*ಎಸ್.ಎಸ್.ಎಲ್.ಸಿ ಪರೀಕ್ಷೆಯ ತೃತೀಯ ಭಾಷೆಗೆ ಗ್ರೇಡ್ ನೀಡುವ ಕುರಿತು ಅಧಿಸೂಚನೆ ಹೊರಡಿಸಿದ ಶಿಕ್ಷಣ ಇಲಾಖೆ*

ಪ್ರಗತಿವಾಹಿನಿ ಸುದ್ದಿ: ಎಸ್.ಎಸ್.ಎಲ್.ಸಿ ಪರೀಕ್ಷೆಯ ತೃತೀಯ ಭಾಷೆಗೆ ಅಂಕಗಳ ಬದಲಾಗಿ ಗ್ರೇಡ್ ನೀಡುವ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿದ್ದ ಪಿಐಎಲ್ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಬೆಳವಣಿಗೆ ನಡುವೆಯೇ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ಎಸ್.ಎಸ್.ಎಲ್.ಸಿ ಪರೀಕ್ಷೆಯ ತೃತೀಯ ಭಾಷೆಗೆ ಗ್ರೇಡ್ ನೀಡುವ ಕುರಿತು ಕರಡು ಅಧಿಸೂಚನೆ ಪ್ರಕಟಿಸಿದೆ.

ಎಷ್ಟು ಅಂಕಗಳಿಗೆ ಯಾವ ಗ್ರೇಡ್ ನೀಡಬೇಕು ಎಂಬ ಮಾಹಿತಿ ನೀಡಿದೆ. ಹೊಸ ನಿಯಮದ ಅನ್ವಯ ಒಟ್ಟು ಅಂಕಗಳು 625 ರಿಂದ 525ಕ್ಕೆ ಇಳಿಕೆಯಾಗಲಿದೆ.

ಕರಡು ಅಧಿಸೂಚನೆಯ ಪ್ರಕಾರ, ತೃತೀಯ ಭಾಷೆ ಮತ್ತು ಎನ್‌ಎಸ್‌ಕ್ಯೂಎಫ್ (ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟು) ವಿಷಯಗಳಲ್ಲಿ ವಿದ್ಯಾರ್ಥಿಗಳು ಪಡೆದ ಅಂಕಗಳ ಆಧಾರದಲ್ಲಿ A, B ಮತ್ತು C ಗ್ರೇಡ್‌ಗಳನ್ನು ನೀಡಲಾಗುತ್ತದೆ. ಅಧಿಸೂಚನೆಯಂತೆ, 80ರಿಂದ 100 ಅಂಕ ಗಳಿಸಿದವರಿಗೆ A ಗ್ರೇಡ್, 50ರಿಂದ 79 ಅಂಕಗಳಿಗೆ B ಗ್ರೇಡ್ ಮತ್ತು 49ರವರೆಗೆ ಅಂಕ ಪಡೆದವರಿಗೆ C ಗ್ರೇಡ್ ಸಿಗಲಿದೆ. ಹೀಗಿದ್ದರೂ ಈ ಗ್ರೇಡ್‌ಗಳು ವಿದ್ಯಾರ್ಥಿಗಳ ಪಾಸ್ ಅಥವಾ ಫೇಲ್ ಬಗ್ಗೆ ಸೂಚಿಸುವುದಿಲ್ಲ. ಈಗಾಗಲೇ ಎಸ್‌ಎಸ್‌ಎಲ್‌ಸಿ ಉತ್ತರಪತ್ರಿಕೆಗಳ ಮೌಲ್ಯಮಾಪನ ಪ್ರಾರಂಭವಾಗಿದ್ದು, ಫಲಿತಾಂಶವನ್ನು ಏಪ್ರಿಲ್ 24ರಂದು ಪ್ರಕಟಿಸುವ ಸಾಧ್ಯತೆ ಇದೆ.

ಕರಡು ಅಧಿಸೂಚನೆ ಕುರಿತು ಸಾರ್ವಜನಿಕರಿಂದ ಆಕ್ಷೇಪಣೆಗಳು ಅಥವಾ ಸಲಹೆಗಳನ್ನು ಆಹ್ವಾನಿಸಲಾಗಿದೆ. ತಮ್ಮ ಆಕ್ಷೇಪಣೆಗಳನ್ನು ಏಳು ದಿನಗಳೊಳಗಾಗಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸುವಂತೆ ಸೂಚಿಸಲಾಗಿದೆ.

Back to top button