಅತ್ಯಂತ ಉದ್ದದ ಹಾವು ಎಂದು ದೃಶ್ಯ ಸಹಿತ ನೋಡಬಹುದು.

ಅವುಗಳ ರಕ್ಷಣೆ, ಜವಾಬ್ದಾರಿ ನಮ್ಮದು. ಅವುಗಳನ್ನು ಅವುಗಳ ಪಾಡಿಗೆ ಬಿಡೋಣ. ಅವುಗಳು ಸಮೀಪ ಬಂದರೆ ನೆಲ ಕಂಪಿಸದಂತೆ, ಸ್ಥಬ್ದವಾಗಿ ನಿಂತರೆ ಅದೂ ಸುರಕ್ಷಿತ ನಾವೂ ಸುರಕ್ಷಿತ. ಅವುಗಳ ಆವಾಸ ಸ್ಥಾನವನ್ನು ಕಬಳಿಸುವುದು ಬೇಡ. ಭೂಮಿ ನಮಗೊಂದೇ ಅಲ್ಲ. ಇರಬಹುದಾದ ಜೀವರಾಶಿಗಳಿಗೂ ಸಂಬಂಧಿಸಿದ್ದು. ಅವುಗಳನ್ನು ಪ್ರೀತಿಸೋಣ. ರಕ್ಷಿಸಲು ಮುಂದಾಗೋಣ.

ಕ್ಷೇತ್ರದ ಜನತೆ ಪ್ರೀತಿ, ಪ್ರೋತ್ಸಾಹ ಕೃತಾರ್ಥ ಭಾವನೆ ಹುಟ್ಟಿಸಿದೆ: ಲಕ್ಷ್ಮೀ ಹೆಬ್ಬಾಳಕರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button