*ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಗಮನಕ್ಕೆ: ಸಮಾಜ ವಿಜ್ಞಾನ ಪರೀಕ್ಷೆ ಸಮಯ ಬದಲಾವಣೆ*

ಪ್ರಗತಿವಾಹಿನಿ ಸುದ್ದಿ: ದಿನಾಂಕ: 28-02-2026 ರಂದು ನಡೆಯುವ ಎಸ್.ಎಸ್.ಎಲ್.ಸಿ 3ನೇ ಪೂರ್ವಸಿದ್ಧತಾ ಪರೀಕ್ಷೆಯ ಸಮಾಜ ವಿಜ್ಞಾನ ವಿಷಯದ ಪರೀಕ್ಷಾ ಸಮಯ ಬದಲಾವಣೆ ಮಾಡಿರುವ ಬಗ್ಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ಮಾಹಿತಿ ನೀಡಿದೆ.
2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಶಾಲಾ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ 3ನೇ ಪೂರ್ವಸಿದ್ಧತಾ ಪರೀಕ್ಷೆಯನ್ನು ದಿನಾಂಕ: 23-02-2026 ರಿಂದ ನಡೆಸಲು ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಆದರೆ, ದಿನಾಂಕ: 28-02-2026 ರಂದು ದ್ವಿತೀಯ ಪಿ.ಯು.ಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಇರುವುದರಿಂದ, ಅಂದು ನಡೆಯುವ ಎಸ್.ಎಸ್.ಎಲ್.ಸಿ ಸಮಾಜ ವಿಜ್ಞಾನ ವಿಷಯದ ಪರೀಕ್ಷೆಯ ಸಮಯವನ್ನು ಬೆಳಿಗ್ಗೆ 10 ರ ಬದಲಾಗಿ ಅಪರಾಹ್ನ 2 ಗಂಟೆಯಿಂದ ನಡೆಸುವಂತೆ ಈ ಮೂಲಕ ಸೂಚಿಸಿದೆ.
ಸದರಿ ವಿಷಯದ ಪ್ರಶ್ನೆ ಪತ್ರಿಕೆಯನ್ನು ಅದೇ ದಿನ ಮಧ್ಯಾಹ್ನ 12.30ಕ್ಕೆ ಮಂಡಳಿಯಿಂದ ಶಾಲಾ ಲಾಗಿನ್‌ಗೆ ಅಪ್ಲೋಡ್ ಮಾಡಲಾಗುವುದು. ಶಾಲಾ ಲಾಗಿನ್‌ನಲ್ಲಿ ಡೌನ್‌ಲೋಡ್ ಮಾಡಿ ಮುದ್ರಿಸಿಕೊಂಡು ಪರೀಕ್ಷೆಯನ್ನು ವ್ಯವಸ್ಥಿತವಾಗಿ ನಡೆಸುವುದು. ಉಳಿದಂತೆ ಇತರ ವಿಷಯಗಳ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
ಈ ವಿಷಯವನ್ನು ಎಲ್ಲಾ ಪ್ರೌಢಶಾಲಾ ಮುಖ್ಯ ಶಿಕ್ಷಕರು ಹಾಗೂ ಶಾಲಾ ಸೂಚನಾ ಫಲಕದಲ್ಲಿ ಪ್ರಕಟಿಸಲು ಹಾಗೂ ಎಲ್ಲಾ ವಿದ್ಯಾರ್ಥಿಗಳಿಗೆ ಮಾಹಿತಿ ನೀಡುವ ಕುರಿತು ಜಿಲ್ಲಾ ಉಪನಿರ್ದೇಶಕರು (ಆಡಳಿತ) ಅವರು ಕ್ರಮವಹಿಸಲು ತಿಳಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ



