Latest

*ಭಾರತೀಯತೆ ಅಂದ್ರೆ ಮಾನವೀಯತೆ: ಸಿಎಂ ಬೊಮ್ಮಾಯಿ*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಮಾನವೀಯತೆಯಲ್ಲಿ ಭಾರತ ದೇಶದ ಅಂತಃ ಸತ್ವ ಇದೆ. ಭಾರತೀಯತೆ ಅಂದ್ರೆ ಮಾನವೀಯತೆ ಬಿಟ್ಟು ಬೇರೇನೂ ಇಲ್ಲ. ಇಡೀ‌ ವಿಶ್ವದಲ್ಲಿ ಭಾರತೀಯ ಒಬ್ಬ ಮಾರ್ಗದರ್ಶಕನಾಗಿ ನಿಲ್ತಾನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಅವರು ಇಂದು ಅಟಲ್ ವಿಸನ್ ಫೌಂಡೇಶನ್ ಹಾಗೂ ಕರ್ನಾಟಕ ಕಾರ್ಯನಿರತ‌ ಪತ್ರಕರ್ತರ ಸಂಘ ಏರ್ಪಡಿಸಿದ್ದ ಸ್ಪಿರಿಟ್ ಆಫ್ ಇಂಡಿಯಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪಾಶ್ಚಿಮಾತ್ಯ ಜೀವನ ಶೈಲಿಗೂ ಭಾರತದ ಜೀವನ ಶೈಲಿಗೆ ವ್ಯತ್ಯಾಸಗಳಿದೆ. ಪಾಶ್ಚಿಮಾತ್ಯ ದೇಶದಲ್ಲಿ ಶಕ್ತಿಶಾಲಿ ವ್ಯಕ್ತಿ ಬದುಕುತ್ತಾನೆ. ನಮ್ಮ ಭಾರತದಲ್ಲಿ ಅತ್ಯಂತ ಶಕ್ತಿಹೀನ ಬದುಕಬಲ್ಲ ಎಂಬುದನ್ನು ನಮ್ಮ ಸಂಸ್ಕೃತಿ ತೋರಿಸಿಕೊಟ್ಟಿದೆ. ನಾವು ನಮಗಾಗಿ ಬದುಕುವುಕ್ಕಿಂತ ನಮಗಿಂತ ಕಷ್ಟದಲ್ಲಿರುವವರಿಗೆ ನಾವು ಬದುಕುವುದು ನಮ್ಮ ಸಹಜ‌ ಬದುಕಿನ ಶೈಲಿ. ಯಾಕಂದ್ರೆ ನಮಗೆ ಪಾಪ ಪುಣ್ಯದ ಪ್ರಜ್ಞೆ ಇದೆ. ಪಾಶ್ಚಿಮಾತ್ಯರಲ್ಲಿ ಲಾಭ‌ ನಷ್ಟದ ಪ್ರಜ್ಞೆ ಇದೆ. ಅಂತಿಮವಾಗಿ ನಾವು ಮಾಡುವ ಕೆಲಸದಿಂದ ಪುಣ್ಯ ಪ್ರಾಪ್ತಿ ಆಗಬೇಕೆಂಬ ಪರಿಕಲ್ಪನೆ ನಮ್ಮಲ್ಲಿದೆ ಎಂದು ಸಿಎಂ‌ ಬೊಮ್ಮಾಯಿ‌ ಹೇಳಿದರು.

