
ನೀತಾ ರಾವ್
ಬಾಲ್ಯದ ನೆನಪುಗಳೆಂದರೆ ಅಮೂಲ್ಯ ನಿಧಿ ಇದ್ದಂತೆ. ಈ ಮನಸ್ಸಿನ ಭದ್ರ ತಿಜೋರಿಯಲ್ಲಿ ಜೋಪಾನವಾಗಿರುತ್ತವೆ. ಆಗೊಮ್ಮೆ ಈಗೊಮ್ಮೆ ಒಮ್ಮೆಲೇ ಹೊರಕಾಣಿಸಿಕೊಂಡು ನಮ್ಮ ಕಣ್ಣಲ್ಲಿ ಸಂತೋಷದ ಹೊಳಪನ್ನು ಮಿಂಚಿಸುತ್ತವೆ.
ಬೆಳೆದಂತೆ ಬೆಳೆದಂತೆ ಕಾಲ ಬದಲಾಗುತ್ತದೆ. ರೀತಿ-ರಿವಾಜುಗಳು ಬದಲಾಗುತ್ತವೆ. ನಾವೂ ಅದಕ್ಕೆ ತಕ್ಕಂತೆ ಬದಲಾಗುತ್ತೇವೆ. ಬಾಲ್ಯದಲ್ಲಿ ನಾವು ಮಾಡಿದ, ಕಂಡ ಎಷ್ಟೋ ಕೆಲಸಗಳು, ಚಟುವಟಿಕೆಗಳು, ಸಂಪ್ರದಾಯಗಳು ಈಗಿಲ್ಲ. ಆದರೆ ಅವುಗಳ ನೆನಪುಗಳಿಂದ ಮಾತ್ರ ಆಗಾಗ ಮಧುರ ಯಾತನೆಯೊಂದನ್ನು ಅನುಭವಿಸುತ್ತೇವೆ.
ನಾವು ತುಂಬ ಚಿಕ್ಕವರಿರುವಾಗ ಸ್ನಾನದ ನೀರು ಕಾಯಿಸಲು ತಾಮ್ರದ ದೊಡ್ಡ ಹಂಡೆಗಳು ಇದ್ದವು. (ಈಗಲೂ ಮಲೆನಾಡಿನ ಮನೆಗಳಲ್ಲಿ ಇವೆ) ಈ ಹಂಡೆಗಳನ್ನು ದೊಡ್ಡದಾದ ಬಚ್ಚಲು ಮನೆಯಲ್ಲಿಟ್ಟು ಅದಕ್ಕೆ ನೀರು ತುಂಬಿಸಿ ಕೆಳಗಿನಿಂದ ಕಟ್ಟಿಗೆ, ತೆಂಗಿನ ಜುಟ್ಟು, ಒಣಗಿದ ತೆಂಗಿನ ಗರಿಗಳು ಮುಂತಾದವುಗಳನ್ನು ಹಾಕಿ ಉರಿ ಹಚ್ಚಬೇಕಿತ್ತು.
ಹಾಗಾಗಿ ನಮ್ಮಜ್ಜಿ ವರ್ಷಕ್ಕೆ ಬೇಕಾಗುವಷ್ಟು ಕಟ್ಟಿಗೆಯನ್ನು ತರಿಸುತ್ತಿದ್ದಳು. ಮರದ ದಪ್ಪ ದಿಮ್ಮಿಗಳು ಮನೆಯ ಮುಂದೆ ಬಂದು ಬಿದ್ದವೆಂದರೆ ಆಮೇಲೆ ಕಟ್ಟಿಗೆ ಒಡೆಯುವವರನ್ನು ಹುಡುಕುವ ಕೆಲಸ. ಅವರು ಮನೆಯ ಮುಂದಿನಿಂದ ಹಾಯುತ್ತಿದ್ದಾಗ ಒಮ್ಮೊಮ್ಮೆ ಅವರೇ ಮರದ ದಿಮ್ಮಿಗಳನ್ನು ನೋಡಿ ಕಟ್ಟಿಗೆ ಕಡೆಯುವುದಿದೆಯೇ ಎಂದು ಕೇಳುತ್ತಿದ್ದರೆನಿಸುತ್ತದೆ.
ಕಟ್ಟಿಗೆ ಒಡೆಯುವವರು ದಿಮ್ಮಿಗಳನ್ನು ಸೀಳಿ ಸಣ್ಣ ಸಣ್ಣ ಉದ್ದದ ತುಂಡುಗಳಾಗಿ ಒಡೆದು ಹಾಕಿದರೆಂದರೆ ನನಗೆ, ನನ್ನಕ್ಕನಿಗೆ ಅಂಥ ನಾಲ್ಕೈದು ತುಂಡುಗಳನ್ನು ನಮ್ಮ ಶಕ್ತ್ಯಾನುಸಾರ ಕೈಮೇಲೆ ಹಾಕಿಸಿಕೊಂಡು ಹಿತ್ತಲಿಗೆ ತೆಗೆದುಕೊಂಡು ಹೋಗಿ ಒಟ್ಟುವ ಕೆಲಸ.
