*ಸಾವರ್ಕರ್ ಕುರಿತ ಒಂದೇ ಒಂದು ಉಲ್ಲೇಖಕ್ಕೆ ಮಹಾರಾಷ್ಟ್ರದಲ್ಲಿ ರಾಜಕೀಯ ಕಿಚ್ಚು*: *ಸೋನಿಯಾ ಪುಸ್ತಕಕ್ಕೆ ನಿಷೇಧದ ಆಗ್ರಹ*

ಪ್ರಗತಿವಾಹಿನಿ ಸುದ್ದಿ: ಹಿರಿಯ ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಇದೀಗ ಮಹಾರಾಷ್ಟ್ರ ರಾಜಕೀಯದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ. ಪುಸ್ತಕದಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಕುರಿತು ಮಾಡಿರುವ ಉಲ್ಲೇಖಗಳು ಶಿವಸೇನೆ ನಾಯಕರ ಆಕ್ರೋಶಕ್ಕೆ ಕಾರಣವಾಗಿವೆ. ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ ಪುಸ್ತಕವನ್ನು ನಿಷೇಧಿಸಬೇಕು ಎಂಬ ಒತ್ತಾಯವೂ ಕೇಳಿಬಂದಿದೆ. ಇದೇ ವೇಳೆ, ಈ ವಿಚಾರದಲ್ಲಿ ಉದ್ಧವ್ ಠಾಕ್ರೆ ಅವರ ಮೌನದ ಬಗ್ಗೆಯೂ ಶಿವಸೇನೆ ನಾಯಕರು ಪ್ರಶ್ನೆ ಎತ್ತಿದ್ದಾರೆ.
ಮುಂಬೈನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಶಿವಸೇನೆ ನಾಯಕರು, ಉದ್ಧವ್ ಠಾಕ್ರೆ ಈ ವಿವಾದದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಟೀಕಿಸಿದ್ದಾರೆ. ಕಾಂಗ್ರೆಸ್ನಿಂದ ಆತ್ಮಚರಿತ್ರೆಯನ್ನು ಸ್ವೀಕರಿಸಿರುವ ಅವರು, ಸಾವರ್ಕರ್ ಕುರಿತ ಹೇಳಿಕೆಗಳ ಬಗ್ಗೆ ಮೌನವಾಗಿರುವುದೇಕೆ ಎಂದು ಪ್ರಶ್ನಿಸಿದ್ದಾರೆ.
ಸಾವರ್ಕರ್ ಬಗ್ಗೆ ಪುಸ್ತಕದಲ್ಲಿ ಏನಿದೆ?
ಸೋನಿಯಾ ಗಾಂಧಿ ತಮ್ಮ ಆತ್ಮಚರಿತ್ರೆಯಲ್ಲಿ ವೀರ ಸಾವರ್ಕರ್ ಬ್ರಿಟಿಷರಿಗೆ ಕ್ಷಮಾದಾನ ಅರ್ಜಿಗಳನ್ನು ಸಲ್ಲಿಸಿದ್ದರು ಎಂದು ಉಲ್ಲೇಖಿಸಿದ್ದಾರೆ. ಕಾಂಗ್ರೆಸ್ ಸ್ವಾತಂತ್ರ್ಯ ಹೋರಾಟಗಾರರು ಬ್ರಿಟಿಷರಿಂದ ಹಲ್ಲೆ ಮತ್ತು ಸೆರೆವಾಸ ಅನುಭವಿಸುತ್ತಿದ್ದ ಸಂದರ್ಭದಲ್ಲಿ, ಸಾವರ್ಕರ್ ಅವರಂತಹ ಆರ್ಎಸ್ಎಸ್ನ ಹಿರಿಯ ಸಿದ್ಧಾಂತವಾದಿಗಳು ಬ್ರಿಟಿಷರಿಗೆ ಕ್ಷಮೆಯಾಚನೆಯ ಪತ್ರಗಳನ್ನು ಬರೆಯುತ್ತಿದ್ದರು ಎಂದು ಪುಸ್ತಕದಲ್ಲಿ ಪ್ರತಿಪಾದಿಸಿದ್ದಾರೆ.
