ವಾಣಿ ಉಮೇಶ ಚಿನ್ನಪ್ಪಗೌಡರ
“ದಾನಾಯ ಲಕ್ಷ್ಮೀಸ್ಸುಕೃತಾಯ ವಿದ್ಯಾ
ಚಿಂತಾ ಪರಬ್ರಹ್ಮ ವಿನಿಕ್ಷಯಾಯ
ಪರಮೂಕರಯ ವಚಾಂಸಿ ಯಸ್ಯ
ವಂದ್ಯ, ತ್ರಿಲೋಕಿ ತಿಲಕ ಸ ಏವ”
ಯಾವ ಸಂಪತ್ತು- ದಾನ -ವಿದ್ಯೆ -ಪುಣ್ಯಕ್ಕಾಗಿಯು , ಚಿಂತೆ- ಪರಬ್ರಹ್ಮನ ಅರಿವಿಗಾಗಿಯೂ, ಮಾತು ಪರೋಪಕಾರಕ್ಕಾಗಿಯು ಇರುವುದೋ ಅವನು ಮೂರು ಲೋಕಕ್ಕೂ ತಿಲಕ ಪ್ರಾಯನಾಗಿದ್ದು ವಂದಿಸಲು ಯೋಗ್ಯನು. ಕನ್ನಡ ನಾಡು ದಾನ – ತ್ಯಾಗ- ವೀರಕ್ಕೆ ಹೆಸರಾದ ಬೀಡು . ಜೈನ ಕವಿಗಳ ಆಗಮಿಕ – ಲೌಕಿಕ ಕಾವ್ಯಗಳು ತ್ಯಾಗ ಮತ್ತು ವೀರವನ್ನೇ ಪ್ರತಿಪಾದಿಸುತ್ತವೆ. ವೀರ- ತ್ಯಾಗ ಬದುಕಿನ ಪರಮ ಮೌಲ್ಯಗಳು. ಈ ಮೌಲ್ಯಗಳಿಗೆ ಅರ್ಥ ತುಂಬಿದವರು ಶಿರಸಂಗಿ ಲಿಂಗರಾಜರು. ಯೋಗ್ಯವಾದ ಕಾರ್ಯ ಮಾಡುವ ಮೂಲಕ ತಾವು ಇಲ್ಲದಿರುವಾಗಲೂ ಜನರ ಮನದಲ್ಲಿ ಚಿರಂಜೀವಿಯಾಗಿ ಉಳಿದಿರುವವರು ತ್ಯಾಗವೀರ ಶಿರಸಂಗಿ ಲಿಂಗರಾಜರು.
ಶಿರಸಂಗಿ ಲಿಂಗರಾಜರ ಊರು ಬೆಳಗಾವಿ ಜಿಲ್ಲೆಯ ಶಿರಸಂಗಿ. ಲಿಂಗರಾಜರು ದೇಸಾಯಿಯಾಗಿ ಮೆರೆದ ಸ್ಥಳ . ನಾನು ಕಳೆದ ವಾರ ತಾಯಿ ತಂದೆಯೊಂದಿಗೆ ಶಿರಸಂಗಿ ಕಾಳಿಕಾಂಬ ದೇವಸ್ಥಾನಕ್ಕೆ ಕಾರಿನಲ್ಲಿ ಹೊರಟಿದ್ದೆನು. ದಾರಿ ಸಂಪೂರ್ಣವಾಗಿ ತಿಳಿಯದ ಕಾರಣ ಗೂಗಲ್ ಮ್ಯಾಪ್ ಅನ್ನು ಆನ್ ಮಾಡಿ, ಅದರ ಸಹಾಯದೊಂದಿಗೆ ಹೊರಟಿದ್ದೆವು. ಗೂಗಲ್ ಮ್ಯಾಪ್ ತಿಳಿಸಿದ ದಾರಿಯಂತೆ ಹೋಗುವಾಗ ಮೊಬೈಲ್ನಲ್ಲಿ ನನಗೆ ಅದೇ ದಾರಿಯಲ್ಲಿ ಲಿಂಗರಾಜರ ಅರಮನೆ ಇದೆ ಎಂದು ತಿಳಿಯಿತು. ಲಿಂಗರಾಜ ಮಹಾವಿದ್ಯಾಲಯದ ವಿದ್ಯಾರ್ಥಿನಿಯಾಗಿದ್ದ ನನಗೆ ಈ ಸ್ಥಳವನ್ನು ನೋಡಲೇಬೇಕು ಎಂದೆನಿಸಿತು. ನನ್ನ ತಂದೆ ತಾಯಿಗೆ ಈ ವಿಷಯ ತಿಳಿಸಿ ಕಾಳಿಕಾಂಬಾ ದೇವಸ್ಥಾನದಲ್ಲಿ ಪೂಜೆ ಮುಗಿಸಿ ಮರಳಿ ಬರುವಾಗ ಲಿಂಗರಾಜರ ವಾಡೆ ಕಡೆಗೆ ನಡೆದೆವು.