ಮಧ್ಯಾಹ್ನ ಶುರುಮಾಡಿದ ಕೆಲಸ ಮುಗಿಯುವ ಹೊತ್ತಿಗೆ ಸಂಜೆಯಾಗಿ ಹೋಗಿರುತ್ತಿತ್ತು. ಬೆವರು ಸುರಿಸುತ್ತ ಕಟ್ಟಿಗೆ ಕಡಿಯುವವರ ತಾಕತ್ತನ್ನು ಪುಟ್ಟ ಕಂಗಳು ಸೋಜಿಗದಿಂದ ನೋಡುತ್ತಿದ್ದವು. ಮತ್ತೆ ನಮ್ಮ ವಯಸ್ಸಿಗೆ ನಮ್ಮದೂ ಭಾರದ ಕೆಲಸವೇ. ಆದರೂ ಖುಷಿಯಿಂದ ಮಾಡುತ್ತಿದ್ದೆವು. ಕಾಲಾಂತರದಲ್ಲಿ ಹಂಡೆಗಳು ಮಾಯವಾಗಿ ಬಾಯ್ಲರುಗಳು ಬಂದವು.
ಅವುಗಳ ಬಾಯಿಗೆ ಹಾಕಲು ಕಟ್ಟಿಗೆಯ ಸಣ್ಣ ಸಣ್ಣ ತುಂಡುಗಳನ್ನು (ಇವುಗಳಿಗೆ ಛಕ್ಕೆ ಅಥವಾ ಬಂಫೋಢ ಎನ್ನುತ್ತಿದ್ದೆವು) ಚೀಲದಲ್ಲಿ ತುಂಬಿಸಿ ಕಟ್ಟಿಗೆ ಅಡ್ಡೆಯವರೇ ಮನೆತನಕ ಬಂದು ಮಾರಿಹೋಗಲಾರಂಭಿಸಿದ ಮೇಲೆ ನಮ್ಮ ಶ್ರಮದಾನ ನಿಂತಿತು. ಕಟ್ಟಿಗೆ ಕಡಿಯುವವರು ಮತ್ತೇನು ಕೆಲಸ ಹುಡುಕಿಕೊಂಡು ಹೋದರೋ ಗೊತ್ತಾಗಲಿಲ್ಲ.
ನಂತರದಲ್ಲಿ ಎಲೆಕ್ಟ್ರಿಕ್ ಗೀಜರಗಳು, ಗ್ಯಾಸ್ ಗೀಜರಗಳು ಮುಂತಾದವು ಬಂದು ಬಾಯ್ಲರುಗಳೂ ಕೆಲಸವಿಲ್ಲದೇ ಮೂಲೆಗುಂಪಾದವು. ಮುಂದೊಂದು ದಿನ ಇಂಥ ಎಲ್ಲ ಕೆಲಸ ಕಳೆದುಕೊಂಡ ಹಂಡೆ, ಬಾಯ್ಲರುಗಳನ್ನು ಅಮ್ಮ ಮತ್ತು ಚಿಕ್ಕಮ್ಮ ಹೊತ್ತುಕೊಂಡು ಹೋಗಿ ಗುಜರಿ ಅಂಗಡಿಯ ಪಾಲು ಮಾಡಿ ಬಂದರು.
ಅವುಗಳಿಗೆ ಬೆಲೆ ಇಲ್ಲದಿದ್ದರೂ ತಾಮ್ರ ಮತ್ತು ಹಿತ್ತಾಳೆಗೆ ಬೆಲೆ ಇತ್ತಲ್ಲ! ಹೀಗೆ ಹುಣಸೆಹಣ್ಣನ್ನು ನೆನೆಸಿ ತಾಮ್ರದ ಬಾಯ್ಲರಗಳನ್ನು ತಿಕ್ಕಿ ತಿಕ್ಕಿ ತೊಳೆದು ಲಕಲಕ ಹೊಳೆಸುವ ಶ್ರಮದ ಕೆಲಸವೂ ನಿಂತು ಹೋಯಿತು. ಆದರೆ ಈಗ ಪ್ರಶ್ನೆ ಬಂದದ್ದೇನೆಂದರೆ ದೀಪಾವಳಿ ಹಬ್ಬದಲ್ಲಿ ರಾತ್ರಿ ಸುಣ್ಣ ಮತ್ತು ಕುಂಕುಮದ ಉದ್ದುದ್ದ ಪಟ್ಟಿಗಳನ್ನು ಯಾವುದಕ್ಕೆ ಬಳೆಯಬೇಕು? ಮಾಲಿಂಗನ ಬಳ್ಳಿಯನ್ನು ಯಾವುದಕ್ಕೆ ಸುತ್ತಿ ಕಟ್ಟಬೇಕು? ಗೀಜರಿಗೆ ಒಂದಿಷ್ಟು ಬಳ್ಳಿಯನ್ನು ಕಟ್ಟಿ ತೃಪ್ತಿ ಪಟ್ಟುಕೊಳ್ಳುವುದಿದೆಯಾದರೂ ಈ ಎಲ್ಲ ಸಂಪ್ರದಾಯಗಳಿಗೆ ಪ್ರಶಸ್ತವಾಗಿದ್ದ ಹಂಡೆ ಮತ್ತು ಬಾಯ್ಲರಗಳು ಕಾಣೆಯಾಗುವುದರೊಂದಿಗೆ ವರ್ಷಾನುಗಟ್ಟಲೇ ನಡೆಸಿಕೊಂಡು ಬಂದಿದ್ದ ಹಬ್ಬದ ರೀತಿ-ರಿವಾಜುಗಳು ಹೆಚ್ಚು-ಕಡಿಮೆ ಅಂತ್ಯಗೊಂಡಿದ್ದು ಬದಲಾದ ಕಾಲದ ದುರಂತವೇ!
