ಲಲಿತ ಪ್ರಬಂಧ : : ಒಂದು ಪ್ರಹಸನ
ಡಾ ಯಲ್ಲಮ್ಮಕೆ
ಬದುಕಿನಲ್ಲಿ ಯಾವಾಗಲೂ ಧನಾತ್ಮಕ ಚಿಂತನೆಗಳನ್ನು ಮಾಡಬೇಕು ಎನ್ನುವುದು ನವಯುಗದ ಮೂಲ ಮಂತ್ರವಾಗಿರುವಾಗ, ನನ್ನ ಅಜ್ಜಿ ಆಗಾಗ್ಗೆ ಹೇಳುತ್ತಿದ್ದ ಮಾತು ನೆನಪಿಗೆ ಬರುತ್ತಿದೆ. ಯಾವುದೇ ಕೆಲಸ-ಕಾರ್ಯಗಳನ್ನು ಮಾಡಬೇಕಾದರೆ ಒಳ್ಳೆಯದ್ದು-ಕೆಟ್ಟದ್ದು ಎರಡನ್ನೂ ಅಂದರೆ ಸಾಧಕ-ಬಾಧಕಗಳನ್ನು ಯೋಚಿಸಿಯೇ ಮುಂದಡಿ ಇಡಬೇಕು ಎನ್ನುವುದು. ಬರೀ ಧನಾತ್ಮ ಚಿಂತನೆಗಳೊಂದಿಗೆ ಸಾಗಿದಾಗ ದುರದೃಷ್ಟದ ವೈಫಲ್ಯತೆಯನ್ನು ಎದುರಿಸುವಲ್ಲಿ ಹಿಂದೆ ಬೀಳುತ್ತೇವೆ ಎನ್ನುವುದು ಅವಳ ಅಭಿಮತ. ಅಂತೆಯೇ ಮದುವೆಗೂ ಮುನ್ನ ಮಸಣದ ಚಿಂತೆ ನನ್ನದು. ಈ ಮದುವೆ ಎನ್ನುವುದು ಸ್ವರ್ಗದಲ್ಲಿ ನಿಶ್ಚಯವಾಗಿರುತ್ತದೆ ಎನ್ನುವ ಮಾತಿದೆಯಾದರೂ ಅದು ಭೂಲೋಕದಲ್ಲಿ ಕಾರ್ಯ ಗತವಾಗಿ ಭಾಗಶಃ ದಾಂಪತ್ಯ ಜೀವನ ಸುಗಮವಾಗಿ ಸಾಗಿ, ಕೆಲಸಂದರ್ಭ ವಿಚ್ಛೇದನಗಳಲ್ಲಿ ಕೊನೆಗೊಳ್ಳುತ್ತದೆ. ಪ್ರಸ್ತುತ ದಿನಮಾನಗಳಲ್ಲಿ ವಿವಾಹ ವಿಚ್ಛೇದನಗಳ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿರುವುದು ಹಲವು ಸಮೀಕ್ಷೆ ಗಳಿಂದ ತಿಳಿದು ಬಂದಿದೆ. ವಿಚ್ಛೇದನಗಳಿಗೆ ಕಾರಣಗಳನೇಕ. ಮನಸಿಲ್ಲದ ಮದುವೆ, ಹಿರಿಯರು ಒಪ್ಪಿ ಅಥವ ಒಪ್ಪದೇ ಮಾಡಿದ ಮದುವೆ, ಪರಸ್ಪರರಲ್ಲಿ ಹೊಂದಾಣಿಕೆಯ ಕೊರತೆ, ಅನುಮಾನ ಇತ್ಯಾದಿ.., “ಸಾವಿರ ಸುಳ್ಳು ಹೇಳಿಯಾದರೂ ಒಂದು ಮದುವೆ ಮಾಡಿಸಬೇಕು” ಅದರಿಂದ ಪುಣ್ಯ ಲಭಿಸುತ್ತದೆ ಎಂಬ ಮಾತಿನಂತೆ, ತಮ್ಮ ಪುಣ್ಯದ ಬಾಬತ್ತಿನ ವೃದ್ಧಿಗಾಗಿ ಹೆಣ್ಣು-ಗಂಡಿಗೂ ಮದುವೆ ಮಾಡಿಸುತ್ತಾರೆ. ಭಾಗಶಃ ಪರಸ್ಪರರು ಸುಳ್ಳಿನ ಸರಮಾಲೆಗಳನ್ನು ಬದಲಿಸಿ ಕೊಂಡೇ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ ಎನ್ನಬಹುದು.
