Latest

ಜ್ಯೋತಿಗಿಂತ ಪ್ರೀತಿ ದೊಡ್ಡಾಕಿ !

ಪ್ರೊ. ಜಿ. ಎಚ್. ಹನ್ನೆರಡುಮಠ

ವಿಶ್ವದ ಮಹಾನ್ ಅಚ್ಚರಿ ಅಂದರೆ…. ಒಬ್ಬನ ಮುಖದಂತೆ ಇನ್ನೊಬ್ಬನ ಮುಖವಿಲ್ಲ , ಒಬ್ಬನ ಸ್ವಭಾವದಂತೆ ಇನ್ನೊಬ್ಬನ ಸ್ವಭಾವವಿಲ್ಲ . ರಾಘವಾಂಕನ “ಹರಿಶ್ಚಂದ್ರ ಕಾವ್ಯ” ದಲ್ಲಿ…. “ಬಂದ ಕಾಲ ಗುಣವೋ ನಿಂದ ನೆಲದ ಗುಣವೋ” ಎಂದು ವಿಶ್ವಾಮಿತ್ರನ ಆಶ್ರಮಕ್ಕೆ ದಾರಿತಪ್ಪಿ ಬಂದ ಹರಿಶ್ಚಂದ್ರ ಪರಿತಪಿಸುತ್ತಾನೆ. ಅಲ್ಲಿಯ ಪ್ರಕೃತಿ ಪರಿಸರದಲ್ಲಿ ವಿಕೃತಿ ಅಲೆಗಳು ಹರಿಶ್ಚಂದ್ರನ ಮಾನಸಿಕ ಪಟಲದ ಮೇಲೆ ತರಂಗಗಳನ್ನು ಹರಡಿದ್ದು ತೋರುತ್ತವೆ. ಅಲ್ಲದೆ ; ಕುಲ-ಹೊಲೆಗಳು ಜಾತಿಮೂಲವಲ್ಲ, ಗುಣಮೂಲ…. ಎಂದು ರಾಘವಾಂಕ ಇದೇ ಹರಿಶ್ಚಂದ್ರ ಕಾವ್ಯದಲ್ಲಿ ಘಂಟಾಘೋಷವಾಗಿ ಸಾರಿದ್ದಾನೆ. ಶರಣರುಕೂಡ “ಮನದ ಕೋಪ ತನ್ನ ಅರುಹಿನ ಕೇಡು” ಎಂದೂ , ಅಲ್ಲದೆ ; “ಹೊಲಬು ತಪ್ಪಿದವನೇ ಹೊಲೆಯ”…. ಅಂದರೆ ಸತ್ಯದ ದಾರಿ ಬಿಟ್ಟವನೇ ಕೀಳು ಎಂದು ವಚನಿಸಿದ್ದಾರೆ.
ಇಂದಿಗೂ ಕೂಡ ಪರಸ್ವರ ಮದುವೆ ಸಂಬಂಧಗಳನ್ನು ಏರ್ಪಡಿಸುವಲ್ಲಿ ಉಭಯ ಮನೆತನಗಳ ಗುಣಮೂಲಗಳನ್ನು , ಆಚಾರ ವಿಚಾರಗಳನ್ನು ಅನುಭವಿಗಳಾದ ಹಿರಿಯರು ಕೂಲಂಕುಶವಾಗಿ ಜಾಲಾಡಿಸಿ ನೋಡುತ್ತಾರೆ. ಇಲ್ಲವಾದರೆ…. “ಎತ್ತು ಎರಿಗೆ ಎಳೆದರೆ ಕೋಣ ಕೆರೆಗೆ ಎಳೆಯುತ್ತದೆ” ಅಂತ ಅವರ ಗಟ್ಟಿಯಾದ ತಿಳುವಳಿಕೆ.
ನಮ್ಮ ಮಾನಸಿಕ ಗಗನದಲ್ಲಿ ಸ್ಥಾಯಿಭಾವ ಸಂಚಾರಿಭಾವಗಳೆಂದು ಅಸಂಖ್ಯಾಂತ ಟೊಂಗೆ-ಟಿಸಿಲುಗಳಿರುವದನ್ನು ಭರತಮುನಿ ಬಹುಕಾಲದ ಹಿಂದೆಯೇ ತನ್ನ “ನಾಟ್ಯಶಾಸ್ತ್ರ” ಕೃತಿಯಲ್ಲಿ ವಿವರವಾಗಿ ಲೆಕ್ಕಹಾಕಿ ಹೇಳಿದ್ದಾನೆ. ಕಾಮ- ಕ್ರೋಧ- ಲೋಭ- ಮೋಹ- ಮದ- ಮತ್ಸರಗಳೆಂದು ಮನುಷ್ಯನ ಮಾನಸಿಕ ವಿಭಿನ್ನತೆಗಳನ್ನು ಭಾರತೀಯ ತತ್ವಶಾಸ್ತ್ರ ಪದರು-ಪದರು ಬಿಚ್ಚಿಬಿಡಿಸಿ ಹೇಳಿದೆ. ಇದರೊಂದಿಗೆ ಬರುವ ಅಸಂಖ್ಯಾತ ಸಂಚಾರಿಭಾವಗಳಿಗೆ ಲೆಕ್ಕವೇಇಲ್ಲ. ಸಮುದ್ರದ ಮೇಲಿನ ಅಸಂಖ್ಯ ನೊರೆ ತೊರೆಗಳಂತೆ ನಮ್ಮ ಮಾನಸಿಕ ಪದರುಗಳಲ್ಲಿ ಅಸಂಖ್ಯಾತ ಉಪಭಾವಗಳನ್ನು ಕಾವ್ಯಶಾಸ್ತ್ರದಲ್ಲಿ ವಿಸ್ತೃತವಾಗಿ ಹೇಳಲಾಗಿದೆ. ಆಶ್ರಮದ ಗಿಳಿಯ ಭಾಷೆಯೇ ಬೇರೆಯೆಂದೂ, ಪ್ರಾಣಿಹಿಂಸೆ ಮಾಡುವವರ ಮನೆಯಲ್ಲಿ ಅದೇ ಗಿಳಿಯ ಸಹೋದರ ಗಿಳಿಯ ಭಾಷೆಯೇ ಬೇರೆಯೆಂದು ಪಂಚತಂತ್ರದ ಕಥೆಇದೆ.
ಶ್ರೀ ಅರವಿಂದರು ನಮ್ಮ ಮನಸ್ಸಿನ ಒಳಾಂಗಣಗಳನ್ನು “ಇನರ್ ಕಾನ್‌ಸೆಸ್‌ನೆಸ್”ಎಂದು ಗುರುತಿಸಿ, ಅದರಲ್ಲಿ ಊರ್ಧ್ವಮಾನಸ…. ಅಂದರೆ ಇಲ್ಯೂಮಿನ್ಡ ಮೈಂಡ್….. ಓವರ್ ಮೈಂಡ್…. ಅತೀತ ಮನಸ್ಸು….. ಪ್ರಾಣಮಾನಸ….. ಅಂದರೆ ಸೈಕಿಕ್ ಮೈಂಡ್….. ಲೋವರ್ ಮೈಂಡ್….. ಕೆಳಮನೆ ಮನಸ್ಸು….. ಫಿಜಿಕಲ್ ಮೈಂಡ್…. ಭೌತಮನ….. ಹಾಗೂ ನಿಮ್ನ ಮಾನಸ ಪ್ರಜ್ಞೆ ಇಲ್ಲವೇ ಅಚೇತನ….. ಅಂದರೆ ಅನ್ ಕಾನಸೆಸ್ ಲೆವೆಲ್ ಆಫ್ ಮೈಂಡ….. ಎಂದು ತಮ್ಮ “ಸಿಂಥೆಸಿಸ್ ಆಫ್ ಯೋಗ”….. ಯೋಗಸಮನ್ವಯ….. ಎಂಬ ಮಹಾಗ್ರಂಥದಲ್ಲಿ ವಿವರವಾಗಿ ತಿಳಿಸಿದ್ದಾರೆ. ಇವೆಲ್ಲವುಗಳ ಸಹಜ ಸಂಸ್ಕಾರವೇ ಒಟ್ಟಾರೆಯಾಗಿ ನಮ್ಮ ಸ್ವಭಾವವೆಂದು ಕರೆಯಲ್ಪಡುತ್ತದೆ. ಇಂಥ ಜಡ ಹಾಗೂ ಜಟಿಲ ಸ್ವಭಾವ ಹಾಗೂ ಸಂಸ್ಕಾರಗಳನ್ನು ಕೂಡ ಯೋಗದಿಂದ ಬದಲಿಸಬಹುದೆಂದು ಶ್ರೀ ಅರವಿಂದರು ಹೇಳಿದ್ದಾರೆ. ಅದನ್ನು ಅವರು ಟ್ರಾನ್ಸಫಾರ‍್ಮೇಶನ್ ಎಂದು ಕರೆದರೆ; ಶರಣರು ಅದನ್ನೇ ಆತ್ಮಕಲ್ಯಾಣ ಹಾಗೂ ಲೋಕಕಲ್ಯಾಣ ಎಂದು ಗುರುತಿಸಿದ್ದಾರೆ.
ಕನ್ನಡದ ಕವಿಯಿತ್ರಿ ವಚನಕಾರ್ತಿ ಅಕ್ಕiಹಾದೇವಿ ಕೂಡ …. “ಲೋಕದ ಚೇಷ್ಟೆಗೆ ರವಿ ಬೀಜವಾದಂತೆ ಕರಣಂಗಳ ಚೇಷ್ಟೆಗ ಮನವೇ ಕಾರಣ”…. ಎಂದು ಗಾನಿಸಿದ್ದಾಳೆ. ಅವಳು ಇನ್ನೂ ಸೊಗಸಾಗಿ ಹೇಳುವ ಈ ನುಡಿಮುತ್ತಿನಲ್ಲಿ ಎನಿತೊಂದು ಅರ್ಥಸಂಪತ್ತು ತುಂಬಿದೆ ಅಂತ ಅನುಭವಿಸಿ ನೋಡಿ…..

“ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯಾ ನೀನು
ಮನ ಕರಗದವರಲ್ಲಿ ಪುಷ್ಪವ ನೊಲ್ಲೆಯಯ್ಯಾ ನೀನು
ಹದುಳಿಗರಲ್ಲದವರಲ್ಲಿ ಗಂಧಾಕ್ಷತೆಯ ನೊಲ್ಲೆಯಯ್ಯಾ ನೀನು
ಅರಿವು ಕಣ್ದೆರೆಯದವರಲ್ಲಿ ಆರತಿಯ ನೊಲ್ಲೆಯಯ್ಯಾ ನೀನು
ಭಾವ ಶುದ್ದ ಇಲ್ಲದವರಲ್ಲಿ ಧೂಪವನೊಲ್ಲೆಯಯ್ಯಾ ನೀನು
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯಾ ನೀನು
ತ್ರಿಕರಣ ಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯಾ ನೀನು
ಹೃದಯ ಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯಾ ನೀನು
ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ ಚನ್ನಮಲ್ಲಿಕಾರ್ಜುನಾ !! ”

ನಮ್ಮ ಮನಸ್ಸಿನ ಸಮಗ್ರ ಸಂಸ್ಕಾರವೇ ಒಟ್ಟಾರೆಯಾಗಿ ನಮ್ಮ ಸ್ವಭಾವ. ಈ ಮಾನಸಿಕ ವಿಭಿನ್ನತೆಗಳನ್ನೆ ಮಾನದಂಡವಾಗಿ ಇರಿಸಿಕೊಂಡು ಜನಸಾಮಾನ್ಯರು ಕೂಡ …… ಪಾಪಿ, ಕೋಪಿ, ತಾಪಿ, ಕ್ರೋಧಿ, ಅಹಂಕಾರಿ, ದ್ವೇಷಿ, ಕಾಮಿ, ಆಲಸಿ, ಆಸಿಬುರುಕ, ಸಜ್ಜನ, ಸತ್ಯವಂತ, ಸಂಯಮಿ, ವಿನಯವಂತ, ಮುಗ್ಧ, ಮಧುರ, ಇಲ್ಲವೆ ಮುಗ್ಗುಲಗೇಡಿ, ಮಾನಗೇಡಿ, ಯಡ್ಡ, ಮಡ್ಡ, ಕಗ್ಗ…. ಎಂಬ ಸಾವಿರಾರು ಬಳಕೆಮಾತಿನ ಸಾಮಾನ್ಯ ಪದಗಳನ್ನು ಆಡುಮಾತಿನಲ್ಲಿ ಬಳಸುತ್ತಾರೆ.
ಜನಪದ ನುಡಿಗಳಲ್ಲಿ ಕೂಡ ಸ್ವಭಾವ-ಸಂಸ್ಕಾರಗಳ ಕುರಿತಾಗಿ ಎಷ್ಟೊಂದು ಸೂಕ್ತಿಗಳಿವೆ. “ಮನಸಿನಂತೆ ಮಾದೇವಾ”….. “ಮನಸಿದ್ದಲ್ಲಿ ಮಾರ್ಗವುಂಟು”….. “ಒಳ್ಳೆಯವರ ಗೆಳೆತನ ಕಲ್ಲು ಸಕ್ಕರಿ ಹಾಂಗ….. ಕುಲ್ಲರ ಗೆಳೆತನ ಮಾಡಿದರ ನನ ತಮ್ಮ ಸಲ್ಲದ ಮಾತು ಬರತಾವ…” ಎಂದು ಗಮನಿಸಬಹುದು.