ಮೊದಲೆಲ್ಲ ಹಿತ್ತಾಳೆಯ ಪಾತ್ರೆಗಳಿಗೂ ಅಡುಗೆಮನೆಯಲ್ಲಿ ಅಪಾರ ಗೌರವಾದರಗಳು ಪ್ರಾಪ್ತವಾಗಿದ್ದವು. ಅವಿಲ್ಲದೇ ಅಡುಗೆಯಿಲ್ಲ. ಹೀಗಾಗಿ ಅವುಗಳ ನಿಗಾ, ಸ್ವಚ್ಛತೆ ಎಲ್ಲವನ್ನೂ ಕಟ್ಟುನಿಟ್ಟಾಗಿ ಮಾಡುತ್ತಿದ್ದ ನಮ್ಮಜ್ಜಿ, ಮತ್ತಿತರರು ವರ್ಷಕ್ಕೊಮ್ಮೆ ಅವುಗಳನ್ನು ಕಲೈ ಮಾಡಿಸುತ್ತಿದ್ದರು.
“ಕಲೈವಾಲಾ, ಕಲೈವಾಲಾ” ಎಂದು ಕೂಗಿಕೊಂಡು ಬೆನ್ನಮೇಲೊಂದು ಕೊಳೆಯಾದ ಚೀಲವನ್ನೇರಿಸಿಕೊಂಡು ಬರುತ್ತಿದ್ದ ಈ ಕಲೈವಾಲಾಗಳು ನಮಗೆ ಮಾಯಾಲೋಕದಿಂದ ಬಂದ ಜಾದೂಗಾರರಂತೆ ಭಾಸವಾಗುತ್ತಿದ್ದರು. ಅವರನ್ನು ನಿಲ್ಲಿಸಿ ಓಣಿಯ ಹೆಣ್ಣುಮಕ್ಕಳೆಲ್ಲ ಮನೆಯೊಳಗೋಡಿ ಹಿತ್ತಾಳೆ ಸಾಮಾನುಗಳನ್ನೆಲ್ಲ ಕಲೆಹಾಕಿ ಅವನ ಮುಂದೆ ತಂದೊಟ್ಟುವುದೊರಳೊಗಾಗಿ ಅವನು ತನ್ನ ಮಾಯಾ ಚೀಲದಿಂದ ಒಂದೊಂದೇ ಅದ್ಭುತ ವಸ್ತುಗಳನ್ನು ರಸ್ತೆಯ ಬದಿಗೆ ಹೊರತೆಗೆಯುತ್ತಿದ್ದ.
ಒಂದು ಒಲೆಯಲ್ಲಿ ಒಂದಿಷ್ಟು ಇದ್ದಿಲುಗಳನ್ನು ಹಾಕಿ, ಅದಕ್ಕೆ ಹೊಂದಿಕೊಂಡಂತಿರುತ್ತಿದ್ದ ಚೀಲದ ತುದಿಗೆ ಕಟ್ಟಿರುತ್ತಿದ್ದ ಕೊಳವೆಯೊಳಗೆ ತನ್ನೆಲ್ಲ ಶಕ್ತಿಯನ್ನು ಹಾಕಿ ಬಾಯಿ ಉಬ್ಬಿಸಿ ಊದುತ್ತಿದ್ದ. ಕಪ್ಪು ಇದ್ದಿಲುಗಳೆಲ್ಲ ನಿಗಿನಿಗಿ ಕೆಂಡವಾಗಿ ಕೆಂಪಾಗಿ ಉರಿಯಲಾರಂಭಿಸಿದರೆ ನಮಗೆಲ್ಲ ಏನೋ ಖುಷಿ. ನಂತರ ಒಂದೊಂದೇ ಹಿತ್ತಾಳೆಯ ಪಾತ್ರೆಗಳನ್ನು ತೆಗೆದುಕೊಂಡು ಕಾಯಿಸಿ, ಎಂಥದೋ ಒಂದು ಪುಡಿಯನ್ನು ಹಾಕಿ ಸಣ್ಣ ಬಟ್ಟೆಯಿಂದ ಪಾತ್ರೆಯ ಒಳಮೈಯನ್ನೆಲ್ಲ ಸವರುತ್ತಿದ್ದ. ನಂತರ ಅದರೊಳಗೆ ನೀರು ಹಾಕಿ ಚ್ಯೂಂ ಎನಿಸುತ್ತಿದ್ದ
. ಕಿಲುಬುಗಟ್ಟಿ ಕಪ್ಪಗಾದ ಹಿತ್ತಾಳೆಯ ಪಾತ್ರೆಯ ಒಳಗೆಲ್ಲ ಬೆಳ್ಳಿಯ ಬಣ್ಣ ಮೂಡಿ ಲಕಲಕನೇ ಹೊಳೆಯಲಾರಂಭಿಸಿದವೆಂದರೆ ನಮ್ಮ ಮುಗ್ಧ ಕಣ್ಣುಗಳಲ್ಲಿ ಮುದುಕ ಕಲೈವಾಲಾಗಳು ಜಾದೂಗಾರರಾಗಿ ಬದಲಾಗಿಬಿಡುತ್ತಿದ್ದರು. ಮೆಚ್ಚುಗೆಯ ನೋಟದಿಂದ ಅವನನ್ನೇ ನೋಡುತ್ತ, ಅವನು ಪಾತ್ರೆಗಳನ್ನೆಲ್ಲ ಬೆಳ್ಳಿಯ ಬಣ್ಣಕ್ಕೆ ತಿರುಗಿಸುವುದನ್ನು ನೋಡುತ್ತ ಸಮಯದ ಪರಿವೆಯೇ ಇಲ್ಲದವರಂತೆ ಕುಳಿತುಬಿಡುತ್ತಿದ್ದೆವು.