“ಮನೆ ಕಟ್ಟಿ ನೋಡು, ಮದುವೆ ಮಾಡಿ ನೋಡು” ಎನ್ನುವ ಅನುಭವಜನ್ಯ ಮಾತಿದೆ. ಮದುವೆ ಮಾಡಬಹುದು, ಮನೆ ಕಟ್ಟಬಹುದು, ಆದರೆ ಕರೆಯೋಲೆಗಳನ್ನು ಛಾಪಿಸುವುದು, ವಿತರಿಸುವುದು ಇದೆಯಲ್ಲವೇ ತಲೆ ಹೋಗುವ ಕೆಲಸವೇ ಸರಿ. ಮದುವೆ ಎಂದರೆ ಒಂದು ವರ್ಷದ ಮುಂಚಿತವೇ ತಯಾರಿ ಶುರುವಿಟ್ಟುಕೊಳ್ಳುವುದು ವಾಡಿಕೆ. (ಇಂದಿನ ದಿನಮಾನಗಳಲ್ಲಿ ಸ್ವಲ್ಪ ಬದಲಾದಂತಿದೆ) ಮದುವೆಯ ಎಲ್ಲ ಏರ್ಪಾಡು ಆದಮೇಲೆ ಐಯಗಳನ್ನು ಹಿಡಿದು ಲಗ್ನಪತ್ರ ಬರೆಯಿಸಿ ಎರಡೆರೆಡು ಸಾರಿ ಓದಿದಮೇಲೆ ಶುರುವಿಟ್ಟುಕೊಳ್ಳುತ್ತದೆ ತಾಪತ್ರಯ..! ಯಾರ ಹೆಸರುಗಳನ್ನು ಹಾಕಿಸುವುದು. ಸುಖಾಗಮನ ಬಯಸುವವರು, ಸ್ವಾಗತ ಬಯಸುವವರು, ಹಿತೈಷಿಗಳು, ಬಂಧುಮಿತ್ರರ ಊರುಗಳ ಹೆಸರು ಇತ್ಯಾದಿ ಪಟ್ಟಿ ಮಾಡಿ ಕೂಲಂಕಷವಾಗಿ ಪರಿಶೀಲಿಸಿ ಲಗ್ನಪತ್ರಿಕೆ ಛಾಪಿಸಿದ್ದಾಯ್ತು. ಯಾರು-ಯಾರಿಗೆ ವಿತರಿಸಬೇಕೆಂಬುದು ಪಟ್ಟಿ ಸಿದ್ಧಪಡಿಸುವುದು, ಅಯ್ಯೋ..! ಲಗ್ನಪತ್ರಿಕೆ ಕಟ್ಟಿಸುವ ದಿನ ಬಂದೇ ಬಿಟ್ಟಿತ್ತು, ಶುರುವಾಗುತ್ತೆ ನೋಡಿ ಕೆಮ್ಮು, ನೆಗಡಿ, ಶೀತ. ಹಿರಿಸೊಸೆ ನಮ್ಮ ಅಪ್ಪನ ಹೆಸರು ಹಾಕಿಸಿಲ್ಲ ಅಂತಾಳೆ, ಕಿರಿ ಸೊಸೆ ನಮ್ಮ ತವರಿನ ಹೆಸರು ಹಾಕಿಸಿಲ್ಲ ಅಂತಾ ವರಾತಾ ತೆಗೆದಿದ್ದಾಳೆ. ಹೀಗೆ ಮರೆತು ಹೋದ ಸಂಬಂಧಗಳು ಕುರಿತಾಗಿ ಪೇಚಿಗೆ ಸಿಲುಕಿ ಒದ್ದಾಡುವ ಹಿಂಸೆ ನಮ್ಮ ಶತ್ರುಗಳಿಗೂ ಬೇಡವೆನಿಸುತ್ತದೆ. ಮದುವೆ ಆಮಂತ್ರಣ ಅಷ್ಟೇ ಅಲ್ಲದೇ ಗೃಹಪ್ರವೇಶ, ಸಾರ್ವಜನಿಕ ಕಾರ್ಯಕ್ರಮಗಳ ಪತ್ರಿಕೆ ಛಾಪಿಸುವಲ್ಲಿಯೂ ಇದೇ ರೀತಿಯ ತಾಪತ್ರಯಗಳನ್ನು ಕಾಣಬಹುದಾಗಿದೆ. ಅಂತೂ ಇಂತೂ ಎಲ್ಲ ಪತ್ರಿಕೆಗಳನ್ನು ಬಂಧು ಬಳಗಕ್ಕೆ ತಲುಪಿಸುವಲ್ಲಿಗೆ ನಿಟ್ಟುಸಿರು ಬಿಡುವಂತಾಗಿರುತ್ತದೆ.
ಈ ಹಿಂದೆ ಹಳ್ಳಿಗಳಲ್ಲಿ ಲಗ್ನಪತ್ರಿಕೆ ಬರೆಯುವ ಮತ್ತು ಓದುವ ಒಂದು ಕ್ರಮವಿತ್ತು. ಮನೆಗೆ ಬಂದ ಲಗ್ನಪತ್ರಿಕೆ ಯನ್ನು ಯಜಮಾನನಾದವನು ತನ್ನ ಮನೆಯಲ್ಲಿನ ಶಾಲೆಗೆ ಸೇರಿದ ಹಿರಿ ಮತ್ತು ಕಿರಿಯ ಮಕ್ಕಳು ಅಥವಾ ಮೊಮ್ಮಕ್ಕಳಿಂದ ಓದಿಸಿ, ಅದರ ಆಧಾರದಲ್ಲಿಯೇ ಅವರುಗಳ ಬುದ್ಧಿಮತ್ತೆಯನ್ನು ಪರೀಕ್ಷಿಸುತ್ತಿದ್ದದ್ದುಂಟು. ಸರಿಯಾಗಿ ಓದದೇ ಅಪ್ಪನ ಕೈಯಲ್ಲಿ ಪೆಟ್ಟು ತಿಂದಿದ್ದ ನೆನಪು ಇನ್ನೂ ಹಸಿಹಸಿಯಾಗಿ ಉಳಿದಿದೆ. ಕನ್ಯೆಯ ಹೆಸರಿನ ಮುಂದಿನ ಒಕ್ಕಣೆ ಹೀಗಿರುತ್ತಿತ್ತು ಚಿ.ಸೌ.ಹ.ಕುಂ.ಶೋ ಇಂಥ ಕನ್ಯಾರತ್ನವನ್ನು ಎಂದಿರುವಲ್ಲಿ ಸಾಮಾನ್ಯವಾಗಿ ನಾವು ಎಡವುತ್ತಿದ್ದದ್ದು. ಒಂದು ಪೆಟ್ಟು ನೀಡಿ – ‘ಚಿರಂಜೀವಿ ಸೌಭಾಗ್ಯವತಿ ಹರಿದ್ರಾ ಕುಂಕುಮ ಶೋಭಿತೆ’ ಎಂದು ಅಪ್ಪ ಬಿಡಿಸಿ ಹೇಳಿದ ಮೇಲೆಯೇ ನಮಗರ್ಥವಾಗಿದ್ದು. ಹರಿದ್ರವೋ ದರಿದ್ರವೋ ನಮಗಂತೂ ಪೆಟ್ಟು ತಿನ್ನುವುದು ಮಾಮೂಲಾಗಿತ್ತು. ಅಂತೂ ಅಪ್ಪನ ಈ ಪರೀಕ್ಷೆಯಲ್ಲಿ ನಾವು ಗಾಂಧಿ ಮಾರ್ಕ್ಸ್ ಪಡೆದು ಪಾಸಾದದ್ದೇ ನಮ್ಮಯ ಹೆಚ್ಚುಗಾರಿಕೆ ಎಂದು ಬೀಗುತ್ತಿದ್ದೆವು. ಅಂದೆಲ್ಲ ಅಚ್ಚಾಗುತ್ತಿದ್ದ ಎಲ್ಲ ಲಗ್ನಪತ್ರಿಕೆಗಳ ಮುಖಪುಟಗಳ ಮೇಲೆ ಸಾಮಾನ್ಯವಾಗಿ ದೊಡ್ಡಗಾತ್ರದಲ್ಲಿ ಪಾರ್ವತಿ ಮತ್ತು ಪರಮೇಶ್ವರರ ಚಿತ್ರ, ಯಾವುದೋ ಒಂದು ಮೂಲೆಯಲ್ಲಿ ಪ್ರಥಮ ಪೂಜೆ ವಂದಿತ ವಿಘ್ನವಿನಾಶಕನ ಚಿತ್ರ ಸಿಟ್ಟಾಗದಿರಲೆಂದು ಮತ್ತು ಒಳಪುಟದ ಮೇಲೆ ಕವಿರತ್ನ ಕಾಳಿದಾಸ ವಿರಚಿತ ಶ್ಲೋಕ :
