Kannada NewsKarnataka NewsNationalPolitics

*ಮಣ್ಣಿನ ಕಳ್ಳ‌ ರೆಡ್ಡಿ ರಾಜ್ಯದ ಜನತೆಯ ಕ್ಷಮೆಯಾಚಿಸಲಿ: ಸಚಿವ‌ ತಂಗಡಗಿ*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಶಾಸಕ ಜನಾರ್ಧನ್ ರೆಡ್ಡಿ ಓರ್ವ ಮಣ್ಣಿನ‌ ಕಳ್ಳ ಎಂದು ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಅವರು ವಾಗ್ದಾಳಿ ನಡೆಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದನ್ನು ವಿರೋಧಿಸಿ ಕೊಪ್ಪಳ ಜಿಲ್ಲಾ ಕಾಂಗ್ರೆಸ್ ವತಿಯಿಂದ ಅಶೋಕ ವೃತ್ತದಲ್ಲಿ ಬುಧವಾರ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. 

ಬಿಜೆಪಿ ಸರ್ಕಾರ‌ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ಹತ್ತು ವರ್ಷದಲ್ಲಿ ತೈಲ ಬೆಲೆಯನ್ನು ನೂರು ರೂ. ದಾಟಿಸಿದರು. ಜನಾರ್ಧನ್ ರೆಡ್ಡಿ ಬಿಜೆಪಿ ಸೇರಿದ ಹಿನ್ನೆಲೆಯಲ್ಲಿ ಆ ಪಕ್ಷದ ನಾಯಕರ ಓಲೈಕೆಗೆ ಅಬ್ಬರಿಸುತ್ತಿದ್ದಾರೆ. ಜನಾರ್ಧನ್ ರೆಡ್ಡಿ ನಮ್ಮ ನಾಯಕರಾದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಾಲಿನ‌ ಧೂಳು ಅಲ್ಲ, ಅವರ ಕಾಲಿನ ಉಗುರಿನಲ್ಲಿನ ಧೂಳಿಗೂ ಸಮ ಇಲ್ಲ. ರೆಡ್ಡಿ ಅವರೇ ಇದು ಬಳ್ಳಾರಿಯಲ್ಲ, ಕೊಪ್ಪಳ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜನತೆಗೆ ಸುಳ್ಳು ಆಶ್ವಾಸನೆ ಕೊಟ್ಟು ನೀವು ಶಾಸಕರಾಗಿ ಆಯ್ಕೆಯಾಗಿರುವ ಬಗ್ಗೆ ಜನತೆಗೆ ಗೊತ್ತಾಗಿದೆ. ಪರಿಣಾಮ ಗಂಗಾವತಿಯಲ್ಲಿ ಜನ ಲೋಕಸಭಾ ಚುನಾವಣೆಯಲ್ಲಿ 16,000 ಮತಗಳ ಮುನ್ನಡೆ ನೀಡಿದ್ದಾರೆ. ಮುಂದಿ‌ನ ದಿನಗಳಲ್ಲಿ‌ ಜನ ನಿಮಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಛೇಡಿಸಿದರು. 

ಜನಾರ್ಧನ್ ರೆಡ್ಡಿ ಅವರು ನಮ್ಮ ಬಳಿ ಅನುದಾನಕ್ಕಾಗಿ ಅಲೆದಾಡಿದರು. ಅನುಕೂಲ ಪಡೆದು ನಮ್ಮ ನಾಯಕರ ವಿರುದ್ಧವೇ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರೆ. ಈ ಕೂಡಲೇ ರೆಡ್ಡಿ ಅವರು ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ರೆಡ್ಡಿ ವಿರುದ್ಧ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. 

ಲೋಕಸಭಾ ಚುನಾವಣೆಯಲ್ಲಿ ಕೊಪ್ಪಳ ಜನ ಕಾಂಗ್ರೆಸ್ ಪಕ್ಷದ ಪರ ತೀರ್ಪು ನೀಡುವ ಮೂಲಕ ಜನಾರ್ಧನ್ ರೆಡ್ಡಿ ಅವರಿಗೆ ಕಪಾಳ ಮೋಕ್ಷಾ ಮಾಡಿದ್ದಾರೆ. ಸಿದ್ದರಾಮಯ್ಯ ಅವರು ದೇಶ ಮೆಚ್ಚಿದ ನಾಯಕ. ಗ್ಯಾರಂಟಿ ಯೋಜನೆಗಳ ಮೂಲಕ ಬಡವರ ಬದುಕಿಗೆ ಆಸರೆಯಾಗಿದ್ದಾರೆ. ಇಂತಹ ನಾಯಕನ ಬಗ್ಗೆ ಮಾತನಾಡಲು ಇವರಿಗೆ ಯಾವುದೇ ನೈತಿಕತೆ ಇಲ್ಲ. ನಮಗೂ ಮಾತನಾಡಲು ಬರಲಿದೆ, ಆದರೆ ಆ ರೀತಿ ಮಾತನಾಡುವ ಸಂಸ್ಕಾರವನ್ನು ನಮ್ಮ ಗುರು- ಹಿರಿಯರು ಕಲಿಸಿಲ್ಲ. ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವಾಗ ಎಚ್ಚರದಿಂದ ಮಾತನಾಡಿ. ಇಲ್ಲದಿದ್ದಲ್ಲಿ ಭಾರೀ ಬೆಲೆ ತೆತ್ತಬೇಕಾದಿತ್ತು ಎಂದು ಸಚಿವರು ರೆಡ್ಡಿಗೆ ಎಚ್ಚರಿಸಿದರು. 

ಪ್ರತಿಭಟನೆಯಲ್ಲಿ ಸಂಸದ ರಾಜಶೇಖರ್ ಹಿಟ್ನಾಳ್, ಮಾಜಿ ಸಂಸದ ಕರಡಿ ಸಂಗಣ್ಣ, ಶಾಸಕ ರಾಘವೇಂದ್ರ ಹಿಟ್ನಾಳ್, ಕೊಪ್ಪಳ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button