ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ – ಅವ್ವ ಸೇವಾ ಟ್ರಸ್ಟ್, ಹುಬ್ಬಳ್ಳಿ, ಧಾರವಾಡ ಜಿಲ್ಲಾ ಪ್ರೌಢಶಾಲಾ ಶಿಕ್ಷಕಿಯರ ಸಂಘ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ, ಧಾರವಾಡ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಮಹಿಳಾ ದಿನಾಚರಣೆ ಪ್ರಯುಕ್ತ ಹುಬ್ಬಳ್ಳಿಯ ಸವಾಯಿ ಗಂಧರ್ವ ಹಾಲ್ ನಲ್ಲಿ ಪ್ರೌಢ ಶಾಲಾ ಶಿಕ್ಷಕಿಯರಿಗಾಗಿ ಕಾನೂನು ಮತ್ತು ಆರೋಗ್ಯ ಸಲಹೆ ಕುರಿತು ಕಾರ್ಯಾಗಾರ ಏರ್ಪಡಿಸಲಾಗಿತ್ತು.
ಈ ಸಮಾರಂಭದ ಅಧ್ಯಕ್ಷತೆಯನ್ನು ಮಾಜಿ ಶಿಕ್ಷಣ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸಿ, ಮಕ್ಕಳ ಭವಿಷ್ಯ ಮಹಿಳೆಯರ ಕೈಯಲ್ಲಿದೆ, ಮಹಿಳೆಯರು ಮಕ್ಕಳಿಗೆ ದಾರಿದೀಪವಾಗಬೇಕು, ಉತ್ತಮ ಸಮಾಜ ನಿರ್ಮಿಸುವಲ್ಲಿ ಮಹಿಳೆಯ ಪಾತ್ರ ದೊಡ್ಡದೆಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹೈಕೋರ್ಟ್ ಅಡಿಷನಲ್ ಅಡ್ವಕೇಟ್ ಜನರಲ್ ವಿದ್ಯಾವತಿ ಕೊಟ್ಟೂರುಶೆಟ್ಟರ, ಮಹಿಳೆಯರಿಗಾಗಿ ಇರುವ ಕಾನೂನುಗಳನ್ನು ಬಲಗೊಳಿಸಿ, ಮಹಿಳೆಯರಲ್ಲಿ ಜಾಗೃತಿಯನ್ನು ಮೂಡಿಸಬೇಕು, ಅವರಿಗಾಗಿ ವಿಶೇಷವಾದಂತಹ ಕಾನೂನುಗಳನ್ನು ತರಬೇಕೆಂದು ನುಡಿದರು.
ಮುಖ್ಯ ಅತಿಥಿಗಳಾಗಿ ಅಗಮಿಸಿದ ಸುಜಾತ ಆನಿಶೆಟ್ಟರ, ಫ್ಯಾಮಿಲಿ ಪ್ಲಾನಿಂಗ್ ಅಸೋಸಿಯೇಷನ್, ಧಾರವಾಡ ಶಾಖೆ ಇವರು ಮಹಿಳೆಯರು ತಮ್ಮ ವೈಯಕ್ತಿವಾದ ಸಮಸ್ಯೆಗಳನ್ನು ಹಾಗೂ ಆರೋಗ್ಯವನ್ನು ಕಾಪಾಡಿಕೊಳ್ಳಲು ಸೂಚಿಸಿದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಇವರು ಶಿಕ್ಷಕಿಯರು ಮಾತೃಹೃದಯಿ ಆಗಿರುವುದರಿಂದ ಮಕ್ಕಳಿಗೆ ಉತ್ತಮ ಮತ್ತು ಮಕ್ಕಳ ಪಾಲನೆ-ಪೋಷಣೆಯಲ್ಲಿ ಸಹಕಾರಿಯಾಗದೆ ಎಂದು ನುಡಿದರು.
ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಇಬ್ರಾಹಿಂ ಸುತಾರ ಇವರು ಭಾವೈಕ್ಯದ ಅರಿವನ್ನು ಮೂಡಿಸಿ ಮಹಿಳೆಯರು ಸಬಲರಾಗಿ ಸಮಾಜದ ಯಶಸ್ವಿಗೆ ಕಾರಣೀಕರ್ತರಾಗಬೇಕೆಂದರು. ಅವ್ವ ಸೇವಾ ಟ್ರಸ್ಟಿನ ಕಾರ್ಯದರ್ಶಿ ಶಶಿ ಸಾಲಿ ಇಂದಿನ ಸಮಾಜದಲ್ಲಿ ಶಿಕ್ಷಕಿಯರ ಪಾತ್ರ ಕೇವಲ ಶಾಲೆಯಲ್ಲಿ ಅಷ್ಟೇ ಅಲ್ಲ ಮನೆ-ಮನದಲ್ಲೂ ಹಿರಿದಾಗಿದೆ. ಅವ್ವ ಎನ್ನುವ ಅರ್ಥಕ್ಕೆ ನಿದರ್ಶನರಾಗಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಹಲವಾರು ಶಿಕ್ಷಕಿಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಮಾರಂಭದಲ್ಲಿ ಉಪನಿರ್ದೇಶಕರಾದ ಎಂ.ಎಲ್. ಹಂಚಾಟೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಶೈಲ ಕರಿಕಟ್ಟಿ, ವಿದ್ಯಾ ನಾಡಿಗೇರ, ಉಮಾದೇವಿ ಬಸಾಪೂರ ಹಾಗೂ ಜಿ.ಆರ್.ಭಟ್ಟ, ಶ್ಯಾಮ್ ಮಲ್ಲನಗೌಡರ್, ಎಫ್.ವಿ. ಮಂಜಣ್ಣನವರ, ಬಿ.ಜಿ. ಬಸಟ್ಟಿ, ಎನ್.ಎಸ್. ಸವಣೂರ, ವಿ.ಎಸ್. ಹುದ್ದಾರ, ಬಿ.ಕೆ. ಮಳಗಿ, ಸಂತೋಷ ಪಾಟೀಲ, ಎಸ್.ವಿ. ಪಟ್ಟಣಶೆಟ್ಟಿ ಹಾಜರಿದ್ದರು.
ಮಹಿಳಾ ಸಂಘದ ಅಧ್ಯಕ್ಷರಾದ ವನಮಾಲಾ ಹೆಗಡೆ ಸಂಘದ ಧೇಯೋದ್ಯೇಶಗಳನ್ನು ಪ್ರಾಸ್ತಾವಿಕವಾಗಿ ಮಾತನಾಡಿದರು. ವೀಣಾ ಹುಬ್ಬಳ್ಳಿ ಸ್ವಾಗತಿಸಿದರು. ಜ್ಯೋತಿ ಪಾಟೀಲ ಪರಿಚಯಿಸಿದರು. ಪರತ್ ಜಲಗೇರಿ ವಂದಿಸಿದರು.
ಜಿ.ಬಿ. ಗಲಬಿ, ಪ್ರತಿಭಾ ಹೂಗಾರ, ಸುಧಾ, ಸುಜಾತಾ ಚೌವಾಣ ಉಪಸ್ಥಿತರಿದ್ದರು. ಕೆ. ರಜನ ಮತ್ತು ಗೀತಾ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಧಾರವಾಡ ಜಿಲ್ಲಾ ಮುಖ್ಯೋಪಾಧ್ಯಾಯರ ಸಂಘ, ಧಾರವಾಡ ಜಿಲ್ಲಾ ಸಹ ಶಿಕ್ಷಕರ ಸಂಘ, ಕರ್ನಾಟಕ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ, ಹುಬ್ಬಳ್ಳಿಯ ಸರ್ವ ಪದಾಧಿಕಾರಿಗಳು ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿದರು. ಕಾರ್ಯಕ್ರಮದಲ್ಲಿ ೬೫೦ ಜನ ಶಿಕ್ಷಕಿಯರು ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