Kannada NewsKarnataka NewsLatest

ಸಿದ್ಧಾಂತ ಶಿಖಾಮಣಿ ದಾರ್ಶನಿಕ ಗ್ರಂಥ : ನಿಡಸೋಸಿ ಜಗದ್ಗುರುಗಳ ಅಭಿಮತ 

ಪ್ರಗತಿವಾಹಿನಿ ಸುದ್ದಿ, ಹುಕ್ಕೇರಿ : ಸಿದ್ಧಾಂತಶಿಖಾಮಣಿಯಲ್ಲಿ ವೀರಶೈವ ಸಿದ್ಧಾಂತವನ್ನು ಅಚ್ಚುಕಟ್ಟಾಗಿ ವಿವರಿಸಿದ್ದಾರೆ. ಶ್ರೀ ಜಗದ್ಗುರು ರೇಣುಕಾಚಾರ್ಯರು ಅಗಸ್ತ್ಯ ಮಹರ್ಷಿಗಳಿಗೆ ಬೋಧಿಸಿದ ಶಿವ ಸಿದ್ಧಾಂತವನ್ನು ಶಿವಯೋಗಿ ಶಿವಾಚಾರ್ಯರು ಪ್ರತಿಪಾದಿಸಿರುವುದನ್ನು  ನೋಡಬಹುದಾಗಿದೆ. ಇವತ್ತು ಇಡೀ ವಿಶ್ವದಲ್ಲಿ ಸಿದ್ಧಾಂತಶಿಖಾಮಣಿ ಹೆಸರು ಕೇಳಿ ಬರುತ್ತಿರುವುದು ಅಭಿಮಾನದ ಸಂಗತಿ ಎಂದು ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಮಹಾಸ್ವಾಮಿಗಳು ಹೇಳಿದರು.
ಹುಕ್ಕೇರಿ ನಗರದಲ್ಲಿ ಜರುಗಿದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಉತ್ಸವ ಕಾರ್ಯಕ್ರಮದಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮಿಗಳು ಮಾತನಾಡುತ್ತ, ಜಗದ್ಗುರು ರೇಣುಕಾಚಾರ್ಯರ ತತ್ವ  ಸಂದೇಶವನ್ನು ನಾವೆಲ್ಲಾ ಅಳವಡಿಸಿಕೊಳ್ಳುವುದು ಅವಶ್ಯವಿದೆ. ಜಗದ್ಗುರು ರೇಣುಕರು ಮಾನವ ಧರ್ಮಕ್ಕೆ ಜಯವಾಗಲಿ ಎಂಬ ವಿಶಾಲ ತತ್ವವನ್ನು ತಿಳಿಸಿರುವ ಮಹಾತ್ಮರು ಎಂದರು.
 ಯಸಳೂರಿನ ಶ್ರೀ ಪೂರ್ಣಚಂದ್ರ ದೇವರು ಮಾತನಾಡುತ್ತಾ, ಪಂಚಪೀಠಗಳು ಎಲ್ಲಾ ಸಮುದಾಯಕ್ಕೆ ಪ್ರೇರಕಶಕ್ತಿಯಾಗಿ ನಿಂತಿವೆ. ಸಮೃದ್ಧಿ ತ್ಯಾಗ ವಿಶಾಲತೆ ಪರಿಪಕ್ವತೆಯ ಪ್ರತೀಕವಾಗಿ ಪಂಚಪೀಠಗಳು ನಿಂತಿವೆ. ನಾವೆಲ್ಲ ಪಂಚಪೀಠಗಳ ಬಗ್ಗೆ ತಿಳಿದುಕೊಳ್ಳುವ ಅವಶ್ಯವಿದೆ ಎಂದರು.
ನ್ಯಾಯವಾದಿ ಅನೀಲ ಮುಳವಾಡಮಠ ಅವರು ಮಾತನಾಡಿದರು.  ಬೆಂಗಳೂರಿನಿಂದ ಆಗಮಿಸಿದ್ದ ವೇದಮೂರ್ತಿ ಡಾ. ಪ್ರಕಾಶ ಬಾಗೋಜಿ, ಕವಿತಾ ಹಿರೇಮಠ,  ಡಾ. ಅಶೋಕ ಪಾಟೀಲ್,  ಶ್ರೀಶೈಲ ಶಾಸ್ತ್ರಿಯವರಿಗೆ ಶ್ರೀ ಜಗದ್ಗುರು ರೇಣುಕಾಚಾರ್ಯ ಸದ್ಬಾವನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಉಳ್ಳಾಗಡ್ಡಿ ಖಾನಾಪುರ ಶ್ರೀಗಳು, ಯರನಾಳದ ಬ್ರಹ್ಮಾನಂದ ಅಜ್ಜನವರು, ಕಬ್ಬೂರಿನ ಶ್ರೀಗಳು, ಕ್ಯಾರಗುಡ್ಡದ ಶ್ರೀಗಳು, ಬೆಳವಿ ಶ್ರೀಗಳು, ಹುಕ್ಕೇರಿ ವಿರಕ್ತ ಮಠದ, ಹತ್ತರಕಿ ಕಾರಿಮಠದ ಶ್ರೀಗಳು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button