ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಗೋಮೂತ್ರ ಸೇವನೆಯಿಂದ ಹಾಗೂ ಸಗಣಿಯನ್ನು ದೇಹಕ್ಕೆ ಸವರಿಕೊಳ್ಳುವುದರಿಂದ ಕೊರೊನಾ ವೈರಸ್ ಬರದಂತೆ ತಡೆಯಬಹುದು ಎಂದು ಆರೋಗ್ಯ ಸಚಿವ ರಾಮುಲು ಹೆಸರಿನಲ್ಲಿ ಟ್ವೀಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಚಿವ ಶ್ರೀರಾಮುಲು ಇದೊಂದು ನಕಲಿ ಟ್ವೀಟ್ ಆಗಿದ್ದು, ನನ್ನ ಹೆಸರಿನಲ್ಲಿ ಯಾರೋ ಕಿಡಿಗೇಡಿಗಳು ಈ ರೀತಿಯ ತಪ್ಪು ಸಂದೇಶ ಪ್ರಕಟಿಸಿದ್ದಾರೆ ಎಂದು ತಿಳಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವಾ ಶ್ರೀರಾಮುಲು, ಕೊರೊನಾದಂತಹ ಪ್ರಮುಖ ವಿಚಾರದಲ್ಲಿ, ನನ್ನ ಹೆಸರನ್ನು ಬಳಸಿ, ಈ ತರಹದ ಅಪ್ರಬುದ್ಧ ಹಾಗೂ ಬಾಲಿಶ ಹೇಳಿಕೆಯನ್ನು ಎಡಿಟ್ ಮಾಡಿದ್ದಾರೆ. ಇದನ್ನು ಫೇಸ್ಬುಕ್ ಹಾಗೂ ಬೇರೆ ಸಾಮಾಜಿಕ ಮಾಧ್ಯಮದಲ್ಲಿ ಪ್ರಕಟಿಸಿದ್ದಾರೆ. ಇಂತಹವರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದೇನೆ ಎಂದು ತಿಳಿಸಿದ್ದಾರೆ.
ಕೊರೊನಾದಂತಹ ಗಂಭೀರ ವಿಷಯದಲ್ಲಿ, ನನ್ನ ಹೆಸರು ಬಳಸಿ ಸುಳ್ಳು ಸುದ್ದಿ ಹರಡುತ್ತಿರುವವರ ವಿರುದ್ಧ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಬೆಂಗಳೂರು ಪೊಲೀಸ್ ಆಯುಕ್ತರಿಗೆ ಮನವಿ ಮಾಡಲಾಗಿದೆ. ಇಂತಹ ಸಮಯದಲ್ಲಿ ನಾಗರಿಕರಿಗೆ ಸರಿಯಾದ ಮಾಹಿತಿ ನೀಡಿ, ಆತ್ಮವಿಶ್ವಾಸ ತುಂಬುವ ಪ್ರಯತ್ನ ಮಾಡಬೇಕೇ ಹೊರತು, ಗೊಂದಲ ಸೃಷ್ಟಿಸುವ ಪ್ರಯತ್ನಕ್ಕೆ ಕೈಹಾಕಬೇಡಿ ಎಂದು ಮನವಿ ಮಾಡಿದ್ದಾರೆ.
ಈ ರೀತಿ ಸುಳ್ಳು ಸುದ್ದಿ ಹಬ್ಬಿಸುವ ಬದಲು, ಜನರಿಗೆ ಮಾಹಿತಿ ನೀಡಿ, ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಿಮ್ಮ ಕಾರ್ಯಕ್ಷಮತೆಯನ್ನು ತೋರಿಸಿ ಟ್ವೀಟ್ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