Belgaum NewsKannada NewsKarnataka News

*ಸೊಲ್ಲಾಪುರದಲ್ಲಿ ಸಿದ್ದರಾಮನ ವಚನಗಳನ್ನು ಅಳವಡಿಸಿ: ಡಾ. ಪುರುಷೋತ್ತಮ ಬಿಳಿಮಲೆ ಆಗ್ರಹ*

ಪ್ರಗತಿವಾಹಿನಿ ಸುದ್ದಿ: ಪ್ರಸಿದ್ಧ ವಚನಕಾರನಾದ ಸೊನ್ನಲಿಗೆಯ ಸಿದ್ದರಾಮ, ಸೊಲ್ಲಾಪುರದಲ್ಲಿ ಸ್ಥಾಪಿಸಿದ ಸಿದ್ದೇಶ್ವರ ಗುಡಿಯಲ್ಲಿ ಸಿದ್ದರಾಮನ ಆಯ್ದ ವಚನಗಳನ್ನು ಕನ್ನಡ ಮತ್ತು ಮರಾಠಿ ಭಾಷೆಯ ಫಲಕಗಳಲ್ಲಿ ಮುದ್ರಿಸಿ, ದೇವಸ್ಥಾನದ ಆವರಣದಲ್ಲಿ ತೂಗುಹಾಕಬೇಕೆಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ದೇವಳದ ಆಡಳಿತ ಮಂಡಳಿಯನ್ನು ಆಗ್ರಹಿಸಿದ್ದಾರೆ.

ಈ ಕುರಿತಂತೆ ಆಡಳಿತ ಮಂಡಳಿಯ ಮುಖ್ಯಸ್ಥರಿಗೆ ಪತ್ರ ಬರೆದು ಮಾತನಾಡಿದ ಡಾ. ಬಿಳಿಮಲೆ ಪ್ರಸಿದ್ಧ ವಚನಕಾರನಾದ ಸೊನ್ನಲಿಗೆಯ ಸಿದ್ದರಾಮ ಕಲ್ಯಾಣ ಕ್ರಾಂತಿಯ ಕೇಂದ್ರ ಬಿಂದುವಾಗಿದ್ದ ಶೂನ್ಯ ಸಿಂಹಾಸನವನ್ನೇರಿದ ಮೂರನೆಯ ಅನುಭಾವಿ ಆಗಿದ್ದ. ತನ್ನ ಕಾಯಕ ತತ್ವದಿಂದಲೇ ಪ್ರಸಿದ್ಧನಾಗಿದ್ದ ಆತ, ಶರೀರವನ್ನು ವ್ಯರ್ಥವಾಗಿ ಕಳೆಯಬಾರದೆಂಬ ನಿಲುವನ್ನು ಹೊಂದಿದ್ದ. ಸಿದ್ದರಾಮ ಕಟ್ಟಿಸಿದ ಕೆರೆಗಳು ಮತ್ತು ಅರವಟ್ಟಿಗೆಗಳು ಇಂದಿಗೂ ಬದುಕುಳಿದಿದ್ದು, ಅವನ ಸಾಮಾಜಿಕ ಬದ್ಧತೆ ಅನನ್ಯವಾದುದು ಎಂದಿದ್ದಾರೆ.

ಕರ್ನಾಟಕ ಏಕೀಕರಣದ ನಂತರ ಸಿದ್ದರಾಮನ ಹುಟ್ಟೂರಾದ ಸೊನ್ನಲಿಗೆಯು ಮಹಾರಾಷ್ಟ್ರಕ್ಕೆ ಸೇರಿ, ಆ ಪ್ರದೇಶವು ಮರಾಠಿಮಯವಾಗುತ್ತಲೇ ಹೋಯಿತು. ಇವತ್ತು ಅಲ್ಲಿ ಕನ್ನಡ ಕಾಣೆಯಾಗಿದ್ದು, ಜನರಿಗೂ ಸಿದ್ದರಾಮನ ಮಹತ್ವ ತಿಳಿಯದ ಸ್ಥಿತಿ ನಿರ್ಮಾಣವಾಗಿದೆ. ಕಪಿಲ ಸಿದ್ಧಮಲ್ಲಿಕಾರ್ಜುನನ ಅಂಕಿತದಲ್ಲಿ ೧೯೦೦ಕ್ಕೂ ಹೆಚ್ಚು ವಚನಗಳನ್ನು ಬರೆದ ಸಿದ್ದರಾಮನ ಹೆಸರು ಹೀಗೆ ಮರೆಯಾಗುತ್ತಿರುವುದು ದುರದೃಷ್ಟಕರವೆಂದಿರುವ ಡಾ. ಬಿಳಿಮಲೆ ಕನ್ನಡ ಮತ್ತು ಮರಾಠಿಯಲ್ಲಿ ಸಿದ್ದರಾಮನ ವಚನಗಳ ಸಂದೇಶವು ದೇವಸ್ಥಾನದ ಆವರಣದಲ್ಲಿಯೇ ದೊರೆತಲ್ಲಿ, ಅದು ಭಾಷಾ ಸೌಹಾರ್ದತೆಯ ಸಂಕೇತವಾಗುತ್ತದೆಯಷ್ಟೇ ಅಲ್ಲ, ನಾಗರಿಕ ಸಮಾಜಕ್ಕೆ ದೊರೆಯಬಹುದಾದ ಅತ್ಯುತ್ತಮ ಸಂದೇಶವೂ ಆಗುತ್ತದೆ ಎಂದಿದ್ದಾರೆ.

ತಮ್ಮ ಕೋರಿಕೆಯನ್ನು ಸಕಾರಾತ್ಮಕವಾಗಿ ಪರಿಗಣಿಸಿರುವ ಆಡಳಿತ ಮಂಡಳಿಯು ಇಷ್ಟರಲ್ಲಿಯೇ ಕ್ರಮವಹಿಸಲಿದೆ ಎಂದು ಸಹ ಡಾ. ಬಿಳಿಮಲೆ ಹೇಳಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button