
* *ಮಕ್ಕಳ ಆನ್ ಲೈನ್ ಸುರಕ್ಷತೆ ಕುರಿತು ಅಧಿಕಾರಿಗಳ ಕಾರ್ಯಾಗಾರ ಉದ್ಘಾಟಿಸಿದ ಸಚಿವರು*
ಪ್ರಗತಿವಾಹಿನಿ ಸುದ್ದಿ, *ಬೆಂಗಳೂರು:* ಸಾಮಾಜಿಕ ಜಾಲತಾಣಗಳ ಬಗ್ಗೆ ಶಿಕ್ಷಕರು ಹಾಗೂ ಪಾಲಕರು ಮಕ್ಕಳಿಗೆ ಸೂಕ್ತವಾಗಿ ಅರಿವು ಮೂಡಿಸಬೇಕು. ಆಗಷ್ಟೇ ಮಕ್ಕಳಿಗೆ ಆನ್‌ಲೈನ್ ಸುರಕ್ಷತೆ ಸೂಕ್ತವಾಗಿ ತಿಳಿಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಚೈಲ್ಡ್ ಫಂಡ್ ಇಂಡಿಯಾ ಇವರ ಸಹಯೋಗದಲ್ಲಿ ಮಕ್ಕಳ ಆನ್ ಲೈನ್ ಸುರಕ್ಷತೆ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು, ಇಂದಿನ ಮಕ್ಕಳು ನಮ್ಮ ದೇಶದ ಭವಿಷ್ಯ, ಆದರೆ ಇಂದು ಮಕ್ಕಳ ಬೆಳವಣಿಗೆಗೆ ಮೊಬೈಲ್ ಅಡ್ಡಪರಿಣಾಮ ಬೀರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ನಮ್ಮ ಕಾಲದಲ್ಲಿ ಮೊಬೈಲ್ ಗೀಳು ಇರಲಿಲ್ಲ, ನಾವು ಕೇಳಿ, ನೋಡಿ ಕಲಿಯುತ್ತಿದ್ದೇವು. ಆದರೆ, ಇಂದಿನ ಮಕ್ಕಳಿಗೆ ಎಲ್ಲವೂ ರೆಡಿಮೇಡ್ ಸಿಗುತ್ತಿವೆ. ಇಂದಿನ ಮಕ್ಕಳು ಹುಟ್ಟಿನಿಂದಲೇ ಮೊಬೈಲ್ ನೋಡುತ್ತಾ ಬೆಳೆಯುತ್ತಾರೆ. ಅವರಿಗೆ ಎಲ್ಲವೂ ಕುಂತಲ್ಲೇ, ನಿಂತಲ್ಲೇ ಸಿಗುತ್ತವೆ. ಇದು ಮಕ್ಕಳ ಬೆಳವಣಿಗೆಗೆ ಮಾರಕವಾಗಿದೆ ಎಂದರು.

ಇಂದು ಲಾಪ್‌ಟಾಪ್, ಮೊಬೈಲ್ ಬಳಸುವವರ ಸಂಖ್ಯೆ, ನಗರ ಪ್ರದೇಶದವರಿಗಿಂತ ಗ್ರಾಮಾಂತರ ಪ್ರದೇಶದವರೆ ಅಧಿಕವಾಗಿದ್ದಾರೆ. ಶೇಕಡ 78 ರಷ್ಟು ಮಂದಿ ಗ್ರಾಮೀಣ ಪ್ರದೇಶದವರು ಮೊಬೈಲ್, ಲಾಪ್‌ಟಾಪ್ ಉಪಯೋಗಿಸುತ್ತಿದ್ದಾರೆ. ಅದರಲ್ಲೂ ಸಾಮಾಜಿಕ ಜಾಲತಾಣಗಳನ್ನು ಹೆಚ್ಚು ಉಪಯೋಗಿಸುತ್ತಿದ್ದಾರೆ ಎಂದರು.
ಸಾಮಾಜಿಕ ಜಾಲತಾಣಗಳ ಪಿಡುಗಿನಿಂದ ಶೋಷಣೆಗೊಳದಾದವರು ಪ್ರತಿದಿನ ನನ್ನ ಬಳಿ ದೂರು ತೆಗೆದುಕೊಂಡು ಬರುತ್ತಾರೆ, 14 ರಿಂದ 18 ವರ್ಷದ ಮಕ್ಕಳು ಅತಿಹೆಚ್ಚು ಆನ್‌ಲೈನ್ ಗೀಳಿಗೆ ಸಿಲುಕುತ್ತಿದ್ದಾರೆ, ಇದು ನಿಜಕ್ಕೂ ಕಳವಳಕಾರಿ. ಕಾನೂನು, ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಇಲಾಖೆ ಒಳಗೊಂಡಂತೆ ಸಮಿತಿ ಮಾಡಿದರೂ ಸಾಮಾಜಿಕ ಜಾಲತಾಣದ ಪಿಡುಗನ್ನು ಹೋಗಲಾಡಿಸಲು ಸಾಧ್ಯವಾಗುತ್ತಿಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದರು.
ಪೊಲೀಸರು, ಶಾಲಾ, ಕಾಲೇಜುಗಳಿಗೆ ವಾರಕ್ಕೊಮ್ಮೆ ಭೇಟಿ ನೀಡಿ ಸಾಮಾಜಿಕ ಜಾಲತಾಣದ ಬಗ್ಗೆ ಅರಿವು ಮೂಡಿಸಬೇಕು. ಶಾಲೆಗಳಿಗೆ ಹೋಗಿ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಬೇಕು, ಮಕ್ಕಳು ನಮ್ಮ ಸಮಾಜದ ಭವಿಷ್ಯ, ಮಕ್ಕಳನ್ನು ತಿದ್ದಿ ತೀಡುವ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ ಎಂದರು.
ಈ ವೇಳೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷರಾದ ಶಶಿಧರ ಕೋಸುಂಬೆ, ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಜಿ.ಪದ್ಮಾವತಿ, ಮಹಿಳಾ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಮಹೇಶ್ ಬಾಬು, ಸಚಿವರ ವಿಶೇಷ ಕರ್ತವ್ಯಾಧಿಕಾರಿ ಬಿ.ಎಚ್.ನಿಶ್ಚಲ್, ಜೈಲ್ಡ್ ಫಂಡ್ ಇಂಡಿಯಾದ ನಿರ್ದೇಶಕರಾದ ಶಬಂತಿ ಸೇನ್, ಡಾ.ತಿಪ್ಪೇಸ್ವಾಮಿ, ವೆಂಕಟೇಶ್, ಶೇಖರಗೌಡ ರಮ್ನಾಳ್, ಅಪರ್ಣಾ ಹೊಳ್ಳ ಹಾಗೂ ಪೊಲೀಸ್ ಇಲಾಖೆಯ ವಿವಿಧ ಹಂತದ ಅಧಿಕಾರಿಗಳು ಉಪಸ್ಥಿತರಿದ್ದರು.