“ಕಲ್ಯಾಣ ಮಂಟಪರೂಢೌ, ಪಾರ್ವತಿ ಪರಮೇಶ್ವರರೌ |
ದಿವ್ಯಾಲಂಕಾರಣೋಪೇತೌ ರಕ್ಷಿತಾಂಚ ವಧುವರರೌ ||
ಎಂಬುದರ ಜೊತೆಗೆ ಮನೆ ದೇವರು ಮತ್ತು ಗುರುಗಳ ಹೆಸರು ಇರುವುದು ಸಾಮಾನ್ಯ ಸಂಗತಿಯಾಗಿತ್ತು. ತದ ನಂತರದ ಬೆಳವಣಿಗೆಗಳೆಂದರೆ : ಅಂದಿನ ಘನ ಸರಕಾರವು ಜನಸಂಖ್ಯಾಸ್ಫೋಟ ತಡೆಗಟ್ಟುವಲ್ಲಿನ ಮಹಾತ್ವಾಕಾಂಕ್ಷಿ ಕುಟುಂಬ ಕಲ್ಯಾಣ ಯೋಜನೆಯ ಘೋಷಣೆಗಳ ಜೊತೆಗೆ ಇತರೆ ಅಂಶಗಳನ್ನು ನಾವು ಲಗ್ನಪತ್ರಿಕೆಗಳಲ್ಲಿ ಕಾಣುವಂತಾಯ್ತು : ಆರತಿಗೊಬ್ಬ ಮಗಳು, ಕಿರ್ತಿಗೊಬ್ಬ ಮಗ ; ಹೆಣ್ಣಾಗಲಿ ಗಂಡಾಗಲಿ ಮನೆಗೊಂದು ಮಗುವಿರಲಿ ; ಊರಿಗೊಂದು ವನ, ಮನೆಗೊಂದು ಮರ ಮತ್ತು ಮಗು ; ಕಾಡು ಉಳಿಸಿ, ನಾಡು ಬೆಳಸಿ ; ನೀರು ಉಳಿಸಿ ನಿಮ್ಮ ಮುಂದಿನ ಪೀಳಿಗೆಗಾಗಿ ಎಂದು ಅಚ್ಚಾಕಿಸಿದ್ದವರು ನೀರು ಉಳಿಸಿದ್ದು, ಕಾಡು ಬೆಳಸಿದ್ದು ನಾ ಕಾಣೆ..! ಆದರೆ ತಮ್ಮ ವಂಶವನ್ನು ನಿಸ್ಸಂದೇಹವಾಗಿ ಬೆಳಸಿದರೆನ್ನಬಹುದು. ಪ್ಲಾಸ್ಟಿಕ್ ಉಪಯೋಗವನ್ನು ತ್ಯಜಿಸಿ ಎಂದವರೇ ತಮ್ಮ ಮದುವೆಯಲ್ಲಿ ಯತೇಚ್ಚವಾಗಿ ಪ್ಲಾಸ್ಟಿಕ್ ವಾಟರ್ ಗ್ಲಾಸ್ಗಳನ್ನು ಬಳಸಿ ಬಿಸಾಕಿದ್ದು ವಿಪರ್ಯಾಸ..! ಊಟಕ್ಕೆ ಮುನ್ನ ರೈತರನ್ನು ಸ್ಮರಿಸಿ, ಮಲಗುವ ಮುನ್ನ ಸೈನಿಕರಿಗೆ ನಮಿಸಿ..! ಎಂದವರು ಗಂಡು-ಹೆಣ್ಣು ಜೊತೆಯಾಗಿ ಮದುವೆ ಊಟ ಸವಿಯುವಾಗ ಫೋಟೊಗ್ರಾಫರ್ ನ ಅಣತಿಯಂತೆ ಫೋಸು ಕೊಡುವಾಗ ರೈತ ನೆನಪಿಗೆ ಬರದಿರುವುದು ದುಸ್ಥರ. ಮದುವೆಯಾಗಿ ಮಧುಚಂದ್ರದ ಕನಸು ಕಾಣುತ್ತಿರುವವರು ಮಲಗುವ ಮುನ್ನ ಸೈನಿಕರನ್ನು ನೆನೆಯುವುದು, ನಮಿಸುವುದು ಅಂದರೆ ಅಸಂಗತ ವಿಷಯವೇ ಸರಿ. ಮೊನ್ನೆ ತಾನೆ ನನಗೆ ತಲುಪಿದ ಮದುವೆಯ ಆಮಂತ್ರಣ ಪತ್ರಿಕೆಯಲ್ಲಿ : ‘ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ’ ಎಂಬ ಒಕ್ಕಣೆ ನೋಡಿ ಅವರುಗಳ ಸಾಮಾಜಿಕ ಕಳಕಳಿಯನ್ನು ಕಂಡು ಹೆಮ್ಮೆ ಎನಿಸಿತು. ನಾನೂ ಮಾಸ್ಕ್ ಧರಿಸಿಯೇ ಮದುವೆಗೆ ಹೋದೆ. ಸೇರಿರುವ ಅಷ್ಟು ಜನರಲ್ಲಿ ಬೆರಳೆಣಿಕೆ ಜನರು ಮಾತ್ರ ಮಾಸ್ಕ್ ಧರಿಸಿದ್ದರು ಅದರಲ್ಲಿ ನಾನೂ ಒಬ್ಬಳು. ಮಾಸ್ಕ್ ..? ಸ್ಯಾನಿಟೈಸರ್..? ಸಾಮಾಜಿಕ ಅಂತರ ಹಾಗಂದರೇನು ಎಂದು ಕೇಳುವ ವಾತಾವರಣ ಕಂಡು ನಾನೂ ಮಾಸ್ಕ್ ತೆಗೆದು ಬ್ಯಾಗಿನಲ್ಲಿರಿಸಿ ಫೋಟೊಗೆ ಫೋಸು ನೀಡಿದೆ.
ಇಂದಿನ ಹೊಸ ತಲೆಮಾರಿನ ಜನತೆಯಲ್ಲಿ ಪ್ರೀ ವೆಡ್ಡಿಂಗ್ ಸಂಸ್ಕೃತಿ ‘Pre Wedding Culture or Ceremony’ ಅಂದರೆ : ಮದುವೆಗೂ ಮುನ್ನ ಹುಡುಗ-ಹುಡುಗಿ ಹೊರಗಡೆ ದೇವಸ್ಥಾನ, ಉದ್ಯಾನವನ, ಎಲ್ಲೆಂದರಲ್ಲಿ ಸುತ್ತಾಡಿ, ವಿಡೀಯೋ ಚಿತ್ರೀಕರಣ ಮಾಡಿ, ಸಾಮಾಜಿಕ ಜಾಲತಾಣಗಳಾದ : ವ್ಯಾಟ್ಸ್ ಪ್, ಫೇಸ್ ಬುಕ್, ಟೆಲಿಗ್ರಾಂ ಇತ್ಯಾದಿಗಳಲ್ಲಿ ಗಳಲ್ಲಿ ಹರಿ ಬಿಟ್ಟು ಮದುವೆಗೆ ಬರುವಂತೆ ಕೋರುವುದು ಇಂದು ಚಾಲತಿಗೆ ಬಂದಿದ್ದು, ಇಂದು ಹೆಚ್ಚು ಜನಪ್ರಿಯತೆಯನ್ನು ಪಡೆದಿದೆ ಎಂದು ಹೇಳಬಹುದು.