ಸ್ಟೇನಲೆಸ್ ಸ್ಟೀಲ್ ಎನ್ನುವ ಅದ್ಭುತ ಅವಿಷ್ಕಾರ ಬಂದು ಎಲ್ಲ ಹಿತ್ತಾಳೆ ಪಾತ್ರೆಗಳನ್ನು ಸಾರಿಸಿ ಉಡುಗಿಕೊಂಡು ಹೋಗಿಬಿಟ್ಟಿತು. ಕಲೈವಾಲಾಗಳು ಕಾಣೆಯಾದರು. ಕಲೆಗಳೇ ಉಳಿಯದ, ತೊಳೆಯಲು ಅತ್ಯಂತ ಸರಳವಾದ, ಹೆಸರೇ ಹೇಳುವಂತೆ ಸ್ಟೇನಲೆಸ್ ಆಗಿದ್ದ ಸ್ಟೀಲ್ ಪಾತ್ರೆಗಳೊಂದಿಗೆ ನಮ್ಮ ಹದಿಹರೆಯ ರಾಜಿ ಮಾಡಿಕೊಂಡುಬಿಟ್ಟಿತು.
ನನ್ನಜ್ಜಿ ಗಟ್ಟಿಯಾಗಿರುವ ತನಕ ವರ್ಷಕ್ಕಾಗುವಷ್ಟು ಹಪ್ಪಳ, ಸಂಡಿಗೆ ಮುಂತಾದವುಗಳನ್ನೆಲ್ಲ ತಪ್ಪದೇ ಮಾಡುತ್ತಿದ್ದಳು. ಮಾಡುತ್ತಿದ್ದಳೆಂದರೆ ಒಬ್ಬಳೇ ಮಾಡುವ ಕೆಲಸಗಳೂ ಅವಲ್ಲ. ಆದರೆ ಮಾಡಬೇಕೆಂಬ ಇನಿಶಿಯೇಟಿವ್ ಅವಳದಾಗಿರುತ್ತಿತ್ತು.
ಉದ್ದಿನ ಹಪ್ಪಳವನ್ನು ಮಾಡಬೇಕೆಂದರೆ ಅದರ ಹಿಟ್ಟನ್ನು ಕಲಿಸಿ ಒರಳಿನಲ್ಲಿ ಕುಟ್ಟಿ ಕುಟ್ಟಿ ಹದಕ್ಕೆ ತಂದುಕೊಳ್ಳುತ್ತಿದ್ದರು ಅಜ್ಜಿ, ಅಮ್ಮ ಮತ್ತು ಚಿಕ್ಕಮ್ಮ. ಹಿಂದಿನ ದಿನವೇ ಅಕ್ಕ-ಪಕ್ಕದ ಮನೆಯ ಹೆಂಗಸರಿಗೆ ಹೇಳಿಟ್ಟುಕೊಂಡಿರುತ್ತಿದ್ದರೇನೊ! ಮಧ್ಯಾಹ್ನದ ಊಟವಾದ ನಂತರ ಒಬ್ಬೊಬ್ಬರೇ ಹೆಂಗಸರು ತಮ್ಮ ಮನೆಯಿಂದ ಲಟ್ಟಿಸುವ ಮಣೆ ಮತ್ತು ಲಟ್ಟಣಿಗೆಗಳನ್ನು ತೆಗೆದುಕೊಂಡು ಬರುತ್ತಿದ್ದರು. ಒಬ್ಬರು ಹಿಟ್ಟನ್ನು ಉದ್ದಕೇ ಎಳೆದು ಉಳ್ಳೆಗಳನ್ನು (ಸಣ್ಣ ಉಂಡೆಗಳು) ಮಾಡುತ್ತಿದ್ದರು.
