ಪ್ರಗತಿವಾಹಿನಿ ಸುದ್ದಿ: ಸರ್ಕಾರ ಕೊಟ್ಟ ಹಣವನ್ನು ಖರ್ಚು ಮಾಡದೆ ವರ್ಷದ ಕೊನೆ ತಿಂಗಳಲ್ಲಿ ಖರ್ಚು ಮಾಡುವ ಅಧಿಕಾರಿಗಳ ಅಭ್ಯಾಸದ ವಿರುದ್ಧ ಗರಂ ಆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಗೃಹ ಕಚೇರಿ ಕೃಷ್ಣದಲ್ಲಿ ಎರಡೂವರೆ ಗಂಟೆ ಕಾಲ ಸಮಾಜ ಕಲ್ಯಾಣ ಇಲಾಖೆಯ ಪ್ರಗತಿ ಪರಿಶೀಲಿಸಿದ ಮುಖ್ಯಮಂತ್ರಿಗಳು ಅಧಿಕಾರಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡು ಸ್ಪಷ್ಟ ಸೂಚನೆ ನೀಡಿದರು.
ವರ್ಷದ ಕೊನೆ ತಿಂಗಳಲ್ಲೇ ಖರ್ಚು ಮಾಡುವ ಅಸಹ್ಯ ಅಭ್ಯಾಸ ಬೆಳೆಸಿಕೊಂಡಿದ್ದೀರಿ. ಬಡವರಿಗೆ, ಅರ್ಹ ಫಲಾನುಭವಿಗಳಿಗೆ ಹಂಚಲು ಕೊಟ್ಟ ಹಣವನ್ನು ಖರ್ಚು ಮಾಡದೆ ಇಟ್ಟುಕೊಂಡು ಕೂರುವುದಕ್ಕಾ ನೀವು ಇರುವುದು ಎಂದು ಪ್ರಶ್ನಿಸಿದ ಮುಖ್ಯಮಂತ್ರಿಗಳು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಸೂಚಿಸಿದರು.
2024-25 ನೇ ಸಾಲಿನಲ್ಲಿ ಆಯವ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ರೂ. 5,377 ಕೋಟಿ ಅನುದಾನ ಒದಗಿಸಲಾಗಿದೆ. ಇದುವರೆಗೆ ಅನುದಾನ ರೂ.3,631 ಕೋಟಿ ಬಿಡುಗಡೆಯಾಗಿದ್ದು ಈ ಹಣ ಕೂಡ ಪೂರ್ತಿ ಖರ್ಚು ಮಾಡದ ಬಗ್ಗೆ ತೀವ್ರವಾಗಿ ಪ್ರಶ್ನಿಸಿದರು. ಜೊತೆಗೆ ಅಂಬೇಡ್ಕರ್ ನಿಗಮದಲ್ಲಿ 900 ಕೋಟಿ, ಭೋವಿ ನಿಗಮದಲ್ಲಿ 107 ಕೋಟಿ ಸೇರಿ ಎಲ್ಲಾ ನಿಗಮಗಳಲ್ಲಿ ನೂರಾರು ಕೋಟಿ ಹಣ ಇದ್ದರೂ ಖರ್ಚು ಮಾಡದ ನಿಗಮದ ಎಂಡಿ ಗಳಿಗೆ ನೋಟಿಸ್ ನೀಡಿ, ಅಗತ್ಯ ಬಿದ್ದರೆ ಸಸ್ಪೆಂಡ್ ಮಾಡುವಂತೆ ಖಡಕ್ ಸೂಚನೆ ನೀಡಿದರು.
ಇಲಾಖೆಗೆ ಸರ್ಕಾರದಿಂದ ಕೊಟ್ಟ ಹಣದಲ್ಲಿ 2,892 ಕೋಟಿ ಮಾತ್ರ ವೆಚ್ಚ ಮಾಡಲಾಗಿದೆ. ಉಳಿದದ್ದು ಹಾಗೇ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಮಾರ್ಚ್ ಅಂತ್ಯದ ವರೆಗೆ ಕಾಯದೆ ಆಯವ್ಯಯದಲ್ಲಿ ಒದಗಿಸಿರುವ ಅನುದಾನ ಸಮರ್ಪಕವಾಗಿ ವೆಚ್ಚ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಮುಖ್ಯಮಂತ್ರಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಮಾಜ ಕಲ್ಯಾಣ ಇಲಾಖೆ ಪ್ರಗತಿ ಪರಿಶೀಲನೆ ಸಭೆಯ ಇತರೆ ಮುಖ್ಯಾಂಶಗಳು….
