ಪ್ರಗತಿವಾಹಿನಿ ಸುದ್ದಿ, ಉಗರಗೋಳ: ಶ್ರೀಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಶ್ರಾವಣ ಕಡೇ ಶುಕ್ರವಾರದ ಅಂಗವಾಗಿ ಆದಿಶಕ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ದೇಶಕ್ಕೆ ಅಂಟಿರುವ ಕರೊನಾ ಶೀಘ್ರ ದೂರವಾಗಲಿ. ಸರ್ವರಿಗೂ ಆರೋಗ್ಯ ಪ್ರಾಪ್ತಿಯಾಗಿ, ನೆಮ್ಮದಿಯ ಬದುಕು ಸಾಗಿಸುವಂತಾಗಲಿ ಎಂದು ಎಲ್ಲರ ಅಮ್ಮ ಯಲ್ಲಮ್ಮ ದೇವಿಯಲ್ಲಿ ಪ್ರಾರ್ಥಿಸಲಾಯಿತು.
ಕರೊನಾ ಸೋಂಕು ಹರಡುವಿಕೆ ನಿಯಂತ್ರಣ ದೃಷ್ಟಿಯಿಂದ ಯಲ್ಲಮ್ಮ ದೇವಸ್ಥಾನ ಅಧಿಕಾರಿಗಳು, ಸಿಬ್ಬಂದಿ ಮತ್ತು ಅರ್ಚಕರ ಸಮ್ಮುಖದಲ್ಲಿ ಧಾರ್ಮಿಕ ವಿಧಿವಿಧಾನ ನೆರವೇರಿಸಲಾಯಿತು. ಭಕ್ತರ ಪ್ರವೇಶ ನಿಷೇಧ ಹೇರಲಾಗಿತ್ತು.
ಯಲ್ಲಮ್ಮ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಮಾತನಾಡಿ, ಕರೊನಾ ನಿಯಂತ್ರಣಕ್ಕಾಗಿ ಉಭಯ ಸರ್ಕಾರಗಳು ಪ್ರಕಟಿಸಿದ್ದ ಮಾರ್ಗಸೂಚಿ ಅನುಸರಿಸಿ, ಶ್ರಾವಣ ಮಾಸದಲ್ಲಿ ಒಂದು ತಿಂಗಳ ಕಾಲ ಧಾರ್ಮಿಕ ಚಟುವಟಿಕೆ ಕೈಗೊಳ್ಳಲಾಗಿದೆ. ಈ ದೇವಸ್ಥಾನಕ್ಕೆ ರಾಜ್ಯ ಹಾಗೂ ಹೊರರಾಜ್ಯಗಳು ಭಕ್ತರು ಆಗಮಿಸುತ್ತಾರೆ. ಹಾಗಾಗಿ, ಭಕ್ತರ ಆರೋಗ್ಯದ ದೃಷ್ಟಿಯಿಂದ ಆ.೩೧ರವರೆಗೆ ದೇವಸ್ಥಾನ ಪ್ರವೇಶಕ್ಕೆ ಭಕ್ತರಿಗೆ ನಿರ್ಬಂಧ ವಿಧಿಸಲಾಗಿದೆ. ಭಕ್ತ ಸಮುದಾಯ ನಮ್ಮೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಯಲ್ಲಮ್ಮ ದೇವಸ್ಥಾನ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಜೀರಗಾಳ, ಇಂಜಿನಿಯರ್ ಎಂ.ವಿ.ಮುಳ್ಳೂರ, ಚಿಕ್ಕರೇವಣ್ಣ, ಡಿ.ಆರ್.ಚವ್ಹಾಣ, ಅರ್ಚಕರಾದ ಪಿ.ರಾಜಶೇಖರಯ್ಯ, ಗಣಪತಿಗೌಡ ಚನ್ನಪ್ಪಗೌಡ್ರ ಇತರರು ಇದ್ದರು.
ಗ್ರೆನೈಟ್ ಹಸ್ತಾಂತರ
ಯಲ್ಲಮ್ಮ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಹೆಚ್ಚಿನ ಮೂಲಸೌಕರ್ಯ ಒದಗಿಸಲು ನಾನಾ ಅಭಿವೃದ್ಧಿ ಚಟುವಟಿಕೆ ಕೈಗೊಳ್ಳಲಾಗುತ್ತಿದೆ. ಅಭಿವೃದ್ಧಿ ಚಟುವಟಿಕೆ ಕೈಗೊಳ್ಳಲು ಭಕ್ತರು ಸಹಕಾರ ನೀಡುತ್ತ ಬಂದಿದ್ದಾರೆ. ಇದೀಗ, ಬೆಂಗಳೂರು ಉದ್ಯಮಿ ಚಿಕ್ಕರೇವಣ್ಣ ಅವರು ದೇವಸ್ಥಾನದ ಪ್ರಾಂಗಣದ ಸುತ್ತಲೂ ಗ್ರೇನೈಟ್ ಅಳವಡಿಕೆಗೆ ಮುಂದೆ ಬಂದಿದ್ದಾರೆ ಎಂದು ಯಲ್ಲಮ್ಮ ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ರವಿ ಕೋಟಾರಗಸ್ತಿ ಹೇಳಿದರು.
ಯಲ್ಲಮ್ಮ ದೇವಸ್ಥಾನ ಅಧಿಕಾರಿಗಳೊಂದಿಗೆ ಶುಕ್ರವಾರ ಚರ್ಚಿಸಿದ ಚಿಕ್ಕರೇವಣ್ಣ ಅವರು, ಕಾಮಗಾರಿ ಆರಂಭಿಸುವ ದೃಷ್ಟಿಯಿಂದ ಗ್ರೇನೈಟ್ ಹಸ್ತಾಂತರಿಸಿದರು. ಅಹಿಂದ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಕೆ.ಎಂ.ಮುಕೂಡಪ್ಪ, ವೇಣು ಮೈಲಾರಿ, ಕುರುಬರ ಸಂಘದ ಸವದತ್ತಿ ತಾಲೂಕು ಘಟಕದ ಉಪಾಧ್ಯಕ್ಷ ಮುದಕಪ್ಪ ಕಂಬಳಿ, ಪ್ರವೀಣಕುಮಾರ್ ಚಿಕಲಿ, ವಿ.ಜೆ.ಪವಾರ್ ಹಾಗೂ ದೇವಸ್ಥಾನ ಸಿಬ್ಬಂದಿ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