ಸತ್ಯವನ್ನು ಹೇಳುವ, ಸತ್ಯವನ್ನು ಕೇಳುವ ಸಮಾಜವನ್ನು ನಿರ್ಮಿಸಬೇಕಿದೆ. ನಾವು ರಾಜಿ ಮಾಡಿಕೊಳ್ಳುವ ಜಗತ್ತಿನಲ್ಲಿ ಇದ್ದೀವಿ. ಇಂತಹ ಜಗತ್ತಿನಲ್ಲಿದ್ದಾಗ ನಮ್ಮ ಜೀವನ ಕೂಡ ರಾಜಿಯಾಗುತ್ತದೆ. ಗೌತಮ ಬುದ್ಧನ ಹುಟ್ಟು ಮತ್ತು ಆತನ ಪರಿವರ್ತನೆ ಒಂದು ದೊಡ್ಡ ಅದ್ಭುತ. ಇಡೀ‌ ದೇಶದ ಅಧ್ಯಾತ್ಮಿಕ ಜಗತ್ತಿನಲ್ಲಿ ಬಹಳ ದೊಡ್ಡ ಪರಿವರ್ತನೆ ತಂದ ವ್ಯಕ್ತಿ. ಅದೇ ರೀತಿ ಭಗವಾನ್ ಮಹಾವೀರ ಸಹ ಅಹಿಂಸಾ ಪರಮೋ‌ ಧರ್ಮಃ ಎಂದು ಹೇಳಿ ಬಹಳ‌ ದೊಡ್ಡ ಪರಿವರ್ತನೆ ತಂದ. ಇದನ್ನು ಬೇರೆ ದೇಶದಲ್ಲಿ ನಾವು ಕಾಣಲು ಸಿಗುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಇದು ಜ್ಞಾನದ ಶತಮಾನ
16 ಮತ್ತು17 ನೇ ಶತಮಾನದಲ್ಲಿ ಭೂಮಿಗಾಗಿ ಯುದ್ಧ ನಡೆಯುತ್ತಿದ್ದ ಸಂದರ್ಭದಲ್ಲಿ ದುಡ್ಡು ಮತ್ತು ವ್ಯಾಪಾರದಿಂದ ಇಂಗ್ಲೆಂಡಿಗರು ಇಡೀ‌ ವಿಶ್ವದಾದ್ಯಂತ 139 ಕಾಲನಿಗಳನ್ನು ಮಾಡಿದರು‌. ಆದರೆ 21ನೇ ಶತಮಾನ ಜ್ಞಾನದ ಶತಮಾನ. ಅಂದರೆ ಭಾರತದ ಶತಮಾನ. ದುಡ್ಡಿಗಿಂತ ಈಗ ಜ್ಞಾನಕ್ಕೆ ಬೆಲೆ ಹೆಚ್ಚು. ಜಗತ್ತಿನ ಶಕ್ತಿಗಳು ಹೇಗೆ ಬದಲಾವಣೆ ಆಗ್ತಿದೆ ಎಂದು ಈ ಮೂಲಕ ನಾವು ಗಮನಿಸಬಹುದು. ಆದ್ದರಿಂದ ನಮ್ಮ ಪ್ರಾಚೀನ ಮತ್ತು ಐತಿಹಾಸಿಕ ಭಾರತ ಒಂದು ಕಡೆಯಾದ್ರೆ ಮತ್ತು ಆಧುನಿಕ ಭಾರತದ ಮತ್ತೊಂದು ಕಡೆ. ಇದನ್ನೇ ಸ್ಪಿರಿಟ್ ಆಫ್ ಇಂಡಿಯಾ ಎನ್ನಬಹುದು ಎಂದು ಸಿಎಂ ಬೊಮ್ಮಾಯಿ ಅವರು ಹೇಳಿದರು.

ನಮ್ಮದು ವೈವಿಧ್ಯಮಯವಾಗಿರುವ ದೇಶ. ಕೇವಲ ಭಾಷೆ ಬದಲಾವಣೆ ಆದರೆ ಭಾವನೆ ಬದಲಾಗುತ್ತದೆ. ಆದರೆ ನಿಜಕ್ಕೂ ಭಾಷೆ ಮತ್ತು ಸಾಹಿತ್ಯ ಭಾವನೆಗಳನ್ನು ಜೋಡಿಸುವ‌ ಕೆಲಸ ಮಾಡಬೇಕು. ಆದ್ದರಿಂದ “ದಿ ಸ್ಪಿರಿಟ್ ಆಫ್ ಇಂಡಿಯಾ”ಮತ್ತೊಮ್ಮೆ ಪುನರುಜ್ಜೀವನಗೊಳ್ಳಬೇಕು. ಎಲ್ಲರನ್ನೂ ಒಗ್ಗೂಡಿಸುವಂತಹ, ಎಲ್ಲರ ಭಾವನೆಗಳಿಗೆ ಗೌರವವನ್ನು ತರುವ ಪ್ರವೃತ್ತಿ ನಮ್ಮ ಗುಣಧರ್ಮ. ಇದರಿಂದಲೇ ಭಾರತ ತಾನೇ ಎಂದು ಬೇರೊಂದು ದೇಶದ ಮೇಲೆ ಆಕ್ರಮಣ ಮಾಡಿಲ್ಲ ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