• ವಿದ್ಯಾರ್ಥಿ ವೇತನ ಪಾವತಿಯನ್ನು ವರ್ಷದ ಅಂತ್ಯದವರೆಗೆ ಬಾಕಿಯುಳಿಸಬಾರದು. ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನವನ್ನು ಪ್ರತಿ ವರ್ಷ ಸೆಪ್ಟಂಬರ್ ಒಳಗಾಗಿ, ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನವನ್ನು ನವೆಂಬರ್ ಅಂತ್ಯದ ಒಳಗಾಗಿ ಪಾವತಿಗೆ ಕ್ರಮ ಕೈಗೊಳ್ಳಬೇಕು. ಆಧಾರ್ ಆಗದಿರುವ ಕಾರಣಕ್ಕೆ ವಿದ್ಯಾರ್ಥಿ ವೇತನದಲ್ಲಿ ವಿಳಂಬವಾಗಬಾರದು. ಎಲ್ಲಾ ವಿದ್ಯಾರ್ಥಿಗಳಿಗೆ ಆಧಾರ್ ಮಾಡಿಸಲು ಕ್ರಮ ಕೈಗೊಳ್ಳಬೇಕು.
• ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕೆ ರೂ.164 ಕೋಟಿ ಬಿಡುಗಡೆ ಮಾಡಲಾಗಿದ್ದು, ಇದುವರೆಗೆ ರೂ.105 ಕೋಟಿ ವೆಚ್ಚ ಮಾಡಲಾಗಿದೆ.
• ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನಕ್ಕೆ ರೂ.230 ಕೋಟಿ ಬಿಡುಗಡೆ ಮಾಡಲಾಗಿದ್ದು, ಶೇ.100ರಷ್ಟು ಪ್ರಗತಿ ಸಾಧಿಸಲಾಗಿದೆ.
• ಎಲ್ಲಾ ಹೋಬಳಿಗಳಲ್ಲಿ ವಸತಿ ಶಾಲೆಗಳ ಸ್ಥಾಪನೆ ಸರ್ಕಾರದ ಗುರಿಯಾಗಿದೆ. ಈ ವರ್ಷ 20 ಹೊಸ ವಸತಿ ಶಾಲೆಗಳನ್ನು ಆರಂಭಿಸಲಾಗಿದ್ದು, ರಾಜ್ಯದಲ್ಲಿ ಒಟ್ಟು 841 ವಸತಿ ಶಾಲೆಗಳು ಇವೆ. ಇನ್ನು 92 ಹೋಬಳಿಗಳಲ್ಲಿ ವಸತಿ ಶಾಲೆ ಆರಂಭಿಸಬೇಕಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ಇದನ್ನು ಪೂರ್ಣಗೊಳಿಸಬೇಕು.
• ಹೊಸದಾಗಿ ಆರಂಭಿಸಲಾಗಿರುವ ಎಲ್ಲಾ 20 ವಸತಿ ಶಾಲೆಗಳಲ್ಲಿ ಶಿಕ್ಷಕರು ಸೇರಿದಂತೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಿ ಗುಣಮಟ್ಟದ ಶಿಕ್ಷಣ ನೀಡಬೇಕು .
• ಎಲ್ಲಾ ಮಂಜೂರಾದ ಹುದ್ದೆಗಳನ್ನು ಭರ್ತಿ ಮಾಡಲು ಕ್ರಮ ಕೈಗೊಳ್ಳಬೇಕು. ಶಿಕ್ಷಕರಿಗೆ ನಿರಂತರ ತರಬೇತಿ ನೀಡಬೇಕು. ಮತ್ತು ಅತಿಥಿ ಶಿಕ್ಷಕರ ಗೌರವಧನ ಹೆಚ್ಚಿಸುವ ಬಗ್ಗೆ ಪರಿಶೀಲನೆ ನಡೆಸಬೇಕು.
• ಪ್ರಸ್ತುತ ರಾಜ್ಯದಲ್ಲಿ 70 ಪಿಯು ವಸತಿ ಶಾಲೆಗಳಿದ್ದು, ಪ್ರತಿ ತಾಲೂಕು ಮಟ್ಟದಲ್ಲಿ ಕನಿಷ್ಠ ಒಂದು ಪಿಯು ವಸತಿ ಶಾಲೆ ಆರಂಭಿಸಬೇಕು.
• ಎಲ್ಲಾ ವಸತಿ ಶಾಲೆಗಳಲ್ಲಿ ಕ್ರೀಡಾ ಚಟುವಟಿಕೆಗಳಿಗೆ ವ್ಯವಸ್ಥೆ ಮಾಡಬೇಕು. ಸ್ಥಳಾವಕಾಶ ಇದ್ದ ಕಡೆ ಕ್ರೀಡಾಂಗಣ ನಿರ್ಮಿಸಲು ಕ್ರಮ. 841 ವಸತಿ ಶಾಲೆಗಳ ಪೈಕಿ 640 ವಸತಿಶಾಲೆಗಳಿಗೆ ಸ್ವಂತ ಕಟ್ಟಡಗಳಿದ್ದು, 90 ನಿರ್ಮಾಣ ಹಂತದಲ್ಲಿವೆ.
