ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕೋವಿಡ್ ಎರಡನೇ ಅಲೆ ಹಿನ್ನೆಲೆಯಲ್ಲಿ ಎಸ್.ಎಸ್.ಎಲ್ ಸಿ ಹಾಗೂ ದ್ವಿತೀಯ ಪಿಯು ಪರೀಕ್ಷೆಗಳ ಬಗ್ಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಮಹತ್ವದ ಘೋಷಣೆ ಮಾಡಿದ್ದು, ಈ ವರ್ಷ ಎಸ್.ಎಸ್.ಎಲ್ ಸಿ ವಿದ್ಯಾರ್ಥಿಗಳಿಗೆ ಎರಡೇ ದಿನ ಪರೀಕ್ಷೆ ನಡೆಸುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಪಡಿಸಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸುರೇಶ್ ಕುಮಾರ್, ಕೋವಿಡ್ ಎರಡನೆ ಅಲೆ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರಗಳಲ್ಲಿ ವಿಭಿನ್ನ ಸವಾಲು ಎದುರಿಸುತ್ತಿದ್ದೇವೆ. ಶಿಕ್ಷಣ ತಜ್ಞರು, ಪೋಷಕರ ಅಭಿಪ್ರಾಯ ಹಾಗೂ ಹಲವು ವಿಮರ್ಷೆಗಳ ಬಳಿಕ ಈ ವರ್ಷ ದ್ವಿತೀಯ ಪಿಯುಸಿ ಪರೀಕ್ಷೆ ರದ್ದು ಪಡಿಸಲು ನಿರ್ಧರಿಸಿದ್ದೇವೆ. ಪ್ರಥಮ ಪಿಯುಸಿ ಪರೀಕ್ಷೆ ಆಧಾರದಲ್ಲಿ ಗ್ರೇಡಿಂಗ್ ನೀಡಲು ನಿರ್ಧರಿಸಲಾಗಿದೆ ಎಂದರು.
ಎಸ್.ಎಸ್.ಎಲ್ ಸಿಗೆ ಈ ಬಾರಿ ಎರಡು ದಿನ ಪರೀಕ್ಷೆ ನಡೆಸಲು ನಿರ್ಧರಿಸಿದ್ದೇವೆ. ವಿಜ್ಞಾನ, ಗಣಿತ ಹಾಗೂ ಸಮಾಜ ವಿಜ್ಞಾನ ಮೂರು ವಿಷಯ ಸೇರಿಸಿ ಒಂದು ಪ್ರಶ್ನೆ ಪತ್ರಿಕೆ. ಇನ್ನೊಂದು ಐಚ್ಛಿಕ ಭಾಷೆಗಳಿಗೆ ಒಂದು ಪೇಪರ್ ಇರಲಿದ್ದು, ಬಹು ಆಯ್ಕೆ ಮಾದರಿ ಪ್ರಶ್ನೆ ಪತ್ರಿಕೆ ನೀಡಲಾಗುತ್ತದೆ. A+, A ಗ್ರೇಡಿಂಗ್ ಮಾದರಿಯಲ್ಲಿ ಫಲಿತಾಂಶ ನೀಡಲಾಗುತ್ತದೆ.
ಒಂದು ಕೊಠಡಿಯಲ್ಲಿ 12 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶವಿರಲಿದ್ದು, ವಿದ್ಯಾರ್ಥಿಗಳಿಗೆ N95 ಮಾಸ್ಕ್ ನೀಡಲು ನಿರ್ಧರಿಸಲಾಗಿದೆ. ಜುಲೈ ಕೊನೇ ವಾರ ಅಥವಾ ಆಗಸ್ಟ್ ಮೊದಲ ವಾರದಲ್ಲಿ ಪರೀಕ್ಷೆ ನಡೆಸಲಾಗುವುದು ಎಂದರು.
ತಮ್ಮ ಹತ್ತಿರದ ಕೇಂದ್ರದಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು ಎಂದರು.
ಪಿಯುಸಿ ಪರೀಕ್ಷೆ ರದ್ದು – ಸುರೇಶ ಕುಮಾರ ಘೋಷಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