ನನ್ನ ಈ ಲಲಿತ ಪ್ರಬಂಧದ ಮುಖ್ಯ ಆಶಯದ ನೆಲೆಯಲ್ಲಿ ಹೇಳುವುದಾದರೆ.., ನಾವು ಅಪರಿಚಿತರ ಭೇಟಿಯ ಸಂದರ್ಭದಲ್ಲಿ ಭೇಟಿಯ ನಂತರ ಪರಿಚಿತರೇ ಆಗುತ್ತಾರೆ ಆ ಮಾತು ಬೇರೆ. ಹೆಸರು, ಊರು-ಕೇರಿ, ಏನ ಕೆಲಸ ಮಾಡಿಕೊಂಡಿದ್ದಾರೆ, ಮಕ್ಕಳು-ಮರಿ ಅಂತ ಲೋಕಾಭಿರಾಮವಾಗಿ ಉಭಯಕುಶಲೋಪರಿ ಮಾತಾಡಿಕೊಳ್ಳುತ್ತೇವೆ ವಿನಃ ; ರೀತಿ-ನೀತಿ ಮರೆತು ಅಪ್ಪಿ-ತಪ್ಪಿಯೂ ನಿಮ್ಮ ಜಾತಿ ಯಾವುದೆಂದು ಕೇಳುವುದಿಲ್ಲ. ಕೇಳಬಾರದು, ಹಾಗೆ ಕೇಳುವುದು ಅಸಭ್ಯತೆ, ಅನಾಗರೀಕತೆ ಎನಿಸುತ್ತದೆ. ಪರಿಸ್ಥಿತಿ ಈಗ ಬದಲಾಗಿದೆ ಜಾತಿ-ಗೀತಿ ಕೇಳಿ ಪೇಚಿಗೆ ಸಿಲುಕುವ ಗೊಡವೆ ಬೇಡ, ಸುತ್ತ-ಮುತ್ತ ಸೂಕ್ಷ್ಮವಾಗಿ ಅವಲೋಕಿಸಿದರೆ ಸಾಕು. ಬಂದಿರುವ ಜನರಲ್ಲಿ ತಮ್ಮ ಸಾಮರ್ಥ್ಯಾನುಸಾರ ಬೈಕ್, ಸ್ಕೂಟಿ, ಕಾರುಗಳಲ್ಲಿ ಬಂದಿರುತ್ತಾರೆ. ಇವುಗಳ ಹಿಂದೆ-ಮುಂದೆ, ನಂಬರ್ ಪ್ಲೇಟ್ ಗಳನ್ನು ಗಮನಿಸಿದರೆ ಯಾರು ಎಂಬೆಲ್ಲ ಮಾಹಿತಿ ತಿಳಿದು ಬಿಡುತ್ತದೆ. ಇದನ್ನು ಇನ್ನಷ್ಟು ವಿಸ್ತರಿಸುವ ‘Elaborate’ ತಪ್ಪು ಮಾಡುವುದಿಲ್ಲ. ಈ ಅಂಶ ಲಗ್ನಪತ್ರಿಕೆಗಳಿಗೂ ಅನ್ವಯವಾಗುವಂತದ್ದು. ಪತ್ರಿಕೆಯ ಮೇಲೆ ಯಾವ ದೇವರು, ಸಾಧು-ಸಂತರ, ದಾರ್ಶನಿಕರ, ಚಿಂತಕರ ಚಿತ್ರಗಳು ಅಚ್ಚಾಗಿವೆ ಎನ್ನುವುದರ ಮೂಲಕವೇ ಅವರು ಯಾರು..? ಏನು..? ಎತ್ತ..? ಎಂದು ತಿಳಿಯಬಹುದಾಗಿದೆ. ಹಾಗೆ ತಿಳಿಯುವುದು ಸಣ್ಣತನವೆನಿಸುತ್ತದೆ ನಿಜ. ಆದರೂ ಅದು ಸಂಕೇತಿಸುವುದು ಏನನ್ನು..? ಎಂಬುದು ಪ್ರಶ್ನೆಯಾಗಿಯೇ ಉಳಿದು ಬಿಡುತ್ತದೆ. ಅದು ಅವರವರ ಬಕುತಿ-ಭಾವಕ್ಕೆ ಬಿಟ್ಟ ವಿಚಾರ. ಆದರೂ ಗೊತ್ತಿದ್ದು-ಗೊತ್ತಿಲ್ಲದೆಯೋ ಈ ಕ್ರಮದ ಅನುಸರಣೆ ಸಾಗಿದೆ. ಈ ವರೆಗೆ ಕ್ರಮತಪ್ಪಿ ನಡೆದವರನ್ನು ನಾ ಕಾಣೆ. ಇಂಥಹ ಆದರ್ಶಗಳಿಗೆ ಬಲಿಯಾದ ನನ್ನ ಗೆಳತಿಯೊಬ್ಬಳು ತನ್ನ ಲಗ್ನ ಪತ್ರಿಕೆಯಲ್ಲಿ ಅಚ್ಚಾಕಿಸಿದ ಇಬ್ಬದಿತನದ ರೀತಿ-ನೀತಿ ನನಗೆ ಅಚ್ಚರಿಯನ್ನುಂಟು ಮಾಡಿತ್ತು, ಆ ಪತ್ರದಲ್ಲಿ ಇಂತಿತ್ತು :
‘ಎಮ್ಮವರು ಬೆಸಗೊಂಡರೆ ಶುಭಲಗ್ನವೆಂದೆನ್ನಿರಯ್ಯ
ರಾಶಿ ಕೂಟ ಋಣ ಸಂಬಂಧ ಉಂಟೆಂದು ಹೇಳಿರಯ್ಯ
ನಾಳಿನ ದಿನಕಿಂದಿನ ದಿನ ಲೇಸೆಂದು ಹೇಳಿರಯ್ಯ
ಚಂದ್ರಬಲ ತಾರಾಬಲ ಉಂಟೆಂದು ಹೇಳಿರಯ್ಯ
ಕೂಡಲಸಂಗಮದೇವನ ಪೂಜಿಸಿದ ಫಲ ನಿಮ್ಮದಯ್ಯ’.
–ಅಣ್ಣ ಬಸವಣ್ಣ
ಬಸವಣ್ಣನಿಂದ ಸ್ಥಾಪಿತವಾಯಿತು ಎನ್ನುವ ಲಿಂಗಾಯತ ಧರ್ಮದ ದೃಷ್ಟಿಯಲ್ಲಿ ಕಾಲದ ಬಗ್ಗೆ ಶುಭ–ಅಶುಭ ಎಂಬುದಿಲ್ಲ. ಸೃಷ್ಟಿಕರ್ತನನ್ನು ಸ್ಮರಿಸಿಕೊಂಡು ಮಾಡಿದುದೆಲ್ಲ ಶುಭಗಳಿಗೆಯೇ. ಆದ್ದರಿಂದ ನಿಜವಾದ ಲಿಂಗಾಯತನು ರಾಹು ಕಾಲ – ಗುಳಿಕ ಕಾಲ – ಯಮ ಕಂಟಕ ಕಾಲ ಎಂದು ಭೇದವೆಣಿಸದೆ ಗುರು ಬಸವಣ್ಣ – ಲಿಂಗದೇವ – ಜಂಗಮರ ದಿವ್ಯ ಸ್ಮರಣೆ ಮಾಡಿ ಕೆಲಸಗಳನ್ನು ಮಾಡಬೇಕು. ಎಂಬ ತಾತ್ಪರ್ಯದ ಈ ವಚನ ಅಚ್ಚಾಗಿತ್ತು. “ಎಮ್ಮವರು ಬೆಸಗೊಂಡರೆ ಶುಭಲಗ್ನವೆಂದೆನ್ನಿರಯ್ಯ” ಅಂದರೆ ನಮ್ಮವರು ಒಂದೆಡೆ ಸೇರಿಕೊಂಡರೆ ಅದೆ ನಮಗೆ ಒಳ್ಳೆಯ ಗಳಿಗೆ ಅಥವ ಸಮಯವೆಂದು. ಆಗ ಕೆಲಸ ನಿರ್ವಹಿಸಬಹುದು ಎಂದು. ಅಂತೆಯೇ ಎಲ್ಲ ಆಪ್ತೇಷ್ಟರು ಬಂದಾಯ್ತು ವರನು ಕನ್ಯೆಯ ಕತ್ತಿಗೆ ತಾಳಿ ಕಟ್ಟಲು ಮೀನಾ-ಮೇಷ ಎಣಿಸುತ್ತಿದ್ದಾನೆ. ಅವನು ಮಿಥುನ ಲಗ್ನದ ಶುಭಮುಹೂರ್ತಕ್ಕಾಗಿ ಕಾಯುತ್ತಿದ್ದಾನೆ. ಏನಿದರರ್ಥ..? ನನಗೆ ತಿಳಿಯಲಿಲ್ಲ.