• ವಸತಿ ಶಾಲೆ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿಯನ್ನು ಆದ್ಯತೆ ಮೇರೆಗೆ ನೀಡಲು ವ್ಯವಸ್ಥೆ ಮಾಡಬೇಕು.
• ಎಲ್ಲಾ ವಸತಿ ಶಾಲೆಗಳಲ್ಲಿ ಊಟದ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಹಾಸಿಗೆ ಸೇರಿದಂತೆ ಮೂಲಸೌಕರ್ಯಗಳನ್ನು ಒದಗಿಸಬೇಕು.
• ಮಕ್ಕಳ ಆರೋಗ್ಯ, ಪೌಷ್ಟಿಕಾಂಶಗಳ ತಪಾಸಣೆ ನಿಯಮಿತವಾಗಿ ನಡೆಸಬೇಕು.
• ರಾಜ್ಯದಲ್ಲಿ 1937 ವಿದ್ಯಾರ್ಥಿ ನಿಲಯಗಳಿವೆ. 270 ವಿದ್ಯಾರ್ಥಿ ನಿಲಯಗಳು ಬಾಡಿಗೆ ಕಟ್ಟಡದಲ್ಲಿದ್ದು, 130 ಕಟ್ಟಡಗಳು ನಿರ್ಮಾಣ ಹಂತದಲ್ಲಿವೆ. 63 ಕಡೆ ನಿವೇಶನಗಳು ಲಭ್ಯವಿದ್ದು, ಇಲ್ಲಿಯೂ ಸ್ವಂತ ಕಟ್ಟಡ ಕಟ್ಟಲು ಕ್ರಮ ಕೈಗೊಳ್ಳಬೇಕು.
• ವಿವಿಧ ನಿಗಮಗಳಲ್ಲಿ ಗಂಗಾಕಲ್ಯಾಣ ಯೋಜನೆಯಡಿ ಬೋರ್‌ವೆಲ್‌ಗಳ ಸಂಖ್ಯೆ ಹೆಚ್ಚು ಮಾಡುವ ಕುರಿತು ಪರಿಶೀಲನೆ ಮಾಡಬೇಕು.
• ನಿಗಮಗಳಿಗೆ ಬಜೆಟ್‌ನಲ್ಲಿ ಈ ವರ್ಷ ರೂ.446 ಕೋಟಿ ಒದಗಿಸಲಾಗಿದ್ದು, ಇದುವರೆಗೆ ರೂ.260 ಕೋಟಿ ವೆಚ್ಚ ಮಾಡಲಾಗಿದೆ. ನಿಗಮಗಳು ನಿಗದಿತ ಅವಧಿಯಲ್ಲಿ ಬಿಡುಗಡೆಯಾದ ಅನುದಾನ ವೆಚ್ಚ ಮಾಡದಿದ್ದರೆ, ಅಧಿಕಾರಿಗಳ ವಿರುದ್ಧ ಮುಲಾಜಿಲ್ಲದೆ ಶಿಸ್ತುಕ್ರಮ ಕೈಗೊಳ್ಳಲಾಗುವುದು.
• ನಿಗಮಗಳಲ್ಲಿ ಹಿಂದಿನ ವರ್ಷದ ಬಾಕಿ ಹಾಗೂ ಪ್ರಸ್ತುತ ವರ್ಷದ ಭೌತಿಕ ಗುರಿಯನ್ನು ಕಡ್ಡಾಯವಾಗಿ ಸಾಧಿಸಬೇಕು. ವಿವಿಧ ಯೋಜನೆಗಳಡಿ ಫಲಾನುಭವಿಗಳ ಸಂಖ್ಯೆಯನ್ನು ಹೆಚ್ಚು ಮಾಡಲು ಕ್ರಮ ಕೈಗೊಳ್ಳಲಾಗುವುದು.
• ವಸತಿ ನಿರ್ಮಾಣಕ್ಕೆ ಲಭ್ಯವಿರುವ ಅನುದಾನದಲ್ಲಿ ಈಗಾಗಲೇ ನಿರ್ಮಾಣ ಕಾರ್ಯ ಆರಂಭಿಸಿರುವ ಮನೆಗಳನ್ನು ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕು. ಇದಕ್ಕಾಗಿ ಮನೆ ನಿರ್ಮಾಣದ ಯೂನಿಟ್ ವೆಚ್ಚವನ್ನು ಪರಿಷ್ಕರಿಸುವ ಕುರಿತು ಪರಿಶೀಲನೆ.
• ಕಳೆದ ಆಯವ್ಯದಲ್ಲಿ ಘೋಷಿಸಲಾಗಿರರುವ, ಬೆಂಗಳೂರಿನಲ್ಲಿ 500 ಮಂದಿ ಸಾಮರ್ಥ್ಯದ ನಿರಾಶ್ರಿತರ ಶಿಬಿರ ಆರಂಭಿಸಲು ತಕ್ಷಣ ಜಮೀನು ಗುರುತಿಸಿ, ಕಾರ್ಯಾರಂಭಿಸಬೇಕು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