ಅಲ್ಲದೆ; “ಗುಣಹೀನರ ಗೆಳೆತನ ಹಣವ ಕೊಟ್ಟರೂ ಬೇಡ…. ಗುಣ ದೊಡ್ಡದೊಂದು ಸಮುದರ ಸಂಗಾತ…. ಮುಣುಗಿ ಹೋದರು ಮೋಕ್ಷಾವು….”
, “ಇದ್ದರ ಇರಬೇಕು ಬುದ್ಧಿವಂತರ ನೆರೆಯು…. ಬುದ್ಧಿಗೇಡಿ ಕುಲಗೇಡಿ ನೆರೆಯಿದ್ದು ಇದ್ದಷ್ಟು ಬುದ್ಧಿ ಕಳಕೊಂಡ…”
-“ಮಂದಿ ಮಕ್ಕಳೊಳಗ ಚಂದಾಗ್ಹೊಂದಿರಬೇಕ…. ನಂದೀಯ ಶಿವನ ದಯದಿಂದ ಹೋಗಾಗ ಮಂದಿ ಬಾಯಾಗ ಇರಬೇಕ….”
-“ಬಾತೀಗಿ ಬಾರದ್ದು ಯಾತಕ ನೆನೆಯಲಿ…. ಜಾತಮಲ್ಲಿಗೀ ನನ ಮನವೆ ಬಾಯಾನ ಜಾಕೇರಿ ಮಾಡಿ ಉಗುಳೇನ….” ! “ಜಾಕಣಿ” ಅಂತ ಹಿಂದೆ ಹಲ್ಲುತಿಕ್ಕುವ ಹಲ್ಲಿಟ್ಟು ಇತ್ತು. ಇದರ ಗಂಜಳದಂತೆ ವ್ಯರ್ಥಮಾತು.
ಇದಲ್ಲದೇ ಇಲ್ಲಿ ಕೇಳಿ…. “ಎಲ್ಲ್ಯಾರ ಇರಲೆವ್ವ ಹುಲ್ಲಾಗಿ ಬೆಳೆಯಲಿ…. ನೆಲ್ಲಿ ಬಡ್ಯಾಗಿ ಚಿಗಿಯಲಿ ಕಂದಯ್ಯ….. ಜಯವಂತನಾಗಿ ಬೆಳೆಯಲಿ…..”
-“ಆಚಾರಕ್ಕರಸಾಗು ನೀತಿಗೆ ಪ್ರಭುವಾಗು…. ಮಾತಿನಲಿ ಚೂಡಾಮಣಿಯಾಗು….ನನ ಕಂದಾ ಜ್ಯೋತಿಯೇ ಆಗು ಜಗಕ್ಕೆಲ್ಲ…”…. ಹೀಗೆ ಜಾತಿಗಿಂತ ಜ್ಯೋತಿ ದೊಡ್ಡದು…. ಜ್ಯೋತಿಗಿಂತ ಪ್ರೀತಿ ದೊಡ್ಡದು…. ಎಂದು ಸ್ವಭಾವ- ಸಂಸ್ಕಾರದ ಅಮರ ಸಂದೇಶ ಕೊಟ್ಟವರೇ ನಮ್ಮ ಹಿರಿಯರಲ್ಲವೇ ?

 

(ಪ್ರೊ. ಜಿ. ಎಚ್. ಹನ್ನೆರಡುಮಠ
# ೫ : “ಮಾವು ಮಲ್ಲಿಗೆ” : ಯೋಗಭವನ : ಇಂದ್ರಪ್ರಸ್ಥ : ಬನ್ನೇರುಘಟ್ಟದ ದಾರಿ : ಗೊಟ್ಟಿಗೆರೆ ಅಂಚೆ
ಬೆಂಗಳೂರ- ೫೬೦೦೮೩ /ದೂರವಾಣಿ- ೯೯೪೫೭ ೦೧೧೦೮)

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button