ನನ್ನ ಪದವಿ ಕಾಲೇಜ್ ಆದಂತಹ ಆರ್. ಪಿ. ಡಿ. ಕಾಲೇಜಿನ ವತಿಯಿಂದ ಇತಿಹಾಸ ಶಿಕ್ಷಕರ ಮಾರ್ಗದರ್ಶನದಲ್ಲಿ ಚಚಡಿ ವಾಡೆ ನೋಡಿ , ವಾಡೆಯ ಸೌಂದರ್ಯಕ್ಕೆ ಹಾಗೂ ಬೆಳಗಾವಿಯ ನನ್ನ ಪದವಿ ಪೂರ್ವ ಕಾಲೇಜ್ ಲಿಂಗರಾಜ್ ಮಹಾವಿದ್ಯಾಲಯದ ಸೌಂದರ್ಯಕ್ಕೆ ಮನಸೋತ ನಾನು, ಲಿಂಗರಾಜರ ಅರಮನೆ ಎಷ್ಟು ಸುಂದರವಾಗಿರಬಹುದೆಂದು ಕಾರ್ ನಿಂದ ಇಳಿದು ನೋಡಲು ತೆರಳಿದೆ. ಆದರೆ ಅಲ್ಲಿನ ವರ್ತಮಾನ ಸ್ಥಿತಿ ನನ್ನ ಕಲ್ಪನಾಲೋಕದ ತದ್ವಿರುದ್ಧವಾಗಿತ್ತು.
ಬೃಹತ್ ವಾಡೆಯ ಹೆಬ್ಬಾಗಿಲ ಮುಂದೆಯೇ ಕೊಳಚೆನೀರು ಕಟ್ಟಿತ್ತು.ಹೆಬ್ಬಾಗಿಲಿನಿಂದ ಒಳಗಡೆ ಹೋದರೆ ಸ್ವಲ್ಪ ದೊಡ್ಡದಾದ ಪ್ರಾಂಗಣ. ಮತ್ತೆ ಮುಖ್ಯದ್ವಾರದ ಮೂಲಕ ನಡೆದವು. ಬಾಗಿಲಿನಿಂದ ಒಳಗಡೆ ಮೊದಲ ಹೆಜ್ಜೆ ಇಟ್ಟಾಗ ಕಾಣುವುದು ಲಿಂಗರಾಜರು ನೆಲೆಸಿದ ವಾಡೆ. ಆದರೆ ಎಡಬಲದಲ್ಲಿ ಪಾಳುಬಿದ್ದ ಗೋಡೆಗಳು. ವಾಡೆಯ ಮುಖ್ಯ ಅಂಕಣದಲ್ಲಿ ಗೊಡೆಯ ಮೇಲೆ ಲಿಂಗರಾಜರ ವಿವಿಧ ಛಾಯಾ ಚಿತ್ರಗಳನ್ನು ಹಾಗೂ ವಿದ್ವಾಂಸರು, ಮಹನೀಯರು ಲಿಂಗರಾಜರ ಬಗ್ಗೆ ಹೇಳಿದ ಹೊಗಳಿಕೆಯ ಹೇಳಿಕೆಗಳನ್ನು , ಕರ್ನಾಟಕ ಲಿಂಗಾಯತ ಸಂಸ್ಥೆಯ ಬಗೆಗಿನ ಚಿತ್ರಪಟಗಳು ಕಾಣಲು ಸಿಗುವವು. ಅಲ್ಲಿನ ಎಡಬಲದ ಅಂಕಣಗಳು ಸಹ ಪಾಳುಬಿದ್ದಿವೆ. ಮುಖ್ಯ ಅಂಕಣದ ಚಿಕ್ಕ ದ್ವಾರದ ಮೂಲಕ ಹೊರ ನಡೆದರೆ ಕಾಣಸಿಗುವುದು ದೇಸಾಯಿ ಮನೆತನದ ಮನೆದೇವರು ಕಾಡು ಸಿದ್ದೇಶ್ವರ ದೇವಸ್ಥಾನ. ಲಿಂಗರಾಜರು ಸಮಾಜಕ್ಕಾಗಿ ಸರ್ವಸ್ವವನ್ನು ತ್ಯಾಗ ಮಾಡುವಂತಹ ನಿರ್ಣಯಗಳನ್ನು ತೆಗೆದುಕೊಳ್ಳುತ್ತಿದ್ದಂತ ದರ್ಬಾರ್ ಹಾಲ್ ನ್ನು ಇಂದಿನ ಸಮಾಜ ನೋಡಿದರೆ ಅವರ ಮನಸ್ಸು ಘಾಸಿಗೊಳ್ಳುವದು ಖಂಡಿತ ! ಅಂತಹ ಸ್ಥಿತಿಯಲ್ಲಿದೆ ಇಂದು ಶಿರಸಂಗಿ ಲಿಂಗರಾಜರ ಅರಮನೆ.
ಎಲ್ಲರಿಗೂ ಛಾವಣಿ ಯಂತೆ ನೆರಳಾಗಿದ್ದವರು ಲಿಂಗರಾಜರು , ಆದರೆ ಈಗ ಅರಮನೆಯ ಚಾವಣಿ ಬಿರುಕು ಬಿಟ್ಟಿದೆ. ಅಟ್ಟದ ನೆಲವಂತು ಕಾಲಿಡದಂತೆ ಕುಸಿದಿದೆ. ಅಂದು ಪಟ್ಟದರಸಿಯಾಗಿ ಮೆರೆದ ಲಿಂಗರಾಜರ ಅರಮನೆಯ ಅಟ್ಟ ಇಂದು ಕುಸಿಯುತ್ತಿರುವುದನ್ನು ಕಂಡು ನನ್ನ ಮನ ಕುಸಿಯಿತು. ಸರ್ಕಾರದಿಂದ ದುರಸ್ತಿ ಮಾಡಿದ ಮೇಲ್ಚಾವಣಿಯ ತಗಡುಗಳು ಹಾರಿಹೋಗಿವೆ. ಧ್ವಜ ಗೋಪುರಕ್ಕೆ ಹೋಗುವ ದಾರಿಯಂತೂ ಕಲ್ಲು ಮುಳ್ಳು ಹುಲ್ಲಿನಿಂದ ತುಂಬಿಹೋಗಿದೆ. ಮದ್ದಿನಕೋಣೆಯಂತೂ ಮುಚ್ಚಿಹೋಗಿದೆ. ಸುತ್ತಮುತ್ತಲು ಬರೀ ಪಾಳುಬಿದ್ದ ಅಂಕಣ ಒಣಹುಲ್ಲು ಕಸ ಕೊಳಚೆ ತುಂಬಿದೆ.
ಅಂದು ಲಿಂಗರಾಜರನ್ನು ಶ್ರೀಮಂತ ಲಿಂಗರಾಜ್ ದೇಸಾಯರು ಎಂದು ಕೂಗುತ್ತಿದ್ದರು. ಇಂದು ಸಹ ಲಿಂಗರಾಜರ ಶಿಕ್ಷಣ ಸಂಸ್ಥೆ , ಟ್ರಸ್ಟ್ ಗಳು, ಲಿಂಗರಾಜರ ಹೆಸರಿನಲ್ಲಿರುವ ಇನ್ನಿತರ ಸಂಸ್ಥೆಗಳು ಶ್ರೀಮಂತವಾಗಿವೆ. ಹಲವು ಸಮಾಜ ಸೇವಾ ಕಾರ್ಯಗಳನ್ನೂ ಮಾಡಿವೆ. ಆದರೆ ಇಂದು ಆ ಶ್ರೀಮಂತ ಲಿಂಗರಾಜ ದೇಸಾಯರ ವಾಡೆ ಪಾಳು ಬಿದ್ದಿರುವುದನ್ನು ಕಂಡು ನನಗೆ ನೋವು , ದುಃಖ , ಸಿಟ್ಟು ಎಲ್ಲವೂ ಒಮ್ಮೆಲೆ ಬಂತು.
ಬೆಳಗಾವಿಯ ಲಿಂಗರಾಜರ ಹೆಸರಿನ ಅಷ್ಟು ಸುಂದರವಾದ ಕಾಲೇಜಿನಲ್ಲಿ ಕಲಿತ ನಾನು ಅವರ ವಾಡೆ ಪಾಳುಬಿದ್ದಿರುವದನ್ನು, ಈಗ ಮಾಡಿರುವ ದುರಸ್ತಿಗೆ ಯಾವ ಅರ್ಥವು ಇರದಿದ್ದನ್ನು ಕಂಡು ನೋವು ದುಃಖವಾಯಿತು. ಅದೇ ಸಮಯಕ್ಕೆ ಲಿಂಗರಾಜರ ಹೆಸರಿನ ಟ್ರಸ್ಟ್ ,ಕೆ. ಎಲ್. ಇ. ಅಥವಾ ಸರ್ಕಾರ ಇದರ ದುರಸ್ತಿಯೆಡೆಗೆ ಹಾಗೂ ಇದನ್ನೂ ಸರಿಪಡಿಸುವಿಕೆಗೆ, ಅಭಿವೃದ್ಧಿಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಇರುವುದು ನನಗೆ ಸಿಟ್ಟು ತರಿಸಿತು.
ಈ ವಾಡೆಗಳು ನಮ್ಮ ಐತಿಹಾಸಿಕ ಸ್ಮಾರಕಗಳು. ಇದು ನಮ್ಮ ಇತಿಹಾಸದ ಅಡಿಪಾಯಗಳು. ಬೆಳಗಾವಿಯ ಇತಿಹಾಸದ ಅಡಿಯಲ್ಲಿ ಬರುವ ಈ ವಾಡೆಯನ್ನು ಸಂಬಂಧಪಟ್ಟ ಸಂಸ್ಥೆಗಳು ಅಥವಾ ಅಧಿಕಾರಿಗಳು ಸರಿಪಡಿಸಿ ಏಕೆ ಬೆಳಗಾವಿಯ ಇತಿಹಾಸವನ್ನು ಹಾಗೂ ತ್ಯಾಗವೀರ ಲಿಂಗರಾಜರ ಮೌಲ್ಯಗಳನ್ನು ಸದೃಡ ಗೊಳಿಸಬಾರದು?
ಅಂದಿನ ಬೆಳಗಾವಿಯ ಕಲೆಕ್ಟರಾದ ಏ. ಎಮ್. ಟಿ. ಜಾಕ್ಸನ್ರವರು ಲಿಂಗರಾಜರನ್ನು ಈ ಕೆಳಗಿನಂತೆ ಉದ್ಗರಿಸಿದ್ದಾರೆ.
“ನೂರಾರು ವರ್ಷ ಕಳೆದರೂ ಶ್ರೀ ಲಿಂಗರಾಜ ರಂತಹ ದಾನಿಗಳು, ಅಭಿಮಾನಿಗಳು ಹುಟ್ಟುವುದು ವಿರಳ”
ಇಂತಹ ಮಹನೀಯರ ಅರಮನೆಯ ದುರಸ್ತಿಯ ಕಡೆ ಇನ್ನಾದರೂ ನಮ್ಮ ಸರ್ಕಾರ, ಮುಂಚೂಣಿಯಲ್ಲಿರುವ ಸಂಸ್ಥೆಗಳು ರಾಜಕಾರಣಿಗಳು , ಟ್ರಸ್ಟ್ ನವರು ಲಕ್ಷ್ಯ ವಹಿಸಬೇಕೆಂದು, ಲಿಂಗರಾಜ ಮಹಾವಿದ್ಯಾಲಯದಲ್ಲಿ ವಿದ್ಯೆ ಪಡೆದುಕೊಂಡಂತಹ ಎಲ್ಲ ವಿದ್ಯಾರ್ಥಿಗಳ ಪರವಾಗಿ ನಾನು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