ಉಳಿದವರೆಲ್ಲ ಅವುಗಳನ್ನು ತೆಗೆದುಕೊಂಡು ಹಪ್ಪಳ ಲಟ್ಟಿಸುವರು. ಮನೆಯ ಸುಖ-ದುಃಖಗಳ ವಿನಿಮಯವಾಗುತ್ತ ಆಗುತ್ತ ಹಪ್ಪಳಗಳು ದುಂಡನೇಯ ಆಕಾರ ಪಡೆದುಕೊಳ್ಳುತ್ತಿದ್ದವು. ಹಾಗೆ ಅವರು ಲಟ್ಟಿಸಿ ಇಟ್ಟ ಹಪ್ಪಳಗಳನ್ನು ಹಿತ್ತಲಿಗೆ ಒಯ್ದು ಈಗಾಗಲೇ ಹಾಸಿಟ್ಟಿರುವ ಕಾಟನ್ ಸೀರೆ ಇಲ್ಲಾ ಪಂಚೆಯ ಮೇಲೆ ಒಂದೊಂದಾಗಿ ಸಾಲಾಗಿ ಒಣಗಿಸುವ ಜವಾಬ್ದಾರಿ ನಮ್ಮಂಥ ಪುಟ್ಟ ಮಕ್ಕಳದು.
ಅಮ್ಮನೋ ಚಿಕ್ಕಮ್ಮನೋ ಬಂದ ಹೆಣ್ಣುಮಕ್ಕಳಿಗೆಲ್ಲ ಚಹಾ-ಅವಲಕ್ಕಿ ಮಾಡಿಕೊಡುವುದಿತ್ತು. ಮಧ್ಯೆ ಮಧ್ಯೆ ದೊಡ್ಡವರ ಹತ್ತಿರ ನಾವು “ಒಂದು ಉಳ್ಳೆ ಕೊಡ್ರಿ, ರುಚಿ ನೋಡ್ತೇವಿ” ಎಂದು ದೈನಾಸಿ ಪಟ್ಟು ಇಸಿದುಕೊಂಡು ಗಬಕ್ಕನೇ ಬಾಯಿಗೆ ಹಾಕಿಕೊಳ್ಳುತ್ತಿದ್ದೆವು. ಸಂಡಿಗೆ ಮಾಡುವಾಗ ಇಷ್ಟೊಂದು ಜನ ಬೇಕಾಗುತ್ತಿರಲಿಲ್ಲವಾದರೂ ಒಂದಿಬ್ಬರ ಸಹಾಯವಂತೂ ಅನಿವಾರ್ಯವಾಗಿತ್ತು.
ಬೆಳಿಗ್ಗೆ ಬೇಗನೇ ಎದ್ದು ಶಾಬೂದಾಣೆಯನ್ನು ಕುದಿಸಿ ಹಿಟ್ಟು ತಯಾರಿಸಿಕೊಂಡು ಹಿತ್ತಲಿನಲ್ಲೋ, ಮನೆಯ ತಾರಸಿಯ ಮೇಲೋ ಕಾಟನ್ ಸೀರೆಯನ್ನು ಹಾಸಿ ಅದರ ಮೇಲೆ ದೊಡ್ಡ ಚಮಚದಿಂದಲೋ, ಸೌಟಿನಿಂದಲೋ ಸಂಡಿಗೆ ಬಿಡುತ್ತ ಹೋಗುವುದು. ಇವೆಲ್ಲ ಸರಿಯಾಗಿ ಒಣಗಲು ನಾಲ್ಕಾರು ಖಡಕ್ಕಾದ ಬಿಸಿಲುಗಳಾದರೂ ಬೇಕಾಗುತ್ತಿದ್ದರಿಂದ ಇಂಥ ಚಟುವಟಿಕೆಗಳೆಲ್ಲ ಬೇಸಿಗೆಕಾಲದಲ್ಲೇ ಜರುಗುತ್ತಿದ್ದವು.
ಇದೀಗ ಲಿಜ್ಜತ ಪಾಪಡ ಪ್ಯಾಕೆಟ್ಟುಗಳು ಡಬ್ಬದಲ್ಲಿ ಬಂದು ಕೂತಿವೆ. ಹೋಮ್-ಮೇಡ್ ಸಂಡಿಗೆಗಳು ಅಪರೂಪಕ್ಕೊಮ್ಮೆ ಮನೆಯೊಳಗೆ ಪದಾರ್ಪಣೆ ಮಾಡುವುದಿದೆ. ಆದರೆ ಯಾವುದನ್ನೂ ವರ್ಷಕ್ಕೆ ಆಗುವಷ್ಟು ಮಾಡುವ ರೂಢಿ ಅಜ್ಜಿಯ ಜೊತೆಗೇ ಹೊರಟು ಹೋಯಿತು. ಸಾಂಘಿಕ ಜೀವನದ ಚಟುವಟಿಕೆಗಳೂ ಮಾಯವಾದವು. ಅದರೊಂದಿಗೆ ಸಹಜವಾಗಿ ವಿನಿಮಯವಾಗುತ್ತಿದ್ದ ಸುಖ-ದುಃಖಗಳು ಹೊರಬರುವ ದಾರಿ ಕಾಣದೇ ಗಂಟಲಿನೊಳಗಿನ ಬಿಕ್ಕಳಿಕೆಗಳಾಗಿ ಉಳಿದು ಹೋದವು.