ಅಲ್ಲದೆ, ಆರ್ಎಸ್ಎಸ್ನ ಕೆಲವು ಸದಸ್ಯರು ಬ್ರಿಟಿಷ್ ಅಧಿಕಾರಿಗಳಿಗೆ ಮಾಹಿತಿದಾರರಾಗಿ ಕೆಲಸ ಮಾಡಿದ್ದರು ಎಂಬ ಆರೋಪವನ್ನೂ ಉಲ್ಲೇಖಿಸಿದ್ದಾರೆ. ಹಿಂದೂ ರಾಷ್ಟ್ರದ ಕಲ್ಪನೆ, ಅಲ್ಪಸಂಖ್ಯಾತರ ಕುರಿತ ನಿಲುವು ಹಾಗೂ ಹಿಟ್ಲರ್ ಮತ್ತು ಆತನ ನೀತಿಗಳ ಬಗ್ಗೆ ಸಂಘದ ಸಿದ್ಧಾಂತವಾದಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು ಎಂಬ ಟೀಕೆಯೂ ಪುಸ್ತಕದಲ್ಲಿದೆ.
ಪುಸ್ತಕ ನಿಷೇಧಕ್ಕೆ ಶಿವಸೇನೆ ಆಗ್ರಹ
ಮಹಾರಾಷ್ಟ್ರದ ಆಡಳಿತಾರೂಢ ಮಹಾಯುತಿ ಸರ್ಕಾರದಲ್ಲಿ ಬಿಜೆಪಿ ಮತ್ತು ಎನ್ಸಿಪಿ ಜೊತೆಗೆ ಇರುವ ಶಿವಸೇನೆ ನಾಯಕರು ಪುಸ್ತಕವನ್ನು ನಿಷೇಧಿಸುವಂತೆ ಒತ್ತಾಯಿಸಿದ್ದಾರೆ.
ಶಿವಸೇನೆ ವಕ್ತಾರ ಸಂಜಯ್ ನಿರುಪಮ್ ಮಾತನಾಡಿ, “ಸೋನಿಯಾ ಗಾಂಧಿ ಪುಸ್ತಕದಲ್ಲಿ ಬರೆದಿರುವುದು ಪ್ರೀತಿಯ ಪಯಣವಲ್ಲ, ದ್ವೇಷದ ಪಯಣ” ಎಂದು ಟೀಕಿಸಿದ್ದಾರೆ. ಮಹಾರಾಷ್ಟ್ರದ ಹೆಮ್ಮೆಯ ಪುತ್ರ ಹಾಗೂ ಕ್ರಾಂತಿಕಾರಿ ವೀರ ಸಾವರ್ಕರ್ ಬಗ್ಗೆ ನಿರಂತರವಾಗಿ ದ್ವೇಷದ ಭಾವನೆ ವ್ಯಕ್ತಪಡಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
ಇದೇ ವೇಳೆ, ಬಾಬರಿ ಮಸೀದಿ ಧ್ವಂಸದ ಬಳಿಕ ತಮ್ಮ ಕಣ್ಣಲ್ಲಿ ನೀರು ಬಂದಿತ್ತು ಎಂದು ಸೋನಿಯಾ ಗಾಂಧಿ ಪುಸ್ತಕದಲ್ಲಿ ಬರೆದಿರುವುದನ್ನೂ ನಿರುಪಮ್ ಪ್ರಶ್ನಿಸಿದ್ದಾರೆ. ರಾಮಮಂದಿರ ಧ್ವಂಸದ ಬಗ್ಗೆ ಅವರಿಗೆ ದುಃಖವಾಗಲಿಲ್ಲ ಎಂದು ಆರೋಪಿಸಿದ್ದಾರೆ.
ಸಾವರ್ಕರ್ ಕುರಿತ ಬರಹಗಳು ಇದೀಗ ಮಹಾರಾಷ್ಟ್ರದಲ್ಲಿ ರಾಜಕೀಯ ವಾಗ್ವಾದಕ್ಕೆ ಕಾರಣವಾಗಿದ್ದು, ಆತ್ಮಚರಿತ್ರೆ ನಿಷೇಧಿಸುವಂತೆ ಕೇಳಿಬಂದಿರುವ ಒತ್ತಾಯಕ್ಕೆ ಸರ್ಕಾರ ಯಾವ ರೀತಿಯಲ್ಲಿ ಪ್ರತಿಕ್ರಿಯಿಸಲಿದೆ ಎಂಬುದು ಕುತೂಹಲ ಮೂಡಿಸಿದೆ.




