*ಗ್ರಾಪಂಗಳಲ್ಲಿ ವಿಶೇಷ ಜಾಬ್ ಕಾರ್ಡ್ ವಿತರಣೆ ಅಭಿಯಾನ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲೆಯಲ್ಲಿರುವ ಅರ್ಹ ವಿಕಲಚೇತನರಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ವಿಶೇಷ ಜಾಬ್ಕಾರ್ಡ್ ವಿತರಣಾ ಅಭಿಯಾನವನ್ನು ದಿನಾಂಕ: 01-04-2025 ರಿಂದ 15-04-2025 ರವರೆಗೆ 15 ದಿನಗಳಕಾಲ ಹಮ್ಮಿಕೊಳ್ಳಲಾಗಿದ್ದು, ಈ ಅಭಿಯಾನದಲ್ಲಿ ಅರ್ಹರು ವಿಶೇಷ ಜಾಬ ಕಾರ್ಡ್ ಪಡೆಯಬಹುದು ಎಂದು ಜಿಪಂ ಸಿಇಒ ರಾಹುಲ್ ಶಿಂಧೆ ಅವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.
1995ರ ಕಾಯ್ದೆ (1996 ರ 1) ರಂತೆ ಸಮಾನ ಅವಕಾಶ, ಹಕ್ಕುಗಳ ರಕ್ಷಣೆ ಮತ್ತು ಪೂರ್ಣ ಸಹಭಾಗಿತ್ವ ಅಂಗವೈಕಲ್ಯ ಅಥವಾ ವಿವಿಧ ಅಶಕ್ತತೆ ಹೊಂದಿರುವ ವ್ಯಕ್ತಿಗಳನ್ನು ಅಂಗವಿಕಲರೆಂದು ಗುರುತಿಸುವಂತೆ ಶೇ. 40. ರಷ್ಟು ಅಂಗವೈಕಲ್ಯ ಹೊಂದಿರುವವರನ್ನು ಮನರೇಗಾ ಯೋಜನೆಯಲ್ಲಿ ಬರುವ ವಿಶೇಷ ವರ್ಗದ ದುರ್ಬಲ ಗುಂಪೆಂದು ಪರಿಗಣಿಸಲಾಗುತ್ತದೆ. ಈಗಾಗಲೇ ಬೆಳಗಾವಿ ಜಿಲ್ಲೆಯಲ್ಲಿ 10,800 ಜನ ವಿಕಲಚೇತನರು ಜಾಬ ಕಾರ್ಡ್ ಹೊಂದಿದ್ದಾರೆ. ಈ ಪೈಕಿ 2617 ಜನ ವಿಕಲಚೇತನರು ಮನರೇಗಾದಡಿ ಉದ್ಯೋಗ ಪಡೆದಿದ್ದಾರೆ. ಹಾಗಾಗಿ ಎಲ್ಲ ಅರ್ಹ ವಿಶೇಷಚೇತನರು ವಿಶೇಷ ವರ್ಗದ ಜಾಬ್ಕಾರ್ಡ್ ಪಡೆಯಬಹುದು ಎಂದು ತಿಳಿಸಿದ್ದಾರೆ.
ಈಗಾಗಲೇ ಅನೇಕ ವಿಕಲಚೇತನರು ಕುಟುಂಬದ ಜಾಬ ಕಾರ್ಡ್ ಹೊಂದಿದ್ದು, ಅಂತಹವರು ಏಪ್ರಿಲ್ 1 ರಂದು ವಿಶೇಷ ವರ್ಗದ ವಿಶೇಷ ಜಾಬ ಕಾರ್ಡ್ ಪಡೆಯುವ ಮೂಲಕ ವ್ಯಕ್ತಿಗತವಾಗಿ ಒಂದು ಆರ್ಥಿಕ ವರ್ಷದಲ್ಲಿ 100 ದಿನ ಕೆಲಸ ಪಡೆದುಕೊಳ್ಳಬಹುದಾಗಿದೆ. ಸದರಿಯವರಿಗೆ ಕೆಲಸದ ಪ್ರಮಾಣದಲ್ಲಿ ಶೇ 50 ರಷ್ಟು ರಿಯಾಯಿತಿ ಪಡೆದುಕೊಳ್ಳಬಹುದು. ವಿಕಲಚೇತನರಿಗೆ ಆರ್ಥಿಕ ಬಲ ನೀಡಬೇಕೆಂಬ ಉದ್ದೇಶದಿಂದ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಬೆಳಗಾವಿ ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತಿಗಳಲ್ಲಿ ಈ ಅಭಿಯಾನ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ನಿಮ್ಮ ಗ್ರಾಮ ಪಂಚಾಯತಿ, ಬೆಳಗಾವಿ ಮನರೇಗಾ ಸಹಾಯವಾಣಿ ಸಂಖ್ಯೆ 8073109488 ಅಥವಾ ರಾಜ್ಯ ಏಕೀಕೃತ ಸಹಾಯವಾಣಿ 8277506000 ಕ್ಕೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ವಿಶೇಷ ಉದ್ಯೋಗ ಚೀಟಿ
ಮನರೇಗಾ ಯೋಜನೆಯಡಿ ಗ್ರಾಮೀಣ ಅರ್ಹ ಕುಟುಂಬಕ್ಕೆ ಒಂದು ಸಾಮಾನ್ಯ ಉದ್ಯೋಗ ಚೀಟಿ 100 ದಿನ ಕೆಲಸ ನೀಡಲಾಗುತ್ತಿದೆ. ಆದರೇ ವಿಶೇಷ ಚೇತನರನ್ನು ದುರ್ಬಲ ವರ್ಗವೆಂದು ಪರಿಗಣಿಸಿ ಅವರಿಗೆ ವಿಶೇಷ ಉದ್ಯೋಗ ಚೀಟಿ ನೀಡಿ ವ್ಯಕ್ತಿಗತವಾಗಿ 100 ದಿನ ಕೆಲಸ ಪಡೆಯಬಹುದು. ವಿಶೇಷ ಉದ್ಯೋಗ ಚೀಟಿ ಪಡೆದುಕೊಂಡ ವಿಕಲಚೇತನರ ಉದ್ಯೋಗ ಚೀಟಿಯಲ್ಲಿ ಕೇವಲ ಅವರಿಗೆ ಮಾತ್ರ ಕೆಲಸ ಮಾಡುವ ಅವಿಕಾಶವಿದೆ.