ಶ್ರಾವಣ ಮಾಸ ಬಂತೆಂದರೆ ನಮ್ಮಜ್ಜಿಗೆ ಎಲ್ಲಿಲ್ಲದ ಹುರುಪು ರೆಕ್ಕೆಪುಕ್ಕ ಕಟ್ಟಿಕೊಂಡು ಬಂದುಬಿಡುತ್ತಿತ್ತು. ಶ್ರಾವಣದ ಶುಕ್ರವಾರದ ಹಾಡು, ಶನಿವಾರದ ಹಾಡುಗಳನ್ನು ಅಕ್ಕಪಕ್ಕದ ಮನೆಯ ಹೆಂಗಸರೆಲ್ಲ ಸೇರಿಕೊಂಡು ಯಾರಾದರೊಬ್ಬರ ಮನೆಯಲ್ಲಿ ಹಾಡುತಿದ್ದರು. ಇವೆಲ್ಲ ಸಂಜೆಯ ಕಾರ್ಯಕ್ರಮಗಳು.
ಹೆಂಗಸರೆಲ್ಲ ಕಳೆಕಳೆಯಾಗಿ ರೇಶ್ಮೆಯ ಸೀರೆಯುಟ್ಟು ರೆಡಿಯಾಗಿರುತ್ತಿದ್ದರು. ಎಷ್ಟೆಂದರೂ ಲಕ್ಷ್ಮೀದೇವಿಯ ಪೂಜೆ ಮಾಡುವುದಲ್ಲವೇ! ಹಾಡು ಹೇಳಿದ ನಂತರ ಬೆಳ್ಳಿಯ ಆರತಿ ತಟ್ಟೆಯಲ್ಲಿ ದೇವಿಗೆ ಆರತಿ ಬೆಳಗುತ್ತಿದ್ದರು. ಅಜ್ಜಿಯ ಮನೆಯ ಹಿಂಭಾಗದಲ್ಲಿ ಹೊಸದಾಗಿ ಬಾಡಿಗೆಗೆ ಬಂದ ನವದಂಪತಿಗಳಿದ್ದರು. ಹೆಂಡತಿಯ ಹೆಸರು ರಮಾ. ಅವರ ಕಂಠವೂ ಚೆನ್ನಾಗಿದ್ದು ಶುಕ್ರವಾರ, ಶನಿವಾರದ ಹಾಡುಗಳನ್ನು ಸುಶ್ರಾವ್ಯವಾಗಿ ಅನ್ನುತ್ತಿದ್ದರು.
ಕೆಂಪು ರೇಶಿಮೆಯ ಸೀರೆಯುಟ್ಟು ಅವರು ಹಾಡಲು ಆರಂಭಿಸಿದರೆ ಸುಂದರ ಮುಖದ ರಮಾ ಮಾಮಿ ನನಗೆ ಸಾಕ್ಷಾತ್ ಲಕ್ಷ್ಮೀದೇವಿಯ ಅವತಾರವೇ ಎನಿಸಿಬಿಡುವುದು. ಹಾಗಾಗಿ ಮಕ್ಕಳು, ದೊಡ್ಡವರೆನ್ನದೇ ಎಲ್ಲರೂ ಅವರ ಫ್ಯಾನಗಳಾಗಿ ಬಿಟ್ಟಿದ್ದರು. ಅವರು ಹಾಡಿ ಕಲಿಸಿದ “ರುದ್ರಕುಮಾರನ ಚರಣಕ್ಕೊಂದನೆ ಮಾಡಿ ವಿದ್ಯಾಭಿಮಾನಿ ವಾಣಿಯ ಸುಪಾದ ಪದ್ಮಂಗಳಿಗೆರಗಿ ನಾ ಪೇಳುವೆ”, ” ಗಜವದನನ ಪಾದಾಂಬುಜಗಳಿಗೆರಗುವೆ, ಅಜನರಸಿಗೆ ನಮಸ್ಕರಿಸಿ” ಎಂದು ಪ್ರಾರಂಭವಾಗುವ ಈ ಶ್ರಾವಣ ಶುಕ್ರವಾರ ಮತ್ತು ಶನಿವಾರದ ಹಾಡುಗಳು ಇಂದಿಗೂ ನಮ್ಮ ನಾಲಿಗೆಯ ಮೇಲೆ ಆಗಾಗ ಬಂದು ನಲಿದಾಡುತ್ತವೆ.