ಯಶಸ್ವಿ ಪ್ರಜಾಪ್ರಭುತ್ವ ನಮ್ಮ ದೇಶದ ಸಾಧನೆ
ನಮ್ಮ ದೇಶದಲ್ಲಿ ಬಹಳಷ್ಟು ವೈವಿಧ್ಯಮಯ ಬದುಕಿದ್ದರೂ ಸಹ ನಮ್ಮ ಪ್ರಜಾಪ್ರಭುತ್ವ 75 ವರ್ಷ ಯಶಸ್ವಿಯಾಗಿ ನಡೆದುಕೊಂಡು ಬಂದಿರುವುದು ದೊಡ್ಡ ಸಾಧನೆ. ವಿಚಾರಗಳಲ್ಲಿ ಪರ ವಿರೋಧ ಇರಬಹುದು. ಆದರೆ ಅದನ್ನು ಅಭಿವ್ಯಕ್ತಿ ಮಾಡುವ ಸ್ವಾತಂತ್ರ್ಯ ನಮಗೆ ಪ್ರಜಾಪ್ರಭುತ್ವದಿಂದ ಸಿಕ್ಕಿದೆ. ಒಂದೇ ಭಾಷೆ, ಒಂದೇ ಧರ್ಮದ ಹಲವು ದೇಶಗಳಲ್ಲೂ ಪ್ರಜಾಪ್ರಭುತ್ವ ಸತ್ತುಹೋಗಿದೆ. ಆದ್ರೆ ವೈವಿಧ್ಯತೆ ಇರುವ ಭಾರತದಲ್ಲಿ ಪ್ರಜಾಪ್ರಭುತ್ವ ಗೆದ್ದಿದೆ. ಇದರ ಮೂಲ ನಮ್ಮ‌ ಭಾರತದ ಗುಣ ಧರ್ಮದಲ್ಲಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

ನಾವು ಭಾರತಕ್ಕಾಗಿ ಬದುಕಬೇಕು
ನಾವು ದೇಶಕ್ಕಾಗಿ ಬದುಕುತ್ತಿಲ್ಲ. ಕೇವಲ ನಮಗಾಗಿ‌ ಬದುಕುತ್ತಿದ್ದೇವೆ. ನಮಗೆ ಬದುಕು ಕೊಟ್ಟಿರುವ ದೇಶಕ್ಕೂ‌ ನಾವು ಬದುಕಬೇಕು. ನಮ್ಮ ತಂತ್ರಜ್ಞಾನ ಸಾಧನೆ ವಿದೇಶಗಳಲ್ಲಿ ಹೋಲಿಕೆ ಮಾಡಿದ್ರೆ ಅದ್ಭುತವಾಗಿ. ವಿದೇಶದಲ್ಲಿರುವ ಅನೇಕ ತಂತ್ರಜ್ಞಾನ ಕೊಟ್ಟಿರುವುದು ನಮ್ಮ ದೇಶದ ಸಂಸ್ಥೆಗಳು. ಆದ್ದರಿಂದ ನಮ್ಮ ದೇಶ ಗುಣ ಧರ್ಮಗಳು ನಮ್ಮ ದೇಶದ ಶಕ್ತಿಗಳಾಗಿ‌ ಬದಲಾಗಬೇಕು. ನಮ್ಮ ದೇಶದ ಸ್ಟಾರ್ಟ್ ಅಪ್ ಗಳು ಅದ್ಬುತವಾದ ಕೆಲಸ ಮಾಡುತ್ತಿದೆ. ದೇಶದ ಸಾಕಷ್ಟು ಯಶಸ್ವಿ ಸ್ಟಾರ್ಟ್ ಅಪ್ ಗಳಿಗೆ ಬೆಂಗಳೂರು ತವರು ಆಗಿದೆ.‌ ದೇಶದ 4 ಡೆಕಾಕನ್ ಗಳಲ್ಲಿ 3 ಬೆಂಗಳೂರಿನಲ್ಲೇ ಇದೆ. ಇದೇ ಸ್ಪಿರಿಟ್ ಆಫ್ ಇಂಡಿಯಾ ಎಂದು ಸಿಎಂ ಬೊಮ್ಮಾಯಿ‌ ಹೇಳಿದರು.

ಕಾರ್ಯಕ್ರಮದಲ್ಲಿ ಸ್ಪಿರಿಟ್ ಆಫ್ ಇಂಡಿಯಾದ ಆಯೋಜಕರಾದ ಹಿರಿಯ ಪತ್ರಕರ್ತ ಅನಂತ್ ಚಿನಿವಾರ್, ಪ್ರಜಾವಾಣಿ ಸಂಪಾದಕ ರವೀಂದ್ರ ಭಟ್, ಹಿರಿಯ ಚಿತ್ರನಟ ಅನಂತ್ ನಾಗ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

*ರೆಡ್ಡಿ ಹೊಸ ಪಕ್ಷ ಘೋಷಣೆ; ಬಿಜೆಪಿಯಲ್ಲಿಯೇ ಭಿನ್ನ ನಿಲುವು*

https://pragati.taskdun.com/janardhana-reddynew-partyr-ashokdr-sudhakarreaction/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button