Kannada NewsKarnataka NewsLatestPolitics

*SSLC ಮಕ್ಕಳ ಕಿಸೆಗೂ ಕೈ ಹಾಕಿದ ಸರ್ಕಾರ; ಪೂರ್ವ ಸಿದ್ಧತಾ ಪರೀಕ್ಷೆಯ ವೆಚ್ಚ ವಿದ್ಯಾರ್ಥಿಗಳಿಂದಲೇ ವಸೂಲಿಗೆ ಆದೇಶ*

HDK ಆಕ್ರೋಶ

ಪ್ರಗತಿವಾಹಿನಿ ಸುದ್ದಿ: ಎಸ್ ಎಸ್ ಎಲ್ ಸಿ ಪೂರ್ವ ಸಿದ್ಧತಾ ಪರೀಕ್ಷೆಯ ವೆಚ್ಚದ ಹಣವನ್ನು ವಿದ್ಯಾರ್ಥಿಗಳಿಂದಲೇ ವಸೂಲಿ ಮಾಡಬೇಕು ಎಂದು ಆದೇಶ ಹೊರಡಿಸಿರುವ ರಾಜ್ಯ ಸರಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸರಕಾರವನ್ನು ಗತಿಗೆಟ್ಟ ಸರಕಾರ ಎಂದು ಕಟುವಾಗಿ ಟೀಕೆ ಮಾಡಿರುವ ಅವರು; ಕೂಡಲೇ ಈ ಆದೇಶವನ್ನು ವಾಪಸ್ ಪಡೆಯಬೇಕು, ಪರೀಕ್ಷಾ ವೆಚ್ಚವನ್ನು ಸರಕಾರವೇ ಭರಿಸಬೇಕು ಎಂದು ಅವರು ಒತ್ತಾಯ ಮಾಡಿದ್ದಾರೆ.

ಅಲ್ಲದೆ, ಸರಕಾರದ ಆದೇಶದ ಪ್ರತಿಯನ್ನು ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಜನತೆಗೆ 5 ಗ್ಯಾರಂಟಿ ಕೊಟ್ಟೆವು ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿರುವ ರಾಜ್ಯ ಕಾಂಗ್ರೆಸ್ ಸರಕಾರದ ಆಡಳಿತ ಅದೆಷ್ಟು ಅಧಃಪತನಕ್ಕೆ ಹೋಗಿದೆ ಎನ್ನುವುದಕ್ಕೆ ಸಾಕ್ಷ್ಯ ಇಲ್ಲಿದೆ. ಒಂದು ಕೈಯ್ಯಲ್ಲಿ ಕೊಟ್ಟು ಹತ್ತು ಕೈಗಳಲ್ಲಿ ರಾವಣನಂತೆ ಕಸಿದುಕೊಳ್ಳುತ್ತಿರುವ ಸರಕಾರ, ಈಗ SSLC ಮಕ್ಕಳ ಕಿಸೆಗೂ ಕೈ ಹಾಕಿದೆ ಎಂದು ಅವರು ಕಿಡಿಕಾರಿದ್ದಾರೆ.

ಅಕ್ರಮ ಸುಲಿಗೆಯಲ್ಲಿ ‘ಸಿದ್ದಹಸ್ತ’ವಾಗಿರುವ ಸರಕಾರ, ಈಗ ಕಾನೂನು ಬದ್ಧವಾಗಿಯೇ ಸುಲಿಗೆ ಮಾಡುತ್ತಿದೆ, ಅದೂ ಲಜ್ಜೆಗೆಟ್ಟು. ಇದೇ ಫೆಬ್ರವರಿ 26ರಿಂದ ಮಾರ್ಚ್ 3ರವರೆಗೂ ನಡೆಯಲಿರುವ 2023-24ನೇ ಸಾಲಿನ SSLC ಪೂರ್ವ ಸಿದ್ಧತಾ ಪರೀಕ್ಷೆಗೆ ಆಗುವ ವೆಚ್ಚವನ್ನು ನಾಚಿಕೆಗೆಟ್ಟ ಸರಕಾರ ಮಕ್ಕಳಿಂದಲೇ ವಸೂಲಿ ಮಾಡಲು ಹೊರಟಿದೆ ಎಂದು ಅವರು ದೂರಿದ್ದಾರೆ.

ಪ್ರಶ್ನೆಪತ್ರಿಕೆ ತಯಾರಿ, ಮುದ್ರಣ, ಸಾಗಣೆ ವೆಚ್ಚವನ್ನು ವಿದ್ಯಾರ್ಥಿಗಳ ಮೇಲೆಯೇ ಹೇರಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷರು ಆದೇಶಿಸಿದ್ದಾರೆ. ವೆಚ್ಚ ವಸೂಲಿ ಮಾಡುವಂತೆ ಎಲ್ಲಾ ಸರಕಾರಿ ಶಾಲೆಗಳ ಮುಖ್ಯ ಶಿಕ್ಷಕರಿಗೆ ಆದೇಶಿಸಿರುವುದು ಸರಕಾರ ಎಷ್ಟರ ಮಟ್ಟಿಗೆ ದಿವಾಳಿಯೆದ್ದು ಹೋಗಿದೆ ಎನ್ನುವುದಕ್ಕೆ ಉದಾಹರಣೆ ಎಂದು ಅವರು ಕಿಡಿಕಾರಿದ್ದಾರೆ.

ಸರಕಾರಿ ಶಾಲೆಗಳ ಮುಖ್ಯ ಶಿಕ್ಷಕರು ವೆಚ್ಚ ವಸೂಲಿ ಮಾಡಿ, ಆ ಮೊತ್ತವನ್ನು ಇಲಾಖೆ ಉಪ ನಿರ್ದೇಶಕರು (ಆಡಳಿತ), ಇವರ ಖಾತೆಗೆ ಜಮೆ ಮಾಡಬೇಕು ಎಂದು ಅವರು ಫರ್ಮಾನು ಹೊರಡಿಸಿದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿರುವ ಅವರು; ಗ್ಯಾರಂಟಿ ಕೊಟ್ಟು ಬಡವರ ಉದ್ಧಾರ ಮಾಡುತ್ತಿದ್ದೇವೆ ಎಂದು ಬೀಗುವ ಸರಕಾರಕ್ಕೆ, ಅದೇ ಬಡಮಕ್ಕಳಿಗೆ 50 ರೂ. ಖರ್ಚು ಮಾಡಲು ಗತಿ ಇಲ್ಲವೇ? ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಈಗಾಗಲೇ ಬರದಿಂದ ಕಂಗೆಟ್ಟಿರುವ ರಾಜ್ಯದ ಜನರಿಗೆ ಸರಕಾರ ಬರೆಯ ಮೇಲೆ ಬರೆ ಎಳೆಯುತ್ತಿದೆ. ಕೂಡಲೇ ಈ ಆದೇಶವನ್ನು ವಾಪಸ್ ಪಡೆಯಬೇಕು, ಪರೀಕ್ಷೆ ವೆಚ್ಚವನ್ನು ಸರಕಾರವೇ ಭರಿಸಬೇಕು ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದ್ದಾರೆ.

Related Articles

Back to top button