ಇದೀಗ ಮಧ್ಯವಯಸ್ಸಿಗೆ ಬಂದು, ದೇವರು-ದಿಂಡರು ಬೇಕೆನಿಸುವ ಕಾಲಕ್ಕೆ ಶ್ರಾವಣದ ಹಾಡುಗಳನ್ನು ಹೇಳೋಣವೆಂದರೆ ಅವುಗಳ ಪುಸ್ತಕಗಳೇ ಸಿಗದೇ ಪರದಾಡುತ್ತಿದ್ದೆ. ಕೊನೆಗೆ ಯಾರಾದರೂ ಧಾರ್ಮಿಕ ಮನೋವೃತ್ತಿಯ ಪುಣ್ಯಾತ್ಮರು ಜಾಲತಾಣದಲ್ಲಿ ಅಪಲೋಡ್ ಮಾಡಿರಬಹುದೇನೋ ನೋಡಿಯೇಬಿಡೋಣ ಎಂದು ದೂರದ ಆಸೆಯನ್ನಿಟ್ಟುಕೊಂಡು ಜಾಲಾಡಿದಾಗ ಅಲ್ಲಿ ಅವು ಸಿಕ್ಕೇಬಿಟ್ಟು ನನಗಾದ ಸಂತಸ ಅಷ್ಟಿಷ್ಟಲ್ಲ.
ಬಾಲ್ಯದಲ್ಲಿ ಕಲಿತ ಹಾಡುಗಳನ್ನು ಈಗ ಹೇಳಿ ಶ್ರಾವಣಮಾಸವನ್ನು ಸಾರ್ಥಕಗೊಳಿಸಿದ ತೃಪ್ತಿ ಸಿಕ್ಕಿತು. ಆದರೆ ಮೊದಲಿನವರ ಹಾಗೆ ಮನೆಯಲ್ಲಿ ಹೆಣ್ಣುಮಕ್ಕಳನ್ನು ಸೇರಿಸಿ ಸಾಂಘಿಕವಾಗಿ ಹಾಡಿಸುವುದು ನನ್ನಿಂದಾಗುವ ಕೆಲಸವಲ್ಲ.
ನಾವು ಬಾಡಿಗೆ ಮನೆಯಿಂದ ನಮ್ಮ ಸ್ವಂತದ ಹೊಸ ಮನೆಗೆ ಬಂದಾಗ ಮನೆಯ ಹಿತ್ತಿಲಿನಲ್ಲಿ ಸುಮಾರು ದೂರವೇ ಎನ್ನುವಷ್ಟು ಅಂತರದಲ್ಲಿ ಬಾವಿಯಿತ್ತು. ಬೆಳಗಾವಿಯಲ್ಲಿ ಆಗ ಹೆಚ್ಚೂಕಡಿಮೆ ಎಲ್ಲರ ಮನೆಯ ಹಿತ್ತಿಲುಗಳಲ್ಲಿ ಬಾವಿಗಳಿದ್ದವು. ಎಲ್ಲರ ಹಿತ್ತಲುಗಳೂ ಒಂದಾಗಿದ್ದ, ಗೋಡೆಗಳಿಲ್ಲದ ಆ ಕಾಲದಲ್ಲಿ ಪಕ್ಕದ ಮನೆಯವರ ಬಾವಿಯೇ ನಮ್ಮ ಬಾವಿಗಿಂತ ಸಮೀಪವಾಗಿದ್ದರಿಂದ ನಾವು ಅವರ ಬಾವಿಯಿಂದಲೇ ನೀರು ಸೇದುತ್ತಿದ್ದೆವು.
ಬಾವಿಯ ಘಡಘಡಿಗೆ ಒಂದು ಸಲ ಅವರು ಹೊಸ ಹಗ್ಗವನ್ನು ತಂದು ಹಾಕಿದರೆ ಇನ್ನೊಂದು ಸಲ ನಾವು ಹಾಕುತ್ತಿದ್ದೆವು. ನಮ್ಮ ಸಿಮೆಂಟ್ ಕಾಂಕ್ರೀಟ ಮನೆಯ ತಾರಸಿಯು ಅವರ ನಾನಾ ವಿಧದ ಚಟುವಟಿಕೆಗಳಿಗೆ ಉಪಯೋಗವಾಗುತ್ತಿತ್ತು. ಅಂತೂ ಸಹಕಾರಿ ತತ್ವಗಳ ಆಧಾರದಲ್ಲಿ ಸೌಕರ್ಯಗಳು ಪರಸ್ಪರ ಉಪಯೋಗಕ್ಕೆ ಬರುತ್ತಿದ್ದ ಕಾಲವದು.
