ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ಅಪಾರ್ಟ್ ಮೆಂಟ್ ನ 12ನೇ ಮಹಡಿಯಿಂದ ಬಿದ್ದು ಎಸ್.ಎಸ್.ಎಲ್.ಸಿ ವಿದ್ಯಾರ್ಥಿನಿ ಸಾವನ್ನಪ್ಪಿರುವ ಘಟನೆ ಬೆಳ್ಳಂದೂರಿನಲ್ಲಿ ನಡೆದಿದೆ.
14 ವರ್ಷದ ಜಸ್ಸಿಕಾ ಮೃತ ವಿದ್ಯಾರ್ಥಿನಿ. ಬೆಂಗಳೂರಿನ ಬೆಳ್ಳಂದೂರಿನ ಕ್ಲಾಸಿಕ್ ಅಪಾರ್ಟ್ ಮೆಂಟ್ ನಲ್ಲಿ ಜಸ್ಸಿಕಾ ಕುಟುಂಬ ಕಳೆದ 2 ವರ್ಷಗಳಿಂದ ವಾಸವಾಗಿತ್ತು. ಇಂದು ವಿದ್ಯಾರ್ಥಿನಿ ಜಸ್ಸಿಕಾ ತಾವು ವಾಸವಾಗಿದ್ದ ಮಹಡಿಯ ಮೇಲಿನ ಮಹಡಿಗೆ ಹೋದವಳು 12 ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದಾಳೆ.
ಜಸ್ಸಿಕಾ ಕುಟುಂಬದವರು ಮೂಲತ: ತಮಿಳುನಾಡಿನ ಮೂಲದವರು. ಜಸ್ಸಿಕಾ ತಂದೆ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದು, ತಾಯಿ ಟೀಚರ್ ಆಗಿದ್ದರು. ಇಂದು ಬೆಳಿಗ್ಗೆ ಶಾಲೆಗೆ ಹೋಗಿ ಮತ್ತೆ ಮನೆಗೆ ವಾಪಸ್ ಆಗಿದ್ದ ಜಸ್ಸಿಕಾ, 12ನೇ ಮಹಡಿಗೆ ಹೋಗಿದ್ದಳು. ಈ ವೇಳೆ ಅಪಾರ್ಟ್ ಮೆಂಟ್ ನಿಂದ ಬಿದ್ದು ಸಾವನ್ನಪ್ಪಿದ್ದಾಳೆ. ದುರಂತದ ವೇಳೆ ಜಸ್ಸಿಕಾ ತಂದೆ-ತಾಯಿ ಮನೆಯಲ್ಲಿ ಇರಲಿಲ್ಲ ಎನ್ನಲಾಗಿದೆ.
ಏಕಾಏಕಿ ಅಪಾರ್ಟ್ ಮೆಂಟ್ ನಿಂದ ವಿದ್ಯಾರ್ಥಿನಿ ಬಿದ್ದು ಸಾವನ್ನಪ್ಪಿರುವುದು ಹಲವು ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಬೆಳ್ಳಂದೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