ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಗುರುವಾರ ಎಸ್ಎಸ್ಎಲ್ ಸಿ ಪರೀಕ್ಷೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಮತ್ತು ಬೆಳಗಾವಿ ಉತ್ತರ ಕ್ಷೇತ್ರದ ಶಾಸಕ ಅನಿಲ ಬೆನಕೆ ಗುರುವಾರ ಪ್ರತ್ಯೇಕವಾಗಿ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿ ಸಿದ್ಧತೆ ಪರಿಶೀಲಿಸಿದರು.
ಸುರೇಶ್ ಅಂಗಡಿ ಹಾಗೂ ಡಿಡಿಪಿಐ ಎ.ಬಿ.ಪುಂಡಲೀಕ ಅವರು ಇಂದು ಸರದಾರ ಹೈಸ್ಕೂಲ್ ಗೆ ಭೇಟಿ ನೀಡಿ, ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವ ಸಿದ್ಧತೆ ಪರಿಶೀಲಿಸಿದರು. ಕೊರೋನಾ ಹಿನ್ನೆಲೆಯಲ್ಲಿ ತೆಗೆದುಕೊಂಡಿರುವ ಮುಂಜಾಗ್ರತೆ ಕ್ರಮಗಳನ್ನು ಅಂಗಡಿ ಪರಿಶೀಲಿಸಿ, ಮಾಹಿತಿ ಪಡೆದರು.
ಬೆಳಗಾವಿ ಉತ್ತರ ಮತಕ್ಷೇತ್ರದ ಎಸ್.ಎಸ್.ಎಲ್.ಸಿ ಪರೀಕ್ಷಾ ಕೇಂದ್ರಗಳಿಗೆ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಶಾಸಕ ಅನಿಲ ಬೆನಕೆ ಸಿದ್ಧತೆಗಳನ್ನು ಪರಿಶೀಲಿದರು.
ಮಾಳಮಾರುತಿ ಬಡಾವಣೆಯ ಜೀವನ ಜ್ಯೋತಿ ಶಾಲೆಯಲ್ಲಿ ಕೋವಿಡ-೧೯ ರ ಸಂಬಂಧಿಸಿದಂತೆ ಸಭೆ ನಡೆಸಿ ಸುರಕ್ಷಿತವಾಗಿ ಪರೀಕ್ಷೆಗಳನ್ನು ನಡೆಸಲು ಅಧಿಕಾರಿಗಳು ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಚರ್ಚಿಸಿದರು. ವಿದ್ಯಾರ್ಥಿಗಳು ತಮ್ಮ ವ್ಯಯಕ್ತಿಕ ಸ್ವಚ್ಚತೆಯನ್ನು ಗಮನದಲ್ಲಿಟ್ಟುಕೊಂಡು ಪರೀಕ್ಷೆಯನ್ನು ಎದುರಿಸಬೇಕು ಮತ್ತು ವಿದ್ಯಾರ್ಥಿಗಳ ಪಾಲಕರೂ ಸಹ ದೃತಿಗೆಡದೆ ಮಕ್ಕಳಲ್ಲಿ ಧೈರ್ಯವನ್ನು ಹೇಳಿ ಎಂದು ಸಲಹೆಯನ್ನು ನೀಡಿದರು.
ಇದೇ ಸಂದರ್ಭದಲ್ಲಿ ಅವರು ಸರ್ಕಾರ ಹಾಗೂ ಶಿಕ್ಷಣ ಇಲಾಖೆಯು ೧೦ನೇ ತರಗತಿ ಪರೀಕ್ಷೆಯು ಸುಗಮವಾಗಿ ಕೈಗೊಳ್ಳುವಂತೆ ಎಲ್ಲ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ನಗರದಲ್ಲಿರುವ ಪರೀಕ್ಷಾ ಕೇಂದ್ರಗಳಿಗೆ ಡಿ.ಡಿ.ಪಿ.ಆಯ್, ಕ್ಷೇತ್ರ ಶಿಕ್ಷಣಾಧಿಕಾರಿ, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಇತರ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಕೇಂದ್ರಗಳನ್ನು ಪರಿಶಿಲಿಸಲಾಗಿದೆ ಹಾಗೂ ಬೆಳಗಾವಿ ಉತ್ತರ ಮತಕ್ಷೇತ್ರದ ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಪ್ರತಿ ವಿದ್ಯಾರ್ಥಿಗಳು ಮಾಸ್ಕ್ ಹಾಕಿಕೊಳ್ಳಬೇಕು ಮತ್ತು ಸ್ಯಾನಿಟೈಜರ್ ಹಾಗೂ ಪ್ರತಿ ವಿದ್ಯಾರ್ಥಿಗಳಿಗೆ ತಪಾಸಣೆ ನಡೆಸಿ ಪರೀಕ್ಷಾ ಕೊಠಡಿಗೆ ಹೋಗುವ ವ್ಯವಸ್ಥೆಯನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪೊಲೀಸ್ ಇಲಾಖೆ ಅಧಿಕಾರಿಗಳು ಹಾಗೂ ಇತರ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