ಬಾವಿಯಲ್ಲಿ ನೀರು ಬಹಳ ಮೇಲೆಯೇ ಇರುತ್ತಿದ್ದರಿಂದ ನಾಲ್ಕೈದು ಎಳೆತಕ್ಕೇ ತುಂಬಿದ ಕೊಡ ಮೇಲೆ ಬರುತ್ತಿತ್ತು. ಹೀಗಾಗಿ ಇದೊಂದು ಪ್ರಯಾಸದ ಕೆಲಸವೆನಿಸದೇ ಆಟವಾದಂತಾಗಿತ್ತು. ಬಾವಿಯ ನೀರಿನ ವೈಶಿಷ್ಟ್ಯವೆಂದರೆ ಅದು ಬೇಸಿಗೆಯಲ್ಲಿ ತಂಪಾಗಿಯೂ, ಥಂಡಿಗಾಲದಲ್ಲಿ ಬೆಚ್ಚಗಾಗಿಯೂ ಇರುತ್ತದೆ. ಹೀಗಾಗಿ ಮಧ್ಯಾಹ್ನ ಮನೆಗೆ ಯಾರಾದರೂ ಅಥಿತಿಗಳು ಬಂದಾಗ (ಈಗಿನ ಹಾಗೆ ಆಗೆಲ್ಲ ಅತಿಥಿಗಳು ಫೋನು ಗೀನು ಮಾಡಿ ಬರದೇ, ಯಾವಾಗೆಂದರಾವಾಗ ಹಾಜರಾಗುತ್ತಿದ್ದರು) ನೀರು ಕೇಳಿದೊಡನೇ, ಮನೆಯಲ್ಲಿ ಈಗಾಗಲೇ ಸಂಗ್ರಹಿಸಿಟ್ಟ ನೀರನ್ನು ಕೊಡದೇ “ಒಂದ್ನಿಮಿಷ ತಡ್ರಿ, ಥಣ್ಣಗ ಭಾವಿ ನೀರ ತಂದು ಕೊಡ್ತೇನಿ” ಎಂದು ಓಡಿಹೋಗಿ ಒಂದು ಕೊಡ ನೀರು ಸೇದಿಕೊಂಡೇ ಬರುತ್ತಿದ್ದೆವು.
ಅಷ್ಟೊಂದು ಉತ್ಸಾಹ, ಕಳಕಳಿ ಆಗ ನಮಗೆ. ಮನಸ್ಸುಗಳು ಸಂಕುಚಿತಗೊಂಡಂತೇ ಎಲ್ಲರ ಹಿತ್ತಲುಗಳಿಗೂ ಗೋಡೆಗಳೆದ್ದವು. ಅವರ ಮನೆಯ ಬಾವಿ ನಮಗಿಲ್ಲವಾಯಿತು. ನಮ್ಮ ಬಾವಿಯಿದ್ದ ಜಾಗವನ್ನು ಹಿಂದಿನ ಮನೆಯವರು ವ್ಯಾಜ್ಯ ಮಾಡಿ, ದಾವೆ ಹೂಡಿ ಆಕ್ರಮಿಸಿಕೊಂಡು ತಮ್ಮದಾಗಿಸಿಕೊಂಡರು.
ಇದೀಗ ಮಹಾನಗರ ಪಾಲಿಕೆಯವರು ವಾರಕ್ಕೊಮ್ಮೆ ದಯಪಾಲಿಸುವ ನಳದ ನೀರಿಗಾಗಿ ಅಮ್ಮ ಕಂಗೆಟ್ಟು ಕಾಯುತ್ತ ಕೂರುವಾಗ, ಎರೆಡೆರೆಡು ಬಾವಿಗಳಿಂದ ಲಭ್ಯವಿರುತ್ತಿದ್ದ ಎಂದೆಂದೂ ಬತ್ತದ, ತಳ ಕಾಣದ ನೀರಿನ ಗತವೈಭವವನ್ನು ನೆನೆದು ಕಣ್ಣಲ್ಲಿ ನೀರು ಬರುತ್ತದೆ. ಎಂದೆಂದೂ ನೀರಿಗಾಗಿ ಪರದಾಡುವ ಪರಿಸ್ಥಿತಿಯನ್ನು ಎದುರಿಸದ ಅಮ್ಮ ಈಗ “ನೀರು ಬಂತೇ ನೀರು ಬಂತೇ” ಎಂದು ಅಕ್ಕಪಕ್ಕದವರನ್ನು ಕೇಳುತ್ತ ಕಂಗೆಡುವ ಪರಿಯನ್ನು ಕಂಡು ಕಂಗಾಲಾಗುತ್ತೇನೆ.
ಬದಲಾವಣೆ ಜಗದ ನಿಯಮ, ಅದಕ್ಕಾಗಿ ವಿಷಾದವಿಲ್ಲ. ಹಳೆಯದನ್ನೆಲ್ಲ ಉಳಿಸಿಕೊಳ್ಳುವ ತಾಕತ್ತೂ ಇಂದು ನಮಗಿಲ್ಲ. ಹಳೆಯ ಕಾಲದ ಅನೇಕ ಪದ್ಧತಿಗಳು, ಆಚರಣೆಗಳು, ಚಟುವಟಿಕೆಗಳು ನೋಡನೋಡುತ್ತಿದ್ದಂತೇ ಕಣ್ಮರೆಯಾದದ್ದಕ್ಕೆ ಮೂಕಸಾಕ್ಷಿಯಾಗಿಯೂ, ಅವುಗಳ ಚಿತ್ರಗಳನ್ನು ಎದೆಯ ಮೇಲೆ ತೂಗುಹಾಕಿಕೊಂಡು ಆಗೊಮ್ಮೆ ಈಗೊಮ್ಮೆ ಅವುಗಳ ಮೇಲೆ ಕಣ್ಣು ಹಾಯಿಸಿ ಸುಖ ಪಡುವುದಷ್ಟೇ ಈಗ ನಾನು ಮಾಡಬಹುದಾದದ್ದು.