ಅದೇ ಲಗ್ನ ಪತ್ರಿಕೆಯಲ್ಲಿ ಮುಂದುವರೆದು ಅಚ್ಚಾಗಿತ್ತು ಅದು ಹೀಗಿದೆ : ಸ್ವಸ್ತಿ ಶ್ರೀ ವಿಜಯಾಭ್ಯುದಯ ಶ್ರೀ ಮನೃಪ ಶಾಲಿವಾಹನ ಶಕೆ 1942 ನೆ ಶಾರ್ವರಿನಾಮ ಸಂವತ್ಸರದ ವೈಶಾಖ ಬಹುಳ – 07 ದಿನಾಂಕ : 28-11-2020 ಶನಿವಾರ ರಂದು ಶ್ರೀ ಗುರುದೇವತಾ ಕಾರ್ಯ ಹಾಗೂ ಇದೇ ವೈಶಾಖ ಬಹುಳ – 08 ದಿನಾಂಕ : 29-11-2020 ರವಿವಾರ ಬೆಳಗ್ಗೆ 10-45 ಕ್ಕೆ ಸಲ್ಲುವ ಮಿಥುನ ಲಗ್ನದ ಶುಭ ಮುಹೂರ್ತದಲ್ಲಿ ಮಾಂಗಲ್ಯಧಾರಣ ಅಥವ ಅಕ್ಷತಾ ರೋಪಣವು.
ಇದನ್ನು ನಾನು ಅಷ್ಟಾಗಿ ಗಮನಿಸದಿದ್ದದ್ದು ನನ್ನ ತಪ್ಪಾಗಿತ್ತು. ಅಂತೂ ಸಮಯಕ್ಕೆ ಸರಿಯಾಗಿ ಅಂದರೆ ಕರಾರುವಕ್ಕಾಗಿ ಮಿಥುನ ಲಗ್ನದ ಶುಭ ಮುಹೂರ್ತದಲ್ಲಿ ತಾಳಿ ಕಟ್ಟಿದ. ಎಲ್ಲರೊಳಗೆ ಒಂದಾಗು ಮಂಕುತಿಮ್ಮ ಎನ್ನುವಂತೆ ಸವಿಭೋಜನವ ಸವಿದು ಅಲ್ಲಿಂದ ಕಾಲ್ಕಿತ್ತೆನು. ಈ ಘಟನೆಯನ್ನು ನನ್ನ ಅಪ್ಪನ ಮುಂದೆ ಹೇಳೋಣವೆಂದರೆ.., ತಪ್ಪಾಗಿ ಲಗ್ನ ಪತ್ರಿಕೆಯನ್ನು ಓದಿಕೊಂಡಿದ್ದಕ್ಕೆ ಪೆಟ್ಟು ನೀಡುತ್ತಾನೆ ಎನ್ನುವ ಭಯ ಕಾಡುತ್ತಿದೆ, ಅಪ್ಪನ ಎದಿರು ಧೈರ್ಯವಾಗಿ ಮಾತನಾಡಲಾಗದೆ ಅಸಹಾಯಕತೆಯಿಂದ ಸಹೃದಯಿ ಓದುಗರಾದ ನಿಮ್ಮ ಮುಂದಿಟ್ಟು “ಹಾಲಲ್ಲಾದರೂ ಹಾಕು, ನೀರಲ್ಲಾದರೂ ಹಾಕು ರಾಘವೇಂದ್ರ, ಹಾಲಲ್ಲಿ ಕೆನೆಯಾಗಿ – ನೀರಲ್ಲಿ ಮೀನಾಗಿ ಹಾಯಾಗಿ ಇರುವೆ” ಎಂದು ರಾಘವೇಂದ್ರ ಯತಿಗಳಲ್ಲಿ ಮೊರೆಯಿಟ್ಟಿದ್ದೇನೆ.
(ಲೇಖಕರು – ಮುಖ್ಯಸ್ಥರು, ಸಹಾಯಕ ಪ್ರಾಧ್ಯಾಪಕರು
ಕನ್ನಡ ಅಧ್ಯಯನ ವಿಭಾಗ
ಸರಕಾರಿ ಪ್ರಥಮ ದರ್ಜೆ ಕಾಲೇಜು ತಾವರಗೇರಾ,
ಕುಷ್ಟಗಿ ತಾಲ್ಲೂಕು, ಕೊಪ್ಪಳ ಜಿಲ್ಲಾ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